Chennaveera Kanavi Death: ‘ವ್ಯಕ್ತಿಗೀತೆ’; ಬೇಂದ್ರೆಯವರಿಗೆ ಎಪ್ಪತ್ತು ತುಂಬಿದಾಗ ಕಣವಿಯವರು ಬರೆದ ಧೀಮಂತ ಕವಿತೆ

Tribute Chennaveera Kanavi : ‘ಮನಸ್ಸಿನ ಪಕ್ವತೆಯಲ್ಲೆ ಎಲ್ಲ ಸಣ್ಣತನಗಳಿಗೂ ಮುಲಾಮು ಹುಡುಕಿದೆ. ಜೀವನವೆಂದರೆ ಇದೇ ತಾನೆ? ಮನುಷ್ಯನ ವಿಕಾಸದ ಸಾಧ್ಯತೆಗಳನ್ನು ಅರಿಯುವುದು ಮತ್ತು ಜೋಪಾನವಾಗಿ ಅವುಗಳನ್ನು ಪೋಷಿಸುವುದು. ಬಾಹ್ಯ ಅಗತ್ಯ ಮತ್ತು ಆಂತರಿಕ ಅಗತ್ಯಗಳನ್ನು ಕಾವ್ಯ ಮೇಳೈಸಿ ಹಾಡಿದೆ.’ ಡಾ. ವಿಕ್ರಮ ವಿಸಾಜಿ

Chennaveera Kanavi Death: ‘ವ್ಯಕ್ತಿಗೀತೆ’; ಬೇಂದ್ರೆಯವರಿಗೆ ಎಪ್ಪತ್ತು ತುಂಬಿದಾಗ ಕಣವಿಯವರು ಬರೆದ ಧೀಮಂತ ಕವಿತೆ
ಡಾ. ಚೆನ್ನವೀರ ಕಣವಿ ಮತ್ತು ಡಾ. ವಿಕ್ರಮ ವಿಸಾಜಿ
Follow us
|

Updated on: Feb 16, 2022 | 11:38 AM

ಚೆನ್ನವೀರ ಕಣವಿ | Chennaveera Kanavi : ಕೆಡಕನ್ನು ಎದುರಿಸುವ ಆತ್ಮಸ್ಥೈರ್ಯವೇ ಈಗ ಮನುಷ್ಯನಿಗೆ ಉಳಿದಿರುವ ದಾರಿ. ಇಂಥ ಆತ್ಮಸ್ಥೈರ್ಯದಿಂದಲೇ ಜೀವನದ ಜಂಜಾಟಗಳನ್ನು ಗೆಲ್ಲಬೇಕೆಂದು ಕಾವ್ಯ ನಂಬಿದೆ. ಇಂಥ ನಂಬಿಕೆಯ ಹಾದಿಯೇ ಬಹುತೇಕ ಕವಿತೆಗಳ ತಳಹದಿಯಾಗಿದೆ. ಕಣವಿಯವರ ಕಾವ್ಯ ಹೊರಗಿನ ವಿಕೃತಿಗಳಿಗೆ ಮನಸ್ಸಿನೊಳಗೆ ಔಷಧಿ ಹುಡುಕಿದ್ದೆ ಹೆಚ್ಚು. ಸಾಮಾಜಿಕ ಅಸಮಾನತೆಗೂ ಮನಸ್ಸಿನ ಅಪಕ್ವತೆಯೆ ಕಾರಣವೆಂದು ನಂಬಿದೆ. ಮನಸ್ಸಿನ ಪಕ್ವತೆಯಲ್ಲೆ ಎಲ್ಲ ಸಣ್ಣತನಗಳಿಗೂ ಮುಲಾಮು ಹುಡುಕಿದೆ. ಜೀವನವೆಂದರೆ ಇದೇ ತಾನೆ? ಮನುಷ್ಯನ ವಿಕಾಸದ ಸಾಧ್ಯತೆಗಳನ್ನು ಅರಿಯುವುದು ಮತ್ತು ಜೋಪಾನವಾಗಿ ಅವುಗಳನ್ನು ಪೋಷಿಸುವುದು. ಬಾಹ್ಯ ಅಗತ್ಯ ಮತ್ತು ಆಂತರಿಕ ಅಗತ್ಯಗಳನ್ನು ಕಾವ್ಯ ಮೇಳೈಸಿ ಹಾಡಿದೆ. ಕಣವಿಯವರ ಬರವಣಿಗೆಯ ಹೊಸಬಗೆಯಿದು. ಡಾ. ವಿಕ್ರಮ ವಿಸಾಜಿ, ಲೇಖಕ, ಅನುವಾದಕ

*

(ಭಾಗ – 3)

