Chennaveera Kanavi Death: ಕಣವಿಯವರ ಅಪ್ಪ ಸಕ್ಕರೆಪ್ಪ ಇಷ್ಟಲಿಂಗ ಪೂಜಿಸಿದರೂ, ದೇವಸ್ಥಾನಕ್ಕೆ ಮಾತ್ರ ಹೋಗುತ್ತಿರಲಿಲ್ಲ

Chennaveera Kanavi Passes Away : ‘ಶಾಲಾ ಗೋಡೆಗಳ ಮೇಲಿನ ನಕ್ಷೆಯನ್ನು ತೋರಿಸುತ್ತ ಭೌಗೋಳಿಕ ಪಾಠ ಮಾಡುವಾಗ, ಕಂಡ ಊರುಗಳ ಹೆಸರುಗಳನ್ನು ಒಪ್ಪಿಸುವಂತೆ ವಿದ್ಯಾರ್ಥಿಗಳಿಗೆ ಸಕ್ಕರೆಪ್ಪನವರು ಹೇಳುತ್ತಿದ್ದರು. ಆಗ ಪ್ರಾಸಬದ್ಧವಾಗಿದ್ದ ಊರುಗಳ ಹೆಸರುಗಳು ಕಣವಿಯವರನ್ನು ಸೆಳೆಯುತ್ತಿದ್ದವು; ಗದಗ-ಬೆಟಗೇರಿ, ಹೊಂಬಳ-ಡಂಬಳ, ಹುಲಕೋಟಿ-ಕುರ್ತಕೋಟಿ ಹೀಗೆ...’ ನರಸಿಂಹಮೂರ್ತಿ ಪ್ಯಾಟಿ

Chennaveera Kanavi Death: ಕಣವಿಯವರ ಅಪ್ಪ ಸಕ್ಕರೆಪ್ಪ ಇಷ್ಟಲಿಂಗ ಪೂಜಿಸಿದರೂ, ದೇವಸ್ಥಾನಕ್ಕೆ ಮಾತ್ರ ಹೋಗುತ್ತಿರಲಿಲ್ಲ
ಕವಿ ಚೆನ್ನವೀರ ಕಣವಿ
Follow us
ಶ್ರೀದೇವಿ ಕಳಸದ
|

Updated on: Feb 16, 2022 | 3:36 PM

ಚೆನ್ನವೀರ ಕಣವಿ | Chennaveera Kanavi: ಚೆನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ರ ಜೂನ್ 28 ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹುಟ್ಟಿದ್ದು ಹೊಂಬಳದಲ್ಲಾದರೂ ಬೆಳೆದಿದ್ದು ಮತ್ತು ನಾಲ್ಕನೇ ತರಗತಿವರೆಗೆ ಓದಿದ್ದು ಗದಗಿನಿಂದ 12 ಮೈಲಿ ದೂರದಲ್ಲಿರೋ ಎಲಿಶಿರುಂಜ ಗ್ರಾಮದಲ್ಲಿ. ಅಲ್ಲಿ ಅವರ ತಂದೆ ಶಿಕ್ಷಕರಾಗಿದ್ದರು. ಅದು ಏಕೋಪಾಧ್ಯಾಯ ಶಾಲೆಯಾಗಿತ್ತು. ಗ್ರಾಮದ ಹನುಮಂತ ದೇವರ ಗುಡಿಯೇ ಶಾಲೆಯಾಗಿದ್ದರೆ, ತಂದೆ ಸಕ್ಕರೆಪ್ಪ ಎಲ್ಲ ವಿಷಯಗಳನ್ನು ಬೋಧಿಸೋ ಶಿಕ್ಷಕರಾಗಿದ್ದರು. ಸಕ್ಕರೆಪ್ಪ ಆಧ್ಯಾತ್ಮ ಜೀವಿಯಾಗಿದ್ದರು. ನಿತ್ಯವೂ ಮನೆಯಲ್ಲಿ ಇಷ್ಟಲಿಂಗ ಪೂಜೆ ಮಾಡುತ್ತಿದ್ದರು. ಅಚ್ಚರಿಯ ಸಂಗತಿ ಅಂದರೆ ಅವರು ಯಾವುದೇ ದೇವಸ್ಥಾನಗಳಿಗೆ ಹೋಗುತ್ತಿರಲಿಲ್ಲವಂತೆ. ಅಲ್ಲದೇ ಅವರು ಮುಳುಗುಂದದಲ್ಲಿನ ಗುರುಗಳೊಬ್ಬರಲ್ಲಿ ದೀಕ್ಷೆ ಪಡೆದಿದ್ದರು. ಹೀಗಾಗಿ ಅವರು ಶಿಕ್ಷಕ ವೃತ್ತಿಯೊಂದಿಗೆ ಆಧ್ಯಾತ್ಮದ ನಂಟು ಕೂಡ ಹೊಂದಿದ್ದರು. ನರಸಿಂಹಮೂರ್ತಿ ಪ್ಯಾಟಿ, ಪತ್ರಕರ್ತ

