ಗಣಪತಿಯನ್ನೇ ಪರಬ್ರಹ್ಮ ಎಂದು ಆರಾಧಿಸುವ ಪಂಥ ಗಾಣಪತ್ಯ: ಶ್ರೀನಗರದ ಗಾಣಪತ್ಯರ್ ದೇಗುಲಕ್ಕೂ ಅಫ್ಘಾನಿಸ್ತಾನಕ್ಕೂ ಇದೆ ನಂಟು

ಗಣಪತಿಯನ್ನೇ ಪರಬ್ರಹ್ಮ ಎಂದು ಆರಾಧಿಸುವ ಪಂಥ ಗಾಣಪತ್ಯ: ಶ್ರೀನಗರದ ಗಾಣಪತ್ಯರ್ ದೇಗುಲಕ್ಕೂ ಅಫ್ಘಾನಿಸ್ತಾನಕ್ಕೂ ಇದೆ ನಂಟು
ಶ್ರೀನಗರದ ಗಾಣಪತ್ಯರ್ ದೇಗುಲದಲ್ಲಿರುವ ಗಣಪತಿ ಮೂರ್ತಿ (Pic Courtesy: www.shehjar.com)

Ganesh Chaturthi 2021: 1989ರಲ್ಲಿ ಅಫ್ಘಾನಿಸ್ತಾನದಿಂದ ರಷ್ಯಾ ಸೇನೆ ಹಿಂದೆ ಸರಿದು, ತಾಲಿಬಾನ್ ಆಡಳಿತ ಜಾರಿಗೆ ಬರುವುದರೊಂದಿಗೆ ಕಾಶ್ಮೀರದ ಪರಿಸ್ಥಿತಿಯೂ ಬದಲಾಯಿತು. ಈ ದೇಗುಲದ ಸುತ್ತಮುತ್ತಲ ವಾತಾವರಣವೂ ಅಸಹನೀಯ ಎನಿಸಿತು.

TV9kannada Web Team

| Edited By: sadhu srinath

Sep 10, 2021 | 6:14 AM


ಭಾರತದ ಅತ್ಯಂತ ಜನಪ್ರಿಯ ದೇವರು ಗಣಪತಿ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಗುಜರಾತ್​ನಿಂದ ಅರುಣಾಚಲಪ್ರದೇಶದವರೆಗೆ ಎಲ್ಲ ರಾಜ್ಯಗಳಲ್ಲಿಯೂ ಗಣಪತಿಯಿದ್ದಾನೆ. ಸೊಂಡಿಲು ಮುಖದ ಈ ಆಪ್ತದೈವ ಭಾರತೀಯರ ಪಾಲಿಗೆ ಇಷ್ಟದೈವವೂ ಹೌದು. ತಂದೆಯಾಗಿ, ಗುರುವಾಗಿ ಗಣಪತಿಯನ್ನು ಭಾವಿಸುವವರು ಹಲವರು. ಈ ಗಣಪತಿಯನ್ನೇ ಮುಖ್ಯ ದೈವವಾಗಿ ಹೊಂದಿದ್ದ, ಪರಬ್ರಹ್ಮ ಎಂದು ಪರಿಭಾವಿಸಿ ಪೂಜಿಸುತ್ತಿದ್ದ ಪಂಥವೊಂದು ಪ್ರಾಚೀನ ಭಾರತದಲ್ಲಿತ್ತು. ಗಾಣಪತ್ಯ ಪಂಥ ಎನ್ನಲಾಗುವ ಈ ಸಮುದಾಯದ ಆಚರಣೆಯ ಹೆಚ್ಚಿನ ವಿವರಗಳು ಈಗ ಲಭ್ಯವಿಲ್ಲ. ಆದರೆ ಈ ಪಂಥದ ಹೆಸರು ಹೊತ್ತ ಗಣಪತಿ ದೇಗುಲವೊಂದು ಕಾಶ್ಮೀರದಲ್ಲಿದೆ. ಇಂದಿಗೂ ಗಾಣಪತ್ಯ ಪಂಥದ ಜೀವಂತ ಕುರುಹಾಗಿ ಆ ದೇಗುಲ ಕಂಗೊಳಿಸುತ್ತಿದೆ.

