ಶುಕ್ರವಾರ ಗಣೇಶ ಚತುರ್ಥಿ: ಸಕಲ ದೇವಗಣದಲ್ಲಿ ಶ್ರೇಷ್ಠನೂ, ಪ್ರಥಮ ಪೂಜ್ಯನೂ ಆದ ವಿಘ್ನನಿವಾರಕನ ಸೃಷ್ಟಿ ರಹಸ್ಯ ಇಲ್ಲಿದೆ

ಭಾದ್ರಪದ ಮಾಸದ ಚೌತಿಯಂದು ಎಲ್ಲರೂ ಗಣೇಶನನ್ನು ಭಕ್ತಿಯಿಂದ ಪೂಜಿಸುತ್ತಾರೆ. ಅದು ಚೌತಿ ಹಬ್ಬ ಅಥವಾ ಗಣೇಶ ಚತುರ್ಥಿ ಹಬ್ಬ ಎಂದು ಪ್ರಸಿದ್ಧವಾಗಿದೆ. ಹಾಗಾಗಿ ಸಕಲ ದೇವಗಣದಲ್ಲಿ ಶ್ರೇಷ್ಠನೂ, ಪೂಜ್ಯನೂ ಆದ ವಿಘ್ನನಿವಾರಕನ ಸೃಷ್ಟಿ ರಹಸ್ಯವನ್ನು ಇಂದು ತಿಳಿಯೋಣ.

ಶುಕ್ರವಾರ ಗಣೇಶ ಚತುರ್ಥಿ: ಸಕಲ ದೇವಗಣದಲ್ಲಿ ಶ್ರೇಷ್ಠನೂ, ಪ್ರಥಮ ಪೂಜ್ಯನೂ ಆದ ವಿಘ್ನನಿವಾರಕನ ಸೃಷ್ಟಿ ರಹಸ್ಯ ಇಲ್ಲಿದೆ
ಶುಕ್ರವಾರ ಗಣೇಶ ಚತುರ್ಥಿ: ಸಕಲ ದೇವಗಣದಲ್ಲಿ ಶ್ರೇಷ್ಠನೂ, ಪ್ರಥಮ ಪೂಜ್ಯನೂ ಆದ ವಿಘ್ನನಿವಾರಕನ ಸೃಷ್ಟಿ ರಹಸ್ಯ ಇಲ್ಲಿದೆ
TV9kannada Web Team

| Edited By: sadhu srinath

Sep 09, 2021 | 6:14 AM

ನಾಳೆ ಶುಕ್ರವಾರವೇ ಗಣೇಶನ ಹಬ್ಬ. ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ಥಿ ದಿನದಂದು ಅಂದರೆ ಇದೇ ಸೆಪ್ಟೆಂಬರ್ 10 ರಂದು ಗಣೇಶನ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ವಿಶೇಷ ವಿಧಿ ವಿಧಾನದಿಂದ ಗಣೇಶ ಬಪ್ಪಾ ಮೋರಿಯಾ ಎಂದು ಗಜಾನನನಿಗೆ ಪೂಜೆ ಪುನಸ್ಕಾರ ಮಾಡುತ್ತೇವೆ. ವಿನಾಯಕನನ್ನುಸುಪ್ರಸನ್ನಗೊಳಿಸಲು ದಿನಾ ವೈವಿಧ್ಯಮಯ ವಸ್ತು, ತಿಂಡಿ, ತಿನಿಸುಗಳನ್ನು ಇಟ್ಟು ನೈವೇದ್ಯ ಮಾಡುತ್ತಾರೆ. ಗಣೇಶನನ್ನು ಸೆಪ್ಟೆಂಬರ್ 19ರಂದು ಬೀಳ್ಕೊಡಲಾಗುವುದು. ಅಂದರೆ ಗಣೇಶನ ಹಬ್ಬವು ಸೆ. 19ರಂದು ಪರಿಸಮಾಪ್ತಿಯಾಗುತ್ತದೆ. ಹಾಗಾಗಿ ಸಕಲ ದೇವಗಣದಲ್ಲಿ ಶ್ರೇಷ್ಠನೂ, ಪೂಜ್ಯನೂ ಆದ ವಿಘ್ನನಿವಾರಕನ ಸೃಷ್ಟಿ ರಹಸ್ಯವನ್ನು ಇಂದು ತಿಳಿಯೋಣ.