*

(ಭಾಗ 2)

ಕಣವಿಯವರ ಮನೆಯಲ್ಲಿ ಯಾವಾಗಲೂ ಆಧ್ಯಾತ್ಮದ ಚಿಂತನೆ ಇದ್ದೇ ಇರುತ್ತಿತ್ತು. ಇಂಥ ವಾತಾವರಣದಲ್ಲಿ ಬೆಳೆದ ಚೆನ್ನವೀರ ಕಣವಿಯವರು ಸಾತ್ವಿಕ ಸ್ವಭಾವದವರಾಗಿದ್ದು ಕೂಡ ಸಹಜವೇ. ಇದೇ ಕಾರಣಕ್ಕೆ ಅವರ ಕಾವ್ಯದಲ್ಲಿ ನಿಸರ್ಗದ ಜತೆಗೆ ಆಧ್ಯಾತ್ಮವೂ ಹೆಚ್ಚಾಗಿ ಕಂಡು ಬಂದಿದೆ. ನಾಲ್ಕನೇ ತರಗತಿ ಬಳಿಕ ಧಾರವಾಡದಲ್ಲಿ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಇಲ್ಲಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದ ಘಟನೆಯೊಂದನ್ನು ಪ್ರಸ್ತಾಪಿಸಲೇಬೇಕು. ಅವರ ತಂದೆ ಸಕ್ಕರೆಪ್ಪ, ಚೆನ್ನವೀರ ಕಣವಿ ಹುಟ್ಟಿದಾಗ ಬರೆಯಿಸಿದ್ದ ಜನ್ಮಕುಂಡಲಿಯಲ್ಲಿ 1926 ಅಂತಿದೆಯಂತೆ. ಆದರೆ ಹೈಸ್ಕೂಲು ಮುಗಿಸಿ, ವರ್ಗಾವಣೆ ಪ್ರಮಾಣಪತ್ರ ತೆಗೆದುಕೊಂಡು ಹೋಗುವಾಗ ಶಾಲೆಯ ಶಿಕ್ಷಕರ ಕಣ್ತಪ್ಪಿನಿಂದಾಗಿ ಅದು 1928 ನೇ ಇಸವಿ ಅಂತಾಗಿ ಹೋಗಿದೆಯಂತೆ. ಅದೇ ಮುಂದೆ ಖಾಯಂ ಆಗಿ ಹೋಗಿದ್ದರ ಬಗ್ಗೆ ಅವರೇ ಹೇಳಿಕೊಂಡಿದ್ದರು.

ಎಂ.ಎ. ಪದವಿ ಪಡೆದ ಬಳಿಕ ಆಗ ತಾನೇ ಆರಂಭವಾಗಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. ಮುಂದೆ 1956 ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು. ಅವರು ಕೂಡ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದವರೇ. ಮದುವೆಯ ಬಳಿಕ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಲು ಹಾಗೂ ಸಾಹಿತ್ಯ ಕೃಷಿ ಮಾಡಲು ಪರಸ್ಪರ ಸಾಥ್ ನೀಡಿದರು.

