Ganesh Chaturthi 2021: ಎಲ್ಲ ದೇವರಿಗಿಂತ ಮೊದಲು ಗಣಪತಿಗೇ ಪೂಜೆ ಸಲ್ಲಿಸುವುದೇಕೆ?

Ganesh Utsav | ಪ್ರಥಮ ಪೂಜಿತ ಎನಿಸಿರುವ ವಿಘ್ನ ವಿನಾಶಕನಿಗೆ ಯಾವುದೇ ಶುಭ ಸಮಾರಂಭದಲ್ಲಿ ಪ್ರಥಮ ಪೂಜೆ ಸಲ್ಲುತ್ತದೆ. ಭಾರತೀಯ ಪುರಾಣಗಳ ಪ್ರಕಾರ, ಗಣಪತಿಗೆ ಮೊದಲ ಪೂಜೆ ಸಲ್ಲಿಸಲು ಕಾರಣವೇನೆಂಬ ಬಗ್ಗೆ ಎರಡು ಕತೆಗಳಿವೆ.

Ganesh Chaturthi 2021: ಎಲ್ಲ ದೇವರಿಗಿಂತ ಮೊದಲು ಗಣಪತಿಗೇ ಪೂಜೆ ಸಲ್ಲಿಸುವುದೇಕೆ?
ಶುಕ್ರವಾರ ವಿಶ್ವದೆಲ್ಲೆಡೆ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಇನ್ನು ದೇಶದ ಹಲವೆಡೆ ಗಣಪತಿ ಉತ್ಸವದ ಸಂಭ್ರಮ ಮುಂದುವರೆದಿದೆ. ಈ ಬಾರಿ ಕೊರೋನಾ ಕಾರಣದಿಂದ ಬಹುತೇಕರು ಸರಳವಾಗಿ ಹಬ್ಬ ಆಚರಿಸಿಕೊಂಡಿದ್ದರು.

ಶುಕ್ರವಾರ ಗಣೇಶ ಚತುರ್ಥಿ. ಇಂದು ಗೌರಿ ಹಬ್ಬ (Gowri Festival) ಇರುವುದರಿಂದ ಈಗಾಗಲೇ ಎಲ್ಲೆಡೆ ಹಬ್ಬದ ಸಂಭ್ರಮ ಹೆಚ್ಚಾಗಿದೆ. ಪ್ರತಿವರ್ಷವೂ ಗಣಪತಿ ಉತ್ಸವವನ್ನು (Ganesh Utsav) ದೇಶಾದ್ಯಂತ ಸಂಭ್ರಮ-ಸಡಗರಗಳಿಂದ ಆಚರಿಸಲಾಗುತ್ತದೆ. ಈ ವರ್ಷ ಕೊರೊನಾ ಅಟ್ಟಹಾಸವಿದ್ದರೂ ಗಣೇಶ ಚತುರ್ಥಿಯ (Ganesh Festival) ಸಂಭ್ರಮಕ್ಕೇನೂ ಕೊರತೆಯಾಗಿಲ್ಲ. ಸರಳವಾಗಿ, ತಮ್ಮ ಮನೆಗಳಲ್ಲಿ ಜನರು ಗಣೇಶ ಉತ್ಸವ ಆಚರಿಸುತ್ತಿದ್ದಾರೆ. ಆದರೆ, ಈ ಗಣಪನಿಗೆ ಎಲ್ಲ ದೇವರಿಗಿಂತ ಮೊದಲು ಪೂಜೆ ಸಲ್ಲಿಸುವುದೇಕೆ? ಪ್ರಥಮ ಪೂಜಿತ ಗಣೇಶನ ಕುರಿತ ಅಚ್ಚರಿಯ ಸಂಗತಿಗಳು ಇಲ್ಲಿವೆ.

ಹಿಂದೂ ದೇವರಲ್ಲಿ ಪ್ರಮುಖನಾಗಿರುವ ಗಣೇಶನ ಬಗ್ಗೆ ಸಾಕಷ್ಟು ರೋಚಕ ಕತೆಗಳಿವೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಗೋವಾ. ಒರಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸ್​ಗಢ, ಉತ್ತರ ಪ್ರದೇಶದಲ್ಲಿ ವೈಭವದಿಂದ ಗಣಪತಿ ಉತ್ಸವ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಣಪನಿಗೆ ವಿಶೇಷ ಸ್ಥಾನವಿದೆ. ಪ್ರಥಮ ಪೂಜಿತ ಎನಿಸಿರುವ ವಿಘ್ನ ವಿನಾಶಕನಿಗೆ ಯಾವುದೇ ಶುಭ ಸಮಾರಂಭದಲ್ಲಿ ಪ್ರಥಮ ಪೂಜೆ ಸಲ್ಲುತ್ತದೆ. ಭಾರತೀಯ ಪುರಾಣಗಳ ಪ್ರಕಾರ, ಗಣಪತಿಗೆ ಮೊದಲ ಪೂಜೆ ಸಲ್ಲಿಸಲು ಕಾರಣವೇನೆಂಬ ಬಗ್ಗೆ ಎರಡು ಕತೆಗಳಿವೆ. ಜ್ಞಾನ ಮತ್ತು ಬುದ್ಧಿವಂತಿಕೆಗೆ ಪ್ರಸಿದ್ಧನಾಗಿರುವ ಗಣಪತಿಯನ್ನು ಯಾವುದೇ ಶುಭ ಕಾರ್ಯಗಳಲ್ಲಿ ಮೊದಲು ಪೂಜಿಸಲಾಗುತ್ತದೆ.