ರಾಮಮನೋಹರ ಲೋಹಿಯಾರದೊಂದು ಮಾತಿದೆ; ಇಲ್ಲಿನ ದುಃಖವನ್ನು ಕಂಡು ಕಣ್ಣೀರು ಸುರಿಸುವಂತೆ ಇಲ್ಲಿನ ಶೋಷಣೆ ಕಂಡು ಕ್ರೋಧವನ್ನೂ ಹೊರಹೊಮ್ಮಿಸಬೇಕು. ಇದನ್ನು ಕಣವಿಯವರ ಕಾವ್ಯ ತನ್ನದೇ ಸೀಮಿತ ಚೌಕಟ್ಟಿನಲ್ಲಿ ಅಭಿವ್ಯಕ್ತಿಸಿದೆ.

ಬಂದಿರುವ ಬರಲಿರುವ ಸಂಕಷ್ಟವೆಣಿಸುವರೆ? ನುರಿವೋಗು ಸ್ಥಿರವಾಗು ಸವ್ಯಸಾಚಿ ! ಅಳ್ಳಿರಿವ ಕೊಳ್ಳಿದೆವ್ವಗಳೆಂದು ಅಂಜುವರೆ ನಿನ್ನಾತ್ಮಕೆಚ್ಚಿನೆದುರಾವ ಭೀತಿ? (ಭಾವಜೀವಿ : ಭಾವಜೀವಿ)

ಇವೆಲ್ಲವನ್ನೂ ಗಮನಿಸುತಿದ್ದರೆ ಕಣವಿಯವರ ಕಾವ್ಯ ವೈಶಿಷ್ಟ್ಯಗಳ ಪರಿಚಯ ವಾಗುವುದು. ಆದರ್ಶ, ಕನಸುಗಾರಿಕೆ, ಮೌಲ್ಯಗಳ ಶೋಧ, ಸಂಬಂಧಗಳ ಕಾಪಿಡುವಿಕೆ, ಸ್ಥಳೀಯ ಪ್ರಜ್ಞೆ, ನಿಸರ್ಗ ಪ್ರೀತಿ ಹಾಗು ಶ್ರದ್ಧೆಯನ್ನು ಬಿಡದಿರುವುದು. ಇವುಗಳ ಸುತ್ತವೇ ಕವಿತೆಯ ಹಲವು ಸ್ತರಗಳು ಬೆಳೆದಿವೆ. ವಸ್ತು ವೈವಿಧ್ಯದ ದೃಷ್ಟಿಯಿಂದಲೂ ಇಲ್ಲಿನ ಕಾವ್ಯದ ಹರವು ದೊಡ್ಡದು. ಮಗಳು, ಮಡದಿ, ತಾಯಿ, ತನ್ನನ್ನು ಪ್ರಭಾವಿಸಿದ ವ್ಯಕ್ತಿಗಳು, ಸಮಾಜ, ನಿಸರ್ಗ, ಪಕ್ಷಿಗಳ ಕಲರವ, ಸಂಸ್ಕøತಿ ಒಟ್ಟಿಗೆ ಬಿಟ್ಟುಕೊಂಡ, ತನ್ನೊಳಗೆ ಕಟ್ಟಿಕೊಂಡ ಕಾವ್ಯವಿದು. ಅಲ್ಲಿನ ಬಾಳ್ವೆಯ ಬೆಳಕನ್ನೆ ಕವಿತೆಗಳು ಧ್ಯಾನಿಸಿವೆ. ನವೋದಯ ಕಾವ್ಯಮನೋಧರ್ಮದ ಒಂದು ಸಾರ್ವತ್ರಿಕ ಗುಣವಿದು; ಜೀವಜಾಲದ ಹಲವು ವಲಯಗಳನ್ನು ತನ್ನೊಳಗೆ ಸ್ವೀಕರಿಸುವುದು. ಭಕ್ತಿ ಮತ್ತು ಶ್ರದ್ಧೆಯಿಂದ ಇವುಗಳನ್ನು ನಿರೀಕ್ಷಿಸುವುದು.

ಭಾಗ 1 : Chennaveer Kanavi Death: ಬಾಳುವುದೆಂದರೆ, ಕೊಡುವುದೆಂದರೆ, ಕೊಂಬುದೆಂದರೆ, ಮಾಗುವುದೆಂದರೆ..

