ಹಚ್ಚೆ ಎಚ್ಚರಾ! ಟ್ಯಾಟೂ ಹಾಕಿಸಿಕೊಳ್ಳುವುದಕ್ಕೂ ಮುನ್ನ.. ಇದನ್ನ ಪಾಲಿಸಿ
ಟ್ಯಾಟೂ ಹಾಕಿಸಿಕೊಳ್ಳುವುದು ಇತ್ತೀಚಿನ ಯುವಜನತೆಗೆ ಪ್ಯಾಷನ್ ಆಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವುದು ಸಹಜವೇ ಆದರೂ ಕೆಲವು ಬದಲಾವಣೆಗಳನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ಅಗತ್ಯ. ಹಲವರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಳ್ಳುವಾಗ ಟ್ಯಾಟೂ ಕುರಿತ ಸಾಮಾನ್ಯ ಸಂಗತಿಗಳನ್ನೆ ತಿಳಿದಿರುವುದಿಲ್ಲ. ಹಾಗಿದ್ದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನೀವು ತಿಳಿದಿರಲೇಬೇಕಾದ ವಿಷಯಗಳೇನು?, ಯಾವ ವಿಷಯದಲ್ಲಿ ಎಚ್ಚರಿಕೆ ಅಗತ್ಯ? ಅನ್ನೋದನ್ನು ತಿಳಿಯಿರಿ. ನಿಮ್ಮ ಜೀವನದುದ್ದಕ್ಕೂ ನಿಮ್ಮ ಜತೆಗೇ ಬರುವ ಟ್ಯಾಟೂವನ್ನು ಹಾಕಿಸಿಕೊಳ್ಳುವುದು ಒಂದು ದೊಡ್ಡ ನಿರ್ಧಾರ. ಆದ್ದರಿಂದ ನೀವು […]
ಟ್ಯಾಟೂ ಹಾಕಿಸಿಕೊಳ್ಳುವುದು ಇತ್ತೀಚಿನ ಯುವಜನತೆಗೆ ಪ್ಯಾಷನ್ ಆಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವುದು ಸಹಜವೇ ಆದರೂ ಕೆಲವು ಬದಲಾವಣೆಗಳನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ಅಗತ್ಯ. ಹಲವರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಳ್ಳುವಾಗ ಟ್ಯಾಟೂ ಕುರಿತ ಸಾಮಾನ್ಯ ಸಂಗತಿಗಳನ್ನೆ ತಿಳಿದಿರುವುದಿಲ್ಲ. ಹಾಗಿದ್ದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನೀವು ತಿಳಿದಿರಲೇಬೇಕಾದ ವಿಷಯಗಳೇನು?, ಯಾವ ವಿಷಯದಲ್ಲಿ ಎಚ್ಚರಿಕೆ ಅಗತ್ಯ? ಅನ್ನೋದನ್ನು ತಿಳಿಯಿರಿ.
ನಿಮ್ಮ ಜೀವನದುದ್ದಕ್ಕೂ ನಿಮ್ಮ ಜತೆಗೇ ಬರುವ ಟ್ಯಾಟೂವನ್ನು ಹಾಕಿಸಿಕೊಳ್ಳುವುದು ಒಂದು ದೊಡ್ಡ ನಿರ್ಧಾರ. ಆದ್ದರಿಂದ ನೀವು ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಇದು ನಿಮ್ಮದೇ ನಿರ್ಧಾರ ಅನ್ನೋದು ಖಚಿತವಾಗಲಿ. ಇದಕ್ಕೆ ಯಾರೂ ಪ್ರೇರಣೆ ನೀಡಿಲ್ಲವೆಂದು ಖಚಿತಪಡಿಸಿಕೊಳ್ಳಿ. ನಿಮ್ಮ ಸುತ್ತಮುತ್ತ ಇರುವ ಎಲ್ಲರೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ ನೀವು ಟ್ಯಾಟೂ ಹಾಕಿಸಿಕೊಳ್ಳುವ ಅಗತ್ಯವಿಲ್ಲ. ಹಾಗಿದ್ದರೆ ತಾತ್ಕಾಲಿಕ ಟ್ಯಾಟೂ ಹಾಕಿಸಿಕೊಳ್ಳಿ. ನಿಮ್ಮ ಟ್ಯಾಟೂ ನಿರ್ಧಾರಕ್ಕೆ ನಿಮ್ಮ ಬಳಿ ಅಗತ್ಯ, ಸೂಕ್ತ ಕಾರಣಗಳಿರಲಿ.