ಒಂದು ದಿನ ಪರಶಿವನು ತನ್ನ ಮಡದಿಯ ಕಂದಿದ ಮೊಗವನ್ನು ನೋಡಿ ಏನಾಯಿತು ನಿನಗೆ ? ನಿನ್ನ ಮುಖ ಕಮಲವು ಮುದುಡಿದೆ ಏಕೆ? ಕರೆದಾಗ ಓಡಿ ಬಂದು ಹೇಳಿದ್ದನ್ನೆಲ್ಲ ಚಾಚೂ ತಪ್ಪದೇ ಮಾಡುವ ಗಣಗಳ ಗಡಣವಿದೆ, ಭೋಗ ಭಾಗ್ಯಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ, ರಮಿಸಲು ನಾನೇ ಇದ್ದೇನೆ, ಇಷ್ಟಾದರೂ ಹೀಗೇಕೆ ಚಿಂತಿಸುತ್ತಾ ಕುಳಿತಿರುವೆ? ಎಂದು ಕೇಳುತ್ತಾನೆ.

ಪಾರ್ವತಿಯು ನಮ್ಮಲ್ಲಿ ಭಾಗ್ಯಗಳಿಗೇನೂ ಕೊರತೆ ಇಲ್ಲ ನಿಜ, ಆ ದಿಸೆಯಲ್ಲಿ ನಾನು ಚಿಂತಿಸುತ್ತಾ ಇಲ್ಲ, ನಮಗಿಬ್ಬರಿಗೂ ಒಟ್ಟಿಗೆ ಷಣ್ಮುಖ ಒಬ್ಬನೇ ಮಗ ಇದ್ದಾನೆ, ನನಗೆ ಇನ್ನೊಬ್ಬ ಮಗ ಬೇಕು ಎಂಬ ಆಸೆ ಇದೆ, ತಂದೆಗೊಬ್ಬ ಮಗನಾದರೆ ತಾಯಿಗೊಬ್ಬ ಮಗ ಬೇಕು ಎಂದು ತನ್ನ ಮನದ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಆಗ ಪರಶಿವನು ಸದ್ಯದಲ್ಲೇ ನಿನ್ನ ಮನದ ಆಸೆ ಈಡೇರುತ್ತದೆ ಎಂದಷ್ಟೇ ಹೇಳಿ ತನ್ನ ಭಕ್ತರ ಕೋರಿಕೆಗಳನ್ನು ಈಡೇರಿಸಲು ಹೊರಗಡೆ ತೆರಳುತ್ತಾನೆ.

ಗಂಡನು ತನ್ನ ಬಯಕೆಗೆ ಸರಿಯಾಗಿ ಸ್ಪಂದಿಸದೇ ತೆರಳಿದುದನ್ನು ನೋಡಿ ಪಾರ್ವತಿಗೆ ಸ್ವಲ್ಪ ಬೇಸರವಾಗುತ್ತದೆ. ಮಾತ್ರವಲ್ಲ ಇನ್ನೊಬ್ಬ ಮಗನನ್ನು ಪಡೆಯಬೇಕೆಂಬ ಬಯಕೆಯು ಆಕೆಯಲ್ಲಿ ಉತ್ಕಟವಾಗುತ್ತದೆ. ಆಕೆಗೆ ತನ್ನ ಮನದ ಆತುರತೆಯನ್ನು ಹತ್ತಿಕ್ಕಿಕೊಳ್ಳಲು ಸಾಧ್ಯವಾಗುವುದಿಲ್ಲ.

ಪತಿಯು ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಇದ್ದರೆ ಏನಂತೆ ? ತಾನೇ ಒಬ್ಬ ಮಗನನ್ನು ಸೃಷ್ಟಿಸಿಕೊಳ್ಳುತ್ತೇನೆ ಎಂದುಕೊಂಡು ಆಕೆಯು ತನ್ನ ಅಂಗಾಂಗಗಳ ಅಂಗರಾಗಗಳನ್ನೆಲ್ಲ ಒಟ್ಟುಗೂಡಿಸಿ ಅದಕ್ಕೆ ಪುನುಗು, ಕಸ್ತೂರಿ ಮೊದಲಾದ ಪರಿಮಳ ದ್ರವ್ಯಗಳನ್ನೆಲ್ಲ ಬೆರೆಸಿ ಉಂಡೆಕಟ್ಟಿ ಅದರಿಂದ ಒಂದು ಸುಂದರ ಗಂಡು ಮಗುವಿನ ಆಕೃತಿಯನ್ನು ತಯಾರಿಸುತ್ತಾಳೆ. ಆ ಸುಂದರ ಮೂರ್ತಿಯನ್ನೇ ತನ್ನ ಮಗು ಎಂದುಕೊಂಡು ಪಾರ್ವತಿಯು ಎತ್ತಿ ಆಡಿಸಿ ಆನಂದಪಡುತ್ತಾಳೆ.

ಇನ್ನೂ ಹೆಚ್ಚು ಸಂತೋಷ ಸಿಗಬೇಕಾದರೆ ಈ ಮಗುವಿಗೆ ಜೀವ ಇರಬೇಕು ಎಂದುಕೊಂಡು ಆಕೆಯು ತನ್ನ ಪೂರ್ಣ ಶಕ್ತಿಯನ್ನು ಅನುಗ್ರಹಿಸಿ ಆ ವಿಗ್ರಹಕ್ಕೆ ಜೀವವನ್ನೂ ಕೊಡುತ್ತಾಳೆ. ಹೀಗೆ ಪಾರ್ವತಿಯು ತನ್ನ ಮಹಿಮೆಯಿಂದಲೇ ತಾನೇ ಒಂದು ಸುಂದರ ಗಂಡು ಮಗುವನ್ನು ಸೃಷ್ಟಿಸಿಕೊಳ್ಳುತ್ತಾಳೆ.

ಗೌರಿಯ ಮಹಿಮೆ ಎಂಬಂತೆ ಹುಡುಗನು ಹುಟ್ಟುತ್ತಲೇ ಬೆಳೆದು ದೊಡ್ಡವನಾಗಿ ಅಮ್ಮನೊಡನೆ ಮಾತನಾಡಲು ತೊಡಗುತ್ತಾನೆ. ಅಮ್ಮಾ ನಾನು ಸುಮ್ಮನೇ ಕುಳಿತು ತಿಂದು ಭೂಮಿಗೆ ಭಾರವಾಗಲಾರೆ, ನನಗೆ ಏನಾದರೂ ಕೆಲಸಬೇಕು, ನನಗೆ ಏನು ಉದ್ಯೋಗ? ಹೇಳು ಎನ್ನುತ್ತಾನೆ. ಮುದ್ದು ಮಗನ ಮಾತು ಕೇಳಿ ಪಾರ್ವತಿಗೆ ಅತೀವ ಸಂತೋಷವಾಗುತ್ತದೆ.

ಮಗನೇ, ಸದ್ಯಕ್ಕೆ ಇಲ್ಲಿ ಬೇರೆ ಯಾವ ಕೆಲಸವೂ ಇಲ್ಲ, ಇದೋ ಈ ದಂಡವನ್ನು ಹಿಡಿದುಕೊಂಡು ಇಲ್ಲೇ ಬಾಗಿಲ ಬಳಿಯಲ್ಲಿ ನಿಂತಿರು, ನಾನು ಒಳಗಡೆ ಹೋಗಿ ಸ್ನಾನ ಮುಗಿಸಿ ಬರುತ್ತೇನೆ, ಅದುವರೆಗೆ ಯಾರನ್ನೂ ಒಳಗಡೆ ಪ್ರವೇಶಿಸಲು ಬಿಡಬೇಡ ಎಂದು ಹೇಳಿ ಆತನ ಕೈಗೆ ಒಂದು ದಂಡವನ್ನು ನೀಡಿ ಪಾರ್ವತಿಯು ಕೈಲಾಸದ ಬಾಗಿಲ ಬಳಿಯಲ್ಲಿ ಆತನನ್ನು ನಿಲ್ಲಿಸಿ ತಾನು ಒಳಗಡೆ ಹೋಗುತ್ತಾಳೆ.

ಸ್ವಲ್ಪ ಸಮಯದ ನಂತರ ಹೊರಗಡೆ ಹೋಗಿದ್ದ ಪರಶಿವನು ತನ್ನ ಗಣಗಳೊಡನೆ ಕೈಲಾಸಕ್ಕೆ ಹಿಂತಿರುಗುತ್ತಾನೆ. ಆದರೆ, ಬಾಗಿಲಲ್ಲಿ ನಿಂತಿರುವ ಹುಡುಗನು ಅವರೆಲ್ಲರನ್ನೂ ತಡೆಯುತ್ತಾನೆ. ವಿಚಾರಿಸಲು ಬಂದ ಹರಗಣಗಳನ್ನೆಲ್ಲ ಆ ಹುಡುಗನು ಹೊಡೆದು ಓಡಿಸುತ್ತಾನೆ. ವಿಷಯ ತಿಳಿದು ಶಿವನ ಸಹಾಯಕ್ಕೆ ಬಂದ ದೇವಾನುದೇವತೆಗಳೆಲ್ಲರನ್ನೂ ಅವನು ಯುದ್ಧದಲ್ಲಿ ಸೋಲಿಸುತ್ತಾನೆ. ಬುದ್ದಿ ಹೇಳಲು ಬಂದ ಬ್ರಹ್ಮ ಮತ್ತು ವಿಷ್ಣು ಇಬ್ಬರನ್ನೂ ಕೂಡಾ ಆ ಹುಡುಗನು ಯುದ್ಧದಲ್ಲಿ ಸೋಲಿಸುತ್ತಾನೆ.

ಒಬ್ಬ ಚಿಕ್ಕ ಹುಡುಗನೊಡನೆ ಯುದ್ದ ಮಾಡಲಾರದೇ ಎಲ್ಲರೂ ಕೈಸೋತದ್ದನ್ನು ನೋಡಿ ಕೊನೆಯಲ್ಲಿ ಸಾಕ್ಷಾತ್ ಪರಶಿವನೇ ಯುದ್ಧಕ್ಕೆ ಬರುತ್ತಾನೆ. ಎಲಾ ಹುಡುಗ , ನನ್ನ ಮನೆಗೇ ಬಂದು ನನ್ನನ್ನೇ ಒಳಗೆ ಹೋಗದಂತೆ ತಡೆಯುತ್ತೀಯಾ ? ಇದೋ ನೋಡು ನಿನಗೆ ತಕ್ಕ ಶಾಸ್ತಿಯನ್ನು ಮಾಡುತ್ತೇನೆ ಎನ್ನುತ್ತಾ ಕೋಪದಿಂದ ತನ್ನ ತ್ರಿಶೂಲವನ್ನು ಬಾಲಕನ ಕುತ್ತಿಗೆಗೆ ಗುರಿಯಿಟ್ಟು ಎಸೆಯುತ್ತಾನೆ. ಆಗ ಕ್ಷಣಮಾತ್ರದಲ್ಲಿ ಆ ಹುಡುಗನ ಕುತ್ತಿಗೆಯು ಕತ್ತರಿಸಲ್ಪಟ್ಟು ಆತನ ತಲೆಯು ಚಿಮ್ಮಿ ಆಕಾಶಕ್ಕೆ ಅದೆಲ್ಲಿಯೋ ಹಾರಿಹೋಗುತ್ತದೆ.

