Sabarimala Ayyappa Swamy: ಅರಣ್ಯಪಾಲಕ, ಮಣಿಕಂಠ, ಹರಿಹರ ಸುತ ಅಯ್ಯಪ್ಪ ಸ್ವಾಮಿ ಬಗ್ಗೆ ನಿಮಗೆಷ್ಟು ಗೊತ್ತು?

ಮಣಿಕಂಠನು ಹುಲಿಯ ಹಾಲನ್ನು ಸಂಗ್ರಹಿಸುವ ಸಲುವಾಗಿ ಅರಣ್ಯವನ್ನು ಪ್ರವೇಶಿಸಿದನು. ಅಲ್ಲಿ ಭಗವಾನ್ ಶಿವನು ಅವನಿಗೆ ದರ್ಶನ ನೀಡಿದನು. ಅಮೂಲ್ಯವಾದ ಹುಲಿಯ ಹಾಲನ್ನು ಸಂಗ್ರಹಿಸಲು ದೇವೇಂದ್ರನು ನಿನಗೆ ಸಹಕರಿಸುವನು ಎಂದು ಶಿವನು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.

Sabarimala Ayyappa Swamy: ಅರಣ್ಯಪಾಲಕ, ಮಣಿಕಂಠ, ಹರಿಹರ ಸುತ ಅಯ್ಯಪ್ಪ ಸ್ವಾಮಿ ಬಗ್ಗೆ ನಿಮಗೆಷ್ಟು ಗೊತ್ತು?
ಅಯ್ಯಪ್ಪ ಸ್ವಾಮಿ ದೇವಸ್ಥಾನ
Follow us
TV9 Web
| Updated By: ಆಯೇಷಾ ಬಾನು

Updated on: Jan 04, 2023 | 6:30 AM

ಪಂದಳ ಸಾಮ್ರಾಜ್ಯವನ್ನು ಸರಿಸುಮಾರು 800 ವರ್ಷಗಳ ಹಿಂದೆ ಅಯ್ಯಪ್ಪ ಸ್ವಾಮಿಯ ಸಾಕುತಂದೆ ಎನಿಸಿದ ರಾಜಶೇಖರ ಎಂಬ ಅರಸ ಆಡಳಿತ ನಡೆಸಿಕೊಂಡು ಬಂದಿದ್ದನು. ಈತನ ಆಡಳಿತದಲ್ಲಿ ರಾಜ್ಯವು, ಪ್ರಜೆಗಳು ಸುಭಿಕ್ಷೆಯಿಂದಿದ್ದರು. ಆದರೆ ಆತನಿಗೆ ಪ್ರತಿನಿತ್ಯ ಕಿತ್ತುತಿನ್ನುತ್ತಿದ್ದ ಸಮಸ್ಯೆಯೆಂದರೆ ಆ ರಾಜನಿಗೆ ಸಂತಾನ ಸೌಭಾಗ್ಯ ಪ್ರಾಪ್ತವಾಗಿರಲಿಲ್ಲ. ರಾಜ್ಯಾಧಿಕಾರವನ್ನು ಮುಂದೆ ವಹಿಸಿಕೊಳ್ಳಲು ಉತ್ತರಾಧಿಕಾರಿಯನ್ನು ಕರುಣಿಸುವಂತೆ ರಾಜ ಮತ್ತು ರಾಣಿ ಪ್ರತಿನಿತ್ಯ ಭಗವಾನ್‌ ಶಿವನನ್ನು ಪೂಜಿಸುತ್ತಿದ್ದರು.