ಟ್ಯಾಟೂ ಹಾಕಿಸಿಕೊಳ್ಳುವ ನಿರ್ಧಾರ ಪಕ್ಕಾ ಆದ ಬಳಿಕ ಯಾವ ವಿನ್ಯಾಸ ಹಾಕಿಸಿಕೊಳ್ಳಲಿ ಎಂಬುದು ಮುಂದಿನ ಗೊಂದಲ. ಇದು ಬಹಳ ಮುಖ್ಯವಾದ ಅಂಶವೂ ಹೌದು. ನಿಮ್ಮ ಜಾಣ್ಮೆ, ಬುದ್ದಿವಂತಿಕೆಯಿಂದ ವಿನ್ಯಾಸ ಆಯ್ಕೆ ಮಾಡಿ. ಒಮ್ಮೆ ಟ್ಯಾಟೂ ಹಾಕಿಸಿದ ನಂತರ ಅಥವಾ ಕೆಲವು ದಿನಗಳ ನಂತರ ವಿನ್ಯಾಸ ಇಷ್ಟವಾಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಮತ್ತೆ ಲೇಸರ್ ಚಿಕಿತ್ಸೆ ಪಡೆಯಬೇಕಷ್ಟೇ! ಅದು ಅಪಾಯಕಾರಿ ಐಡಿಯಾ..!
ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಳ್ಳುವ ವೇಳೆ ಸಣ್ಣ ವಿನ್ಯಾಸವನ್ನು ಆಯ್ಕೆ ಮಾಡುವುದು ಉತ್ತಮ. ಕೆಲವು ದಿನ ಸಮಯದ ನಂತರ ನಿಮಗೆ ಇಷ್ಟವಾದರೆ ಮತ್ತೆ ದೊಡ್ಡ ವಿನ್ಯಾಸಕ್ಕೆ ಪ್ರಯತ್ನಿಸಬಹುದು.
ಟ್ಯಾಟೂ ಎಲ್ಲಿ ಹಾಕಿಸಿಕೊಂಡರೆ ಉತ್ತಮ: ಮುಂದೆ ದೇಹದ ಯಾವ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಬೇಕು ಅನ್ನೋ ಗೊಂದಲ ಶುರುವಾಗುತ್ತೆ. ಇದಕ್ಕೆ ಸ್ವಲ್ಪ ಸಮಯ ಕೊಡಿ. ಆ ನಂತರ ನಿರ್ಧಾರ ಕೈಗೊಳ್ಳಿ. ಇದು ವಿನ್ಯಾಸದ ಮೇಲೂ ಅನ್ವಯವಾಗಿದೆ. ನಿಗದಿತ ದೇಹಭಾಗದಲ್ಲಿ ಅಂತ ನೀವು ನಿರ್ಣಯಿಸಿದ್ದರೆ, ಜಾಣ್ಮೆಯಿಂದ ನಿರ್ಧಾರ ಕೈಗೊಳ್ಳಿ, ಹಾಕಿಸಿಕೊಳ್ಳುವ ಮುನ್ನ ಎರಡನೇ ಬಾರಿ ಚಿಂತಿಸಿ.
ಸಣ್ಣ ಚುಚ್ಚುಮದ್ದಿಗೆ ಹೆದರುವವರು ಟ್ಯಾಟೂ ಹಾಕಿಸಿಕೊಳ್ಳುವುದು ಕಷ್ಟ. ನಿಮಗೆ ಬೇಕಾದ ವಿನ್ಯಾಸವನ್ನು ಸಣ್ಣ ಸೂಜಿಯಿಂದ ಚುಚ್ಚಿ ವಿನ್ಯಾಸಗೊಳಿಸುತ್ತಾರೆ. ಇದಕ್ಕೆ ಮಾನಸಿಕವಾಗಿ ಸಿದ್ಧರಾಗಿ. ಆರಂಭದಲ್ಲಿ ಸ್ವಲ್ಪ ನೋವು ಎನಿಸಿದರು ನಂತರ ಅದು ಅಭ್ಯಾಸವಾಗುತ್ತದೆ.
ಟ್ಯಾಟೂ ಹಾಕಿಸಿಕೊಳ್ಳುವಾಗ ಕಾಲದ ಮೇಲಿರಲಿ ಎಚ್ಚರಿಕೆ: ನೀವು ಯಾವ ಕಾಲದಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದೀರಿ ಎನ್ನುವುದು ಸಹ ಅತೀ ಮುಖ್ಯವಾಗುತ್ತದೆ. ಬೇಸಿಗೆ ಕಾಲದಲ್ಲಿ ಹಾಕಿಸಿಕೊಂಡರೆ ಬೇಸಿಗೆಯ ಬಿಸಿಲಿಗೆ ಉರಿಯಬಹುದು ಅಥವಾ ಬೆವರಿಗೆ ತುರಿಕೆ ಆರಂಭವಾಗುತ್ತದೆ. ತಂಪಾದ ವಾತಾವರಣ ಇದಕ್ಕೆ ಸೂಕ್ತ.