ಕಣವಿಯವರ ಕಾವ್ಯದ ಒಂದು ದೊಡ್ಡ ಭಾಗವೆಂದರೆ ವ್ಯಕ್ತಿಗೀತೆಗಳು. ಬಹುಶಃ ಕನ್ನಡದಲ್ಲಿ ಕಣವಿಯವರಷ್ಟು ವ್ಯಕ್ತಿಗೀತೆಗಳನ್ನು ಬೇರಾರೂ ಬರೆದಿರಲಿಕ್ಕಿಲ್ಲ (ಅವರ ನಂತರದಲ್ಲಿ ಎಚ್. ಎಸ್ .ವೆಂಕಟೇಶಮೂರ್ತಿ ಅವರು ಇಂಥ ಹಲವು ಕವಿತೆಗಳನ್ನು ರಚಿಸಿದ್ದಾರೆ.) ನೀಲಾಂಬಿಕೆ, ಬಸವಣ್ಣ, ಅಕ್ಕ, ಗಾಂಧಿ, ಅಂಬೇಡ್ಕರ್, ಹಳಕಟ್ಟಿ, ಕುವೆಂಪು, ಬೇಂದ್ರೆ, ಪುತಿನ, ಜಿಎಸ್‍ಎಸ್, ಲಂಕೇಶ್ ಆದಿಯಾಗಿ ಹಲವರ ವ್ಯಕ್ತಿತ್ವ ಸುನೀತಗಳಲ್ಲೊ ಅಥವಾ ಕವಿತೆಗಳಲ್ಲೊ ಕಲಾತ್ಮಕವಾಗಿ ಬಿಚ್ಚಿಕೊಂಡಿದೆ. ವ್ಯಕ್ತಿತ್ವದ ಹಲವು ಆಯಾಮಗಳನ್ನು ಸೂಕ್ಷ್ಮವಾಗಿ ಹಿಡಿಯುವ ಈ ಕಸುಬುಗಾರಿಕೆ ಕನ್ನಡ ಕಾವ್ಯದಲ್ಲಿ ಅನನ್ಯವಾದದ್ದು. ಬೇಂದ್ರೆಯವರ ಕುರಿತ ಇಷ್ಟು ಧೀಮಂತ ಕವಿತೆ ಕನ್ನಡದಲ್ಲಿ ವಿರಳ;

ಕಣ್ಣ ಮಿಂಚಿಸಿ, ನೂರು ಹಂಚಿಕೆಯ ಸಂಚಿಕೆಯ ತುಂಬಿ-ತಲೆಯಾಡಿಸುತ, ಯಾವುದೋ ಒಳದನಿಗೆ ನಾದ ಕೂಡಿಸಿ, ನೆಲಕೆ ನೀರು ಬರಿಸುವ ಹಾಗೆ ಬೀಸುಗಾಳಿಯ ಜೊತೆಗೆ ಬಂದರದೊ ಬೇಂದ್ರೆ ! ಕೈಯ ಮಾಟಕ್ಕೆ ಮಾತು ಮಾಂತ್ರಿಕನಾಟ: ಅರಗಳಿಗೆ- ಹೊರ ಒಳಗೆ ತುಂಬಿ ತುಳುಕುವ ಬೆಡಗು. ಕಡಲ ಗುಟು- ಕರಿಸಿ, ಚಿಕ್ಕೆಗಳ ಮುಕ್ಕಳಿಸುವರು; ತಟ್ಟನೆ ಒಗಟು ಒಡೆಯುವ ಒಡಪು-ನುಡಿ : ಕುಡಿಮಿಂಚು ಬಾನ ಗುಡಿಗೆ. ಇಪ್ಪತ್ತೊ? ಎಪ್ಪತ್ತೊ? ಮುಪ್ಪತ್ತು ಮುಂದೆ ನಡೆ ; ಅಂಬಿಕಾತನಯನಿಗೆ ದತ್ತುಕೊಟ್ಟಂದು ಇವ- ರೊಪ್ಪತ್ತು. ಜಗದಂಬೆ-ಹಡಲಿಗೆ ಹೊತ್ತು ಕುಣಿವ- ಗೆಲ್ಲಿ ಪುರುಸೊತ್ತು? ಹಣ್ಣಾದ ಕೇದಿಗೆಯ ಹೊಡೆ : ಚೂಪಾದಗರಿ : ಹುಷಾರಿ : ಕಂಪಿಗೆಲ್ಲಿಯ ಕೊರತೆ ? ನಡೆದದ್ದೆ ಸಾಧನಕೇರಿ, ನುಡಿದದ್ದೆ ಕವಿತೆ. (ಎಪ್ಪತ್ತರ ಬೇಂದ್ರೆ-ಎರಡುದಡ)

ಭಾಗ 2 : Chennaveera Kanavi Death: ‘ಶಾಂತಿಪ್ರಿಯರೆ, ಸಂಭಾವಿತರೆ, ಸಹಿಷ್ಣುತಾವಾದಿಗಳೆ; ಹಾದಿಬೀದಿಗಳೆ ಹೇಳುತ್ತಿವೆ ಕಥೆಯ’