ಶಿವ ಮತ್ತು ವಿಷ್ಣುವಿನ ಮಗನಿಂದಲೇ ಸಾವು ಬೇಕು ಎಂಬ ವರ ಪಡೆದ ಮಹಿಷಿ

ಮಹಿಷಾಸುರನ ವಧೆಯ ನಂತರ ಮಹಿಷಾಸುರನ ಸೋದರಿಯಾದ ಮಹಿಷಿಯು ತನ್ನ ಸಹೋದರನ ಕೊಲೆಗೆ ಪ್ರತಿಕಾರವನ್ನು ಪಡೆದುಕೊಳ್ಳಲು ದೀರ್ಘಕಾಲ ತಪಸ್ಸು ಮಾಡಿದಳು. ಬಳಿಕ ಆಕೆ ಬ್ರಹ್ಮನನ್ನು ಒಲಿಸಿಕೊಂಡಳು. ಶಿವ ಮತ್ತು ವಿಷ್ಣುವಿನ ಮಗನನ್ನು ಹೊರತುಪಡಿಸಿ ಯಾರಿಂದಲೂ ತನಗೆ ಸಾವು ಬರಬಾರದೆಂಬ ವರವನ್ನು ಪಡೆಯುತ್ತಾಳೆ. ಪುರುಷರಿಬ್ಬರು ಮಗುವನ್ನು ಪಡೆಯಲು ಸಾಧ್ಯವಿಲ್ಲವೆಂದು ಭಾವಿಸಿದ ಮಹಿಷಿ ತಾನು ಅಮರಳೆಂದು ಭಾವಿಸುತ್ತಾಳೆ.

ಭೂ ಲೋಕ, ಸ್ವರ್ಗದಲ್ಲಿ ಹೆಚ್ಚಾದ ಮಹಿಷಿಯ ಕಿರುಕುಳ

ವರ ಪಡೆದ ಬಳಿಕ ಆಕೆ ಭೂಮಿಯಲ್ಲಿ, ಸ್ವರ್ಗದಲ್ಲಿ ಎಲ್ಲರಿಗೂ ತೊಂದರೆಯನ್ನು ಉಂಟುಮಾಡುತ್ತಿರುತ್ತಾಳೆ. ದಿಕ್ಕು ತೋಚದ ದೇವತೆಗಳು ವಿಷ್ಣುವಿನ ಬಳಿ ಬಂದು ಮಹಿಷಿಯಿಂದ ತಮ್ಮನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಾರೆ. ಮಹಿಷಿ ಪಡೆದ ವರವನ್ನು ಅರ್ಥೈಸಿಕೊಂಡ ವಿಷ್ಣು ಹಿಂದೆ ಅಸುರರಿಂದ ಅಮೃತವನ್ನು ಅಪಹರಿಸಿ ದೇವತೆಗಳಿಗೆ ನೀಡುವುದಕ್ಕಾಗಿ ತಾನು ತಾಳಿದ್ದ ಮೋಹಿನಿಯ ರೂಪವನ್ನು ಈಗ ಮತ್ತೊಮ್ಮೆ ತಾಳುತ್ತಾನೆ. ಮೋಹಿನಿಯಾಗಿ ಶಿವನೊಂದಿಗೆ ಕೂಡಿ ಒಂದು ಗಂಡು ಮಗುವಿಗೆ ಜನ್ಮ ಕೊಡುತ್ತಾರೆ. ಆ ಮಗುವನ್ನು ಸಂತಾನವಿಲ್ಲದೆ ದುಃಖಿತನಾಗಿದ್ದ, ಶಿವಭಕ್ತನೂ ಆದ, ಪಂದಳ ರಾಜನಿಗೆ ಮತ್ತು ಆಕೆಯ ಪತ್ನಿ ರಾಣಿಗೆ ನೀಡಲು ನಿರ್ಧರಿಸುತ್ತಾರೆ.

 Ayyappa Swamy

ಮಣಿಕಂಠನಾದ ಅಯ್ಯಪ್ಪ

ಅಯ್ಯಪ್ಪ ದೇವರು ಹುಟ್ಟಿದ ಬಳಿಕ ಆತನ ದೈವಿಕ ತಂದೆ-ತಾಯಿ (ಹರಿ ಮತ್ತು ಹರ) ಆತನ ಕೊರಳಿಗೆ ಬಂಗಾರದ ಮಣಿಯನ್ನು ಕಟ್ಟುತ್ತಾರೆ ಮತ್ತು ಆತನನ್ನು ಪಂಪಾ ನದಿ ತೀರದಲ್ಲಿ ಬಿಡುತ್ತಾರೆ. ಒಮ್ಮೆ ಪಂಪಾ ನದಿಯ ದಡದಲ್ಲಿರುವ ಕಾಡಿನಲ್ಲಿ ಬೇಟೆಯಾಡಲು ಹೊರಟ ಪಂದಳ ರಾಜ ರಾಜಶೇಖರನಿಗೆ ಕಾಡಿನೊಳಗಿಂದ ಶಿಶುವೊಂದು ಅಳುವ ಶಬ್ಧ ಕೇಳಿಬರುತ್ತದೆ. ಅಚ್ಚರಿಗೊಂಡ ರಾಜನು ಆ ದನಿಯನ್ನು ಹಿಂಬಾಲಿಸಿ ಹೋದನು. ಅಲ್ಲಿ ರಾಜನು ಒಂದು ಮುದ್ದು ಮಗುವನ್ನು ಕಂಡನು.

