
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಚಂದ್ರ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯನ್ನು ಸಂಕಷ್ಟಹರ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಈ ವಿಶೇಷ ಚತುರ್ಥಿ ದಿನವು ಮಂಗಳವಾರದಂದು ಬಂದಾಗ, ಅದನ್ನು ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಶಾಲಿ “ಅಂಗಾರಕ ಸಂಕಷ್ಟ ಚತುರ್ಥಿ” ಎಂದು ಕರೆಯಲಾಗುತ್ತದೆ. ವರ್ಷದಲ್ಲಿ ಕೆಲವೇ ಬಾರಿ ಬರುವ ಈ ಪವಿತ್ರ ದಿನದಂದು ವಿಘ್ನನಿವಾರಕ ಗಣೇಶನನ್ನು ಪೂಜಿಸುವುದರಿಂದ ಜೀವನದ ಸಕಲ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ದೃಢ ನಂಬಿಕೆಯಿದೆ.
ಈ ವರ್ಷ ಕೃಷ್ಣ ಪಕ್ಷ ಚತುರ್ಥಿ ತಿಥಿಯು ಸೆಪ್ಟೆಂಬರ್ 29 ರಂದು ಸಂಜೆ 5:09 ಕ್ಕೆ ಪ್ರಾರಂಭವಾಗಿ, ಸೆಪ್ಟೆಂಬರ್ 30 ರಂದು ಮಧ್ಯಾಹ್ನ 2:55 ಕ್ಕೆ ಮುಕ್ತಾಯಗೊಳ್ಳುತ್ತದೆ. ಚತುರ್ಥಿ ತಿಥಿ ಪ್ರಾರಂಭವಾಗುವ ಸಮಯ ಮಂಗಳವಾರವಾಗಿರುವುದರಿಂದ, ಸೆಪ್ಟೆಂಬರ್ 29 ರಂದೇ ವಿಘ್ನರಾಜ ಸಂಕಷ್ಟಿ ಚತುರ್ಥಿ ವ್ರತವನ್ನು ಆಚರಿಸಬೇಕು.
ಸಂಸ್ಕೃತದಲ್ಲಿ “ಅಂಗಾರಕ” ಎಂದರೆ ಉರಿಯುವ ಕೆಂಡದಂತೆ ಕೆಂಪಾಗಿರುವ ಮಂಗಳ ಗ್ರಹ ಎಂದರ್ಥ. ಪೌರಾಣಿಕ ಕಥೆಯ ಪ್ರಕಾರ, ಭರದ್ವಾಜ ಮಹರ್ಷಿ ಮತ್ತು ಪೃಥ್ವಿದೇವಿಯ ಪುತ್ರನಾದ ಮಂಗಳನು ಗಣೇಶನ ಶ್ರೇಷ್ಠ ಭಕ್ತನಾಗಿದ್ದನು. ಅವನು ಗಣೇಶನನ್ನು ಒಲಿಸಿಕೊಳ್ಳಲು ತೀವ್ರವಾದ ತಪಸ್ಸನ್ನು ಆಚರಿಸಿದಾಗ, ಅವನ ಭಕ್ತಿಗೆ ಮೆಚ್ಚಿದ ಶ್ರೀ ಗಣಪತಿಯು ಕೃಷ್ಣ ಪಕ್ಷದ ಚತುರ್ಥಿಯ ದಿನದಂದು ಪ್ರತ್ಯಕ್ಷನಾಗಿ ವರವನ್ನು ನೀಡಿದನು.
