Anant Chaturdashi 2024: ವೈಯಕ್ತಿಕ ಮೋಕ್ಷ ವ್ರತ – ಅನಂತ ವರಗಳ ಕರುಣಿಸುವ ಅನಂತಪದ್ಮನಾಭ ಸ್ವಾಮಿಯ ಮಹಿಮೆ ತಿಳಿಯೋಣ
Anant Chaturdashi 2024: ಅಂತ್ಯವಿಲ್ಲದ ಪರಮಾತ್ಮನಲ್ಲಿ ತಮ್ಮ ವೈಯಕ್ತಿಕ ಸುಖಪ್ರಾಪ್ತಿಗಾಗಿ ಪ್ರಾರ್ಥಿಸುತ್ತಾ ವ್ರತವನ್ನು ಆಚರಿಸುತ್ತಾರೆ. ಈ ವ್ರತವು ಒಂದು ವೈಯಕ್ತಿಕ ಪೂಜೆಯಾಗಿದೆಯೇ ಹೊರತು ಸಾಮಾಜಿಕ ಮತ್ತು ಧಾರ್ಮಿಕ ಸ್ವರೂಪವಿರುವ ಉತ್ಸವವಲ್ಲ. ವ್ಯಕ್ತಿಗತ ಶ್ರದ್ಧೆ ಮತ್ತು ನಿಷ್ಠೆಯಿಂದ ಆಚರಿಸುವ ವ್ರತ. ಇದನ್ನು 'ಮೋಕ್ಷ ವ್ರತ' ಎಂದೂ ಕರೆಯುವುದುಂಟು.
ಇಂದು ಸೆಪ್ಟೆಂಬರ್ 16ರಂದು ಅನಂತಪದ್ಮನಾಭ ವ್ರತವನ್ನು ಆಚರಿಸಲಾಗುವುದು. ಭಾದ್ರಪದ ಶುಕ್ಲ ಚತುರ್ದಶಿಯಂದು ಅನಂತ ಚತುರ್ದಶೀ. ಈ ವ್ರತಕ್ಕೆ ಪೂರ್ವಾಹ್ನ ಮುಖ್ಯಕಾಲ. ಆದ್ದರಿಂದ ಸೂರ್ಯೋದಯದಿಂದ ಮಧ್ಯಾಹ್ನದವರೆಗೆ ‘ಚತುರ್ದಶೀ’ ತಿಥಿ ದಿನದಂದು ಈ ವ್ರತವನ್ನು ಆಚರಿಸಬೇಕು. ಮಹಾವಿಷ್ಣುವು ಪದ್ಮನಾಭನಾಗಿ ಅನಂತ (ಸಹಸ್ರ ಹೆಡೆಯ ನಾಗ)ನಲ್ಲಿ ಮಿಲನವಾದ ವ್ರತ ಇದು. ಅಂತ್ಯವಿಲ್ಲದ ಪರಮಾತ್ಮನಲ್ಲಿ ತಮ್ಮ ವೈಯಕ್ತಿಕ ಸುಖಪ್ರಾಪ್ತಿಗಾಗಿ ಪ್ರಾರ್ಥಿಸುತ್ತಾ ವ್ರತವನ್ನು ಆಚರಿಸುತ್ತಾರೆ. ಈ ವ್ರತವು ಒಂದು ವೈಯಕ್ತಿಕ ಪೂಜೆಯಾಗಿದೆಯೇ ಹೊರತು ಸಾಮಾಜಿಕ ಮತ್ತು ಧಾರ್ಮಿಕ ಸ್ವರೂಪವಿರುವ ಉತ್ಸವವಲ್ಲ. ವ್ಯಕ್ತಿಗತ ಶ್ರದ್ಧೆ ಮತ್ತು ನಿಷ್ಠೆಯಿಂದ ಆಚರಿಸುವ ವ್ರತ. ಇದನ್ನು ‘ಮೋಕ್ಷ ವ್ರತ’ ಎಂದೂ ಕರೆಯುವುದುಂಟು.