ಅಯ್ಯಪ್ಪ ಸ್ವಾಮಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ವೆಬ್ ಸೈಟ್​ ಮೇಲೆ ಕ್ಲಿಕ್ ಮಾಡಿ

ಕೌತುಕದಿಂದ ಆ ಮಗುವನ್ನು ನೆಟ್ಟ ನೋಟದಿಂದ ನೋಡುತ್ತಿದ್ದ ರಾಜನ ಮುಂದೆ ಸನ್ಯಾಸಿಯೊಬ್ಬ ಪ್ರತ್ಯಕ್ಷನಾಗಿ ಆ ಶಿಶುವನ್ನು ಅರಮನೆಗೆ ಒಯ್ಯುವಂತೆ ಸೂಚಿಸಿದನು. ಆ ಮಗುವಿನ ಸಾನ್ನಿಧ್ಯದಿಂದ ರಾಜ್ಯ ಸುಗಮವಾಗುವುದೆಂದು, ಹನ್ನೆರಡು ವರ್ಷದ ಬಳಿಕ ಮಗುವಿನ ದಿವ್ಯತ್ವ ಪ್ರಕಟವಾಗುವುದೆಂದೂ ಹೇಳಿ ಸನ್ಯಾಸಿ ರಾಜನನ್ನು ಎಚ್ಚರಿಸಿದನು. ಮಗುವಿನ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ಕಂಡ ಸನ್ಯಾಸಿ ಅವನಿಗೆ ಮಣಿಕಂಠನೆಂದು ನಾಮಕರಣ ಮಾಡಲು ಸೂಚಿಸಿದನು. ರಾಜನು ಹರ್ಷೋನ್ಮಾದದೊಂದಿಗೆ ಮಗುವನ್ನು ಅರಮನೆಗೆ ಕೊಂಡು ಹೋಗಿ ಮಹಾರಾಣಿಗೆ ನಡೆದ ಎಲ್ಲ ವಿಷಯಗಳನ್ನೂ ತಿಳಿಸಿದನು. ಶಿವನ ಅನುಗ್ರಹದಿಂದಲೇ ಇವೆಲ್ಲಾ ಸಂಭವಿಸಿದುವೆಂದು ಅವರಿಬ್ಬರೂ ನಂಬಿದರು.

ಇದನ್ನೂ ಓದಿ: Sabarimala Ayyappa Swamy Temple: ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆ ನಿಂತ ಅಯ್ಯಪ್ಪಸ್ವಾಮಿ ಜನ್ಮ ರಹಸ್ಯ

ಗುರುಕುಲದಲ್ಲೇ ಮಣಿಕಂಠನ ಪವಾಡ

ಸಕಲ ವಿದ್ಯೆಯನ್ನು ಕಲಿತು ಸರ್ವಗುಣ ಸಂಪನ್ನನಾದ ಮಣಿಕಂಠನು ಕಲಿಕೆ ಪೂರ್ತಿಗೊಳಿಸಿದ ನಂತರ ಯಥೋಚಿತ ಗುರುದಕ್ಷಿಣೆ ಕೊಡಲು ಮತ್ತು ಗುರುವಿನ ಅನುಗ್ರಹ ಪಡೆಯಲು ಹೊರಟನು. ಅಯ್ಯಪ್ಪನು ಅಮಾನುಷಿಕ ಪ್ರಭಾವವಿರುವವ ಹಾಗೂ ದಿವ್ಯಶಕ್ತಿಯುಳ್ಳವನು ಎಂದು ತಿಳಿದ ಗುರು ತನ್ನ ಆಶೀರ್ವಾದವನ್ನು ಅಪೇಕ್ಷಿಸಿ ಬಂದ ಮಣಿಕಂಠನನ್ನು ಕುರಿತು ನನಗೆ ಗುರುದಕ್ಷಿಣೆ ನೀಡುವ ಹಂಬಲ ನಿನ್ನಲ್ಲಿದ್ದರೆ “ಕುರುಡನೂ ಕಿವುಡನೂ ಆದ ನನ್ನ ಮಗನಿಗೆ ದೃಷ್ಟಿಯನ್ನೂ, ಮಾತಾಡುವ ಶಕ್ತಿಯನ್ನೂ ನೀಡಿ ಅನುಗ್ರಹಿಸು” ಎಂದು ಕೇಳುತ್ತಾರೆ. ಗುರುವಿನ ಮಾತಿಗೆ ಮನ್ನಿಸಿದ ಮಣಿಕಂಠನು ಗುರುಪುತ್ರನ ಶಿರದ ಮೇಲೆ ಕೈಯಿಟ್ಟನು. ಕೂಡಲೇ ಅವನಿಗೆ ದೃಷ್ಟಿ ಮತ್ತು ಮಾತಾಡುವ ಸಾಮರ್ಥ್ಯ ಪ್ರಾಪ್ತವಾದವು. ತಾನು ಮಾಡಿದ ಅದ್ಭುತ ಕೆಲಸವನ್ನು ಯಾರಿಗೂ ತಿಳಿಸಬಾರದೆಂದು ಕೇಳಿಕೊಂಡು ಮಣಿಕಂಠನು ಗುರುಕುಲದಿಂದ ಅರಮನೆಗೆ ಹಿಂದಿರುಗಿದನು.

ಮಣಿಕಂಠನ ಪಟ್ಟಾಭಿಷೇಕ

ಮಣಿಕಂಠನು ಗುರುಕುಲದಲ್ಲಿದ್ದ ಸಮಯದಲ್ಲಿ ಆತನ ಸಾಕುತಾಯಿ ರಾಣಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಿದ್ದಳು. ಆ ಮಗುವಿಗೆ ರಾಜ ರಾಜನ್ ಎಂದು ನಾಮಕರಣ ಮಾಡಿದ್ದರು. ರಾಜ್ಯದಲ್ಲಿ ನಡೆದು ಹೋದ ಅದ್ಭುತ ಘಟನಾವಳಿಗಳು ಭಗವಾನ್ ಅಯ್ಯಪ್ಪನೇ ತನ್ನ ಮಗನಾಗಿ ಬಂದಿರುವನೆಂದು ಅವನು ಭಾವಿಸಿದನು. ಮಣಿಕಂಠನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿದನು. ತನ್ನ ಮಹತ್ವಾಕಾಂಕ್ಷೆಯನ್ನು ರಹಸ್ಯವಾಗಿ ಪೋಷಿಸಿದ್ದ ಕುತಂತ್ರಿಯಾದ ಮಂತ್ರಿಯು ಮಣಿಕಂಠನನ್ನು ದ್ವೇಷಿಸುತ್ತಿದ್ದನು. ಅವನು ಈ ದೈವಿಕ ಅವತಾರವನ್ನು ನಿರ್ಣಾಮಗೊಳಿಸಬೇಕೆಂದು ಪಣತೊಟ್ಟನು. ಮಣಿಕಂಠನಿಗೆ ವಿಷ ಪ್ರಾಶನ ಮಾಡುವುದರಿಂದ ಹಿಡಿದು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾನೆ. ಆದರೆ ಮಂತ್ರಿಯ ಯಾವುದೇ ಉಪಾಯಗಳು ಫಲಕಾರಿಯಾಗಲಿಲ್ಲ.

ತನ್ನ ಯೋಜನೆಗಳು ಭಂಗವಾಗುವುದನ್ನು ಕಂಡು ನಿರಾಶನಾಗಿ ಹೋದ ಮಂತ್ರಿಯು ರಾಣಿಯನ್ನು ತನ್ನತ್ತ ಸೆಳೆಯಲು ಪ್ರಯತ್ನಿಸತೊಡಗಿದನು. ಸ್ವಂತ ಮಗನು ಜೀವಿಸಿರುವಾಗಲೇ ಮಣಿಕಂಠನನ್ನು ರಾಜನನ್ನಾಗಿ ಮಾಡುವುದು ಸೂಕ್ತವಲ್ಲ ಎಂದು ಅವಳ ಮನಸ್ಸನ್ನು ಕೆಡಿಸುತ್ತಾನೆ. ರಾಣಿ ಮತ್ತು ಮಂತ್ರಿ ಸೇರಿಕೊಂಡು ಮಣಿಕಂಠನನ್ನು ಕೊಲ್ಲಲು ಉಪಾಯ ಮಾಡುತ್ತಾರೆ. ಉಪಾಯದಂತೆ ಮಂತ್ರಿಯ ವೈದ್ಯನೊಬ್ಬನಿಂದ ರಾಣಿಯ ಅನಾರೋಗ್ಯ ನಿವಾರಣೆಗೆ ಹುಲಿಯ ಹಾಲು ಬೇಕು ಎಂದು ಹೇಳಿಸುತ್ತಾರೆ. ಹುಲಿಯ ಹಾಲನ್ನು ಹುಡುಕಲು ಹೊರಟ ಮಣಿಕಂಠನನ್ನು ಹುಲಿಯ ಬಾಯಿಗೆ ಆಹಾರವಾಗಿ ಮಾಡಲು ಇವರು ಯೋಚಿಸಿದ್ದರು. ಜವಾಬ್ದಾರಿ ನೆರವೇರಿಸಲು ಸಾಧ್ಯವಾಗದೆ ಪರಾಜಿತನಾಗಿ ಮಣಿಕಂಠನು ಹಿಂತಿರುಗಿ ಬಂದಲ್ಲಿ ಸಹಜವಾಗಿಯೇ ರಾಜನಿಗೆ ಆತನ ಮೇಲಿದ್ದ ಪ್ರೀತಿ ಕಡಿಮೆಯಾಗುವುದು ಎಂದು ರಾಣಿಗೆ ಹೇಳಿದನು.