ಗಣಪತಿಯನ್ನೇ ದೇವಾಧಿದೇವ ಎಂದ ನಂಬಿಕೊಂಡಿದ್ದ ಈ ಪಂಥವು 10ನೇ ಶತಮಾನದಲ್ಲಿ ಜನಪ್ರಿಯವಾಗಿತ್ತು.  ದೇಶದ ಬಹುತೇಕ ಭಾಗಗಳಲ್ಲಿ ಪ್ರಭಾವಿಯೂ ಆಗಿತ್ತು. ಇಂದು ಗಣೇಶ ಜನಪ್ರಿಯ ದೇವರಾಗಲು, ಯಾವುದೇ ಕೆಲಸ ಆರಂಭಿಸುವ ಮೊದಲು ಗಣಪತಿ ಪೂಜೆ ನಡೆಸಬೇಕು ಎನ್ನುವ ಪದ್ಧತಿ ಚಾಲ್ತಿಗೆ ಬರಲು ಈ ಪಂಥದ ಪ್ರಭಾವವೂ ಮುಖ್ಯ ಕಾರಣ ಎಂದು ವಿದ್ವಾಂಸರು ಹೇಳುತ್ತಾರೆ.

ಶ್ರೀನಗರದಲ್ಲಿರುವ ಗಾಣಪತ್ಯರ್ ಸ್ವಾಮಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಾಚೀನ ಭಾರತದಲ್ಲಿ ಸಂಚರಿಸಿದ್ದ ಹಲವು ಪ್ರವಾಸಿಗರು ಈ ದೇಗುಲದ ಬಗ್ಗೆ ತಮ್ಮ ದಿನಚರಿಯಲ್ಲಿ ಉಲ್ಲೇಖಿಸಿದ್ದಾರೆ. ಗಾಣಪತ್ಯ ಪಂಥಕ್ಕೆ ಸೇರಿದವರು ಸೇರುತ್ತಿದ್ದ ಗಣಪತಿ ವಿಹಾರ ಮೊದಲು ಇಲ್ಲಿತ್ತು ಎಂದು ಹೇಳುತ್ತಾರೆ. ಅಂಥದ್ದೊಂದು ವಿಹಾರದಲ್ಲಿ ಚೀನಾ ಪ್ರವಾಸಿಗ ಹ್ಯೂಯೆನ್ ತ್ಸಾಂಗ್ ಸಹ ಕೆಲ ಸಮಯ ತಂಗಿದ್ದನಂತೆ. ಭಾರತದ ವಿವಿಧೆಡೆ ಪತ್ತೆಯಾಗಿರುವ ಪ್ರಾಚೀನ ಹಸ್ತಪ್ರತಿಗಳಲ್ಲಿಯೂ ಈ ದೇಗುಲದ ಉಲ್ಲೇಖಗಳಿವೆ.

Ganapatyar-Temple

ಗಾಣಪತ್ಯರ್ ದೇಗುಲದ ಮುಂಭಾಗ (Pic Courtesy: www.shehjar.com)

1991ರಿಂದಾಚೆಗೆ ಎಲ್ಲವೂ ಬದಲಾಯ್ತು
ಶ್ರೀನಗರದಲ್ಲಿ ಪ್ರಸ್ತುತ ತಕ್ಕಮಟ್ಟಿಗೆ ಶಾಂತಿ ನೆಲೆಸಿರುವುದಿಂದ ದೇಗುಲಕ್ಕೆ ಜನರು ಬಂದು ಹೋಗುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮೊದಲ ಬಾರಿಗೆ ಅಧಿಕಾರಕ್ಕೆ ಬರುವ ಮೊದಲು, ಅಂದರೆ 1991ಕ್ಕೂ ಹಿಂದಿನ ದಿನಗಳಲ್ಲಿ ಇದು ಚಟುವಟಿಕೆಯ ಕೇಂದ್ರಬಿಂದುವಾಗಿತ್ತು. ಸೌಹಾರ್ದದ ವಿಶಿಷ್ಟ ಮಾದರಿ ಎನಿಸಿಕೊಂಡಿತ್ತು. ಕಾಶ್ಮೀರಿ ಪಂಡಿತರೇ ಹೆಚ್ಚಿನ ಸಂಖ್ಯೆಯಲ್ಲಿ ಈ ದೇಗುಲದ ಸುತ್ತಮುತ್ತಲೂ ನೆಲೆಸಿದ್ದರು. ಹಿಂದೂಗಳ ಆರಾಧನಾ ಸ್ಥಳವಾದ ಈ ದೇಗುಲದ ರಕ್ಷಣೆಯ ಜವಾಬ್ದಾರಿ ಒಂದು ಮುಸ್ಲಿಂ ಕುಟುಂಬಕ್ಕೆ ಸೇರಿತ್ತು. ವೃತ್ತಿಯಲ್ಲಿ ದರ್ಜಿಗಳಾದ ಅವರು,  ಪ್ರತಿ ಮುಂಜಾನೆ ದೇಗುಲದ ಬೀಗ ತೆಗೆಯುವ ಮತ್ತು ಪ್ರತಿಸಂಜೆ ಬೀಗ ಹಾಕುವ ಕರ್ತವ್ಯವನ್ನು ಶ್ರದ್ಧೆ ಮತ್ತು ನಿಸ್ಪೃಹತೆಯಿಂದ ನಿರ್ವಹಿಸುತ್ತಿದ್ದರು.

1989ರಲ್ಲಿ ಅಫ್ಘಾನಿಸ್ತಾನದಿಂದ ರಷ್ಯಾ ಸೇನೆ ಹಿಂದೆ ಸರಿದು, ತಾಲಿಬಾನ್ ಆಡಳಿತ ಜಾರಿಗೆ ಬರುವುದರೊಂದಿಗೆ ಕಾಶ್ಮೀರದ ಪರಿಸ್ಥಿತಿಯೂ ಬದಲಾಯಿತು. ಇಸ್ಲಾಂ ಮತಾಂಧ ಭಯೋತ್ಪಾದಕರ ಅಟ್ಟಹಾಸ ಮೇರೆ ಮೀರಿದಾಗ ಕಾಶ್ಮೀರಿ ಪಂಡಿತರಿಗೆ ಬದುಕು ಅಸಹನೀಯ ಎನಿಸಿತು. ಅವರು ತಮ್ಮ ಬೇರುಗಳನ್ನು ಕಳಚಿಕೊಂಡು ಸ್ವದೇಶದಲ್ಲಿಯೇ ನಿರಾಶ್ರಿತರಾದರು. ಈ  ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂಬುದಕ್ಕೆ ಕುರುಹಾಗಿ ಇಂದಿಗೂ ಈ ಪ್ರದೇಶದಲ್ಲಿ ಕಂಡುಬರುವ ಹಲವು ಪಾಳುಬಿದ್ದ ಮನೆಗಳ ಮೇಲೆ ಕಾಶ್ಮೀರಿ ಪಂಡಿತರ ಹೆಸರುಗಳು ಕಾಣಸಿಗುತ್ತವೆ. ಸುಟ್ಟುಹೋದ, ಪಾಳುಬಿದ್ದ ಮನೆ-ಅಂಗಡಿಗಳು 90ರ ದಶಕದ ಭಯೋತ್ಪಾದಕರ ಕ್ರೌರ್ಯದ ಕಥೆಗಳಿಗೆ ಸಾಕ್ಷಿಯಾಗಿವೆ.

Ganapatyar-Temple

ಗಾಣಪತ್ಯರ್ ದೇಗುಲದ ಮೆಲೆಯೂ ಹಲವು ಬಾರಿ ಭಯೋತ್ಪಾದಕರ ದಾಳಿ ನಡೆದಿದೆ. (Pic Courtesy: www.shehjar.com)

ದೇಗುಲದ ಮೇಲೆ ಭಯೋತ್ಪಾದಕರ ದಾಳಿ
ಈ ದೇಗುಲದ ಮೇಲೆಯೂ ಹಲವು ಬಾರಿ ಭಯೋತ್ಪಾದಕರ ದಾಳಿ ನಡೆದಿದೆ. ದೇವಾಲಯದ ಗೋಡೆಗಳ ಮೇಲೆ ಇಂದಿಗೂ ಗುಂಡಿನ ಗುರುತುಗಳು ಕಾಣಸಿಗುತ್ತವೆ. ಸಿಆರ್​ಪಿಎಫ್ ಸಿಬ್ಬಂದಿಯನ್ನು ದೇಗುಲದ ಭದ್ರತೆ ನಿಯೋಜಿಸಿ, ಸರ್ಕಾರ ಈ ಪವಿತ್ರ ಸ್ಥಳವನ್ನು ರಕ್ಷಿಸಿತ್ತು. ದೇಗುಲದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದ ಗುರುತುಗಳು ಇಂದಿಗೂ ಅಲ್ಲಿನ ಗೋಡೆಗಳ ಮೇಲಿವೆ.

ಇದಕ್ಕೂ ಮೊದಲು, ಅಂದರೆ ಕಾಶ್ಮೀರ ಕಣಿವೆ ಅಫ್ಘಾನಿ ದೊರೆಗಳ ಆಡಳಿತದಲ್ಲಿದ್ದಾಗಲೂ ಈ ದೇಗುಲದ ಮುಖ್ಯ ವಿಗ್ರಹದ ಮೇಲೆ ಅವರ ಕೆಂಗಣ್ಣು ಬಿದ್ದಿತ್ತು.ಮೂಲ ವಿಗ್ರಹವನ್ನು ಒಡೆದು ಹಾಕಬೇಕು ಎಂದುಕೊಂಡಿದ್ದರು. ಇದನ್ನು ಅರಿತ ಸ್ಥಳೀಯರು ವಿಗ್ರಹವನ್ನು ದೇವಸ್ಥಾನದಿಂದ ಹೊರಗೆ ತಂದು ಝೀಲಂ ನದಿಯೊಳಗೆ ಬಚ್ಚಿಟ್ಟಿದ್ದರು. ಈ ಘಟನೆ ನಡೆದ ಸುಮಾರು 90 ವರ್ಷಗಳ ನಂತರ, ಅಂದರೆ ಕಾಶ್ಮೀರವು ಡೋಗ್ರಾ ರಾಜಮನೆತನದ ಆಧಿಪತ್ಯಕ್ಕೆ ಒಳಪಟ್ಟಾಗ (1846) ವಿಗ್ರಹವನ್ನು ಹೊರತೆಗೆದು ದೇಗುಲ ನಿರ್ಮಿಸಲಾಯಿತು.

ಮಾಹಿತಿ: www.britannica.com, www.jammukashmirnow.com, www.thewire.in

(Ganapatyar temple in Srinagar has history of 200 years old has peculiar relations with Afghanistan)

ಇದನ್ನೂ ಓದಿ: Ganesha Chaturthi 2021: ಗಣೇಶ ಚತುರ್ಥಿ ಆಚರಣೆಯ ಪೂಜಾ ವಿಧಾನ ಮತ್ತು ಶುಭ ಮುಹೂರ್ತ

ಇದನ್ನೂ ಓದಿ: Ganesh Chaturthi 2021 Recipe: ಗಣೇಶ ಹಬ್ಬಕ್ಕೆ ಹಾಸನ ಸ್ಟೈಲ್​ ಮೋದಕ ಮಾಡಿ ರುಚಿ ಸವಿಯಿರಿ


Follow us on

Related Stories

Most Read Stories

Click on your DTH Provider to Add TV9 Kannada