ಒಂದು ಕತೆಯ ಪ್ರಕಾರ, ಶಿವನ ಪತ್ನಿ ಪಾರ್ವತಿ ಕೈಲಾಸದಲ್ಲಿ ಸ್ನಾನಕ್ಕೆ ಹೊರಟಿರುತ್ತಾಳೆ. ಆಗ ಗಣೇಶನ ಬಳಿ ತನ್ನ ಅಂತಃಪುರದ ಎದುರು ಕಾವಲು ಕಾಯಬೇಕೆಂದು ಆದೇಶಿಸುತ್ತಾಳೆ. ನಾನು ಸ್ನಾನ ಮಾಡಿ ಬರುವವರೆಗೂ ಯಾರನ್ನೂ ಒಳಗೆ ಬಿಡಬೇಡ ಎಂದು ಹೇಳುತ್ತಾಳೆ. ಆಗ ಅಮ್ಮನ ಮಾತಿನಂತೆ ಕಾವಲು ಕಾಯಲು ನಿಂತ ಗಣಪತಿ ಯಾರೂ ಒಳಗೆ ಹೋಗದಂತೆ ನೋಡಿಕೊಳ್ಳುತ್ತಿರುತ್ತಾನೆ. ಆಗ ಅಲ್ಲಿಗೆ ಶಿವ ಬರುತ್ತಾನೆ. ಶಿವ ಯಾರೆಂದು ತಿಳಿಯದ ಗಣೇಶ ನನ್ನ ತಾಯಿ ಯಾರನ್ನೂ ಒಳಗೆ ಬಿಡಬಾರದು ಎಂದು ಸೂಚಿಸಿದ್ದಾಳೆ. ಆಕೆ ಹೇಳುವವರೆಗೂ ನೀವು ಒಳಗೆ ಹೋಗುವಂತಿಲ್ಲ ಎಂದು ಬಾಗಿಲಿಗೆ ಅಡ್ಡ ನಿಲ್ಲುತ್ತಾನೆ. ಇದರಿಂದ ಕೋಪಗೊಂಡ ಶಿವ ಬಾಲ ಗಣಪನ ತಲೆಯನ್ನೇ ಕತ್ತರಿಸುತ್ತಾನೆ. ಸ್ನಾನ ಮುಗಿಸಿ ಹೊರಗೆ ಬಂದ ಪಾರ್ವತಿ ತನ್ನ ಮಗ ಗಣೇಶ ಸತ್ತು ಬಿದ್ದಿರುವುದನ್ನು ನೋಡಿ ಕೋಪಗೊಳ್ಳುತ್ತಾಳೆ. ಆಕೆಯ ಕೋಪಕ್ಕೆ ಇಡೀ ಕೇಲಾಸವೇ ನಡುಗುತ್ತದೆ. ಹೇಗಾದರೂ ಮಾಡಿ ನನ್ನ ಮಗನನ್ನು ಬದುಕಿಸಲೇಬೇಕೆಂದು ಆಕೆ ಗಣ ಶಿವನ ಬಳಿ ಪಟ್ಟು ಹಿಡಿಯುತ್ತಾಳೆ. ನನ್ನ ಮಗ ಬದುಕದಿದ್ದರೆ ಇಡೀ ಭೂಮಂಡಲವನ್ನೇ ನಾಶ ಮಾಡುವುದಾಗಿ ಎಚ್ಚರಿಸುತ್ತಾಳೆ.

ಇದರಿಂದ ಹೆದರಿದ ದೇವಾನುದೇವತೆಗಳು ಕೂಡ ಬಾಲ ಗಣಪತಿಯ ತಲೆಯನ್ನು ಜೋಡಿಸಲು ಪ್ರಯತ್ನ ಮಾಡುತ್ತಾರೆ. ಬಳಿಕ ಶಿವ ಆನೆ ಮರಿಯ ತಲೆಯನ್ನು ತಂದು ಗಣಪತಿಗೆ ಜೋಡಿಸಿ, ಬದುಕಿಸುತ್ತಾನೆ. ತನ್ನ ತಾಯಿಗೆ ನೀಡಿದ ಮಾತಿಗಾಗಿ ಪ್ರಾಣವನ್ನೇ ಕೊಡಲು ಸಿದ್ಧನಾದ ಗಣಪತಿಯನ್ನು ಎಲ್ಲ ದೇವರಿಗಿಂತ ಮೊದಲು ಪೂಜಿಸಬೇಕೆಂದು ಶಿವ ಆಶೀರ್ವದಿಸುತ್ತಾನೆ.