ಪತ್ನಿಯ ಆರೋಗ್ಯದತ್ತ ತಲೆಕೆಡಿಸಿಕೊಂಡ ರಾಜ

ಪುತ್ರ ಪ್ರೀತಿಯಿಂದ ಮಂದವಾಗಿದ್ದ ರಾಣಿ ಮಂತ್ರಿಯ ಮಾತುಗಳನ್ನು ನಂಬಿದಳು. ಆತನು ಸೂಚಿಸಿದಂತೆ, ಘೋರ ತಲೆನೋವಿನಿಂದ ಬಳಲುತ್ತಿರುವುದಾಗಿ ರಾಜನನ್ನು ನಂಬಿಸಿದಳು. ಭ್ರಮೆಗೊಳಗಾದ ರಾಜನು ಅರಮನೆಯ ವೈದ್ಯನನ್ನು ಕರೆಸಿದನು. ಎಷ್ಟು ಕಷ್ಟಪಟ್ಟರೂ ರಾಣಿಯ ಕಾಯಿಲೆ ಯಾವುದೆಂದು ತಿಳಿದುಕೊಳ್ಳಲು ಅರಮನೆಯ ವೈದ್ಯನಿಂದ ಸಾಧ್ಯವಾಗಲಿಲ್ಲ. ಆಗ ಮಂತ್ರಿಯು ತಾನು ನಿಯೋಜಿಸಿದ ವೈದ್ಯನನ್ನು ಅರಮನೆಗೆ ಕರೆದುಕೊಂಡು ಬರುತ್ತಾನೆ. ರಾಣಿಯನ್ನು ಪರೀಕ್ಷಿಸಿದಂತೆ ನಟಿಸಿದ ಆ ವೈದ್ಯನು ಹುಲಿಯ ಹಾಲಿನಿಂದ ಮಾತ್ರವೇ ರಾಣಿಯ ರೋಗ ಶಮನಗೊಳ್ಳುವುದೆಂದು ಸೂಚಿಸಿದನು. ರಾಣಿಯ ಕಾಯಿಲೆಯನ್ನು ಗುಣಪಡಿಸಿದವರಿಗೆ ಅರ್ಧರಾಜ್ಯವನ್ನೇ ಕೊಡುವುದಾಗಿ ರಾಜನು ಡಂಗುರ ಸಾರಿಸಿದನು. ಹುಲಿಯ ಹಾಲು ಸಂಗ್ರಹಿಸುವ ಸಲುವಾಗಿ ಕಾಡಿಗೆ ಹೋದ ಸೈನಿಕರು ಬರಿಗೈಯಲ್ಲಿ ಹಿಂತಿರುಗಿದರು. ಯಾರಿಗೂ ಕೂಡ ಹುಲಿಯ ಹಾಲನ್ನು ತರಲು ಸಾಧ್ಯವಾಗಲಿಲ್ಲ.

