ಗೌರಿ ಹಬ್ಬ 2021: ಶುಭ ಮುಹೂರ್ತ, ಪೂಜಾ ವಿಧಿ ವಿಧಾನ ಮತ್ತು ಮಹತ್ವ ತಿಳಿಯಿರಿ

Swarna Gowri Vratha 2021: ಮಹಿಳೆಯರ ಜೀವನದಲ್ಲಿ ಸಂತೋಷವೇ ಕಾಣಲಿ, ವೈವಾಹಿಕ ಜೀವನದಲ್ಲಿ ಸುಖ ಸಮೃದ್ಧಿ ಲಭಿಸಲಿ ಎಂದು ಈ ದಿನದಂದು ವಿಶೇಷವಾಗಿ ವೃತ ಕೈಗೊಳ್ಳುತ್ತಾರೆ.

ಗೌರಿ ಹಬ್ಬ 2021: ಶುಭ ಮುಹೂರ್ತ, ಪೂಜಾ ವಿಧಿ ವಿಧಾನ ಮತ್ತು ಮಹತ್ವ ತಿಳಿಯಿರಿ
ಸಾಂದರ್ಭಿಕ ಚಿತ್ರ
TV9kannada Web Team

| Edited By: shruti hegde

Sep 09, 2021 | 10:42 AM

ಹಿಂದೂ ಸಂಪ್ರದಾಯದಲ್ಲಿ ಒಂದೊಂದು ಹಬ್ಬವೂ ಸಹ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಅದೇ ರೀತಿ ಇಂದು ಸೆಪ್ಟೆಂಬರ್ 9ರಂದು ಆಚರಿಸಲಾಗುತ್ತಿರುವ ಗೌರಿ ಹಬ್ಬವೂ ಸಹ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ವಿವಾಹಿತ ಮಹಿಳೆಯರು ವಿಶೇಷವಾಗಿ ಆಚರಿಸುವ ಹಬ್ಬವಿದು. ಗೌರಿಗೆ ಸ್ವರ್ಣಗೌರಿ ಎಂದೂ ಹೆಸರು ಬಂದಿದ್ದು, ಈ ದಿನದಂದು ಮಹಿಳೆಯರು ಸ್ವರ್ಣ ಗೌರಿ ವೃತವನ್ನುಕೈಗೊಳ್ಳುತ್ತಾರೆ.

ಗೌರಿಯನ್ನು ಗಣೇಶನ ತಾಯಿ ಎಂದು ಪೂಜಿಸಲಾಗುತ್ತದೆ. ಮಹಿಳೆಯರ ಜೀವನದಲ್ಲಿ ಸಂತೋಷವೇ ಕಾಣಲಿ, ವೈವಾಹಿಕ ಜೀವನದಲ್ಲಿ ಸುಖ ಸಮೃದ್ಧಿ ಲಭಿಸಲಿ ಎಂದು ಈ ದಿನದಂದು ವಿಶೇಷವಾಗಿ ವೃತ ಕೈಗೊಳ್ಳುತ್ತಾರೆ. ದೇವಿಯಲ್ಲಿ ಭಕ್ತಿಯಿಂದ ಬೇಡಿಕೊಳ್ಳುವ ಮೂಲಕ ಈ ದಿನವನ್ನು ವಿಶೇಷವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಗೌರಿಯ ಆಶೀರ್ವಾದ ಪಡೆಯಲು ಈ ದಿನ ವಿವಾಹಿತ ಮಹಿಳೆಯರು ಸ್ವರ್ಣ ಗೌರಿ ವೃತವನ್ನು ಮಾಡುತ್ತಾರೆ. ಬೆಳಿಗ್ಗೆ ಬೇಗ ಎದ್ದು ಶುಭ್ರವಾಗಿ, ಒಳ್ಳೆಯ ಉಡುಪು ಧರಿಸಿ, ಮನೆಯ ಮುಂದೆ ರಂಗೋಲಿಯನ್ನಿಟ್ಟು ಅಲಂಕರಿಸುತ್ತಾರೆ. ದೇವರ ಮನೆಯಲ್ಲಿ ಮಣ್ಣಿನಿಂದ ತಯಾರಿಸಿದ ಗೌರಿ ಮೂರ್ತಿಯನ್ನು ಕೂರಿಸಿ ಪೂಜೆ ಕೈಗೊಳ್ಳಲಾಗುತ್ತದೆ.

