
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಾವು ಧರಿಸುವ ಬಟ್ಟೆಗಳ ಬಣ್ಣಗಳು ನಮ್ಮ ಆಲೋಚನೆಗಳು, ಮನಸ್ಥಿತಿ ಹಾಗೂ ದಿನನಿತ್ಯದ ಶಕ್ತಿಯ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಪ್ರತಿಯೊಂದು ದಿನಕ್ಕೂ ತನ್ನದೇ ಆದ ಗ್ರಹ ಮತ್ತು ದೇವತೆಗಳ ಆಧ್ಯಾತ್ಮಿಕ ಮಹತ್ವವಿದ್ದು, ಅದಕ್ಕನುಗುಣವಾಗಿ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಜೀವನದಲ್ಲಿ ಧನಾತ್ಮಕ ಶಕ್ತಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ.
ಸೋಮವಾರವನ್ನು ಶಿವನಿಗೆ ಹಾಗೂ ಚಂದ್ರ ಗ್ರಹಕ್ಕೆ ಅರ್ಪಿತವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಮನಸ್ಸಿಗೆ ಶಾಂತಿ, ಸಮಾಧಾನ ಮತ್ತು ಪ್ರಶಾಂತತೆ ನೀಡುವ ಬಿಳಿ, ಕೆನೆ, ತಿಳಿ ಗುಲಾಬಿ, ತಿಳಿ ಆಕಾಶ ನೀಲಿ ಹಾಗೂ ತಿಳಿ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಅತ್ಯಂತ ಶುಭ. ಆದರೆ ಈ ದಿನ ಕಪ್ಪು ಮತ್ತು ಅತಿಯಾದ ಪ್ರಕಾಶಮಾನವಾದ ಗಾಢ ಬಣ್ಣಗಳನ್ನು ತಪ್ಪಿಸುವುದು ಉತ್ತಮ.
ಮಂಗಳವಾರ ಹನುಮಂತ ದೇವರಿಗೆ ಮತ್ತು ಮಂಗಳ ಗ್ರಹಕ್ಕೆ ಮೀಸಲಾದ ದಿನವಾಗಿದೆ. ಮಂಗಳ ಗ್ರಹವು ಉತ್ಸಾಹ, ಸಾಹಸ ಮತ್ತು ಶಕ್ತಿಯ ಸಂಕೇತವಾಗಿರುವುದರಿಂದ, ಈ ದಿನ ಕೆಂಪು, ಕೇಸರಿ, ಕಿತ್ತಳೆ ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಹೆಚ್ಚು ಫಲದಾಯಕ. ಈ ಬಣ್ಣಗಳು ನಿಮ್ಮಲ್ಲಿ ದಿನವಿಡೀ ಹೊಸ ಚೈತನ್ಯ ಮತ್ತು ಶಕ್ತಿಯನ್ನು ತುಂಬುತ್ತವೆ.
ಬುಧವಾರವನ್ನು ಗಣೇಶನಿಗೆ ಮತ್ತು ಬುಧ ಗ್ರಹಕ್ಕೆ ಸಂಬಂಧಿಸಿದ ದಿನವೆಂದು ನಂಬಲಾಗುತ್ತದೆ. ಗಣೇಶನಿಗೆ ದೂರ್ವಾ ಅಂದರೆ ಗರಿಕೆ ಎಂದರೆ ಅತ್ಯಂತ ಪ್ರಿಯವಾದ ಕಾರಣ, ಹಸಿರು ಬಣ್ಣಕ್ಕೆ ಈ ದಿನ ವಿಶೇಷ ಮಹತ್ವವಿದೆ. ಹೀಗಾಗಿ ಬುಧವಾರದಂದು ಹಸಿರು ಅಥವಾ ಹಸಿರಿನ ವಿವಿಧ ಛಾಯೆಯ ಬಟ್ಟೆಗಳನ್ನು ಧರಿಸುವುದರಿಂದ ಜ್ಞಾನ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಗುರುವಾರ ಶ್ರೀ ಹರಿ ವಿಷ್ಣು ಹಾಗೂ ಬೃಹಸ್ಪತಿ ಅಂದರೆ ಗುರು ಗ್ರಹಕ್ಕೆ ಸಮರ್ಪಿತವಾದ ದಿನ. ವಿಷ್ಣುವಿಗೆ ಹಳದಿ ಬಣ್ಣವೆಂದರೆ ತೀರಾ ಇಷ್ಟವಾದ್ದರಿಂದ, ಈ ದಿನ ಹಳದಿ ಅಥವಾ ಚಿನ್ನದ ಬಣ್ಣದ ಬಟ್ಟೆಗಳನ್ನು ಧರಿಸುವುದು ಸೂಕ್ತ. ಇದು ಮನೆಯಲ್ಲಿ ಹಾಗೂ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮತ್ತು ಶುಭಫಲಗಳು ಹೆಚ್ಚಾಗಲು ನೆರವಾಗುತ್ತದೆ.
ಶುಕ್ರವಾರವನ್ನು ಶುಕ್ರ ಗ್ರಹ ಹಾಗೂ ಲಕ್ಷ್ಮಿ ದೇವಿಗೆ ಅರ್ಪಿಸಲಾಗುತ್ತದೆ. ಈ ದಿನ ಪ್ರಸನ್ನತೆ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಕೆಂಪು, ತಿಳಿ ಬಣ್ಣಗಳು ಹಾಗೂ ಸ್ವಲ್ಪ ಹೊಳಪು ಅಥವಾ ಆಕರ್ಷಣೆ ಇರುವ ಬಟ್ಟೆಗಳನ್ನು ಧರಿಸುವುದು ಶುಭ ತರುತ್ತದೆ. ಇವು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಮತ್ತು ಸಕಾರಾತ್ಮಕ ವಾತಾವರಣ ನಿರ್ಮಿಸಲು ಸಹಾಯ ಮಾಡುತ್ತವೆ.
ಇದನ್ನೂ ಓದಿ: ಮಂತ್ರ ಪಠಣ ಮಾಡುವಾಗ ಕಣ್ಣುಗಳನ್ನು ಏಕೆ ಮುಚ್ಚಬೇಕು? ಆಧ್ಯಾತ್ಮಿಕ ಕಾರಣ ಇಲ್ಲಿದೆ
ಶನಿವಾರವನ್ನು ಶನಿ ದೇವರಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗುತ್ತದೆ. ಶನಿ ದೇವರಿಗೆ ಕಡು ಬಣ್ಣಗಳು ಹೆಚ್ಚು ಪ್ರಿಯವಾದ ಕಾರಣ, ಈ ದಿನ ನೀಲಿ, ಕಡು ನೀಲಿ ಹಾಗೂ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಅತ್ಯಂತ ಶ್ರೇಷ್ಠ. ಈ ಬಣ್ಣಗಳು ಶನಿ ದೇವರ ಕೃಪೆಗೆ ಪಾತ್ರರಾಗಲು ನೆರವಾಗುತ್ತವೆ.
ಭಾನುವಾರ ಸೂರ್ಯ ದೇವರಿಗೆ ಮೀಸಲಾದ ದಿನ. ಸೂರ್ಯನು ತೇಜಸ್ಸು, ಪ್ರಭುತ್ವ ಮತ್ತು ನಾಯಕತ್ವದ ಸಂಕೇತವಾಗಿರುವುದರಿಂದ, ಈ ದಿನ ಕೆಂಪು, ಕೇಸರಿ, ಕಿತ್ತಳೆ ಮತ್ತು ಹಳದಿ ಯಂತಹ ಪ್ರಕಾಶಮಾನವಾದ ಬಣ್ಣಗಳನ್ನು ಧರಿಸುವುದು ಶುಭ. ಇವು ನಿಮ್ಮಲ್ಲಿ ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.
ದಿನಕ್ಕೆ ತಕ್ಕಂತೆ ಸೂಕ್ತ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೆ, ನಮಗೆ ಮಾನಸಿಕವಾಗಿ ಹೊಸ ಉತ್ಸಾಹ ಮತ್ತು ಸಕಾರಾತ್ಮಕ ಆಲೋಚನೆಗಳನ್ನು ನೀಡಲು ನೆರವಾಗುತ್ತದೆ. ನಿಮ್ಮ ದಿನನಿತ್ಯದ ಶೈಲಿಯಲ್ಲಿ ಈ ಸಣ್ಣ ಬದಲಾವಣೆಗಳನ್ನು ಅಳವಡಿಸಿಕೊಂಡು ಸಕಾರಾತ್ಮಕತೆಯನ್ನು ಅನುಭವಿಸಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