Chaitra Pournami: ಇಂದು ಚೈತ್ರ ಪೌರ್ಣಮಿ; ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿ

ಚೈತ್ರ ಪೌರ್ಣಮಿಯು ಭಗವಂತನ ಕೃಪೆ ಪಡೆಯಲು ಅತ್ಯಂತ ಪವಿತ್ರ ದಿನ. ಈ ದಿನ ವಿಷ್ಣು ಮತ್ತು ಚಿತ್ರಗುಪ್ತನ ಪೂಜೆ, ಪವಿತ್ರ ಸ್ನಾನ, ಮಂತ್ರ ಜಪ ಮತ್ತು ದಾನ ಧರ್ಮಾದಿಗಳನ್ನು ಮಾಡುವುದರಿಂದ ಕೆಟ್ಟ ಕರ್ಮಗಳು ಕಡಿಮೆಯಾಗುತ್ತವೆ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಕೌಟುಂಬಿಕ ಕಲಹ ನಿವಾರಣೆಗೆ ಹಳದಿ ಬಟ್ಟೆಯ ತಂತ್ರವನ್ನು ಅನುಸರಿಸಬಹುದು. ಇದು ನಿಮ್ಮ ಸಂಕಲ್ಪಗಳನ್ನು ಈಡೇರಿಸುವ ಶಕ್ತಿ ಹೊಂದಿದೆ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

Chaitra Pournami: ಇಂದು ಚೈತ್ರ ಪೌರ್ಣಮಿ; ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿ
ಚೈತ್ರ ಪೌರ್ಣಮಿ

Updated on: Apr 02, 2026 | 9:40 AM

ಚೈತ್ರ ಪೌರ್ಣಮಿಯು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಪ್ರತಿ ತಿಂಗಳು ಹುಣ್ಣಿಮೆ ಮತ್ತು ಅಮಾವಾಸ್ಯೆಗಳು ಬರುತ್ತವೆ, ಆದರೆ ಕೆಲವು ಪರ್ವಕಾಲ ಮತ್ತು ಪರ್ವ ತಿಥಿಗಳಿಗೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಚೈತ್ರ ಪೌರ್ಣಮಿಯು ಅಂತಹ ಒಂದು ಪವಿತ್ರ ದಿನವಾಗಿದೆ. ಕೇವಲ ಒಂದು ಕ್ಷಣದ ಪೂಜೆ ಅಥವಾ ಒಂದು ನಿಮಿಷದ ಪ್ರಾರ್ಥನೆಯಿಂದ ಭಗವಂತನ ಕೃಪೆಯನ್ನು ಪಡೆಯಲು ಇದು ಸೂಕ್ತವಾದ ಸಮಯ. ಇದನ್ನು ದವನದ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

2026ರ ಏಪ್ರಿಲ್ 2ರಂದು, ಗುರುವಾರದಂದು ಬರುವ ಈ ಚೈತ್ರ ಪೌರ್ಣಮಿಯು ಪರಾಭವನಾಮ ಸಂವತ್ಸರದ ಪ್ರಥಮ ಮಾಸದ ಪ್ರಥಮ ಉತ್ತಮ ಹುಣ್ಣಿಮೆಯಾಗಿದೆ. ಈ ದಿನದಂದು ವಿಷ್ಣು ಪೂಜೆಯೊಂದಿಗೆ, ಕರ್ಮಗಳ ಲೆಕ್ಕ ಇಡುವ ಚಿತ್ರಗುಪ್ತನ ಪೂಜೆಯನ್ನೂ ಮಾಡಬೇಕು. ಚಿತ್ರಗುಪ್ತನು ನಮ್ಮ ಧನಾತ್ಮಕ ಮತ್ತು ಋಣಾತ್ಮಕ ಕರ್ಮಗಳನ್ನು ಪ್ರತಿಕ್ಷಣವೂ ದಾಖಲಿಸುತ್ತಾನೆ. ವಿಷ್ಣು ಮತ್ತು ಚಿತ್ರಗುಪ್ತನನ್ನು ಸ್ಮರಿಸುವುದರಿಂದ ನಮ್ಮ ಕರ್ಮಗಳ ಋಣಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಚಿತ್ರಗುಪ್ತನು ಯಮನ ಸಹೋದರನಾಗಿದ್ದಾನೆ.

YouTube video player

ಈ ದಿನವನ್ನು ಆಚರಿಸಲು ಪವಿತ್ರ ಸ್ನಾನ, ಅದು ಮನೆಯಲ್ಲೇ ಇರಬಹುದು, ನದಿಯಲ್ಲಿ ಅಥವಾ ದೇವಸ್ಥಾನದ ಸಮೀಪದ ಜಲಮೂಲದಲ್ಲಿ ಇರಬಹುದು. ಶುದ್ಧೀಕರಣದ ನಂತರ, ವಿಷ್ಣು ಸಹಸ್ರನಾಮ ಪಠಿಸುವುದು ಅಥವಾ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರವನ್ನು ಜಪಿಸುವುದು ಉತ್ತಮ. ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವುದರಿಂದ ಪಾಪಗಳ ನಿವಾರಣೆಯಾಗುತ್ತದೆ. ಅನ್ನದಾನ ಮತ್ತು ವಸ್ತ್ರದಾನದಂತಹ ದಾನ ಕಾರ್ಯಗಳನ್ನು ಕೈಗೊಳ್ಳುವುದು ಸಹ ಪುಣ್ಯಕರ.