ಸ್ವಲ್ಪ ಸಮಯದ ಬಳಿಕ ಸ್ನಾನವನ್ನು ಮುಗಿಸಿ ಹೊರಗಡೆ ಬಂದ ಪಾರ್ವತಿಯು ರುಂಡವಿಲ್ಲದೇ ಬಿದ್ದಿರುವ ತನ್ನ ಮಗನ ಮುಂಡವನ್ನು ನೋಡಿ ಅಳುತ್ತಾಳೆ. ನನ್ನನ್ನು ಪುತ್ರ ಶೋಕದಿಂದ ಬಳಲುವಂತೆ ಮಾಡಿದವರು ಯಾರೇ ಆಗಿರಲಿ , ನಾನು ಇಡೀ ಲೋಕಕ್ಕೇ ಶೋಕವನ್ನು ಉಂಟುಮಾಡುತ್ತೇನೆ , ನಾನು ಶೋಕಾಗ್ನಿಯಲ್ಲಿ ಬೆಂದು ಹೋಗುತ್ತಿರುವ ಹಾಗೆ ಇಡೀ ಲೋಕವೇ ಉರಿಯಿಂದ ಬೆಂದು ಹೋಗಲಿ , ಎಲ್ಲೆಲ್ಲಿಯೂ ಕ್ಷಾಮ ಡಾಮರಗಳೇ ಉಂಟಾಗಲಿ ಎಂದು ಶಾಪವನ್ನು ನೀಡುತ್ತಾಳೆ.

ತಕ್ಷಣವೇ ಎಲ್ಲೆಂದರಲ್ಲಿ ಉರಿಜ್ವಾಲೆಗಳು ಉಂಟಾಗಿ ಪ್ರಪಂಚವೇ ಉರಿದು ಹೋಗಲು ತೊಡಗುತ್ತದೆ. ಬರಗಾಲದಿಂದ ಜನರು ಬೇಗುದಿಗೆ ಒಳಗಾಗುತ್ತಾರೆ. ಯಾಗ ಯಜ್ಞಗಳೆಲ್ಲವೂ ನಿಂತುಹೋಗಿ ದೇವತೆಗಳಿಗೆ ಹವಿಸ್ಸು ಇಲ್ಲವಾಗುತ್ತದೆ. ಇಂದ್ರಾದಿ ದೇವತೆಗಳೆಲ್ಲರೂ ಈ ದುರಿತಕ್ಕೆ ಕಾರಣವೇನೆಂದು ಹುಡುಕಲು ಆರಂಭಿಸಿದಾಗ ಅವರಿಗೆ ಇದು ಪಾರ್ವತೀ ದೇವಿಯವರ ಕೋಪದ ಪ್ರತಿಫಲ ಎಂಬುದು ಅರಿವಾಗುತ್ತದೆ. ಹೀಗಾಗಿ ಅವರೆಲ್ಲರೂ ಒಂದಾಗಿ ಪಾರ್ವತೀ ದೇವಿಯ ಬಳಿಗೆ ಬಂದು ಪ್ರಾರ್ಥಿಸುತ್ತಾರೆ. ಆಗ ಪಾರ್ವತಿಯು ತನ್ನ ಮಗನನ್ನು ಬದುಕಿಸಿಕೊಟ್ಟರೆ ಮಾತ್ರ ಈ ಉರಿಯು ನಿಲ್ಲುತ್ತದೆ ಎನ್ನುತ್ತಾಳೆ.