ಮಂಗಳನು ಗಣೇಶನಲ್ಲಿ ತನ್ನ ಹೆಸರು ಶಾಶ್ವತವಾಗಿ ಅಮರವಾಗಬೇಕು ಹಾಗೂ ಈ ದಿನದಂದು ಗಣೇಶನನ್ನು ಪೂಜಿಸುವ ಭಕ್ತರ ಸಕಲ ಕಷ್ಟಗಳು ಪರಿಹಾರವಾಗಬೇಕು ಎಂದು ಪ್ರಾರ್ಥಿಸಿದನು. ಅದಕ್ಕೆ ಗಣೇಶನು ಪ್ರಸನ್ನನಾಗಿ, ಮಂಗಳವಾರ ಬರುವ ಕೃಷ್ಣ ಪಕ್ಷದ ಚತುರ್ಥಿಯನ್ನು ‘ಅಂಗಾರಕ ಸಂಕಷ್ಟ ಚತುರ್ಥಿ’ ಎಂದು ಕರೆಯಲಾಗುತ್ತದೆ ಎಂದು ವರವಿತ್ತನು. ಈ ದಿನ ಯಾರು ಗಣೇಶ ಮತ್ತು ಮಂಗಳ ದೇವನನ್ನು ಆರಾಧಿಸುತ್ತಾರೋ ಅವರ ಎಲ್ಲಾ ವಿಘ್ನಗಳು ನಿವಾರಣೆಯಾಗುತ್ತವೆ ಎಂಬ ಅಭಯ ನೀಡಿದನು.
ಅಂಗಾರಕ ಸಂಕಷ್ಟಿಯಂದು ಆಚರಿಸುವ ಉಪವಾಸ ಮತ್ತು ಪೂಜೆಗೆ ವಿಶೇಷವಾದ ಶಕ್ತಿಯಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸಾಮಾನ್ಯ ದಿನಗಳಲ್ಲಿ ಆಚರಿಸುವ ಸಂಕಷ್ಟಿಗಿಂತ ಅಂಗಾರಕ ಚತುರ್ಥಿಯಂದು ಒಂದು ಬಾರಿ ವ್ರತ ಆಚರಿಸಿದರೆ, ಇಡೀ ವರ್ಷದ ಸಂಕಷ್ಟಿ ಆಚರಿಸಿದಷ್ಟು ಪುಣ್ಯ ಫಲ ದೊರೆಯುತ್ತದೆ. ಈ ದಿನದ ಆರಾಧನೆಯಿಂದ ಜಾತಕದಲ್ಲಿರುವ ಕುಜ ದೋಷ ಅಥವಾ ಮಂಗಳ ದೋಷಗಳು ಶಮನಗೊಂಡು, ವಿವಾಹದಲ್ಲಿ ಉಂಟಾಗುವ ವಿಳಂಬಗಳು ಹಾಗೂ ದಾಂಪತ್ಯದ ಸಮಸ್ಯೆಗಳು ಪರಿಹಾರವಾಗುತ್ತವೆ. ಅಷ್ಟೇ ಅಲ್ಲದೆ, ತೀವ್ರ ಆರ್ಥಿಕ ಮುಗ್ಗಟ್ಟು ಮತ್ತು ಸಾಲದ ಸುಳಿಯಲ್ಲಿ ಸಿಲುಕಿದವರಿಗೆ ಅಂಗಾರಕ ಚತುರ್ಥಿ ಪೂಜೆಯು ಅಭಯ ನೀಡುತ್ತದೆ. ಮಂಗಳ ಗ್ರಹವು ರಕ್ತ ಮತ್ತು ಧೈರ್ಯದ ಸಂಕೇತವಾಗಿರುವುದರಿಂದ, ಈ ದಿನದ ಪೂಜೆಯಿಂದ ದೇಹದ ರಕ್ತದೋಷಗಳು ನಿವಾರಣೆಯಾಗಿ, ವ್ಯಕ್ತಿಯಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ.