ಪುರಾಣಗಳ ಪ್ರಕಾರ, ಸಾಕ್ಷಾತ್ ಇಂದ್ರನು ಕೂಡ ಚೈತ್ರ ಪೌರ್ಣಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿ ತನ್ನ ಪಾಪಗಳನ್ನು ಪರಿಹರಿಸಿಕೊಂಡಿದ್ದನು. ಪರಶಿವನು ಇಂದ್ರನಿಗೆ ತನ್ನ ಪಾಪಗಳನ್ನು ಕಳೆದುಕೊಳ್ಳಲು ಚೈತ್ರ ಪೌರ್ಣಮಿಯನ್ನು ಆಚರಿಸಲು ಸಲಹೆ ನೀಡಿದ್ದನು. ಈ ದಿನ ದೇವಾಲಯಗಳಿಗೆ ಭೇಟಿ ನೀಡುವುದು, ಹಿರಿಯರು ಮತ್ತು ಪೋಷಕರ ದರ್ಶನ ಪಡೆದು ಆಶೀರ್ವಾದ ಪಡೆಯುವುದು, ದಾನ ಧರ್ಮಗಳನ್ನು ಮಾಡುವುದು ಅತ್ಯಂತ ಶುಭಕರ.

ದೇಶದ ವಿವಿಧ ಭಾಗಗಳಲ್ಲಿ ಈ ದಿನ ವಿಭಿನ್ನ ಆಚರಣೆಗಳಿವೆ. ತಮಿಳುನಾಡಿನಲ್ಲಿ ಮುರುಗನ ದೇವಾಲಯಗಳಿಗೆ ಭೇಟಿ ನೀಡಿದರೆ, ಕರ್ನಾಟಕದಂತಹ ಪ್ರದೇಶಗಳಲ್ಲಿ ತಮ್ಮ ಆಯಾ ದೇವಸ್ಥಾನಗಳಲ್ಲಿ ದರ್ಶನ ಪಡೆಯುತ್ತಾರೆ. ಕೆಲವರು ತಿರುಕಲ್ಯಾಣೋತ್ಸವವನ್ನು ನಡೆಸಿದರೆ, ಅಯ್ಯಪ್ಪ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಕೆಲವು ಕಡೆ ಭಗವಂತನಿಗೆ ಕಾವಡಿಗಳನ್ನು ಒಯ್ಯುವ ಪದ್ಧತಿಯೂ ಇದೆ. ಈ ದಿನ ಸತ್ಯನಾರಾಯಣ ಸ್ವಾಮಿ ಪೂಜೆಯನ್ನೂ ಮಾಡಲಾಗುತ್ತದೆ. ಚಿತ್ರಗುಪ್ತನಿಗೆ ಪ್ರತ್ಯೇಕ ದೇವಾಲಯಗಳಿಲ್ಲದ ಕಾರಣ, ಭಕ್ತರು ಹನುಮಂತ ಅಥವಾ ಶಿವನ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಚೈತ್ರ ಪೌರ್ಣಮಿಯಂದು ಸಾಬುದಾನಿ, ಗೆಣಸು, ಕುಂಬಳಕಾಯಿ ಆಹಾರಗಳು, ಹಾಲು, ಬೆಲ್ಲ, ಮತ್ತು ಡ್ರೈ ಫ್ರೂಟ್ಸ್ ಸೇವಿಸುವುದು ರೂಢಿ. ಕೆಲವರು ಈ ದಿನ ಉಪವಾಸವನ್ನೂ ಆಚರಿಸುತ್ತಾರೆ. “ಓಂ ನಮೋ ಭಗವತೇ ವಾಸುದೇವಾಯ” ಅಥವಾ “ಓಂ ನಮೋ ನಾರಾಯಣಾಯ” ಮಂತ್ರಗಳ ಜಪದೊಂದಿಗೆ, ಒಂದು ವಿಶೇಷ ತಂತ್ರವನ್ನು ಅನುಸರಿಸಿದರೆ ವರ್ಷದೊಳಗೆ ಸಂಕಲ್ಪಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಈ ತಂತ್ರವು ಹೀಗಿದೆ: ಒಂದು ಶುದ್ಧ ಬಿಳಿ ಬಟ್ಟೆಯನ್ನು ಅರಿಶಿನದಿಂದ ಹಳದಿ ಬಟ್ಟೆಯಾಗಿ ಪರಿವರ್ತಿಸಿ. ಅದನ್ನು ನಿಮ್ಮ ದೇವರ ಕೋಣೆಯಲ್ಲಿ ಇರಿಸಿ. ನಿಮ್ಮ ಕೈಗೆ ಹಿಡಿಸುವಷ್ಟು ಅಕ್ಕಿಯನ್ನು ಅದರ ಮೇಲೆ ಹಾಕಿ. ಅದರ ಮೇಲೆ ಒಂದು ಅಡಿಕೆ, ಒಂದು ಅರಿಶಿನದ ಕೊಂಬು ಮತ್ತು ಒಂದು ನಾಣ್ಯವನ್ನು ಇಡಿ. ನಂತರ ಅದರ ಮೇಲೆ ಕೈ ಇಟ್ಟು ನಿಮ್ಮ ಸಂಕಲ್ಪವನ್ನು ಹೇಳಿ ಪ್ರಾರ್ಥಿಸಿ. ಈ ವಸ್ತುಗಳನ್ನು ಬಟ್ಟೆಯಲ್ಲಿ ಕಟ್ಟಿ ಅಲ್ಲಿಯೇ ಇರಿಸಿ. ಮುಂದಿನ ಹುಣ್ಣಿಮೆಯ ಸಮಯದಲ್ಲಿ ಆ ಅಕ್ಕಿಯಿಂದ ಪಾಯಸ ಮಾಡಿ ನಾಲ್ಕು ಜನರಿಗೆ ಹಂಚಿದರೆ ನಿಮ್ಮ ಸಂಕಲ್ಪಗಳು ಶೀಘ್ರವಾಗಿ ಈಡೇರುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us