ದೇವತೆಗಳೆಲ್ಲರೂ ಪರಶಿವನ ಮೊರೆ ಹೋಗುತ್ತಾರೆ. ಆಗ ಪರಶಿವನಿಗೆ ತಾನು ಅಂದು ಕೊಂದದ್ದು ತನ್ನ ಹೆಂಡತಿಯ ಮಗನನ್ನೇ ಅರ್ಥಾತ್ ತನ್ನ ಮಗನನ್ನೇ ಎಂಬ ಸತ್ಯದ ಅರಿವಾಗುತ್ತದೆ. ಮಗನನ್ನು ಬದುಕಿಸೋಣ ಎಂದರೆ ಆತನ ದೇಹಕ್ಕೆ ತಲೆಯೇ ಇಲ್ಲವಾಗಿದೆ. ಹೀಗಾಗಿ ಕೂಡಲೇ ಆತನು ಅವನ ತಲೆಯನ್ನು ಹುಡುಕಲು ದೇವತೆಗಳೆಲ್ಲರನ್ನೂ ಕಳುಹಿಸುತ್ತಾನೆ. ಆದರೆ ಯಾರಿಗೂ ಆ ಬಾಲಕನ ತಲೆಯು ಸಿಗುವುದಿಲ್ಲ.

ಶಿವನು ಮಿಂಚಿನ ವೇಗದಲ್ಲಿ ಎಸೆದ ತ್ರಿಶೂಲದಿಂದ ಚಿಮ್ಮಲ್ಪಟ್ಟ ಆ ತಲೆಯು ಅದೆಷ್ಟು ದೂರಕ್ಕೆ ಹಾರಿದೆಯೋ ಯಾರಿಗೆ ಗೊತ್ತು ?  ಎಲ್ಲರೂ ಬರಿಗೈಯಲ್ಲಿ ಹಿಂತಿರುಗಿದ್ದನ್ನು ನೋಡಿ ಪರಶಿವನು ಯಾವ ಪ್ರಾಣಿಯು ಉತ್ತರಕ್ಕೆ ತಲೆ ಹಾಕಿ ಮಲಗಿರುತ್ತದೋ , ಪ್ರಥಮವಾಗಿ ಕಾಣಿಸುವ ಆ ಪ್ರಾಣಿಯ ತಲೆಯನ್ನು ತಂದು ಕೊಡಿ ಎನ್ನುತ್ತಾನೆ. ಪುನಹ ಹುಡುಕುತ್ತಾ ಹೋದ ದೇವತೆಗಳಿಗೆ ಉತ್ತರಕ್ಕೆ ತಲೆ ಹಾಕಿ ಮಲಗಿದ ಒಂದು ಆನೆಯು ಗೋಚರಿಸುತ್ತದೆ. ಅದರ ತಲೆಯನ್ನೇ ಕತ್ತರಿಸಿ ತಂದು ಪರಶಿವನಿಗೆ ನೀಡುತ್ತಾರೆ.

ಪರಶಿವನು ಆ ಆನೆಯ ತಲೆಯನ್ನೇ ಆ ಬಾಲಕನ ಮುಂಡಕ್ಕೆ ಹೊಂದಿಸಿ ಜೋಡಿಸಿ , ಅವನ ದೇಹವನ್ನು ಒಮ್ಮೆ ತಡವಿ ಅವನಿಗೆ ಜೀವದಾನವನ್ನು ನೀಡುತ್ತಾನೆ. ದೇವರ ಮಹಿಮೆ ಎಂಬಂತೆ ಬದುಕಿ ಬಂದ ಬಾಲಕನ ಹೊಟ್ಟೆಯು ಕೂಡಾ ಆನೆಯ ಹೊಟ್ಟೆಯಂತೆಯೇ ಉಬ್ಬಿಕೊಳ್ಳುತ್ತದೆ.