ಅಂಗಾರಕ ಚತುರ್ಥಿಯ ದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಶುಭ್ರವಾದ ಬಟ್ಟೆಯನ್ನು (ಸಾಧ್ಯವಾದರೆ ಕೆಂಪು ಬಣ್ಣದ್ದು) ಧರಿಸಬೇಕು. ಪೂಜಾ ಕೊಠಡಿಯಲ್ಲಿ ಗಣೇಶನಿಗೆ ದೀಪ ಹಚ್ಚಿ, ಇಡೀ ದಿನ ಮನಸ್ಸಿನಲ್ಲಿ ಗಣೇಶನ ಸ್ಮರಣೆ ಮಾಡುತ್ತಾ ಉಪವಾಸದ ಸಂಕಲ್ಪ ಮಾಡಬೇಕು. ದಿನಪೂರ್ತಿ ಸಂಪೂರ್ಣ ಉಪವಾಸ ಅಥವಾ ಹಣ್ಣು-ಹಾಲು ಸೇವಿಸಿ ಫಲಹಾರ ವ್ರತವನ್ನು ಆಚರಿಸಬಹುದು.
ಇದನ್ನೂ ಓದಿ: ಮಂತ್ರ ಪಠಣ ಮಾಡುವಾಗ ಕಣ್ಣುಗಳನ್ನು ಏಕೆ ಮುಚ್ಚಬೇಕು? ಆಧ್ಯಾತ್ಮಿಕ ಕಾರಣ ಇಲ್ಲಿದೆ
ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಗಣೇಶನಿಗೆ ಪ್ರಿಯವಾದ ಗರಿಕೆ (ದೂರ್ವಾ), ಕೆಂಪು ಹೂವುಗಳು, ಮೋದಕ, ಕಡುಬು ಹಾಗೂ ಎಳ್ಳಿನ ನೈವೇದ್ಯವನ್ನು ಅರ್ಪಿಸಬೇಕು. ಪೂಜೆಯ ಸಮಯದಲ್ಲಿ “ಓಂ ಗಂ ಗಣಪತಯೇ ನಮಃ” ಮಂತ್ರ ಅಥವಾ ಗಣಪತಿ ಅಥರ್ವಶೀರ್ಷವನ್ನು ಪಠಿಸುವುದು ಶ್ರೇಷ್ಠ. ರಾತ್ರಿ ಚಂದ್ರೋದಯವಾದ ನಂತರ ಚಂದ್ರನಿಗೆ ನೀರು, ಹಾಲು ಮತ್ತು ಅಕ್ಷತೆಯನ್ನು ನೀಡಿ ಅರ್ಘ್ಯ ಅರ್ಪಿಸಿದ ಮೇಲೆಯೇ ವ್ರತವನ್ನು ಪೂರ್ಣಗೊಳಿಸಿ ಪ್ರಸಾದ ಸ್ವೀಕರಿಸಬೇಕು.
ಈ ಪವಿತ್ರ ದಿನದಂದು ಸಾತ್ವಿಕ ಜೀವನ ನಡೆಸುವುದು ಅತ್ಯಂತ ಮುಖ್ಯ. ಉಪವಾಸವನ್ನು ಬಿಡುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದ ಸಾತ್ವಿಕ ಆಹಾರ ಅಥವಾ ದೇವರಿಗೆ ಅರ್ಪಿಸಿದ ನೈವೇದ್ಯವನ್ನಷ್ಟೇ ಸೇವಿಸಬೇಕು. ಮನಸ್ಸಿನಲ್ಲಿ ಯಾರ ಬಗ್ಗೆಯೂ ದ್ವೇಷ, ಕೋಪ ಅಥವಾ ನಕಾರಾತ್ಮಕ ಆಲೋಚನೆಗಳನ್ನು ತರದೆ ಶಾಂತ ಚಿತ್ತರಾಗಿರಬೇಕು. ಇದರೊಂದಿಗೆ, ಈ ದಿನ ಬಡವರಿಗೆ ಅಥವಾ ನಿರ್ಗತಿಕರಿಗೆ ಅನ್ನದಾನ ಮಾಡುವುದು ಮತ್ತು ಕೆಂಪು ಧಾನ್ಯಗಳನ್ನು (ಮುಖ್ಯವಾಗಿ ತೊಗರಿ ಬೇಳೆ) ದಾನ ಮಾಡುವುದು ಮಂಗಳ ದೇವ ಹಾಗೂ ಗಣೇಶನ ಸಂಪೂರ್ಣ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