ಹುಲಿ ಹಾಲಿಗಾಗಿ ಕಾಡಿಗೆ ಹೊರಟ ಮಣಿಕಂಠ

ಮಣಿಕಂಠನು ಹುಲಿಯ ಹಾಲು ತರುವ ಸಲುವಾಗಿ ಹೊರಡಲು ಸಿದ್ಧನಾದನು ಆದರೆ ರಾಜ ರಾಜಶೇಖರನು ಇದಕ್ಕೆ ಒಪ್ಪುವುದಿಲ್ಲ. ತನ್ನ ಕುಟುಂಬಕ್ಕಾಗಿ ಒಂದು ಸಹಾಯವನ್ನು ಮಾಡಲು ಅನುಮತಿ ನೀಡಬೇಕೆಂದು ಮಣಿಕಂಠನು ತಂದೆಯನ್ನು ಒತ್ತಾಯಿಸಿದನು. ಮಗನ ಮಾತಿಗೆ ಕಟ್ಟುಬಿದ್ದ ರಾಜನು ಮಣಿಕಂಠನನ್ನು ಕಾಡಿಗೆ ಕಳುಹಿಸಲು ಒಪ್ಪಿಗೆ ಸೂಚಿಸುತ್ತಾನೆ. ಮಣಿಕಂಠನ ನೆರವಿಗಾಗಿ ಸಾಹಸಿಗಳಾದ ಭಟರ ಒಂದು ತಂಡವನ್ನು ಅವನೊಂದಿಗೆ ಕಾಡಿಗೆ ಕಳಿಸಲು ಅರಸನು ತೀರ್ಮಾನಿಸಿದನು. ಆದರೆ ಜನರ ಗುಂಪುಗಳನ್ನು ಕಂಡೊಡನೆ ಹುಲಿಯು ಓಡಿ ಹೋಗುವುದೆಂಬ ಕಾರಣದಿಂದ ಮಣಿಕಂಠನು ತಂದೆಯ ತೀರ್ಮಾನವನ್ನು ಒಪ್ಪಲಿಲ್ಲ. ಕೊನೆಗೆ ವಾತ್ಸಲ್ಯಮಯಿಯಾದ ತಂದೆಯು ಆಹಾರ ಸಾಮಗ್ರಿಗಳನ್ನೂ ಶಿವಭಕ್ತಿಯ ಸೂಚಕವಾದ ಹಾಗೂ ಮೂರು ಕಣ್ಣುಗಳಿರುವ ತೆಂಗಿನಕಾಯಿಯನ್ನೂ ಇತ್ತು ಮಗನನ್ನು ಕಳಿಸಿಕೊಟ್ಟನು.

ಮಹಿಷಿ ಮತ್ತು ಮಣಿಕಂಠನ ನಡುವೆ ಘೋರ ಯುದ್ಧ

ಮಣಿಕಂಠನು ಅರಣ್ಯವನ್ನು ಪ್ರವೇಶಿಸಿದಾಗ ಭಗವಾನ್ ಶಿವನ ಪಂಚಭೂತಗಣಗಳೂ ಒಟ್ಟಿಗೆ ಸೇರಿಕೊಂಡವು. ಪಯಣದ ನಡುವೆ ದೇವಲೋಕದಲ್ಲಿ ಮಹಿಷಿಯು ನಡೆಸುತ್ತಿರುವ ಅನ್ಯಾಯಗಳೆಲ್ಲಾ ಮಣಿಕಂಠನ ಗಮನಕ್ಕೆ ಬಂದವು. ಅವನಲ್ಲಿರುವ ದೈವತ್ವದ ಪ್ರಜ್ಞೆ ಜಾಗೃತವಾಯಿತು. ಅವನು ಮಹಿಷಿಯನ್ನು ಹಿಡಿದೆಳೆದು ಭೂಲೋಕಕ್ಕೆ ಎಸೆದನು. ಅವಳು ಅಯುತಾ ನದಿಯ ದಂಡೆಗೆ ಬಂದು ಬಿದ್ದಳು. ಇಬ್ಬರ ನಡುವೆ ಘೋರವಾದ ಯುದ್ಧ ನಡೆಯಿತು. ಕೊನೆಗೆ ಮಣಿಕಂಠನು ಮಹಿಷಿಯ ಎದೆಯನ್ನೇರಿ ತಾಂಡವ ನೃತ್ಯಗೈದನು. ಅದರ ಪ್ರತಿಧ್ವನಿ ಭೂಮಿಯಲ್ಲೂ ಸ್ವರ್ಗದಲ್ಲೂ ವ್ಯಾಪಿಸಿತು. ದೇವತೆಗಳೂ ಭಯ ಭೀತರಾದರು. ತನ್ನ ಮೇಲೆ ನೃತ್ಯ ಮಾಡುವುದು ಹರಿಹರಸುತನಾದ ಪುಣ್ಯ ಪುರುಷನೆಂಬುದನ್ನು ಮಹಿಷಿ ಅರಿತುಕೊಂಡಳು. ಆ ಚಿಕ್ಕ ಬಾಲಕನಿಗೆ ನಮಸ್ಕರಿಸಿ ಮರಣಕ್ಕೆ ಶರಣಾದಳು.

