Baijnath Mahadev Temple: ಬ್ರಿಟಿಷ್ ದಂಪತಿಯಿಂದ ಪುನರ್ನಿರ್ಮಿಸಲಾದ ಭಾರತದ ಏಕೈಕ ಶಿವ ದೇವಾಲಯ ಎಲ್ಲಿದೆ ಗೊತ್ತಾ?
ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಬೈಜನಾಥ್ ಮಹಾದೇವ್ ದೇವಾಲಯವು ಬ್ರಿಟಿಷ್ ದಂಪತಿಯಿಂದ ಪುನರ್ನಿರ್ಮಿಸಲಾದ ಅನನ್ಯ ಇತಿಹಾಸ ಹೊಂದಿದೆ. 19ನೇ ಶತಮಾನದಲ್ಲಿ ಅಫ್ಘಾನ್ ಯುದ್ಧದಲ್ಲಿ ಪತಿಯ ಸುರಕ್ಷತೆಗಾಗಿ ಶಿವನಿಗೆ ಪ್ರಾರ್ಥಿಸಿದ ಪತ್ನಿಗೆ ಪವಾಡ ನಡೆದ ನಂತರ, ಅವರು ದೇವಾಲಯವನ್ನು ನವೀಕರಿಸಿದರು. ಈ ದೇವಾಲಯವು ಬ್ರಿಟಿಷ್ ಸೇನಾನಿ ದಂಪತಿಯ ಆಳವಾದ ಶಿವಭಕ್ತಿ ಮತ್ತು ನಂಬಿಕೆಯ ವಿಶಿಷ್ಟ ಕಥೆಯನ್ನು ಹೇಳುತ್ತದೆ.

ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿರುವ ಬೈಜನಾಥ್ ಮಹಾದೇವ್ ದೇವಾಲಯವು ವಿಶಿಷ್ಟ ಇತಿಹಾಸವನ್ನು ಹೊಂದಿದೆ. 16 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಪ್ರಾಚೀನ ದೇವಾಲಯವನ್ನು 1883 ರಲ್ಲಿ ಬ್ರಿಟಿಷ್ ಸೇನಾಧಿಕಾರಿ ದಂಪತಿ ಪುನರ್ನಿರ್ಮಿಸಿದರು. ಒಂದು ಪವಾಡದ ಘಟನೆಯು ಅವರನ್ನು ಶಿವನ ಭಕ್ತರಾಗುವಂತೆ ಮಾಡಿತು ಎಂದು ಹೇಳಲಾಗುತ್ತದೆ.
ಪುರಾಣ ಕಥೆಗಳ ಪ್ರಕಾರ, 19 ನೇ ಶತಮಾನದ ಉತ್ತರಾರ್ಧದಲ್ಲಿ, ಬ್ರಿಟಿಷ್ ಸೇನಾ ಲೆಫ್ಟಿನೆಂಟ್ ಕರ್ನಲ್ ಮಾರ್ಟಿನ್ ಅಫ್ಘಾನ್ ಯುದ್ಧದಲ್ಲಿ ಭಾಗವಹಿಸಲು ಹೋಗಿದ್ದರು. ಆದರೆ ಅವರ ಪತ್ನಿಗೆ ಕೆಲವು ದಿನಗಳವರೆಗೆ ತನ್ನ ಪತಿಯಿಂದ ಯಾವುದೇ ಸುದ್ದಿ ಬಂದಿರಲಿಲ್ಲ. ಇದರಿಂದ ಚಿಂತಿತಳಾದ ಆಕೆ ಶಿಥಿಲಗೊಂಡ ಬೈಜನಾಥ ದೇವಾಲಯದ ಹತ್ತಿರ ಬರುತ್ತಾಳೆ. ಅಲ್ಲಿನ ಆರತಿ ಮತ್ತು ಮಂತ್ರಗಳ ಪಠಣ ಅವಳನ್ನು ಆಕರ್ಷಿಸಿತು. ಅವಳ ಸಂಕಟವನ್ನು ಗಮನಿಸಿದ ಪುರೋಹಿತರು ಅವಳಿಗೆ ‘ಓಂ ನಮಃ ಶಿವಾಯ’ ಮಂತ್ರವನ್ನು 11 ದಿನಗಳ ಕಾಲ ಪಠಿಸಲು ಸಲಹೆ ನೀಡುತ್ತಾರೆ. ತನ್ನ ಪತಿ ಸುರಕ್ಷಿತವಾಗಿ ಹಿಂತಿರುಗಿದರೆ, ದೇವಾಲಯವನ್ನು ದುರಸ್ತಿ ಮಾಡುವುದಾಗಿ ಅವಳು ಪ್ರತಿಜ್ಞೆ ಮಾಡುತ್ತಾಳೆ.
