ದಸರಾದಂದು ರಾವಣ ದಹನ ಮಾಡದ ಭಾರತದ ಪ್ರಮುಖ ಸ್ಥಳಗಳಿವು; ಇಲ್ಲಿರುವ ವಿಶಿಷ್ಟ ನಂಬಿಕೆಗಳೇನು ಗೊತ್ತಾ?

ಭಾರತದ ಪ್ರಮುಖ ಹಬ್ಬವಾದ ದಸರಾ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಸಂಕೇತಿಸುತ್ತದೆ. ಸಾಮಾನ್ಯವಾಗಿ ರಾವಣ ದಹನ ರೂಢಿಯಲ್ಲಿದೆ. ಆದರೆ, ಕೆಲವು ಭಾರತೀಯ ಸ್ಥಳಗಳಲ್ಲಿ ರಾವಣನನ್ನು ಪೂರ್ವಜ, ಶಿವ ಭಕ್ತ ಎಂದು ಗೌರವಿಸುತ್ತಾರೆ. ಉತ್ತರ ಪ್ರದೇಶದ ಬಿಸ್ರಾಖ್, ಮಧ್ಯಪ್ರದೇಶದ ಮಂದಸೌರ್ ಮತ್ತು ರಾಜಸ್ಥಾನದ ಜೋಧಪುರ್‌ನಂತಹ ಪ್ರದೇಶಗಳಲ್ಲಿ ದಸರಾದಂದು ರಾವಣ ದಹನ ಮಾಡುವುದಿಲ್ಲ, ಬದಲಾಗಿ ಆತನನ್ನು ವಿಶಿಷ್ಟವಾಗಿ ಪೂಜಿಸುತ್ತಾರೆ.

ದಸರಾದಂದು ರಾವಣ ದಹನ ಮಾಡದ ಭಾರತದ ಪ್ರಮುಖ ಸ್ಥಳಗಳಿವು; ಇಲ್ಲಿರುವ ವಿಶಿಷ್ಟ ನಂಬಿಕೆಗಳೇನು ಗೊತ್ತಾ?
ದಸರಾದಂದು ರಾವಣ ದಹನ
Image Credit source: Getty Images

Updated on: Oct 15, 2026 | 12:48 PM

ಭಾರತದ ಪ್ರಮುಖ ಹಬ್ಬಗಳಲ್ಲಿ ವಿಜಯದಶಮಿ ಅಥವಾ ದಸರಾಗೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಈ ದಿನವನ್ನು ಅಧರ್ಮದ ಪ್ರತೀಕವಾದ ರಾವಣನನ್ನು ಶ್ರೀರಾಮನು ವಧಿಸಿದ ಹಾಗೂ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ಪ್ರಸಕ್ತ ವರ್ಷದ 2026ರ ಅಕ್ಟೋಬರ್ 20ರ ಮಂಗಳವಾರದಂದು ದಸರಾ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ರಾವಣ, ಕುಂಭಕರ್ಣ ಬೃಹತ್ ಪ್ರತಿಕೃತಿಗಳನ್ನು ದಹನ ಮಾಡಲಾಗುತ್ತದೆ. ಆದರೆ, ನಮ್ಮ ದೇಶದ ಸಾಂಸ್ಕೃತಿಕ ವೈವಿಧ್ಯತೆಯ ವಿಶೇಷತೆಯೆಂದರೆ, ಕೆಲವು ಪ್ರದೇಶಗಳಲ್ಲಿ ರಾವಣನ ಕುರಿತಾದ ನಂಬಿಕೆಗಳು ದೇಶದ ಉಳಿದ ಭಾಗಗಳಿಗಿಂತ ಸಂಪೂರ್ಣ ಭಿನ್ನವಾಗಿವೆ. ಕೆಲವು ಸ್ಥಳಗಳಲ್ಲಿ ರಾವಣನನ್ನು ತಮ್ಮ ಗ್ರಾಮದ ಮಗ ಅಥವಾ ಪೂರ್ವಜನೆಂದು ಭಾವಿಸಿದರೆ, ಇನ್ನು ಕೆಲವು ಕಡೆಗಳಲ್ಲಿ ಆತನನ್ನು ಶಿವನ ಪರಮ ಭಕ್ತನೆಂದು ಗೌರವಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಈ ಸ್ಥಳಗಳಲ್ಲಿ ರಾವಣ ದಹನ ಮಾಡುವ ಸಂಪ್ರದಾಯವಿಲ್ಲ. ಆ ವಿಶಿಷ್ಟ ಸ್ಥಳಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಬಿಸ್ರಾಖ್ (ಉತ್ತರ ಪ್ರದೇಶ) ರಾವಣನ ಜನ್ಮಸ್ಥಳ:

ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿರುವ ಬಿಸ್ರಾಖ್ ಗ್ರಾಮವು ರಾವಣನಿಗೆ ಸಂಬಂಧಿಸಿದ ಅನನ್ಯ ನಂಬಿಕೆಗಳಿಂದಾಗಿ ಸದಾ ಚರ್ಚೆಯಲ್ಲಿರುತ್ತದೆ. ಸ್ಥಳೀಯ ಸಂಪ್ರದಾಯದ ಪ್ರಕಾರ, ಈ ಸ್ಥಳವನ್ನು ರಾವಣನ ಜನ್ಮಸ್ಥಳವೆಂದು ನಂಬಲಾಗಿದೆ. ರಾವಣನ ತಂದೆಯಾದ ಋಷಿ ವಿಶ್ರವ ಈ ಸ್ಥಳದೊಂದಿಗೆ ನಂಟು ಹೊಂದಿದ್ದರು ಹಾಗೂ ಈ ಗ್ರಾಮಕ್ಕೆ ಅವರ ಹೆಸರೇ ಇಡಲಾಗಿದೆ ಎಂದು ನಂಬಲಾಗಿದೆ. ಬಿಸ್ರಾಖ್‌ನಲ್ಲಿ ರಾವಣನನ್ನು ಕೇವಲ ರಾಮಾಯಣದ ಪ್ರತಿನಾಯಕನಾಗಿ ನೋಡದೆ, ತಮ್ಮ ಗ್ರಾಮದ ಮಗ ಹಾಗೂ ಪೂರ್ವಜನಂತೆ ಗೌರವಿಸುತ್ತಾರೆ. ಈ ಕಾರಣದಿಂದ ಇಲ್ಲಿ ದಸರಾದಂದು ರಾವಣನ ಪ್ರತಿಕೃತಿಯನ್ನು ದಹನ ಮಾಡುವ ಸಂಪ್ರದಾಯವಿಲ್ಲ.

ಬೈಜನಾಥ್ (ಹಿಮಾಚಲ ಪ್ರದೇಶ) ಶಿವನ ತಪೋಭೂಮಿ:

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಬೈಜನಾಥ್ ಪ್ರಸಿದ್ಧ ಶಿವ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರದೇಶದ ಧಾರ್ಮಿಕ ನಂಬಿಕೆಗಳು ರಾವಣನ ಶಿವ ಭಕ್ತಿಗೆ ಕನ್ನಡಿ ಹಿಡಿಯುತ್ತವೆ. ಶಿವನನ್ನು ಒಲಿಸಿಕೊಳ್ಳಲು ರಾವಣ ಇಲ್ಲಿ ಕಠಿಣ ತಪಸ್ಸು ಮಾಡಿದ್ದನು ಎಂಬ ಐತಿಹಾಸಿಕ ನಂಬಿಕೆಯಿದೆ. ರಾಮಾಯಣದಲ್ಲಿ ರಾವಣನನ್ನು ಪ್ರಬಲ ರಾಜ, ಮಹಾನ್ ವಿದ್ವಾಂಸ ಮತ್ತು ಶಿವಭಕ್ತನೆಂದು ವರ್ಣಿಸಲಾಗಿದೆ. ಈ ದೈವಿಕ ನಂಟಿನ ಕಾರಣದಿಂದ ಬೈಜನಾಥ್‌ನಲ್ಲಿ ದಸರಾ ಸಮಯದಲ್ಲಿ ರಾವಣ ದಹನದ ವಿಚಾರದಲ್ಲಿ ವಿಶಿಷ್ಟವಾದ ಆಚರಣೆ ಹಾಗೂ ಭಿನ್ನ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ.

ಮಂದಸೌರ್ (ಮಧ್ಯಪ್ರದೇಶ) ರಾವಣನ ಅತ್ತೆಮನೆ:

ಮಧ್ಯಪ್ರದೇಶದ ಮಂದಸೌರ್ ನಗರವು ರಾವಣನಿಗೆ ಸಂಬಂಧಿಸಿದ ನಂಬಿಕೆಗಳಿಂದಾಗಿ ಅತ್ಯಂತ ವಿಶೇಷವೆನಿಸಿದೆ. ಸ್ಥಳೀಯ ಸಂಪ್ರದಾಯಗಳ ಪ್ರಕಾರ, ಮಂದಸೌರ್ ಅನ್ನು ರಾವಣನ ಪತ್ನಿ ಮಂಡೋದರಿಯ ತವರು ಮನೆ ಎಂದು ಪರಿಗಣಿಸಲಾಗುತ್ತದೆ. ಈ ಸಂಬಂಧದ ಕಾರಣದಿಂದ ಇಲ್ಲಿನ ಕೆಲವು ಸ್ಥಳೀಯರು ರಾವಣನನ್ನು ತಮ್ಮ ಊರಿನ ಅಳಿಯನೆಂದು ಭಾವಿಸುತ್ತಾರೆ. ಮಂಡೋದರಿಯ ಮೂಲಕ ಮಂದಸೌರ್‌ನೊಂದಿಗೆ ಬೆಸೆದಿರುವ ಈ ನಂಟಿನಿಂದಾಗಿ ಇಲ್ಲಿ ರಾವಣನ ಬಗ್ಗೆ ಗೌರವದ ಭಾವನೆಯಿದೆ. ಹೀಗಾಗಿ ಇಲ್ಲಿ ರಾವಣನನ್ನು ಸುಡುವ ಬದಲು ಆತನನ್ನು ಪೂಜಿಸುವ ಅಥವಾ ಆತನ ಸಾವಿಗೆ ಶೋಕಿಸುವ ವಿಭಿನ್ನ ಪದ್ಧತಿ ಚಾಲ್ತಿಯಲ್ಲಿದೆ.

ಇದನ್ನೂ ಓದಿ: ನವರಾತ್ರಿಯ 9 ದಿನಗಳ ಮಹತ್ವವೇನು? ನವದುರ್ಗೆಯ ಒಂಬತ್ತು ರೂಪಗಳ ವಿಶೇಷತೆ ತಿಳಿಯಿರಿ

ಜೋಧಪುರ (ರಾಜಸ್ಥಾನ):

ರಾಜಸ್ಥಾನದ ಜೋಧಪುರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾವಣನಿಗೆ ಸಂಬಂಧಿಸಿದ ವಿಶೇಷ ಆಚರಣೆಗಳಿವೆ. ಜೋಧಪುರದ ಮಂಡೋರ್ ಪ್ರದೇಶದಲ್ಲಿ ರಾವಣನಿಗೆಂದೇ ಮೀಸಲಾದ ದೇವಾಲಯಗಳಿವೆ. ಇಲ್ಲಿನ ನಗರ ಬ್ರಾಹ್ಮಣ ಸಮುದಾಯದ ಕೆಲವು ಜನರು ತಮ್ಮನ್ನು ರಾವಣನ ವಂಶಸ್ಥರೆಂದು ನಂಬಿಕೊಂಡಿದ್ದಾರೆ. ಆದ್ದರಿಂದ ಅವರು ದಸರಾ ದಿನದಂದು ರಾವಣನ ಪ್ರತಿಕೃತಿ ದಹನ ಮಾಡುವ ಬದಲಿಗೆ ಆತನನ್ನು ವಿಶೇಷವಾಗಿ ಪೂಜಿಸುತ್ತಾರೆ.

ಮಹಾರಾಷ್ಟ್ರದ ಕೆಲವು ಬುಡಕಟ್ಟು ಪ್ರದೇಶಗಳು:

ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಅಮರಾವತಿ ಮತ್ತು ಗಡ್ಚಿರೋಲಿಯಲ್ಲಿ ಗೋಂಡ್ ಹಾಗೂ ಕೊರ್ಕು ಮುಂತಾದ ಬುಡಕಟ್ಟು ಸಮುದಾಯಗಳ ವಿಶಿಷ್ಟ ನಂಬಿಕೆಗಳು ಗಮನ ಸೆಳೆಯುತ್ತವೆ. ಈ ಸಮುದಾಯದ ಕೆಲವು ಜನ ತಮ್ಮ ಪೌರಾಣಿಕ ನಂಬಿಕೆಗಳ ಆಧಾರದ ಮೇಲೆ ರಾವಣ ಅಥವಾ ಆತನ ಮಗ ಮೇಘನಾಥನನ್ನು ತಮ್ಮ ಪೂಜ್ಯ ಪೂರ್ವಜರು ಅಥವಾ ದೈವಿಕ ವ್ಯಕ್ತಿಗಳೆಂದು ಪರಿಗಣಿಸುತ್ತಾರೆ. ಪರಿಣಾಮವಾಗಿ, ಈ ಪ್ರದೇಶಗಳಲ್ಲಿ ದಸರಾ ಹಬ್ಬದಂದು ರಾವಣ ದಹನ ಮಾಡುವ ಸಂಪ್ರದಾಯವನ್ನು ಅನುಸರಿಸುವುದಿಲ್ಲ, ಬದಲಿಗೆ ತಮ್ಮದೇ ಆದ ಸ್ಥಳೀಯ ಸಂಪ್ರದಾಯಗಳನ್ನು ಆಚರಿಸುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:48 pm, Thu, 15 October 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us