ಹುಲಿಯನ್ನೇರಿ ನಾಡಿಗೆ ಬಂದ ಮಣಿಕಂಠ

ಮಹಿಷಿಯ ನಿಗ್ರಹದ ಬಳಿಕ ಮಣಿಕಂಠನು ಹುಲಿಯ ಹಾಲನ್ನು ಸಂಗ್ರಹಿಸುವ ಸಲುವಾಗಿ ಅರಣ್ಯವನ್ನು ಪ್ರವೇಶಿಸಿದನು. ಅಲ್ಲಿ ಭಗವಾನ್ ಶಿವನು ಅವನಿಗೆ ದರ್ಶನ ನೀಡಿದನು. ಅಮೂಲ್ಯವಾದ ಹುಲಿಯ ಹಾಲನ್ನು ಸಂಗ್ರಹಿಸಲು ದೇವೇಂದ್ರನು ನಿನಗೆ ಸಹಕರಿಸುವನು ಎಂದು ಶಿವನು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ದೇವೇಂದ್ರನು ಹುಲಿಯ ರೂಪ ತಾಳಿ ಮಣಿಕಂಠನೊಡನೆ ಅರಮನೆಯತ್ತ ಹೊರಟನು. ಉಳಿದ ದೇವತೆಗಳು ಗಂಡು ಹುಲಿಗಳಾಗಿ ದೇವಿಯರು ಹೆಣ್ಣು ಹುಲಿಗಳಾಗಿ ಅವರನ್ನು ಹಿಂಬಾಲಿಸಿದರು. ಹುಲಿಯನ್ನೇರಿ ಬರುವ ಮಣಿಕಂಠನನ್ನು ಕಂಡು ಹೆದರಿದ ಪಂದಳದ ಜನರು ಓಡಿ ಹೋಗಿ ಮನೆಗಳಲ್ಲಿ ಅವಿತರು. ರಾಜನು ಹೆಚ್ಚು ಹೊತ್ತು ತಡೆಯಲಾರದೆ ಬಾಲಕನ ಪಾದಗಳಿಗೆ ಬಿದ್ದು ಕ್ಷಮೆ ಯಾಚಿಸಿದನು. ಕೊನೆಗೆ, ರಾಣಿಯ ಕಪಟ ನಾಟಕದ ರಹಸ್ಯ ಬಯಲಾದ ಆ ನಿಮಿಷದಲ್ಲಿ ಮಣಿಕಂಠನು ಅರಣ್ಯದತ್ತ ತೆರಳಿದನು.