ಹದಿನಾಲ್ಕು ಲೋಕಗಳನ್ನು ವ್ಯಾಪಿಸಿರುವವನು ಎಂದು ಪ್ರತಿನಿಧಿಸುವಂತೆ 14 ಎಳೆಗಳನ್ನು ಮಾಡಿ, ಕೇಸರಿ ಅಥವಾ ಕುಂಕುಮ ಲೇಪಿತ ದೋರಕವನ್ನು ಮಾಡಿ, ಕಲಶ ಸಹಿತ ಅನಂತನಿಗೆ ಅರ್ಪಿಸುತ್ತಾರೆ. ಪರಮಾತ್ಮನು ರಂಗಧಾಮ ರೂಪವಾಗಿ ಅವತರಿಸಿದ ದಿನವಿದು. ಶೇಷಶಾಯಿಯಾಗಿ, ನಾಭಿಕಮಲದಲ್ಲಿ ಬ್ರಹ್ಮನನ್ನು ಸೃಷ್ಟಿಸಿ ಜಗತ್ತಿನ ಕಲ್ಯಾಣಕ್ಕಾಗಿ ಅನಂತಪದ್ಮನಾಭನೆಂಬ ಹೆಸರಿನಿಂದ ತನ್ನ ಮಹಿಮೆ ತೋರಿಸುವ ದೇವ-ದೇವನನ್ನು ಈ ದಿನ ವಿಶೇಷ ರೀತಿಯಲ್ಲಿ ಪೂಜಿಸಬೇಕು. ಪೂಜೆಯ ನಂತರ ಅನಂತರ ದಾರಗಳೆಂಬ ರಕ್ಷಾಸೂತ್ರಗಳನ್ನು ಕೈಗೆ ಕಟ್ಟಿಕೊಳ್ಳಬೇಕು. ಪುರುಷರು ಬಲಗೈಯಲ್ಲಿ, ಸ್ತ್ರೀಯರು ಎಡಗೈಯಲ್ಲಿ ಪವಿತ್ರವಾದ ಕುಂಕುಮಲೇಪಿತ 14 ಗಂಟುಗಳ್ಳುಳ್ಳ ಹತ್ತಿಯ ಅಥವಾ ರೇಷ್ಮೆಯ ದಾರವನ್ನು ಕಟ್ಟಿಕೊಳ್ಳುವರು.
ವ್ರತಾಚರಣೆಯ ದಿನ ಮುಂಜಾನೆ ಎದ್ದು ಮನೆಯನ್ನೆಲ್ಲಾ ಶುದ್ಧಿ ಮಾಡಿ, ರಂಗೋಲಿ ಇಟ್ಟು ದೇವರ ಬಲಭಾಗದಲ್ಲಿ ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ವ್ರತವನ್ನು ಆಚರಿಸಬೇಕು. ಮಂಟಪವನ್ನು ಕಟ್ಟಿ ಅಷ್ಟದಳ ಪದ್ಮವನ್ನು ಬರೆದು ಅಕ್ಕಿಯನ್ನು ಹರಡಿ ಪೂರ್ವಾಭಿಮುಖವಾಗಿ ಕಲಶವನ್ನು ಸ್ಥಾಪಿಸಬೇಕು. ಈ ವ್ರತವನ್ನು 14 ವರ್ಷಗಳ ಕಾಲ ನಡೆಸಿ, ನಂತರ ಉದ್ಯಾಪನೆ ಮಾಡಬೇಕು. ಅನಂತನ ವ್ರತದಿಂದ ಯಜಮಾನನಿಗೆ ಅನಂತ ಸೌಭಾಗ್ಯ, ಅನಂತ ಕೀರ್ತಿ, ಅನಂತ ಸಂಪತ್ತು, ಅನಂತ ಸೌಖ್ಯ, ಸತ್ಸಂತಾನ ಮುಂತಾದವು ಲಭಿಸುತ್ತದೆಂದು ಹೇಳುವರು. ಆರಂಭದಲ್ಲಿ ಯಮುನಾಪೂಜೆ ಈ ವ್ರತದ ಇನ್ನೊಂದು ವಿಶೇಷ. ನದಿ, ತಟಾಕ, ಬಾವಿ, ಕೆರೆ ಮುಂತಾದ ಪ್ರದೇಶದಿಂದ ಕಲಶದಲ್ಲಿ ನೀರು ತುಂಬಿ, ಅದನ್ನು ಪೂಜಿಸಿ, ಇದೇ ನೀರನ್ನು ಕಲಶಕ್ಕೆ ಹಾಕಿ ಪೂಜಿಸಿ ಧ್ಯಾನಿಸಬೇಕು.