ಈ ಪ್ರಾರ್ಥನೆಯನ್ನು ಪ್ರಾರಂಭಿಸಿದ ಹತ್ತನೇ ದಿನದಂದು, ಮಾರ್ಟಿನ್ ನಿಂದ ಒಂದು ಪತ್ರ ಬರುತ್ತದೆ. ಅದರಲ್ಲಿ, ಆತ ಆಶ್ಚರ್ಯಕರವಾದ ವಿಷಯವನ್ನು ಬರೆದಿದ್ದ, ಶತ್ರುಗಳು ಯುದ್ಧದಲ್ಲಿ ತನ್ನನ್ನು ಸುತ್ತುವರೆದಾಗ, ಹುಲಿ ಚರ್ಮವನ್ನು ಧರಿಸಿ ಕೈಯಲ್ಲಿ ತ್ರಿಶೂಲವನ್ನು ಹಿಡಿದಿದ್ದ ಯೋಗಿಯೊಬ್ಬರು ಕಾಣಿಸಿಕೊಂಡು ಶತ್ರುಗಳನ್ನು ಓಡಿಸಿದರು ಎಂದು ವಿವರಿಸಿದ್ದನು.
ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ
ಅದೃಷ್ಟವಶಾತ್, ತನ್ನ ಪತಿ ಸುರಕ್ಷಿತವಾಗಿ ಹಿಂದಿರುಗಿದ ನಂತರ, ಮಾರ್ಟಿನ್ ದಂಪತಿಗಳು 15,000 ರೂ.ಗಳ ಬೃಹತ್ ದೇಣಿಗೆಯೊಂದಿಗೆ ದೇವಾಲಯವನ್ನು ಪುನರ್ನಿರ್ಮಿಸಿದರು. ಇದಕ್ಕೆ ಪುರಾವೆಗಳನ್ನು ಇನ್ನೂ ದೇವಾಲಯದ ಶಾಸನಗಳಲ್ಲಿ ಕಾಣಬಹುದು. ಅದರ ನಂತರ, ಅವರು ಇಂಗ್ಲೆಂಡ್‌ಗೆ ಹೋದರು, ಆದರೆ ಅವರು ತಮ್ಮ ಮನೆಯಲ್ಲಿ ಶಿವಲಿಂಗವನ್ನು ಸ್ಥಾಪಿಸಿ ತಮ್ಮ ಕೊನೆಯ ಉಸಿರಿನವರೆಗೂ ಶಿವನನ್ನು ಪೂಜಿಸಿದರು ಎಂದು ಹೇಳಲಾಗುತ್ತದೆ. 50 ಅಡಿ ಎತ್ತರದ ಶಿಖರವನ್ನು ಹೊಂದಿರುವ ಬಂಗಂಗಾ ನದಿಯ ದಡದಲ್ಲಿರುವ ಈ ದೇವಾಲಯವು ಇಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.
ದೇವಸ್ಥಾನ ತಲುಪುವ ಮಾರ್ಗಗಳು:
- ವಿಮಾನ ಮಾರ್ಗ: ಇಂದೋರ್‌ನಲ್ಲಿರುವ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣ (126 ಕಿಮೀ).
- ರೈಲು ಮಾರ್ಗ: ಉಜ್ಜಯಿನಿ ರೈಲು ನಿಲ್ದಾಣ (68 ಕಿ.ಮೀ).
- ರಸ್ತೆ ಮಾರ್ಗ: ಉಜ್ಜಯಿನಿ, ಇಂದೋರ್ ಮತ್ತು ಭೋಪಾಲ್ ನಿಂದ ಬಸ್ ಸೌಲಭ್ಯ ಲಭ್ಯವಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:35 am, Fri, 26 December 25