ಶಬರಿ ಎಂದು ಖ್ಯಾತಳಾದ ಸನ್ಯಾಸಿನಿ ತಪಸ್ಸನ್ನಾಚರಿಸಿದ್ದ ಶಬರಿಯಲ್ಲಿ ಶಬರಿಮಲೆ

ಕಾಡಿನಿಂದ ಹಿಂತಿರುಗಿ ಬರುವಾಗ ಅವನಿಗೆ ಹನ್ನೆರಡು ವರ್ಷ ಪ್ರಾಯವಾಗಿತ್ತು. ತನ್ನ ಮಗನು ನಾಡನ್ನು ಬಿಟ್ಟು ಕಾಡಿಗೆ ತೆರಳಲು ಕಾರಣನಾದ ದಿವಾನನನ್ನು ದಂಡಿಸಬೇಕೆಂದು ಅರಸನು ತೀರ್ಮಾನಿಸಿದನು. ಆದರೆ, ಎಲ್ಲವೂ ದೈವೇಚ್ಛೆಯಂತೆ ನಡೆಯುವುದೆಂದೂ ಸಂಯಮವನ್ನು ಪಾಲಿಸಬೇಕೆಂದೂ ಮಣಿಕಂಠನು ಸಲಹೆ ನೀಡಿದನು. ತನ್ನ ಅವತಾರದ ಉದ್ದೇಶವನ್ನು ಪೂರ್ತಿಗೊಳಿಸಿದ್ದರಿಂದ ತಾನು ದೇವಲೋಕಕ್ಕೆ ಹಿಂತಿರುಗುವುದಾಗಿಯೂ ತಂದೆಗೆ ಸೂಚಿಸಿದನು. ಮಣಿಕಂಠನ ಸ್ಮರಣೆಗಾಗಿ ಒಂದು ದೇವಾಲಯವನ್ನು ನಿರ್ಮಿಸಬೇಕೆಂಬ ಆಸೆ ಎನ್ನಲ್ಲಿದೆ. ಆದ್ದರಿಂದ ದೇವಾಲಯದ ನಿರ್ಮಾಣಕ್ಕೆ ಸೂಕ್ತವಾದ ಜಾಗ ತೋರಿಸಬೇಕೆಂದು ರಾಜಶೇಖರನು ಕೇಳಿಕೊಂಡನು. ಕೂಡಲೇ ಮಣಿಕಂಠನು ಒಂದು ಶರವನ್ನು ತೆಗೆದು ದೂರಕ್ಕೆ ಎಸೆದನು. ಆ ಶರವು ಶ್ರೀರಾಮನ ಕಾಲದಲ್ಲಿ ಶಬರಿ ಎಂದು ಖ್ಯಾತಳಾದ ಸನ್ಯಾಸಿನಿ ತಪಸ್ಸನ್ನಾಚರಿಸಿದ್ದ ಶಬರಿ ಎಂಬ ಸ್ಥಳದಲ್ಲಿ ಹೋಗಿ ನಾಟಿತು. ಆ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಲು ಸೂಚಿಸಿದ ಬಳಿಕ ಮಣಿಕಂಠನು ಇದ್ದಕ್ಕಿದ್ದಂತೆ ಮಾಯವಾದನು.

ಶಬರಿಮಲೆ ದೇವಾಲಯದ ನಿರ್ಮಾಣ

ಅಗಸ್ತ್ಯ ಸ್ವಾಮಿಯ ಸಲಹೆಯಂತೆ ರಾಜಶೇಖರನು ಶಬರಿಮಲೆಯಲ್ಲಿ ದೇವಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದನು. ಐಹಿಕ ಸುಖಗಳಿಂದ ಮತ್ತು ದಾಂಪತ್ಯ ಜೀವನದಿಂದ ವಿಮುಖರಾಗಿ 41 ದಿನಗಳ ವ್ರತಾಚರಣೆ ಮಾಡಿ ದರ್ಶನಕ್ಕೆ ಬರುವವರಿಗೆ ಮಾತ್ರ ತನ್ನ ಅನುಗ್ರಹವಾಗುವುದೆಂದು ಮಣಿಕಂಠನು ಮೊದಲೇ ಪ್ರಸ್ತಾವಿಸಿದ್ದನು. ರಾಜಶೇಖರ ರಾಜನು ನಿರ್ದಿಷ್ಟ ಸಮಯದೊಳಗೆ ದೇವಾಲಯದ ನಿರ್ಮಾಣ ಕಾರ್ಯವನ್ನು ನೆರವೇರಿಸಿದನು. ಪವಿತ್ರವಾದ ಹದಿನೆಂಟು ಮೆಟ್ಟಿಲುಗಳನ್ನು ನಿರ್ಮಿಸಿದನು. ಪಂಪಾ ನದಿಯು ಪವಿತ್ರವಾದ ಗಂಗಾನದಿಯಂತೆ, ದೇವರ ದರ್ಶನಕ್ಕಾಗಿ ಧರ್ಮಶಾಸ್ತಾವಿನ ವಿಗ್ರಹವನ್ನು ಪ್ರತಿಷ್ಠಾಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡನು. ನಂತರ ಪರಶುರಾಮನು ಧರ್ಮ ಶಾಸ್ತಾವಿನ ಆಜ್ಞೆಯಂತೆ ಮಕರ ಸಂಕ್ರಮಣ ದಿನದಂದು ಅಯ್ಯಪ್ಪನ ರೂಪವನ್ನು ಕೆತ್ತಿ ಶಬರಿಮಲೆಯಲ್ಲಿ ಪ್ರತಿಷ್ಠಾಪಿಸಿದನು. ಪ್ರತಿವರ್ಷ ಅಯ್ಯಪ್ಪ ಭಕ್ತರು ಶರಣ ಮಂತ್ರಗಳನ್ನು ಮೊಳಗಿಸಿ ಹದಿನೆಂಟು ಮೆಟ್ಟಿಲುಗಳನ್ನು ಏರುತ್ತಾರೆ. Ayyappa Swamy

ಅಧ್ಯಾತ್ಮ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!