ನೀವು ಟ್ಯಾಟೂ ಹಾಕಿಸಿಕೊಳ್ಳವ ವೇಳೆ ಸಣ್ಣ ಪುಟ್ಟ ಬದಲಾವಣೆಯಿಂದಾಗಿ ವಿನ್ಯಾಸ ಬದಲಾಗಬಹುದು. ಅಥವಾ ಅದಕ್ಕೆ ಬಣ್ಣಗಳಿಂದ ವಿನ್ಯಾಸಗೊಳಿಸಲು ಹಣ ಹೆಚ್ಚಾಗಬಹುದು. ಹಣದ ವಿಚಾರದಲ್ಲಿ ಮುಕ್ತವಾಗಿರಿ, ಇಲ್ಲವಾದಲ್ಲಿ ವಿನ್ಯಾಸದ ಮೇಲೆ ಪ್ರಭಾವ ಬೀರಬಹುದು.
ನಿಮಗೆ ಟ್ಯಾಟೂ ಹಾಕುವ ಕಲಾವಿದ ಸಹ ಮುಖ್ಯವಾಗುತ್ತಾನೆ. ಮೊದಲಿಗೆ ಟ್ಯಾಟೂ ಹಾಕುವ ಸ್ಥಳದ, ಉಪಕರಣಗಳ ಸ್ವಚ್ಛತೆ ಹಾಗೂ ಎಲ್ಲಾ ಅಗತ್ಯ ಉಪಕರಣಗಳು ಇದೆಯೇ ಎಂಬುದನ್ನು ಪರಿಶೀಲಿಸಿ, ನಂತರ ಅವರ ಅನುಭವ, ಕೌಶಲ್ಯದ ಬಗ್ಗೆ ವಿಚಾರಿಸಿ. ಅವರ ಹಿಂದಿನ ಕೆಲಸಗಳನ್ನು ನೋಡಿ. ಇಲ್ಲವಾದಲ್ಲಿ ಇದು ನಿಮ್ಮ ಆರೋಗ್ಯ ಹಾಗೂ ಟ್ಯಾಟೂ ವಿನ್ಯಾಸದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು.
ಉತ್ತಮ ಟ್ಯಾಟೂ ಕಲಾವಿದ ಸಿಕ್ಕಾಗ ಹಣ ವಿಷಯಕ್ಕಾಗಿ ರಾಜಿಯಾಗಿ ನಿರಾಕರಿಸಬೇಡಿ. ಇದು ನಿಮ್ಮ ಜೀವನದುದ್ದಕ್ಕೂ ನಿಮ್ಮ ಜೊತೆಯಲ್ಲಿರುವ, ಅಲ್ಲದೆ ನಿಮ್ಮ ಮೊದಲ ಟ್ಯಾಟೂ ಇದಾಗಿದೆ ಎಂಬುದು ನೆನಪಿನಲ್ಲಿಡಿ. ಇವರು ಉತ್ತಮ ಅನುಭವಿಗಳೂ ಆಗಿರುತ್ತಾರೆ, ಟ್ಯಾಟೂ ಹಾಕಿದ ನಂತರ ಅವರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಿ.
ಟ್ಯಾಟೂ ಹಾಕಿಸುವಾಗ ಎಲ್ಲರೂ ಈ ಒಂದು ತಪ್ಪನ್ನು ಮಾಡುತ್ತಾರೆ ಹಾಗೂ ನಂತರ ಪಶ್ಚಾತಾಪ ಕೂಡಾ ಪಡುತ್ತಾರೆ. ನಿಮಗೆ ಪ್ರೀತಿ ಪಾತ್ರರಾದವರ ಹೆಸರು ಅಥವಾ ಮೊದಲ ಅಕ್ಷರದ ಟ್ಯಾಟೂ ಬೇಡ. ನೀವು ಆ ವ್ಯಕ್ತಿಯನ್ನು ಎಷ್ಟು ಪ್ರೀತಿಸುತ್ತಿದ್ದೀರಿ ಎಂಬುದು ಮುಖ್ಯವಲ್ಲ, ಆದ್ರೆ, ಭವಿಷ್ಯದ ಪರಿಸ್ಥಿತಿ ಹೇಗೆಂದು ಹೇಳೋಕಾಗಲ್ಲ. ಹಾಗಾಗಿ, ಮುಂದೆ ಅದರ ಪರಿಣಾಮಗಳನ್ನು ಎದುರಿಸುವವರು ನೀವೇ.. ಎಲ್ಲರ ಮನಸ್ಥಿತಿಗಳು ಒಂದೇ ಅಗಿರುವುದಿಲ್ಲ ಎಂಬುದನ್ನು ನೆನಪಿಡಿ.