ಇದನ್ನೂ ಓದಿ : Chennaveera Kanavi Death: ‘ಹೂವುಹಣ್ಣೂ ಗಿಡದ ಎಡೆಬಿಡದ ಕಾಣಿಕೆ, ಸಾವೂನೋವೂ ನಮ್ಮ ದಿನದ ಹೊಂದಾಣಿಕೆ’

ಕಣವಿಯವರ ಬಾಲ್ಯ ಜೀವನಕ್ಕೆ ಬಂದರೆ ಅನೇಕ ವಿಚಾರಗಳು ಅವರನ್ನು ಪ್ರಭಾವಿತಗೊಳಿಸಿರುವುದು ಗಮನಕ್ಕೆ ಬರುತ್ತವೆ. ಶಾಲೆಯ ಗೋಡೆಗಳ ಮೇಲೆ ಹಾಕಲಾಗಿದ್ದ ಗದಗ ಜಿಲ್ಲೆಯ ನಕ್ಷೆಯನ್ನು ನೋಡುವಾಗ ಅವರ ಕಣ್ಣಿಗೆ ಬೀಳುತ್ತಿದ್ದ ಊರುಗಳ ಹೆಸರೇ ಅವರನ್ನು ಕವಿಯಾಗಲು ಪ್ರಭಾವಿಸಿದವು. ಅವರ ತಂದೆ ಭೌಗೋಳಿಕ ವಿಷಯದ ಬಗ್ಗೆ ಪಾಠ ಮಾಡುವಾಗ, ಗೋಡೆಯ ಮೇಲಿನ ನಕ್ಷೆಯಲ್ಲಿನ ಹೆಸರುಗಳನ್ನು ಒಪ್ಪಿಸುವಂತೆ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರಂತೆ. ಅಲ್ಲಿ ಕಂಡು ಬರುತ್ತಿದ್ದ ಹೆಸರು ಪ್ರಾಸಬದ್ಧವಾಗಿಯೇ ಇರುತ್ತಿದ್ದವು. ಇವು ಕಣವಿ ಅವರ ಗಮನವನ್ನು ಸೆಳೆಯುತ್ತಿದ್ದವು. ಉದಾಹರಣೆಗೆ, ಗದಗ-ಬೆಟಗೇರಿ, ಹೊಂಬಳ-ಡಂಬಳ, ಹುಲಕೋಟಿ-ಕುರ್ತಕೋಟಿ ಹೀಗೆ… ಇಂಥ ಪ್ರಾಸಬದ್ಧ ಹೆಸರುಗಳೇ ಮುಂದೆ ತಮಗೆ ಕವಿತೆ ಬರೆಯಲು ಪ್ರೇರಣೆ ನೀಡಿದವು ಅಂತಾನೂ ಅವರು ಹೇಳುತ್ತಿದ್ದರು. ಇನ್ನು ಹಳ್ಳಿಗಳಲ್ಲಿ ಆಗಿನ ಕಾಲದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದವರು ದಿನದ 24 ಗಂಟೆಯೂ ಶಿಕ್ಷಕರೇ ಆಗಿರುತ್ತಿದ್ದರು. ಕಣವಿ ಅವರ ತಂದೆಯೂ ಹಾಗೆಯೇ ಇದ್ದರಂತೆ. ಇದೆಲ್ಲದರ ಪ್ರಭಾವ ಅವರ ಮೇಲೆ ಆಗಿದ್ದರಿಂದಲೇ ಅವರೊಬ್ಬ ದೊಡ್ಡ ಕವಿ ಆಗಲು ಸಾಧ್ಯವಾಯಿತು ಅನ್ನುವುದು ಸುಳ್ಳಲ್ಲ. ಸಾಮಾನ್ಯ ಕುಟುಂಬದಿಂದ ಬಂದ ಕಣವಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಮೈಲಿಗಲ್ಲು ಸ್ಥಾಪಿಸಿದ್ದು ಇದೀಗ ಇತಿಹಾಸ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Chennaveera Kanavi Death: ‘ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ ಜಯಭಾರತಿ’