AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2023: ನವರಾತ್ರಿಯ ಐದನೇ ದಿನ: ಸ್ಕಂದಮಾತೆಯ ಹಿನ್ನೆಲೆಯೇನು? ಪೂಜಾ ಮಹತ್ವವೇನು?

ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಣ ಮಾಡುವ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದ ಮಾತೆ ಎನ್ನುತ್ತಾರೆ. ಭಕ್ತರು ಈ ತಾಯಿಯ ಮಂತ್ರವನ್ನು ಜಪಿಸಿದರೆ ಶೀಘ್ರ ಫಲಗಳನ್ನು ಪಡೆಯಬಹುದು.

Navratri 2023: ನವರಾತ್ರಿಯ ಐದನೇ ದಿನ: ಸ್ಕಂದಮಾತೆಯ ಹಿನ್ನೆಲೆಯೇನು? ಪೂಜಾ ಮಹತ್ವವೇನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 19, 2023 | 6:15 AM

Share

ಪಂಚಮಿ ತಿಥಿಯಂದು ಅಂದರೆ ನವರಾತ್ರಿಯ ಐದನೇ ದಿನ ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಮುರುಗನ್‌. ಕಾರ್ತಿಕೇಯನ ತಾಯಿಯೇ ಸ್ಕಂದ ಮಾತೆ. ಹಾಗಾಗಿ ಭಗವಾನ್‌ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ ‘ಸ್ಕಂದಮಾತಾ’ ಎಂದು ಪ್ರಸಿದ್ಧಳಾಗಿದ್ದಾಳೆ. ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ ರೂಪದಲ್ಲಿ ಈ ದೇವಿಯು ಕಾಣಿಸಿಕೊಳ್ಳುತ್ತಾಳೆ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದದ ಜೊತೆಗೆ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು. ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರನ್ನು ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಈ ಅವತಾರದಲ್ಲಿರುವ ಮಾತೆಯನ್ನು ಪೂಜಿಸುವುದರಿಂದ ಭಕ್ತರು ತಮ್ಮ ಎಲ್ಲಾ ಕಷ್ಟಗಳಿಂದ ಮುಕ್ತರಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಇದೆ. ಹಾಗಾದರೆ ಸ್ಕಂದ ಮಾತೆಯನ್ನು ಯಾರು, ಏಕೆ ಪೂಜಿಸಬೇಕು? ಯಾವ ಮಂತ್ರ ಜಪಿಸಬೇಕು? ಇಲ್ಲಿದೆ ಮಾಹಿತಿ.

ಈ ದಿನದ ಹಿನ್ನೆಲೆಯೇನು?

ತಾರಕಾಸುರ ಎನ್ನುವ ರಾಕ್ಷಸನನ್ನು ಸಂಹಾರ ಮಾಡುವುದಕ್ಕೆ ದೇವಿ ಸ್ಕಂದಳಿಗೆ ಜನ್ಮ ಕೊಡುತ್ತಾಳೆ. ಅದಕ್ಕಾಗಿಯೇ ಈಕೆಯನ್ನು ಸ್ಕಂದಮಾತಾ ಎಂದು ಕರೆಯಲಾಗುತ್ತದೆ. ಇನ್ನು ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಣ ಮಾಡುವ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದ ಮಾತೆ ಎನ್ನುತ್ತಾರೆ. ಭಕ್ತರು ಈ ತಾಯಿಯ ಮಂತ್ರವನ್ನು ಜಪಿಸಿದರೆ ಶೀಘ್ರ ಫಲಗಳನ್ನು ಪಡೆಯಬಹುದು. ನವರಾತ್ರಿಯ ಪೂಜೆಯಲ್ಲಿ 5ನೇ ದಿನದ ಮಹತ್ವದ ಕುರಿತು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಈ ದಿನ ಸ್ಕಂದಮಾತಾ ಪೂಜೆಯಿಂದ ಆದಿಶಕ್ತಿಯ ಸಂಪೂರ್ಣ ಕೃಪೆ ಮತ್ತು ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ: 52 ದೇವಿ ಶಕ್ತಿಪೀಠಗಳು -ಈ ನವರಾತ್ರಿಯಲ್ಲಿ ಅವುಗಳನ್ನು ಭೇಟಿ ಮಾಡಿ.. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ

ಸ್ಕಂದ ಮಾತೆಯನ್ನು ಏಕೆ ಪೂಜಿಸಬೇಕು?

ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುವುದರಿಂದ ಜನ್ಮ ಕುಂಡಲಿ ಅಥವಾ ಜಾತಕದಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯ ಆರಾಧನೆಯಿಂದ ನಿವಾರಿಸಿಕೊಳ್ಳಬಹುದು. ಶುದ್ಧ ಮನಸ್ಸು, ಭಕ್ತಿಯಿಂದ ಯಾರು ದೇವಿಯ ಆರಾಧನೆ ಮಾಡುತ್ತಾರೋ ಅವರಿಗೆ ಸಂಪತ್ತು ಹಾಗೂ ಸಮೃದ್ಧಿ ಪ್ರಾಪ್ತವಾಗುತ್ತದೆ. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ದೇವಿಯ ಆರಾಧನೆ ಮಾಡಬೇಕು.

ಸ್ಕಂದ ಮಾತೆಯ ಅನುಗ್ರಹ ಪಡೆಯಲು ಯಾವ ಮಂತ್ರವನ್ನು ಜಪಿಸಬೇಕು?

– ಓಂ ದೇವಿ ಸ್ಕಂದಮಾತಾಯ ನಮಃ

– ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ

– ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ

– ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ”

– ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ

-ಓಂ ನಿತ್ಯಾಯ ನಮಃ

– ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಮ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್

– ಓಂ ಹ್ರೀಂ ಮಹಾದುರ್ಗಾಯ ನಮಃ

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