
ನವೆಂಬರ್ 27, ಶುಕ್ರವಾರದಂದು ಬರುವ ಕಾರ್ತಿಕ ಬಹುಳ ಗಣಾಧಿಪ ಸಂಕಷ್ಟಹರ ಚತುರ್ಥಿಯು ಅತ್ಯಂತ ಶಕ್ತಿಶಾಲಿಯಾದ ದಿನವಾಗಿದೆ. ‘ಗಣಾಧಿಪ’ ಎಂದರೆ ಗಣಗಳಿಗೆಲ್ಲ ಅಧಿಪತಿಯಾದವನು ಎಂದರ್ಥ. ಅಸಾಧ್ಯವಾದ ಕಾರ್ಯಗಳನ್ನೂ ಸಾಧ್ಯವಾಗಿಸುವ ಶಕ್ತಿ ಈ ವ್ರತಕ್ಕಿದೆ ಮತ್ತು ಪದೇ ಪದೇ ಎದುರಾಗುವ ಕಷ್ಟಗಳಿಗೆ ಪರಿಹಾರ ದೊರೆಯುತ್ತದೆ ಎಂದು ನಂಬಲಾಗಿದೆ.
ಅಯೋಧ್ಯೆಯ ರಾಜ ದಶರಥನು ಒಮ್ಮೆ ಬೇಟೆಯಾಡಲು ಕಾಡಿಗೆ ಹೋದಾಗ, ನದಿಯ ದಡದಲ್ಲಿ ನೀರು ತುಂಬಿಸುತ್ತಿದ್ದ ಶ್ರವಣ ಕುಮಾರನನ್ನು ಪ್ರಾಣಿಯೆಂದು ಭ್ರಮಿಸಿ ಶಬ್ದವೇಧಿ ಬಾಣದಿಂದ ಕೊಂದುಹಾಕುತ್ತಾನೆ. ಇದರಿಂದ ದುಃಖಿತರಾದ ಶ್ರವಣ ಕುಮಾರನ ಅಂಧ ತಂದೆ-ತಾಯಿಗಳು, “ನಾವು ಪುತ್ರಶೋಕದಿಂದ ಪ್ರಾಣ ಬಿಡುತ್ತಿರುವಂತೆ, ನೀನೂ ಕೂಡ ಮುಂದೆ ಪುತ್ರಶೋಕದಿಂದಲೇ ಮರಣ ಹೊಂದುವೆ” ಎಂದು ದಶರಥನಿಗೆ ಶಾಪ ನೀಡುತ್ತಾರೆ. ಶಾಪದ ಬಳಿಕ ಸಂತಾನವಿಲ್ಲದೆ ಚಿಂತಿತನಾದ ದಶರಥನು ಋಷಿಗಳ ಸಲಹೆಯಂತೆ ಪುತ್ರಕಾಮೇಷ್ಟಿ ಯಾಗವನ್ನು ನೆರವೇರಿಸುತ್ತಾನೆ. ಇದರ ಫಲವಾಗಿ ವಿಷ್ಣುವು ದಶರಥನ ಮಗನಾಗಿ (ಶ್ರೀರಾಮ) ಮತ್ತು ಲಕ್ಷ್ಮಿಯು ಸೀತೆಯಾಗಿ ಭೂಮಿಯಲ್ಲಿ ಅವತರಿಸುತ್ತಾರೆ.
ಮುಂದೆ ಶ್ರೀರಾಮ, ಹನುಮಂತ, ಸುಗ್ರೀವ ಮತ್ತು ವಾನರ ಸೇನೆಯು ಸೀತಾಮಾತೆಯನ್ನು ಹುಡುಕುತ್ತಾ ದಕ್ಷಿಣದ ಸಮುದ್ರ ತೀರಕ್ಕೆ ಬರುತ್ತಾರೆ. ಜಟಾಯುವಿನ ಅಣ್ಣ ಸಂಪಾತಿಯು ಲಂಕೆಯಲ್ಲಿ ಸೀತಾಮಾತೆ ಇರುವುದನ್ನು ತಿಳಿಸುತ್ತಾನೆ. ಸಮುದ್ರ ದಾಟಲು ಹನುಮಂತನಿಗೆ ಸಂಕಷ್ಟಹರ ಗಣೇಶ ಚತುರ್ಥಿ ವ್ರತವನ್ನು ಭಕ್ತಿಯಿಂದ ಆಚರಿಸುವಂತೆ ಸಂಪಾತಿ ಸೂಚಿಸುತ್ತಾನೆ. ಆ ವ್ರತದ ಮಹಿಮೆಯಿಂದ ಹನುಮಂತನ ಸುಪ್ತ ಶಕ್ತಿ ಜಾಗೃತಗೊಂಡು ವಿಶಾಲ ಸಮುದ್ರವನ್ನು ದಾಟಿ ಲಂಕೆಯನ್ನು ತಲುಪುತ್ತಾನೆ. ಹನುಮಂತನಿಗೆ ಮೊದಲೇ ಆ ಶಕ್ತಿ ಇದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಪ್ರೇರಣೆ ಬೇಕಿತ್ತು; ಹಾಗೆಯೇ ನಮ್ಮ ಸಮಸ್ಯೆಗಳಿಗೆ ಪರಿಹಾರವಿದ್ದರೂ ಅದು ತಿಳಿಯದಾಗ ದೈವಶಕ್ತಿಯ ಆಸರೆ ಬೇಕಾಗುತ್ತದೆ.
ಇದನ್ನೂ ಓದಿ: ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರಾ? ಹಾಗಾದರೆ ಈ 9 ಗಂಟುಗಳ ನಿಯಮ ಮತ್ತು ಶುಭ ಸಮಯದ ಬಗ್ಗೆ ತಪ್ಪದೇ ತಿಳಿದುಕೊಳ್ಳಿ
ಸಂಕಷ್ಟಹರ ಚತುರ್ಥಿಯ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವರಿಗೆ ಕೆಂಪು ಹೂವು, ಗರಿಕೆ ಅಥವಾ ಎಕ್ಕದ ಹೂವನ್ನು ಅರ್ಪಿಸಬೇಕು. ಜೀವನದಲ್ಲಿ ನಿಮಗೆ ಏನು ನೆರವೇರಬೇಕು (ಮ್ಯಾನಿಫೆಸ್ಟ್ ಆಗಬೇಕು) ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು, ಕೈಯಲ್ಲಿ ಅಕ್ಷತೆ ಮತ್ತು ನೀರು ಇಟ್ಟುಕೊಂಡು ಪ್ರಾರ್ಥಿಸಿ ದೇವರಿಗೆ ಅರ್ಪಿಸಬೇಕು. ನಂತರ ದೇವರ ಮುಂದೆ ದೀಪ ಹಚ್ಚಿ ‘ಓಂ ಗಂ ಗಣಪತಯೇ ನಮಃ’ ಎಂಬ ಮಂತ್ರವನ್ನು 108 ಬಾರಿ ಭಕ್ತಿಯಿಂದ ಜಪಿಸಬೇಕು.
ರಾತ್ರಿ ಚಂದ್ರೋದಯವಾಗುವವರೆಗೆ (ಸುಮಾರು 8:30 ರವರೆಗೆ) ಸಾಧ್ಯವಾದರೆ ಕೇವಲ ನೀರು ಕುಡಿದು ಅಥವಾ ಫಲಹಾರ ಸೇವಿಸಿ ಉಪವಾಸ ಆಚರಿಸಬೇಕು. ಚಂದ್ರ ದರ್ಶನದ ನಂತರ ಬೆಳ್ಳಿ ಅಥವಾ ಸ್ಟೀಲ್ ಲೋಟದಲ್ಲಿ ನೀರು, ಸ್ವಲ್ಪ ಅಕ್ಷತೆ, ಕುಂಕುಮ, ಅರಿಶಿನ ಮತ್ತು ಒಂದು ಬಿಳಿ ಹೂವನ್ನು ಹಾಕಿ, ಚಂದ್ರನನ್ನು ನೋಡುತ್ತಾ ಒಳ್ಳೆಯದಾಗಲಿ ಎಂದು ಅರ್ಘ್ಯ ಬಿಡಬೇಕು. ಅದರ ನಂತರ ಊಟ ಮಾಡಿ ಉಪವಾಸವನ್ನು ಮುರಿಯುವುದರಿಂದ ವ್ರತವು ಪೂರ್ಣಗೊಳ್ಳುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:08 am, Fri, 27 November 26