ಕರ್ನಾಟಕದ 7 ಪ್ರಸಿದ್ಧ ಗಣಪತಿ ದೇವಸ್ಥಾನಗಳಾವುವು? ಅದರ ವಿಶೇಷತೆಗಳೇನು?

ಶುಭ ಕಾರ್ಯ ಮತ್ತು ಪೂಜೆಯನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಗಣಪತಿಯನ್ನು ಪೂಜಿಸುವುದರಿಂದ ನಮ್ಮ ಕೆಲಸದಲ್ಲಿ, ಜೀವನದಲ್ಲಿ ಎದುರಾಗುವ ಎಲ್ಲಾ ರೀತಿಯ ಬಿಕ್ಕಟ್ಟುಗಳನ್ನು ದೂರವಾಗಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗೆಯೇ ನಮ್ಮ ಕರ್ನಾಟಕದಲ್ಲಿ ಪ್ರಸಿದ್ಧ ಗಣಪತಿ ದೇವಸ್ಥಾನಗಳಿವೆ. ಅದು ಯಾವುದು? ಎಲ್ಲಿ ಬರುತ್ತದೆ ಎಂಬುದು ತಿಳಿದಿದೆಯಾ?

ಕರ್ನಾಟಕದ 7 ಪ್ರಸಿದ್ಧ ಗಣಪತಿ ದೇವಸ್ಥಾನಗಳಾವುವು? ಅದರ ವಿಶೇಷತೆಗಳೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 07, 2023 | 6:03 PM

ಹಿಂದೂ ಧರ್ಮದಲ್ಲಿ ಗಣಪತಿಯು ಮೊದಲ ಪೂಜೆಗೆ ಅರ್ಹವಾದ ದೇವರು. ಯಾವುದೇ ಶುಭ ಕಾರ್ಯ ಮತ್ತು ಪೂಜೆಯನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಗಣಪತಿಯನ್ನು ಪೂಜಿಸುವುದರಿಂದ ನಮ್ಮ ಕೆಲಸದಲ್ಲಿ, ಜೀವನದಲ್ಲಿ ಎದುರಾಗುವ ಎಲ್ಲಾ ರೀತಿಯ ಬಿಕ್ಕಟ್ಟುಗಳನ್ನು ದೂರವಾಗಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗೆಯೇ ನಮ್ಮ ಕರ್ನಾಟಕದಲ್ಲಿ ಪ್ರಸಿದ್ಧ ಗಣಪತಿ ದೇವಸ್ಥಾನಗಳಿವೆ. ಅದು ಯಾವುದು? ಎಲ್ಲಿ ಬರುತ್ತದೆ ಎಂಬುದು ತಿಳಿದಿದೆಯಾ? ಹಾಗಾದರೆ ನೀವು ಈ ರಿಲ್ಸ್ ನೋಡಲೇಬೇಕು. ಇಲ್ಲಿ ಕರ್ನಾಟಕದ ಪ್ರಸಿದ್ಧ ದೇವಾಲಯ ಮತ್ತು ಅವು ಇರುವ ಸ್ಥಳದ ಮಾಹಿತಿ ನೀಡಲಾಗಿದೆ.

ಇಡಗುಂಜಿಯ ಮಹಾಗಣಪತಿ

ಇದರಲ್ಲಿ ಮೊದಲನೇ ದೇವಸ್ಥಾನ ಇಡಗುಂಜಿಯ ಮಹಾಗಣಪತಿ. ಈ ದೇವಸ್ಥಾನ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿಯಲ್ಲಿದೆ. ಹಾಗಾಗಿ ಈ ದೇವಸ್ಥಾನ ಇಡಗುಂಜಿಯ ಮಹಾಗಣಪತಿ ಎಂದೇ ಪ್ರಖ್ಯಾತವಾಗಿದೆ. ಸುಮಾರ 1500 ವರ್ಷಗಳಿಗೂ ಅಧಿಕ ಐತೀಹ್ಯವನ್ನು ಹೊಂದಿರುವ ಇಡಗುಂಜಿಯ ಈ ಪುರಾತನ ಗಣಪತಿ ದೇವಸ್ಥಾನವು ಕರ್ನಾಟಕದ ಕರಾವಳಿ ಭಾಗದ ಪ್ರಮುಖ ಆಕರ್ಷಣೀಯ ಪ್ರವಾಸಿ ತಾಣದಲ್ಲೂ ಒಂದಾಗಿದೆ. ಇಡಗುಂಜಿ ಎನ್ನುವ ಪದವು ಎಡಕುಂಜ ಎನ್ನುವ ಪದದಿಂದ ಬಂದಿದ್ದು, ಈ ಎಡಕುಂಜ ಕ್ಷೇತ್ರದ ಮಹತ್ವವನ್ನು ಸ್ಕಂದ ಪುರಾಣದಲ್ಲಿ ಬರುವ ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖಿಸಲಾಗಿದೆ. ಎಡ ಎಂದರೆ ಎಡಕ್ಕೆ ಮತ್ತು ಕುಂಜ ಎಂದರೆ ಉದ್ಯಾನ ಎಂಬರ್ಥವನ್ನು ಪಡೆದುಕೊಂಡಿದೆ. ಶರಾವತಿ ನದಿಯ ಎಡ ದಡದಲ್ಲಿ ಈ ಸ್ಥಳ ಇರುವುದರಿಂದ ಇದನ್ನು ಇಡಗುಂಜಿ ಎಂದು ಕರೆಯಲಾಯಿತು. ಈ ದೇವಾಲಯವು ಒಂದು ಪ್ರಮುಖ ಯಾತ್ರಾ ಸ್ಥಳವಾಗಿದ್ದು, ವರ್ಷಕ್ಕೆ 1 ದಶಲಕ್ಷಕ್ಕೂ ಹೆಚ್ಚು ಭಕ್ತರನ್ನು ಆಕರ್ಷಿಸುತ್ತದೆ. ಈ ದೇವಾಲಯದ ಇನ್ನೊಂದು ಆಕರ್ಷಣೆಯೆಂದರೆ ಕಪ್ಪು ಶಿಲೆಯಿಂದ ಮಾಡಿದ ಗಣೇಶ ವಿಗ್ರಹ. ಜೊತೆಗೆ ಈ ದೇವಾಲಯದಲ್ಲಿನ ಗಣೇಶನ ವಿಗ್ರಹವು ನಿಂತ ಭಂಗಿಯಲ್ಲಿದೆ. ನಿಂತ ಭಂಗಿಯಲ್ಲಿರುವ ಗಣೇಶನ ವಿಗ್ರಹವು ನೋಡಲು ಸಿಗುವುದು ಬಲು ಅಪರೂಪ. ಇಲ್ಲಿ ಗಣಪತಿ ದೇವರಿಗೆ ನೈವೇದ್ಯವಾಗಿ ಪಂಚಖಾದ್ಯವನ್ನು ತಯಾರಿಸಲಾಗುತ್ತದೆ, ಇದು ಈ ದೇವಾಲಯದ ವಿಶೇಷ ಪ್ರಸಾದವಾಗಿದೆ. ಇದು ಸಕ್ಕರೆ, ಬೆಲ್ಲ ಎರಡರಲ್ಲಿಯೂ ಮಾಡಲಾಗುತ್ತದೆ. ಭಕ್ತರು ಬೇಡಿಕೊಂಡ ಸಮಸ್ಯೆ ನಿವಾರಣೆಯಾದ ಮೇಲೆ ಇದನ್ನು ದೇವಸ್ಥಾನದಲ್ಲಿ ಮಾಡಿಸಬಹುದು.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ

ಇನ್ನು ಎರಡನೇ ದೇವಸ್ಥಾನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಇದು ಕುಂದಾಪುರದ ಕುಂಭಾಶಿ ಬಳಿಯಲ್ಲಿ ಇರುವ ದೇವಸ್ಥಾನವಾಗಿದ್ದು ಬಹಳ ಪ್ರಸಿದ್ಧವಾಗಿದೆ. ಆನೆಗುಡ್ಡೆ ಎಂದರೆ ಕನ್ನಡ ಭಾಷೆಯಲ್ಲಿ “ಆನೆ ಬೆಟ್ಟ” ಎಂದರ್ಥ. ಈ ಸ್ಥಳವು ಬೆಟ್ಟದ ತುದಿಯಲ್ಲಿರುವ ವಿನಾಯಕನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಆದ್ದರಿಂದ ಈ ಪ್ರದೇಶವನ್ನು ಆನೆಗುಡ್ಡೆ ಎಂದು ಕರೆಯಲಾಗುತ್ತದೆ. ಪ್ರಸಿದ್ಧ ಆನೆಗುಡ್ಡೆ ಸಿದ್ಧಿ ವಿನಾಯಕ ದೇವಸ್ಥಾನದ ಇತಿಹಾಸವು ಶತಮಾನಗಳಷ್ಟು ಹಳೆಯದು. ಈ ಪಟ್ಟಣವು ಇಲ್ಲಿ ಕೊಲ್ಲಲ್ಪಟ್ಟ ರಾಕ್ಷಸ ಕುಂಭಾಸುರನಿಗೆ ಹೆಸರುವಾಸಿಯಾಗಿದೆ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಗಣಪತಿಯು ನಿಂತಿರುವ ಭಂಗಿಯಲ್ಲಿದ್ದು, ನಾಲ್ಕು ಕೈಗಳನ್ನು ಹೊಂದಿದ್ದಾನೆ. ಇಲ್ಲಿ ಕಡಬು ನೈವೇದ್ಯ ಬಹಳ ಪ್ರಸಿದ್ದಿ ಪಡೆದಿದೆ.

ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ

ಇನ್ನು ಮೂರನೇ ದೇವಸ್ಥಾನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ. ಇದು ಬೆಂಗಳೂರಿನಲ್ಲಿದ್ದು ಬಹಳ ಪ್ರಸಿದ್ಧವಾದ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವ ಸುಮಾರು 11 ಅಡಿ ಉದ್ದ ಹಾಗೂ 18 ಅಡಿ ಅಗಲದ ಗಣೇಶ ವಿಗ್ರಹ ಇರುವ ಈ ದೇವಾಲಯವನ್ನು ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಕ್ರಿ.ಶ.1536ರಲ್ಲಿ ಸುಮಾರು ಐದು ಎಕರೆ ಜಾಗದಲ್ಲಿ ನಿರ್ಮಿಸಿದರೆಂದು ಹೇಳಲಾಗಿದೆ. ಈ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಬಸವನಗುಡಿ ದೇವಾಲಯದಲ್ಲಿ ಪ್ರತಿ ವರ್ಷ ಇತಿಹಾಸ ಪ್ರಸಿದ್ಧ ಕಡಲೇಕಾಯಿ ಪರಿಷೆ ಮಾಡಲಾಗುತ್ತದೆ. ಅಂತೆಯೇ ಇದೊಂದು ಪ್ರೇಕ್ಷಣಿಯ ಸ್ಥಳವಾಗಿದ್ದು, ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಬಸವನಗುಡಿ, ರಾಮಕೃಷ್ಣ ಆಶ್ರಮ, ಹನುಮಂತನಗರ, ಗಾಂಧಿ ಬಜಾರ್‌, ತ್ಯಾಗರಾಜನಗರ, ಎನ್‌. ಆರ್‌. ಕಾಲೋನಿ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳಿಗೆ ಈ ದೇವಾಲಯ ಸಮೀಪದಲ್ಲಿದೆ.

ಗೋಕರ್ಣದ ಮಹಾಗಣಪತಿ ದೇವಸ್ಥಾನ

ಇನ್ನು ನೀವು ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮಹಾಗಣಪತಿ ದೇವಸ್ಥಾನದ ಬಗ್ಗೆ ಕೇಳಿರಬಹುದು. ಇಲ್ಲಿ ಹೊರಗಿನಿಂದ ಪ್ರವಾಸಿಗರ ದಂಡೇ ಆಗಮಿಸುತ್ತದೆ. ಹಾಗಾಗಿ ಅತ್ಯಂತ ಪ್ರಸಿದ್ಧವಾಗಿದೆ. ಈ ಗೋಕರ್ಣಕ್ಕೂ ಗಣಪತಿಗೂ, ಶಿವನಿಗೂ ಹಾಗೂ ರಾವಣನಿಗೂ ಒಂದು ನಂಟಿದೆ. ಒಂದು ಪೌರಾಣಿಕ ಕಥೆಗಳು ಹೇಳುತ್ತವೆ. ಗೋಕರ್ಣದ ದ್ವಿ ಭುಜ ಗಣಪನನ್ನ ಶ್ರದ್ದಾ ಭಕ್ತಿಯಿಂದ ಪೂಜೆ ಪುನಸ್ಕಾರ ಮಾಡಲಾಗುತ್ತೆ. ಇಲ್ಲಿ ಭಕ್ತಿಯಿಂದ ಬೇಡುವುದರಿಂದ ಸಮಸ್ಯೆ ದೂರವಾಗಿ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ.

ಕುರುಡುಮಲೆ ಶ್ರೀ ಗಣೇಶ ದೇವಸ್ಥಾನ

ಮತ್ತೊಂದು ಪ್ರಸಿದ್ಧ ಗಣಪತಿ ದೇವಸ್ಥಾನಗಳಲ್ಲಿ ಕುರುಡುಮಲೆ ಶ್ರೀ ಗಣೇಶ ದೇವಸ್ಥಾನವು ಒಂದು. ಇದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿದೆ. ಈ ಗಣಪನ ದೇವಸ್ಥಾನ ಕರ್ನಾಟಕದಲ್ಲಿ ಬಹಳ ಪ್ರಖ್ಯಾತ. ಇಲ್ಲಿಯ ವಿನಾಯಕನ ಮೂರ್ತಿ ರಾಮಾಯಣದ ಕಾಲದ್ದೆಂದು ಸ್ಥಳೀಯರ ನಂಬಿಕೆ. ಇಲ್ಲಿನ ಗಣೇಶ ದೇವಾಲಯವು 13.5 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಹೊಂದಿದೆ ಮತ್ತು ದೇವಾಲಯದ ವಿನ್ಯಾಸವನ್ನು ಎರಡು ವಿಭಿನ್ನ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಇದರ ಕುರಿತು ದಂತಕಥೆಗಳಿದ್ದು ಅದರ ಪ್ರಕಾರ ಈ ದೇವಾಲಯವನ್ನು ಇತಿಹಾಸ ಪ್ರಸಿದ್ಧ ಶಿಲ್ಪಿಗಳಾದ ಜಕಣಾಚಾರಿ ಮತ್ತು ಅವನ ಮಗ ಡಕಣಾಚಾರಿ ಇಬ್ಬರು ವಿನ್ಯಾಸಗೊಳಿಸಿದರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ದೊಡ್ಡಗಣಪತಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ

ಕರ್ನಾಟಕದ ಮತ್ತೊಂದು ಪ್ರಸಿದ್ಧ ದೇವಸ್ಥಾನಗಳಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನವು ಕೂಡ ಒಂದು. ಇದು ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿದೆ. ಇಲ್ಲಿನ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದರೂ ಇಂದಿಗೂ ಬಯಲು ಮಂದಿರದಲ್ಲೇ ಇದೆ. ಇದು ಚೊಕ್ಕಡದ ಬಯಲಿನಲ್ಲಿ ಕುಳಿತು ಭಕ್ತರ ಭವರೋಗಗಳನ್ನು ನಿರಾರಿಸುತ್ತಿರುವ ಶಕ್ತಿಶಾಲಿ ಗಣೇಶ ದೇವಾಲಯ. ಈ ದೇವಾಲಯಕ್ಕೆ ಬಂದು ಗಣಪತಿ ಪೂಜೆ ಮಾಡಿಸಿ ಹರಕೆಯನ್ನು ಕಟ್ಟಿಕೊಂಡು ಹರಕೆ ಈಡೇರಿದ ಬಳಿಕ ಇಲ್ಲಿಗೆ ಬಂದು ಗಂಟೆಯನ್ನು ಕಟ್ಟುವ ಸಂಪ್ರದಾಯವಿದೆ. ಗಣಪತಿ ದೇವಾಲಯವು ಒಮ್ಮೆ ಶತ್ರುಗಳಿಂದ ನಾಶವಾಯಿತು. ದೇಗುಲದಲ್ಲಿದ್ದ ಗಣಪತಿಯ ಸುಂದರ ಮೂರ್ತಿಯನ್ನು ಶತ್ರುಗಳು ಧ್ವಂಸ ಮಾಡಬಾರದೆಂಬ ಉದ್ದೇಶದಿಂದ ಸ್ಥಳೀಯ ದನ ಕಾಯುವವರು ಅದನ್ನು ಕೊಂಡೊಯ್ದು ಸೌತೆಕಾಯಿಯನ್ನು ಹೇರಳವಾಗಿ ಬೆಳೆಯುತ್ತಿದ್ದ ಜಾಗದಲ್ಲಿ ಪ್ರತಿಷ್ಠಾಪಿಸಿದರು. ತುಳುವಿನಲ್ಲಿ ಸೌತೆ ಎಂದರೆ ಸೌತೆಕಾಯಿ ಮತ್ತು ಅಡ್ಕ ಎಂದರೆ ವಿಶಾಲವಾದ ಬಯಲು. ಹೀಗಾಗಿ ಈ ಸ್ಥಳವನ್ನು ಸೌತಡ್ಕ ಎಂದು ಕರೆಯಲಾಯಿತು. ಬಳಿಕ ಅಲ್ಲಿನ ಸ್ಥಳೀಯ ರೈತರು ಸೌತೆಕಾಯಿಯ ದೊಡ್ಡ ಬೆಳೆಯನ್ನು ಕೊಯ್ಲು ಮಾಡಿದರು. ಇದು ಗಣಪತಿಯ ಆಶೀರ್ವಾದವೆಂದು ನಂಬಿದ ಅಲ್ಲಿನ ರೈತರು ತಮ್ಮ ಮೊದಲ ಸೌತೆಕಾಯಿ ಕೌಯ್ಲನ್ನು ಗಣಪತಿಗೆ ಅರ್ಪಿಸಿದರು. ಇಂದಿಗೂ ಇಲ್ಲಿ ಗಣೇಶನ ಪೂಜೆಯಲ್ಲಿ ಸೌತೆಕಾಯಿಯನ್ನು ಅರ್ಪಿಸಲಾಗುತ್ತದೆ.

ಚಿತ್ರದುರ್ಗದ ಬಯಲು ಗಣಪತಿ ದೇವಸ್ಥಾನ

ಚಿತ್ರದುರ್ಗದ ಬಯಲು ಗಣಪತಿ ದೇವಸ್ಥಾನವೂ ಕೂಡ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ದಿಯಾಗಿದೆ. ಚಿತ್ರದುರ್ಗದಲ್ಲಿ ಪಾಳೆಗಾರರ ಆಳ್ವಿಕೆಯ ಕಾಲದಲ್ಲಿ ಅನೇಕ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. 1475ರಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ಪಾಳೇಗಾರರಿಂದ ಸುಮಾರು 20 ಅಡಿ ಎತ್ತರದಲ್ಲಿ ನಿರ್ಮಿತವಾದ ಬಯಲು ಗಣಪತಿಯೂ ಒಂದಾಗಿದೆ. ಇದನ್ನು ದೊಡ್ಡ ತಿಮ್ಮನಾಯಕ ಎಂಬುವನು ಪ್ರತಿಷ್ಠಾಪಿಸಿದ್ದಾನೆ ಎಂದು ಹೇಳಲಾಗುತ್ತದೆ. ಇದನ್ನು ಮೊದಲು ಬಯಲಿನಲ್ಲಿ ಸ್ಥಾಪಿಸಲಾಗಿದ್ದರಿಂದ ಇದನ್ನು ಬಯಲು ಗಣಪ ಎಂದು ಸಹ ಕರೆಯಲಾಗುತ್ತಿತ್ತು. ಇದೀಗ ಪ್ರಸನ್ನ ಮಹಾಗಣಪತಿ ಎಂದು ಪ್ರಸಿದ್ಧಿಯಾಗಿದೆ.

ಇವೆಲ್ಲಾ ದೇವಸ್ಥಾನಗಳಿಗೆ ನೀವು ಹೋಗಿದ್ದೀರಾ? ಮುಂದಿನ ರಜಾ ದಿನಗಳಲ್ಲಿ ಈ ದೇವಾಲಯಗಳಿಗೆ ಪ್ರವಾಸ ಹೋಗಲು ಪ್ರಯತ್ನಿಸಿ. ನಿಮ್ಮ ಊರುಗಳಲ್ಲಿಯೂ ಗಣಪತಿ ದೇವಸ್ಥಾನಗಳಿದ್ದು ತುಂಬಾ ಪ್ರತೀತಿ ಹೊಂದಿದ್ದರೆ ಅದನ್ನೂ ತಿಳಿಸಿ. ಈ ರೀಲ್ಸ್ ನನ್ನು surya_editz_31 ಎಂಬ ಫೇಸಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು 4 ಸಾವಿರಕ್ಕೂ ಹೆಚ್ಚು ಲೈಕ್ ಪಡೆದಿದೆ. ಕೆಲವರು ಇಂತಹ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದು, ಇನ್ನು ಕೆಲವರು ಅಲ್ಲಲ್ಲಿ ಬಿಟ್ಟು ಹೋದ ದೇವಸ್ಥಾನಗಳ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Published On - 5:56 pm, Tue, 7 November 23

ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