ಕೈಕಾಲುಗಳು ಮಾತ್ರ ಮೊದಲಿನ ಬಾಲಕನದ್ದಾಗಿಯೇ ಉಳಿಯುತ್ತವೆ. ಬದುಕಿಸಲ್ಪಟ್ಟ ಹುಡುಗನು ಅಪ್ಪಾ ಎನ್ನುತ್ತಾ ಪರಶಿವನ ತೊಡೆ ಏರಿ ಕುಳಿತುಕೊಳ್ಳುತ್ತಾನೆ. ಮಗನು ಬದುಕಿಸಲ್ಪಟ್ಟಿದ್ದರಿಂದ ಪಾರ್ವತಿಯು ಸಂತೋಷಿತಳಾದರೂ ಆತನ ಡೊಳ್ಳು ಹೊಟ್ಟೆ ಮತ್ತು ಆನೆಯ ಮುಖಗಳನ್ನು ನೋಡಿ ಪುನಹ ದುಃಖಿತಳಾಗುತ್ತಾಳೆ. ತನ್ನ ಮಗನ ಮೊದಲಿನ ಸುಂದರ ರೂಪವನ್ನು ನೆನೆದು ಆಕೆ ಅಳುತ್ತಾಳೆ.

ಆಗ ಪರಶಿವನು ಪಾರ್ವತಿಯನ್ನು ಸಂತೈಸುತ್ತಾ ಬಾಗಿಲಲ್ಲಿ ತಡೆದ ಈ ಬಾಲಕನ ಆ ಸುಂದರ ಶಿರವನ್ನು ಕತ್ತರಿಸಿದವನು ನಾನೇ, ಮಗನೆಂಬುದು ಅರಿಯದೇ ನನ್ನಿಂದ ಆದ ಪ್ರಮಾದವಿದು, ಅದು ಮಿಂಚಿ ಹೋದ ಕಾರ್ಯ, ಅದಕ್ಕೆ ಇನ್ನು ಚಿಂತಿಸಿ ಫಲವಿಲ್ಲ, ಪುನಹ ಆ ಮೊದಲಿನ ರೂಪವು ಈತನಿಗೆ ಬರಲು ಸಾಧ್ಯವಿಲ್ಲ, ಇದೆಲ್ಲವೂ ವಿಧಿ ಲೀಲೆ, ಗಂಡಹೆಂಡಿರು ಪರಸ್ಪರ ಸಮಾಲೋಚಿಸಿಕೊಳ್ಳದೇ ಯಾವ ಕಾರ್ಯಕ್ಕೆ ಮುಂದಾದರೂ ಹೀಗೇ ಅನರ್ಥವಾಗುತ್ತದೆ, ಹಾಗಂತ ನೀನೇನೂ ಬೇಸರಪಟ್ಟುಕೊಳ್ಳುವುದು ಬೇಡ, ಆತನಿಗೆ ಮೊದಲಿನ ರೂಪ ಇಲ್ಲದಿದ್ದರೆ ಏನಾಯಿತು, ಶೌರ್ಯ ಪರಾಕ್ರಮಗಳಲ್ಲಿ ಆತನಿಗೇನೂ ಕೊರತೆ ಉಂಟಾಗದು ಎನ್ನುತ್ತಾನೆ. ಆಗ ಪಾರ್ವತಿಯು ಸಂತುಷ್ಟಳಾದರೂ, ಆಕೆಯ ಮನದಲ್ಲಿನ ದುಗುಡವು ಮಾಯವಾಗದಿರುವುದನ್ನು ಗಮನಿಸಿದ ಪರಶಿವನು ತನ್ನ ಮಗನನ್ನು ಕರೆದು ಆತನಿಗೆ ಕೆಲವು ವರಗಳನ್ನು ನೀಡುತ್ತಾನೆ.

ಮಗೂ, ನನ್ನ ಸಮಸ್ತ ಗಣಗಳಿಗೂ ನೀನೇ ಒಡೆಯನಾಗಿ ಗಣೇಶ ಅಥವಾ ಗಣಪತಿ ಎಂಬ ಹೆಸರಿನಿಂದ ಪ್ರಸಿದ್ಧನಾಗು, ನೀನು ವಿಘ್ನಾಧಿಪತಿಯಾಗಿ ವಿಘ್ನನಿವಾರಕನಾಗಿ ಬಾಳು, ಎಲ್ಲಾ ದೇವರಿಗಿಂತಲೂ ಮೊದಲು ನಿನಗೆ ಪೂಜೆಯು ಸಲ್ಲುವಂತಾಗಲಿ ಎನ್ನುತ್ತಾನೆ. ಅಲ್ಲದೇ ಅಲ್ಲೇ ಇರುವ ದೇವಕುಲದವರನ್ನೆಲ್ಲಾ ಕರೆದು ಇನ್ನು ಮುಂದೆ ನೀವು ಯಾವ ಕಾರ್ಯವನ್ನು ಕೈಗೊಳ್ಳುವುದಿದ್ದರೂ ಮೊದಲು ನಮ್ಮ ಮಗ ಈ ಗಣಪತಿಗೆ ಪೂಜೆ ಸಲ್ಲಿಸಬೇಕು, ಆಗ ಆತ ಹರ್ಷಿತನಾಗಿ ನೀವು ಕೈಗೊಳ್ಳುವ ಕಾರ್ಯವು ನಿರ್ವಿಘ್ನವಾಗಿ ನಡೆಯುವಂತೆ ಮಾಡುತ್ತಾನೆ, ಮಾತ್ರವಲ್ಲದೇ ಇನ್ನು ಮುಂದೆ ಈ ಗಣಪತಿಯೇ ಸಕಲ ದೇವವರ್ಗದವರಲ್ಲಿ ಶ್ರೇಷ್ಠನೂ ಪೂಜ್ಯನೂ ಆಗಿರುತ್ತಾನೆ, ಇನ್ನು ಮುಂದೆ ಪ್ರತಿ ವರ್ಷದ ಈ ಪವಿತ್ರ ದಿನದಂದು ಅಂದರೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಇವನ ವ್ರತವನ್ನು ಯಾರು ಆಚರಿಸಿ ಭಕ್ತಿಯಿಂದ ಈತನನ್ನು ಪೂಜಿಸುತ್ತಾರೋ ಅವರಿಗೆ ಸಕಲ ಭೋಗ ಭಾಗ್ಯಗಳನ್ನು ಈತನು ಕರುಣಿಸುತ್ತಾನೆ ಎಂದು ಪರಶಿವನು ಹೇಳುತ್ತಾನೆ.

ಹೀಗಾಗಿ ಅಂದಿನಿಂದ ಇಂದಿನವರೆಗೂ ಭಾದ್ರಪದ ಮಾಸದ ಚೌತಿಯಂದು ಎಲ್ಲರೂ ಗಣೇಶನನ್ನು ಭಕ್ತಿಯಿಂದ ಪೂಜಿಸುತ್ತಾರೆ. ಅದು ಚೌತಿ ಹಬ್ಬ ಅಥವಾ ಗಣೇಶ ಚತುರ್ಥಿ ಹಬ್ಬ ಎಂದು ಪ್ರಸಿದ್ಧವಾಗಿದೆ.

Also Read: Ganesha Chaturthi 2021: ಗಣೇಶ ಹಬ್ಬದ ದಿನ ವಿನಾಯಕನಿಗೆ ಈ ಐದು ವಸ್ತು ಸಮರ್ಪಿಸಿ, ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ

(ganesha chaturthi 2021 trivia at the behest of parvathi how lord ganesha formed bu Lord shiva)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada