ಮಂತ್ರ ಪಠಣ ಮಾಡುವಾಗ ಕಣ್ಣುಗಳನ್ನು ಏಕೆ ಮುಚ್ಚಬೇಕು? ಆಧ್ಯಾತ್ಮಿಕ ಕಾರಣ ಇಲ್ಲಿದೆ
ಸನಾತನ ಧರ್ಮದಲ್ಲಿ ಮಂತ್ರ ಜಪಿಸುವಾಗ ಕಣ್ಣು ಮುಚ್ಚುವುದು ಏಕಾಗ್ರತೆ ಹೆಚ್ಚಿಸಲು ಅತ್ಯಗತ್ಯ. ಇದು ಬಾಹ್ಯ ವಿಚಲನೆ ತಡೆದು, ಆಂತರಿಕ ಶಾಂತಿ ಮತ್ತು ದೇವರೊಂದಿಗೆ ನೇರ ಸಂಪರ್ಕ ಸಾಧಿಸಲು ನೆರವಾಗುತ್ತದೆ. ಕಣ್ಣು ಮುಚ್ಚುವುದರಿಂದ ದೇಹದಲ್ಲಿ ದೈವಿಕ ಶಕ್ತಿ ಹರಿದು, ಚಕ್ರಗಳು ಸಕ್ರಿಯಗೊಳ್ಳುತ್ತವೆ. ಜಪಕ್ಕೆ ಪವಿತ್ರ ಸ್ಥಳ, ಸಂಕಲ್ಪ ಹಾಗೂ ನಿಯಮಗಳ ಪಾಲನೆ ಮುಖ್ಯ.

ಸನಾತನ ಧರ್ಮದಲ್ಲಿ ಪೂಜೆ, ಪುನಸ್ಕಾರ ಹಾಗೂ ಧ್ಯಾನದ ಸಮಯದಲ್ಲಿ ಮಂತ್ರಗಳನ್ನು ಪಠಿಸುವುದು ಅತ್ಯಂತ ಪವಿತ್ರ ಮತ್ತು ಶಕ್ತಿಶಾಲಿ ಅಭ್ಯಾಸವಾಗಿದೆ. ಆದರೆ ಮಂತ್ರ ಪಠಿಸುವಾಗ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು ಎಂದು ಹಿರಿಯರು ಮತ್ತು ಧರ್ಮಗ್ರಂಥಗಳು ಹೇಳುತ್ತವೆ. ಹೀಗೆ ಕಣ್ಣು ಮುಚ್ಚಿ ಮಂತ್ರ ಜಪಿಸುವುದರ ಹಿಂದಿರುವ ಆಧ್ಯಾತ್ಮಿಕ ರಹಸ್ಯ, ನಿಯಮಗಳು ಮತ್ತು ಧಾರ್ಮಿಕ ಪ್ರಯೋಜನಗಳು ಇಲ್ಲಿವೆ.
ಏಕಾಗ್ರತೆ ಮತ್ತು ಮನಸ್ಸಿನ ಚಂಚಲತೆ ತಡೆಯಲು:
ನಮ್ಮ ಕಣ್ಣುಗಳು ಬಾಹ್ಯ ಪ್ರಪಂಚವನ್ನು ನೋಡಿದಾಗ ಮನಸ್ಸು ಬೇಗನೆ ವಿಚಲಿತಗೊಳ್ಳುತ್ತದೆ. ಕಣ್ಣುಗಳನ್ನು ತೆರೆದು ಮಂತ್ರ ಪಠಿಸಿದರೆ ಸುತ್ತಮುತ್ತಲಿನ ವಾತಾವರಣ, ವಸ್ತುಗಳು ಅಥವಾ ವ್ಯಕ್ತಿಗಳ ಮೇಲೆ ಗಮನ ಹರಿದು ಧ್ಯಾನ ಭಂಗವಾಗುತ್ತದೆ. ಕಣ್ಣು ಮುಚ್ಚುವುದರಿಂದ ಬಾಹ್ಯ ಪ್ರಪಂಚದ ಸಂಪರ್ಕ ಕಡಿತಗೊಂಡು, ಜಪಿಸುತ್ತಿರುವ ಮಂತ್ರ ಮತ್ತು ದೇವರ ಮೇಲೆ ಸಂಪೂರ್ಣ ಏಕಾಗ್ರತೆ ಸಾಧಿಬಹುದು.
ಆಂತರಿಕ ಇಂದ್ರಿಯಗಳ ಜಾಗೃತಿ:
ಕಣ್ಣು ಮುಚ್ಚಿ ಮಂತ್ರ ಜಪಿಸಿದಾಗ ದೇಹದ ಆಂತರಿಕ ಶಕ್ತಿಯು ಜಾಗೃತಗೊಳ್ಳುತ್ತದೆ. ಎರಡು ಹುಬ್ಬುಗಳ ಮಧ್ಯದ ಭಾಗದಲ್ಲಿ (ಆಜ್ಞಾ ಚಕ್ರ) ಗಮನವನ್ನು ಕೇಂದ್ರೀಕರಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಭಗವಂತನೊಂದಿಗೆ ನೇರವಾದ ಆಧ್ಯಾತ್ಮಿಕ ಸಂಪರ್ಕ ಏರ್ಪಡುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ದೈವಿಕ ಶಕ್ತಿ ಮತ್ತು ಚಕ್ರಗಳ ಸಕ್ರಿಯಗೊಳಿಸುವಿಕೆ:
ಪ್ರತಿಯೊಂದು ಮಂತ್ರವೂ ನಿರ್ದಿಷ್ಟ ಧ್ವನಿ ತರಂಗ ಹಾಗೂ ದೈವಿಕ ಶಕ್ತಿಯನ್ನು (Positive Energy) ಉತ್ಪಾದಿಸುತ್ತದೆ. ಕಣ್ಣುಗಳನ್ನು ಮುಚ್ಚಿ ಜಪಿಸುವುದರಿಂದ ಈ ಧನಾತ್ಮಕ ಶಕ್ತಿಯು ದೇಹದ ವಿವಿಧ ಚಕ್ರಗಳಲ್ಲಿ ಪ್ರವಹಿಸಿ, ದೇಹ ಮತ್ತು ಮನಸ್ಸಿನಾದ್ಯಂತ ಸಕಾರಾತ್ಮಕ ಶಕ್ತಿಯನ್ನು ಹರಡಲು ಸಹಾಯ ಮಾಡುತ್ತದೆ.
ಮಂತ್ರ ಜಪಿಸುವಾಗ ಪಾಲಿಸಬೇಕಾದ ಮುಖ್ಯ ನಿಯಮಗಳು:
- ಮಂತ್ರ ಜಪವನ್ನು ಪ್ರಾರಂಭಿಸುವ ಮೊದಲು ಮನಸ್ಸಿನಲ್ಲಿ ಸಂಕಲ್ಪ ಮಾಡಿ, ಏಕಾಗ್ರತೆಗಾಗಿ ಮೊದಲು ಗಾಯತ್ರಿ ಮಂತ್ರವನ್ನು ಪಠಿಸುವುದು ಶ್ರೇಷ್ಠ.
- ಮಂತ್ರ ಪಠಣೆಗೆ ಸದಾ ಶಾಂತ ಮತ್ತು ಪವಿತ್ರವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.
- ಕಣ್ಣುಗಳನ್ನು ಮುಚ್ಚಿ, ಬೆರಳ ತುದಿಯಲ್ಲಿ ರುದ್ರಾಕ್ಷಿ ಅಥವಾ ತುಳಸಿ ಮಾಲೆಯನ್ನು ಹಿಡಿದು 108 ಬಾರಿ ಜಪಿಸುವುದರಿಂದ ಯಾವುದೇ ಅಡೆತಡೆಯಿಲ್ಲದೆ ಜಪ ಪೂರ್ಣಗೊಳ್ಳುತ್ತದೆ.
- ಜಪ ಮುಗಿದ ತಕ್ಷಣ ತಕ್ಷಣವೇ ಕಣ್ಣುಗಳನ್ನು ತೆರೆಯಬಾರದು. ಕೆಲ ಸೆಕೆಂಡುಗಳ ಕಾಲ ಶಾಂತವಾಗಿ ಕುಳಿತು, ನಂತರ ಕಣ್ಣುಗಳನ್ನು ತೆರೆದು ದೇವರಿಗೆ ನಮಸ್ಕರಿಸಬೇಕು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