ಈ ವ್ರತವನ್ನು ವನವಾಸದಲ್ಲಿರುವ ಪಾಂಡವರಿಗೆ ಶ್ರೀಕೃಷ್ಣನು ಹೇಳಿ, ಧರ್ಮರಾಜನಿಂದ ಈ ವ್ರತವನ್ನು ಮಾಡಿಸಿದನೆಂದೂ, ಅದೇ ಮುಂದೆ ಅವನ ವಿಜಯಕ್ಕೆ ಕಾರಣವಾಯಿತೆಂದೂ ಹೇಳಲಾಗುತ್ತದೆ. ಅಗಸ್ತ್ಯ ಮಹರ್ಷಿಗಳಿಂದ ಆಚರಿಸಲ್ಪಟ್ಟ ಈ ವ್ರತವನ್ನು ಜನಕ, ಸಗರ, ದಿಲೀಪ, ಹರಿಶ್ಚಂದ್ರ ಭರತಾದಿಗಳೂ ಆಚರಿಸಿ ಅದರ ಪ್ರಭಾವದಿಂದ ರಾಜ್ಯವನ್ನು ಸುಖದಿಂದ ಪರಿಪಾಲಿಸಿ ಖ್ಯಾತರಾದರು.
ಇದನ್ನೂ ಓದಿ: Anant Chaturdashi 2024 -ಅನಂತ ಚತುರ್ದಶಿ ಯಾವಾಗ, ಗಣೇಶನ ವಿಸರ್ಜನೆ ಯಾವಾಗ? ಶುಭ ಮುಹೂರ್ತ ಯಾವಾಗ?
ಅನಂತ ವ್ರತದ ಕಥೆ: ಅರಣ್ಯ ವಾಸ ಮಾಡುತ್ತಿರುವ ಧರ್ಮ, ಭೀಮ, ಅರ್ಜುನ, ನಕುಲ, ಸಹದೇವರು ಕಡು ಕಷ್ಟಪಡುತ್ತಿರುವಾಗ, ಅಲ್ಲಿಗೆ ಬಂದ ಮಹಾನುಭಾವನಾದ ಶ್ರೀಕೃಷ್ಣನಿಗೆ ವಂದಿಸಿ ಯುಧಿಷ್ಠಿರನು, “ಎಲೈ ಕರುಣಾಮೂರ್ತಿಯೇ! ನನ್ನ ತಮ್ಮಂದಿರೊಡಗೂಡಿ ನಾನು ವನವಾಸದಿಂದ ಅತ್ಯಂತ ದುಃಖವನ್ನು ಅನುಭವಿಸುತ್ತಿದ್ದೇನೆ. ಈ ದುಃಖವೆಂಬ ಸಾಗರವನ್ನು ಹೇಗೆ ದಾಟುವೆನೋ ಹೇಳಬೇಕು ಎನ್ನಲು, ಶ್ರೀಕೃಷ್ಣನು “ಧರ್ಮರಾಯನೇ ಪುರುಷರಿಗೂ ಸ್ತ್ರೀಯರಿಗೂ ಸಕಲ ಕಾಮ್ಯಸಿದ್ಧಿ ಕೊಡುವ ಅನಂತವ್ರತವೆಂಬ ಒಂದು ವ್ರತವುಂಟು. ಈ ವ್ರತವನ್ನು ಭಾದ್ರಪದ ಮಾಸದಲ್ಲಿ ಶುಕ್ಲಪಕ್ಷದ ಚತುರ್ದಶಿಯಲ್ಲಿ ಮಾಡತಕ್ಕದ್ದು” ಎಂದು ಹೇಳಲು ಧರ್ಮರಾಯನು ಆ ವ್ರತದ ಕಥೆಯನ್ನು ಕೇಳಲು ಇಚ್ಛಿಸಲಾಗಿ, ಶ್ರೀ ಕೃಷ್ಣನು ಯುಧಿಷ್ಠಿರನಿಗೆ ವ್ರತದ ಕಥೆಯನ್ನು ಹೇಳುತ್ತಾನೆ.
ಕೃತಯುಗದಲ್ಲಿ ಸುಮಂತನೆಂಬ ಒಬ್ಬ ಬ್ರಾಹ್ಮಣನಿದ್ದನು. ಆತನು ವಸಿಷ್ಠ ಗೋತ್ರೋತ್ಪನ್ನನು, ಅಧ್ಯಯನ ಶಾಸ್ತ್ರ ಸಂಪನ್ನನು ಆಗಿದ್ದನು. ಆತನು ಭೃಗುಋಷಿಗಳ ಮಗಳಾದ ದೀಕ್ಷೆ ಎಂಬ ಕನ್ನಿಕೆಯನ್ನು ವಿವಾಹವಾದನು. ದೀಕ್ಷಾದೇವಿಯ ಗರ್ಭದಲ್ಲಿ ಒಳ್ಳೆಯ ಗುಣವುಳ್ಳ ಒಬ್ಬ ಕನ್ನಿಕೆ ಜನಿಸಿದಳು. ಆಕೆಗೆ ಶೀಲೆ ಎಂದು ನಾಮಕರಣವಾಯಿತು. ದೀಕ್ಷಾದೇವಿಯು ತಾಪಜ್ವರದಿಂದ ಸ್ವರ್ಗಲೋಕಗೈದಳು. ಆಗ ಸುಮಂತನು ಅಗ್ನಿಹೋತ್ರಾದಿ ಕರ್ಮಗಳಿಗೆ ಲೋಪವಾಗಬಾರದೆಂಬ ಕಾರಣಕ್ಕಾಗಿ ಕರ್ಕಶಿ ಎಂಬ ಹೆಸರುಳ್ಳ ಕನ್ನಿಕೆಯನ್ನು ಲಗ್ನ ಮಾಡಿಕೊಂಡನು. ಕಠಿಣ ಚಿತ್ತಳಾದ ಕರ್ಕಶಿಯು ಕೋಪಿಷ್ಠಳಾಗಿ, ಕಲಹಕಾರಿಣಿಯಾಗಿಯೂ ಇದ್ದಳು. ಶೀಲೆಯು ವಿವಾಹಯೋಗ್ಯಳಾದೊಡನೆ, ಸುಮಂತನು ಕೌಂಡಿನ್ಯ ಮಹಾಮುನಿಗಳ ತಪೋಮಹಿಮೆಯನ್ನು ಕಂಡು ಕೌಂಡಿನ್ಯರಿಗೆ ಮಗಳನ್ನಿತ್ತು ವಿವಾಹ ಮಾಡಿದನು.
ಆಗ ವಿವಾಹವನ್ನೆಲ್ಲಾ ಮಾಡಿ ಪಾರಿತೋಷಕಾರ್ಥವಾಗಿ ವಿವಾಹ ಕಾಲದಲ್ಲಿ ಅಳಿಯನಿಗೆ ಕೊಡತಕ್ಕ ವಸ್ತ್ರಾಭರಣಗಳನ್ನು ಕೊಂಚ ಕೊಡಬೇಕೆಂದು ಕಠಿಣಚಿತ್ತಳಾದ ತನ್ನ ಪತ್ನಿಯನ್ನು ಕೇಳಿದಾಗ, ಆಕೆಯು ಕೊಡಲು ಏನೂ ಇಲ್ಲ ಎಂದಳು. ಚಿಂತಿಸಿದ ಸುಮಂತನು, ಮದುವೆಗೆ ಮಾಡಿದ ನಂತರ ಮಿಕ್ಕ ಹಿಟ್ಟನ್ನು ಕೊಟ್ಟು ಅಳಿಯ ಮಗಳನ್ನು ಕಳುಹಿಸಿದನು. ಕೌಂಡಿನ್ಯರು ಸದಾಚಾರ ಸಂಪತ್ತುಳ್ಳ ಶೀಲೆಯೊಡನೆ ಬಂಡಿಯಲ್ಲಿ ಕುಳಿತು ತಮ್ಮ ಆಶ್ರಮಕ್ಕೆ ಹೊರಟರು.
ಮಾರ್ಗಮಧ್ಯದಲ್ಲಿ ಒಂದು ನದೀ ತೀರದಲ್ಲಿ ಬಂಡಿಯನ್ನು ನಿಲ್ಲಿಸಿ, ಮಧ್ಯಾಹ್ನವಾದ್ದರಿಂದ ಮಾಧ್ಯಾಹ್ನಿಕವನ್ನು ಮಾಡುವುದಕ್ಕಾಗಿ ಕೌಂಡಿನ್ಯರು ನದಿಯ ಕಡೆಗೆ ಹೊರಟರು. ಆ ದಿವಸವು ಅನಂತಪದ್ಮನಾಭ ಚತುರ್ದಶಿಯಾದುದರಿಂದ ಕೆಂಪು ಸೀರೆಗಳನ್ನುಟ್ಟು ಕೊಂಡು ಅನೇಕ ಮಂದಿ ಸ್ತ್ರೀಯರು ಅತಿಭಕ್ತಿಯಿಂದ ಬೇರೆಬೇರೆಯಾಗಿ ಅನಂತಪದ್ಮನಾಭ ಸ್ವಾಮಿಯನ್ನು ಪೂಜೆ ಮಾಡುತ್ತಿರಲಾಗಿ, ಕೌಂಡಿನ್ಯರ ಸತಿಯಾದ ಶೀಲೆಯು ಅವರನ್ನು ಕಂಡಳು. ಅವರ ಸಮೀಪಕ್ಕೆ ಹೋಗಿ “ಮಾತೆಯರೆ, ನೀವು ಮಾಡುತ್ತಿರುವ ಪೂಜೆ ಎಂಥಾದ್ದು? ಯಾವ ದೇವರನ್ನು ಪೂಜಿಸುತ್ತಿದ್ದೀರಿ? ಇದರ ಹೆಸರೇನು? ನನಗೂ ಹೇಳಬೇಕೆಂದು” ಕೇಳಿದಳು.
ಆ ಸ್ತ್ರೀಯರು, “ನಾವು ಅನಂತನನ್ನು ಪೂಜಿಸುತ್ತಿರುವೆವು. ಇಂದು ಭಾದ್ರಪದ ಶುಕ್ಲ ಚತುರ್ದಶಿ. ಇಂದು ಮಹಾವಿಷ್ಣುವನ್ನು ಅನಂತ ಮತ್ತು ಯಮುನೆಯರೊಡನೆ ಪೂಜಿಸಿದರೆ ಸಕಲ ಇಷ್ಟಾರ್ಥಗಳೂ ನೆರವೇರುವುವು” ಎಂದು ಹೇಳಿದರು. ಸಂತಸಗೊಂಡ ಶೀಲೆಯು ಅವರ ಸಹಾಯದಿಂದ ವ್ರತವನ್ನು ಮಾಡಿ ಅನಂತನದಾರವನ್ನು ಕೈಗೆ ಕಟ್ಟಿಕೊಂಡು ದಾರಿಯಲ್ಲಿ ಆಹಾರಕ್ಕಾಗಿ ತಂದಿದ್ದ ಹಿಟ್ಟನ್ನು ಬ್ರಾಹ್ಮಣರಿಗೆ ಕೊಟ್ಟು, ಪತಿಗೆ ಸ್ವಲ್ಪ ಆಹಾರವನ್ನು ಕೊಟ್ಟು, ಉಳಿದ ಸ್ವಲ್ಪವನ್ನು ತಾನು ಭುಂಜಿಸಿ ಸಂತುಷ್ಟಳಾಗಿ ತನ್ನ ಪತಿಯೊಡನೆ ಆಶ್ರಮಕ್ಕೆ ತೆರಳಿದಳು.
ಆಶ್ರಮಕ್ಕೆ ಹೋದ ತಕ್ಷಣವೇ ಅನಂತಸ್ವಾಮಿಯ ಅನುಗ್ರಹದಿಂದ ಅನಂತವಾದ, ಸರ್ವೋತ್ತಮವಾದ, ಲೋಕಸಮ್ಮತವಾದ ಅಷ್ಟೈಶ್ವರ್ಯಂಗಳು ವ್ರತಮಹಿಮೆಯಿಂದ ಉಂಟಾದವು. ಕೌಂಡಿನ್ಯ ಮಹಾಮುನಿಯ ಆಶ್ರಮವು ಸಕಲೈಶ್ವರ್ಯಗಳಿಂದಲೂ ಧನಧಾನ್ಯಗಳಿಂದಲೂ ಅತಿಥಿ ಸತ್ಕಾರದಿಂದ ಕೂಡಿ ಅಧಿಕವಾಗಿ ಪ್ರಕಾಶಿಸಿತು. ಶೀಲೆಯು ಸಕಲ ದಿವ್ಯಾಭರಣಗಳನ್ನು ಧರಿಸಿದವಳಾಗಿ ಸಾವಿತ್ರಿಗೆ ಸಮಾನಳಾದಳು. ಇದನ್ನು ನೋಡಿದ ಬಂಧುಗಳು ಅನಂತಪದ್ಮನಾಭನ ಅನುಗ್ರಹದಿಂದ ಈಕೆ ಇಷ್ಟು ಸಂತೋಷದಿಂದಿರಬಹುದೆಂದು ಹೇಳಿಕೊಳ್ಳುತ್ತಿದ್ದರು.