ಶುಭ ಮುಹೂರ್ತ: ಇಂದು ಎಲ್ಲೆಡೆ ಗೌರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಪೂಜೆ ಸಮಯ ಸಂಜೆ 5:42 ರಿಂದ ರಾತ್ರಿ 8:20 ಹಾಗೂ ಪೂಜೆ ಅವಧಿ 2 ಗಂಟೆಗಳ ಕಾಲಾವಕಾಶವಿದೆ.

ತೃತೀಯ ತಿಥಿ ಆರಂಭ: ಸೆಪ್ಟೆಂಬರ್ 9ರಂದು ಅಂದರೆ ಇಂದು ಬೆಳಿಗ್ಗೆ 2:33 ರಿಂದ ಆರಂಭವಾಗಿದ್ದು, ನಾಳೆ ಸೆಪ್ಟೆಂಬರ್ 10 ರಂದು ಶುಕ್ರವಾರ ಮುಂಜಾನೆ 12:17ರವರೆಗಿದೆ.

ಗೌರಿ ದೇವಿಗೆ ಅರಿಶಿಣ ಹಚ್ಚಿ, ಸೀರೆಯನ್ನುಡಿಸಿ, ಮುಡಿಗೆ ಹೂವು ಮುಡಿಸಿ ಸಿಂಗರಿಸಲಾಗುತ್ತದೆ. ಕೆಲವರ ಮನೆಯಲ್ಲಿ ಗೌರಿಯ ಮೂರ್ತಿಯನ್ನು ತರಿಸಿ ಪೂಜೆ ಮಾಡಲಾಗುತ್ತದೆ. ನೆರೆಯ ಮನೆಯವರೆಲ್ಲಾ ಒಟ್ಟುಗೂಡಿ ವಿಜೃಂಭಣೆಯಿಂದ ಪೂಜೆ ನಡೆಸುತ್ತಾರೆ. ಗಣೇಶ ಹಬ್ಬದ ಒಂದು ದಿನದ ಮೊದಲು ಅಂದರೆ ಹಿಂದಿನ ದಿನ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ.

ಹಬ್ಬ ಅಂದಾಕ್ಷಣ ಮನೆಯೆದುರು ತೋರಣ ಇರುವುದು ಸಂಭ್ರಮದ ಪ್ರತೀಕ. ಮನೆಯಲ್ಲಿ ಹಬ್ಬ ಮೆರುಗು ಪಡೆಯಬೇಕು ಅಂದಾದರೆ ಬಾಗಿಲಿಗೆ ತೋರಣ ಇರಲೇಬೇಕು. ದೇವರ ಮನೆಯನ್ನು ಸುಂದರವಾಗಿ ಅಲಂಕರಿಸುವುದಲ್ಲದೇ ಮನೆಯನ್ನೂ ಸಹ ಹೂವುಗಳಿಂದ ಅಲಂಕರಿಸುತ್ತಾರೆ. ಮನೆಯಲ್ಲಿ ಗೌರಿಯನ್ನು ಕೂರಿಸುವುದರಿಂದ ಸಂತೋಷ, ನೆಮ್ಮದಿ ಜತೆಗೆ ಸಂಪತ್ತು ಲಭಿಸುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ‘ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ, ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೇ ನಮೋಸ್ತುತೇ’ ಎಂಬ ಮಂತ್ರವನ್ನು ಪಠಿಸುತ್ತಾ ಮಹಿಳೆಯರು ಗೌರಿಯನ್ನು ಪೂಜಿಸುತ್ತಾರೆ.

ಇದನ್ನೂ ಓದಿ:

Ganesha Chaturthi 2021: ಹಬ್ಬದ ಸಂಭ್ರಮಕ್ಕೆ ವಿಘ್ನ ತಂದೊಡ್ಡಿದ ಹೂವು, ಹಣ್ಣು ಬೆಲೆ; ಎಲ್ಲವೂ ಬಲು ದುಬಾರಿ

Ganesha Chaturthi 2021: ಗಣಪತಿಯ ವಾಹನವಾದ ಇಲಿ; ಮೂಷಿಕ ಗಣೇಶನ ಹೊತ್ತು ಸವಾರಿ ಮಾಡಿದ ಹಿಂದಿದೆ ಒಂದು ಅಪರೂಪದ ಕಥೆ

(Gowri Ganesha festival 2021 know about importance Shubh muhurat puja vidhi mantra)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada