
ಅನೇಕ ಬಾರಿ ಮನೆಗಳಿಗೆ ಅಕಸ್ಮಾತ್ತಾಗಿ ಬಾವಲಿಗಳು (Bats) ಪ್ರವೇಶಿಸುವುದನ್ನು ನೋಡಿರುತ್ತೇವೆ. ಸಾಮಾನ್ಯವಾಗಿ ಬಾವಲಿಗಳು ಮನೆಗೆ ಬರುವುದು ತೀರಾ ಅಪರೂಪ. ಆದರೆ, ಒಮ್ಮೊಮ್ಮೆ ಅವು ಪ್ರವೇಶಿಸಿದಾಗ ಮನೆಯಲ್ಲಿರುವವರು ತೀವ್ರ ಭಯ ಹಾಗೂ ಆತಂಕಕ್ಕೆ ಒಳಗಾಗುವುದು ಸಹಜ. ಬಾವಲಿ ಎಂದರೆ ಕೆಟ್ಟ ಶಕುನ, ಮನೆಗೆ ಏನೋ ಅನಾಹುತ ಸಂಭವಿಸಲಿದೆ ಎಂಬ ನಂಬಿಕೆ ಶತಮಾನಗಳಿಂದ ಜನರಲ್ಲಿದೆ. ಆದರೆ ನಿಜವಾಗಿಯೂ ಬಾವಲಿ ಮನೆಗೆ ಬರುವುದು ದುರದೃಷ್ಟ ತರುತ್ತದೆಯೇ? ಅಥವಾ ಇದರ ಹಿಂದೆ ಬೇರೆ ಏನಾದರೂ ಧನಾತ್ಮಕ ಸಂಕೇತಗಳಿವೆಯೇ? ಈ ಬಗ್ಗೆ ಧರ್ಮಶಾಸ್ತ್ರ, ವಾಸ್ತು ಹಾಗೂ ಜ್ಯೋತಿಷ್ಯ ವಿದ್ವಾಂಸರು ಏನು ಹೇಳುತ್ತಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಜ್ಯೋತಿಷ್ಯ ಮತ್ತು ಜಾನಪದ ನಂಬಿಕೆಗಳ ಪ್ರಕಾರ, ಬಾವಲಿ ಮನೆಗೆ ಪ್ರವೇಶಿಸಿ, ಕೆಲವೇ ಕ್ಷಣಗಳಲ್ಲಿ ತಾನಾಗಿಯೇ ಹೊರಟುಹೋದರೆ ಅದಕ್ಕೆ ಹೆದರುವ ಅಗತ್ಯವಿಲ್ಲ. ಇದು ಮನೆಯಲ್ಲಿ ದೀರ್ಘಕಾಲದಿಂದ ಇದ್ದ ಹಳೆಯ ಸಮಸ್ಯೆಗಳು ಶಮನಗೊಂಡು, ಹೊಸ ರೀತಿಯ ಬದಲಾವಣೆಗಳು ಅಥವಾ ಹೊಸ ಆರಂಭ ಪ್ರಾರಂಭವಾಗುತ್ತಿರುವುದರ ಸಂಕೇತವಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ.
ಕೆಲವು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಬಾವಲಿ ಮನೆಗೆ ಪ್ರವೇಶಿಸಿ ಸತತವಾಗಿ ಸುತ್ತಾಡುತ್ತಿದ್ದರೆ, ಅದು ಮುಂಬರುವ ಆರ್ಥಿಕ ಸಂಕಷ್ಟದ ಸೂಚನೆಯಾಗಿರಬಹುದು. ವ್ಯಾಪಾರ ಅಥವಾ ಉದ್ಯೋಗದಲ್ಲಿ ಸಾಲದ ಹೊರೆ ಹೆಚ್ಚಾಗುವುದು, ಅನಿರೀಕ್ಷಿತ ಹಣ ನಷ್ಟ, ಆರ್ಥಿಕ ಮುಗ್ಗಟ್ಟು ಎದುರಾಗುವ ಸನ್ನಿವೇಶಗಳು ಬರಬಹುದು. ಆದ್ದರಿಂದ ಇಂತಹ ಸಮಯದಲ್ಲಿ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ, ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರುವುದು ಒಳಿತು.
ಬಾವಲಿಗಳು ಸಾಮಾನ್ಯವಾಗಿ ಕತ್ತಲೆ ಮತ್ತು ನಿರ್ಜನ ಪ್ರದೇಶಗಳನ್ನು ಇಷ್ಟಪಡುತ್ತವೆ. ಮನೆಯಲ್ಲಿ ಅತಿಯಾದ ಕತ್ತಲೆ, ನೈರ್ಮಲ್ಯದ ಕೊರತೆ ಅಥವಾ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದ್ದಾಗ ಬಾವಲಿಗಳು ಪ್ರವೇಶಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಮನೆಯಲ್ಲಿ ಸದಾ ಬೆಳಕು, ಗಾಳಿ ಮತ್ತು ಧನಾತ್ಮಕ ವಾತಾವರಣ ಇರುವಂತೆ ನೋಡಿಕೊಳ್ಳುವುದು ಮುಖ್ಯ.
ಇದನ್ನೂ ಓದಿ: ಮಂತ್ರ ಪಠಣ ಮಾಡುವಾಗ ಕಣ್ಣುಗಳನ್ನು ಏಕೆ ಮುಚ್ಚಬೇಕು? ಆಧ್ಯಾತ್ಮಿಕ ಕಾರಣ ಇಲ್ಲಿದೆ
ಚೀನೀ ವಾಸ್ತುಶಾಸ್ತ್ರವಾದ ಫೆಂಗ್ ಶೂಯಿ ಪ್ರಕಾರ ಬಾವಲಿಯನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಾವಲಿ ಮನೆಗೆ ಪ್ರವೇಶಿಸಿ ತಕ್ಷಣವೇ ಹೊರಗೆ ಹೋದರೆ, ಅದು ನಿಮ್ಮ ಮನೆಯಲ್ಲಿರುವ ದುಷ್ಟಶಕ್ತಿಗಳನ್ನು ಹಾಗೂ ನಕಾರಾತ್ಮಕ ಶಕ್ತಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ, ಇದನ್ನು ಮನೆಗೆ ಒದಗಿಬರುವ ಅದೃಷ್ಟ ಮತ್ತು ರಕ್ಷಣೆಯ ಸಂಕೇತವೆಂದೂ ಕೆಲವರು ಭಾವಿಸುತ್ತಾರೆ.
ಬಾವಲಿಯನ್ನು ನೋಡಿ ಹೆದರಿ ಕಿರುಚಾಡುವುದು ಅಥವಾ ಅದಕ್ಕೆ ಹಾನಿ ಮಾಡುವುದು ಮಾಡಬೇಡಿ. ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ತೆರೆದು, ಬಾವಲಿಗೆ ತಾನಾಗಿಯೇ ಹೊರಗೆ ಹೋಗಲು ಅವಕಾಶ ಮಾಡಿಕೊಡಿ. ಬಾವಲಿ ಹೊರಹೋದ ನಂತರ, ಮನೆಯಲ್ಲಿ ಕರ್ಪೂರ ಅಥವಾ ಧೂಪ ಹಚ್ಚಿ ನಕಾರಾತ್ಮಕ ಶಕ್ತಿ ದೂರವಾಗುವಂತೆ ಮಾಡಿ. ಶುಚಿತ್ವಕ್ಕೆ ಆದ್ಯತೆ ನೀಡಿ.
ಬಾವಲಿ ಮನೆಗೆ ಬಂದ ತಕ್ಷಣ ಭಯಪಟ್ಟು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪ್ರಕೃತಿಯ ನಿಯಮದಂತೆ ಅಥವಾ ಕತ್ತಲೆಯ ಕಾರಣದಿಂದ ಅವು ತಪ್ಪಿ ಮನೆಗೆ ಬರಬಹುದು. ನಕಾರಾತ್ಮಕ ಆಲೋಚನೆಗಳನ್ನು ಬದಿಗಿಟ್ಟು, ಅಗತ್ಯ ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