ಹೀಗಿರಲು ಒಮ್ಮೆ, ಕೌಂಡಿನ್ಯರು ಪತ್ನಿಯ ಕೈಯಲ್ಲಿದ್ದ ಕೆಂಪು ದಾರವನ್ನು ನೋಡಿ, ಅದು ಏನೆಂದು ವಿಚಾರಿಸಲು, ಆಕೆಯು ಅನಂತನ ವ್ರತದ ವಿಚಾರವನ್ನು ತಿಳಿಸಿ, ವ್ರತದ ಫಲವಾಗಿ, ಸ್ವಾಮಿಯ ಅನುಗ್ರಹದಿಂದ ತಮಗೆ ಧನಧಾನ್ಯ ಐಶ್ವರ್ಯಗಳು ಉಂಟಾಗಿವೆ ಎನ್ನಲು, ಕೋಪಗೊಂಡ ಕೌಂಡಿನ್ಯರು ತಮಗೆ ದೊರಕಿರುವ ಸಕಲ ಧನಧಾನ್ಯವೂ ತಮ್ಮ ಸಾಧನೆಯ ಫಲವೆಂದು ನುಡಿದು, ಪತ್ನಿಯ ಕೈಯಲ್ಲಿದ್ದ ದಾರವನ್ನು ಕಿತ್ತು ಹತ್ತಿರದಲ್ಲಿದ್ದ ಬೆಂಕಿಗೆ ಹಾಕುತ್ತಾರೆ.
ಶೀಲೆಯು ತಕ್ಷಣ ಭಯದಿಂದ ಓಡಿಬಂದು ದಾರವನ್ನು ತೆಗೆದು ಹಾಲಿನಲ್ಲಿ ಹಾಕಿ ರಕ್ಷಿಸಿದಳು. ಕೌಂಡಿನ್ಯರ ಈ ಕರ್ಮಪರಿಪಾಕದಿಂದ ಅವರ ಐಶ್ವರ್ಯವು ದಿನೇ ದಿನೇ ನಶಿಸಿ ಹೋಯಿತು. ಕಳ್ಳರು ಐಶ್ವರ್ಯವನ್ನು ಕದ್ದೊಯ್ದರು. ತಾವು ಮಾಡಿದ ವ್ರತದ ದೂಷಣೆಯೇ ಇದಕ್ಕೆ ಕಾರಣವೆಂದು ಅರಿತು, ನೊಂದ ಕೌಂಡಿನ್ಯರು ಅನಂತನಿಗಾಗಿ ಕಾಡಿನಲ್ಲಿ ಅಲೆದಾಡಿ ಹುಡುಕಾಟ ನಡೆಸುತ್ತಾರೆ. ಅವರ ನಿಷ್ಠೆಗೆ ಮೆಚ್ಚಿದ ಅನಂತನು ಅವರಿಗೆ ಕಾಣಿಸಿಕೊಂಡು ಅವರನ್ನೂ ಆಶೀರ್ವದಿಸುತ್ತಾನೆ. ನಂತರ ಕೌಂಡಿನ್ಯರು ಅನಂತ ವ್ರತವನ್ನಾಚರಿಸಿ ಅದರ ಪ್ರಭಾವದಿಂದ ಇಹಲೋಕದಲ್ಲಿ ಸಕಲ ಇಷ್ಟಾರ್ಥಗಳನ್ನೂ, ಸಕಲ ಸಂಪತ್ತನ್ನೂ ಅನುಭವಿಸಿ, ಪರದಲ್ಲಿ ಮೋಕ್ಷವನ್ನೂ ಹೊಂದಿ ಈಗಲೂ ಉಡುರಾಶಿಗಳ ಮಧ್ಯದಲ್ಲಿ ಪುನರ್ವಸು ನಕ್ಷತ್ರವಾಗಿ ಪ್ರಕಾಶಿಸುತ್ತಿದ್ದಾರೆ.
ಭವಿಷ್ಯೋತ್ತರ ಪುರಾಣದ ಈ ಕಥೆಯಿಂದ ಅನಂತಪದ್ಮನಾಭ ಸ್ವಾಮಿಯ ಮಹಾತ್ಮೆಯನ್ನು ಅರಿಯಬಹುದು. ಒಟ್ಟಾರೆ ಅಲ್ಪಾಯಾಸದಿಂದ ಅಲ್ಪನೂ ಕಲ್ಪನಾಗುವ ವ್ರತವೇ ಅನಂತಪದ್ಮನಾಭ ವ್ರತ ಎನ್ನಬಹುದು. (ಲೇಖನ: ಆರತಿ ನಾಗಪ್ಪ)
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:04 am, Mon, 16 September 24