ಎರಡನೇ ಕತೆಯ ಪ್ರಕಾರ, ಗಣಪತಿ ಹಾಗೂ ಆತನ ಅಣ್ಣ ಸುಬ್ರಹ್ಮಣ್ಯನ ನಡುವೆ ಸ್ಪರ್ಧೆ ಏರ್ಪಡುತ್ತದೆ. ಆ ಸ್ಪರ್ಧೆಯಲ್ಲಿ ಶಿವ ಮತ್ತು ಪಾರ್ವತಿ ತಮ್ಮ ಮಕ್ಕಳಿಗೆ ಇಡೀ ಪ್ರಪಂಚವನ್ನು ಸುತ್ತಿ ಬರಲು ಸೂಚಿಸುತ್ತಾರೆ. ಹಾಗೇ, ಯಾರು ಮೊದಲು ಜಗತ್ತನ್ನು ಸುತ್ತಿ ಬರುತ್ತಾರೋ ಅವರು ಈ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ ಎಂದು ಹೇಳುತ್ತಾರೆ. ಮೂಷಿಕವಾಹನನಾದ ಗಣೇಶ ಹೇಗೂ ಈ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಸುಬ್ರಹ್ಮಣ್ಯ ತನ್ನ ವಾಹನವಾದ ನವಿಲನ್ನು ಏರಿ ವಿಶ್ವ ಪರ್ಯಟನೆಗೆ ತೆರಳುತ್ತಾನೆ. ಆದರೆ, ಗಣಪತಿ ತನ್ನ ತಂದೆ-ತಾಯಿಯರಾದ ಶಿವ ಹಾಗೂ ಪಾರ್ವತಿಯ ಸುತ್ತ ಸುತ್ತುತ್ತಾನೆ. ನೀವೇ ನನ್ನ ಪ್ರಪಂಚ ಎಂದು ಹೇಳುವ ಗಣಪತಿಯ ಬುದ್ಧಿವಂತಿಕೆ ಹಾಗೂ ಪೋಷಕರ ಬಗೆಗಿನ ಪ್ರೀತಿಯನ್ನು ಮೆಚ್ಚಿ ಆತನನ್ನೇ ಸ್ಪರ್ಧೆಯ ವಿಜೇತನೆಂದು ಘೋಷಿಸಲಾಗುತ್ತದೆ. ಇದೂ ಕೂಡ ಗಣಪತಿಯನ್ನು ಮೊದಲು ಪೂಜಿಸಲು ಕಾರಣವಾಗಿದೆ.

ಗಣೇಶ ಚತುರ್ಥಿಯಂದು ಮಾತ್ರವಲ್ಲ, ಇತರ ಹಬ್ಬಗಳಲ್ಲೂ ಗಣೇಶನನ್ನೇ ಮೊದಲು ಪೂಜಿಸಲಾಗುತ್ತದೆ. ಸಂಕಷ್ಟಹರನಾದ ಗಣಪತಿ ವಿದ್ಯೆಗೆ ಅಧಿಪತಿಯೂ ಹೌದು. ಜ್ಞಾನ ಮತ್ತು ಸೃಷ್ಟಿಯ ರಚನೆಯ ಆರಂಭದಲ್ಲಿ ಮೊದಲು ಕಾಣಿಸಿಕೊಂಡಿರುವುದೇ ಗಣಪತಿಯಾದ್ದರಿಂದ ಯಾವುದೇ ಕಾರ್ಯದ ಆರಂಭದಲ್ಲಿ ಪ್ರಥಮ ಪೂಜೆಯನ್ನು ವಿನಾಯಕನಿಗೆ ಮಾಡಲಾಗುತ್ತದೆ.

ಇದನ್ನೂ ಓದಿ: Ganesh Chaturthi 2021: ಗಣೇಶ ಚತುರ್ಥಿಗೆ ಗಣಪತಿಯನ್ನು ಸಿಂಗರಿಸಲು ಇಲ್ಲಿದೆ ಸರಳ ಉಪಾಯ

Ganesh Chaturthi 2021 Recipe: ಗಣೇಶನ ಹಬ್ಬಕ್ಕೆ ಉತ್ತರ ಕರ್ನಾಟಕ ಸ್ಪೆಷಲ್​​ ಮೋದಕ ಮಾಡಿ ಸವಿಯಿರಿ

(Ganesh Chaturthi 2021: Reasons Why We Pray or Worshipped Lord Ganesha First Interesting Story is here)

Click on your DTH Provider to Add TV9 Kannada