ಗಣೇಶನಿಗೆ ಚತುರ್ಥಿಯೇ ಯಾಕೆ ಪ್ರಿಯ? ಗಣಪತಿ ಹಬ್ಬ ಮಾಡುವುದು ಹೇಗೆ? ಇಲ್ಲಿದೆ ನೋಡಿ

| Updated By: ರಮೇಶ್ ಬಿ. ಜವಳಗೇರಾ

Updated on: Aug 28, 2024 | 7:52 PM

ಗಣೇಶ ಸಂತೋಷ ಮತ್ತು ಸಮೃದ್ಧಿಯನ್ನು ನೀಡುವ ದೇವರು. ತನ್ನ ಭಕ್ತರ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಕಾವಲುಗಾರನಾಗಿ ನಿಲ್ಲುವವನು ಗಜಾನನ... ಆದ್ದರಿಂದ ಮನೆಯಲ್ಲಿ ಗಣೇಶನ ವಿಗ್ರಹವನ್ನು ಹೊಂದಿರುವುದು ತುಂಬಾ ಮಂಗಳಕರವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ಗಣೇಶನಿಗೆ ಚತುರ್ಥಿಯೇ ಯಾಕೆ ಪ್ರಿಯ? ಗಣಪತಿಯ ಬಣ್ಣ ಯಾವುದು? 21 ನೈವೇದ್ಯ ಏಕೆ? ಇಲ್ಲಿದೆ ವಿವರ.

ಗಣೇಶನಿಗೆ ಚತುರ್ಥಿಯೇ ಯಾಕೆ ಪ್ರಿಯ? ಗಣಪತಿ ಹಬ್ಬ ಮಾಡುವುದು ಹೇಗೆ? ಇಲ್ಲಿದೆ ನೋಡಿ
ವಿನಾಯಕ ಚೌತಿ
Follow us on

ಭಾರತೀಯರ ಅತ್ಯಂತ ಸಡಗರ ಮೊದಲ ಹಬ್ಬ ಗಣೇಶ ಚತುರ್ಥೀ. ಗಣಪನಿಲ್ಲದ ಗ್ರಾಮವಿಲ್ಲ ಎಂಬ ಮಾತಿದೆ. ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿ ಗಣೇಶನ ದೇವಾಲಯವನ್ನು, ಮೂರ್ತಿಯನ್ನು ಕಾಣಲು ಸಾಧ್ಯ.‌ ಇಂತಹ ಜಗತ್ಪ್ರಸಿದ್ಧ ಗಣೇಶನ ಹಬ್ಬ ಎಲ್ಲರ ಮನೆಯಲ್ಲಿಯೂ ಸಂಭ್ರಮವನ್ನು ಕೊಡುತ್ತದೆ.

ಗಣೇಶನಿಗೆ ಚತುರ್ಥಿಯೇ ಯಾಕೆ ಪ್ರಿಯ?

ತಿಂಗಳಿಗೆ ಎರಡು ಬಾರಿ ಬರುವ ಚತುರ್ಥಿಯಲ್ಲಿ ಸಂಕಷ್ಟಹರ ಚತುರ್ಥಿ ಎಂದು ಕೃಷ್ಣ ಪಕ್ಷದ ಚತುರ್ಥಿಯಲ್ಲಿ ವ್ರತವನ್ನು ಮಾಡುತ್ತಾರೆ. ಆದರೆ ಗಣೇಶ ಚತುರ್ಥಿಯನ್ನು ಮಾತ್ರ ಶುಕ್ಲ ಪಕ್ಷದಲ್ಲಿ ಆಚರಿಸುತ್ತಾರೆ.

ಇದನ್ನೂ ಓದಿ: Ganesh Chaturthi 2024: ವಿನಾಯಕ ಚೌತಿ ದಿನ ಹೀಗೆ ಮಾಡಿ- ಗಣೇಶನ ಅನುಗ್ರಹ ಮತ್ತು ಅದೃಷ್ಟ ನಿಮ್ಮದಾಗುತ್ತದೆ!

ಚತುರ್ಥೀ ತಿಥಿಗೆ ಗಣೇಶನು ಅಧಿದೇವತೆ. ಈ ದಿನ ಗಣಪತಿಯ ಪ್ರಭಾವ ಹೆಚ್ಚಿರುವ ಕಾರಣ ಈ ದಿನ ಗಣಪತಿಯ ಆರಾಧನೆಗೆ ಹೆಚ್ಚು ಮಹತ್ತ್ವವನ್ನು ಕೊಟ್ಟಿದೆ. ಇದಕ್ಕೆ ಭಾದ್ರಪದ‌ ಮಾಸವೂ ವಿಶೇಷತೆಯನ್ನು ಕೊಡುತ್ತದೆ. ಪೂರ್ವಾಭಾದ್ರ ಅಥವಾ ಉತ್ತರಾಭಾದ್ರದಲ್ಲಿ ಈ ಮಾಸದ ಹುಣ್ಣಿಮೆ ಆಗುತ್ತದೆ. ಈ ನಕ್ಷತ್ರಗಳ ದೇವತೆ ಅಹಿರ್ಬುಧ್ನ್ಯ ಮತ್ತು ಅಜೈಕಪಾತ್ ಎಂದು.‌ ಇವೆರಡೂ ಕೂಡ ಶಿವನ ಒಂದೊಂದು ರೂಪಗಳು.

ಇನ್ನು ಈ ಗಣೇಶ ಚತುರ್ಥಿಯೇ ಎಲ್ಲ ಹಬ್ಬಗಳಿಗಿಂತ ಮೊದಲು ಬರಲು ಕಾರಣ ವಿಘ್ನನಿವಾರಣೆಗಾಗಿ. ಗಣಪತಿಯನ್ನು ವಿಘ್ನ ಹರಣಕ್ಕಾಗಿ ಪೂಜಿಸುತ್ತಾರೆ. ಇಲ್ಲಯೂ ಲೌಕಿಕ ಜೀವನವನ್ನು ನಡೆಸಲು ಯಾವುದೇ ವಿಘ್ನಗಳು ಬಾರದೇ ಇರಲಿ ಎಂದು ಪೂಜಿಸುತ್ತಾರೆ. ಅಲೌಕಿಕ ಜೀವನವನ್ನು ನಡೆಸುವವರೂ ಕೂಡ ಗಣಪತಿಯ ಆರಾಧನೆಯನ್ನು ಮಾಡುತ್ತಾರೆ. ನಮ್ಮ ದೇಹದಲ್ಲಿ ಸಪ್ತ ಚಕ್ರಗಳಿವೆ. ಅದರಲ್ಲಿ ಮೊದಲನೇ ಚಕ್ರ ಮೂಲಾಧಾರ. ಅಲ್ಲಿ ಗಣಪತಿಯ ಸ್ಥಾನವಿದೆ. ಹಾಗಾಗಿ ಯಾರಾದರೂ ಅಧ್ಯಾತ್ಮ ಸಾಧನೆ ಮಾಡುವಾಗ ಮೂಲಾಧಾರ ಸ್ಥಾನದಲ್ಲಿ ಮನಸ್ಸನ್ನು ನಿಗ್ರಹಿಸಿದರೆ ಗಣಪತಿಯ ದರ್ಶನವಾಗುತ್ತದೆ ಎನ್ನುತ್ತಾರೆ ಸಾಧಕಶ್ರೇಷ್ಠರು. ಹಾಗಾಗಿಯೆರ ಉಪನಿಷತ್ ನಲ್ಲಿ ಮೂಲಾಧಾರಸ್ಥಿತೋಸಿ ನಿತ್ಯಮ್ ಎನ್ನುವುದು. ಅಧ್ಯಾತ್ಮ ಸಾಧನೆಗೂ ಯಾವುದೇ ವಿಘ್ನಗಳು ಬಾರದಂತೆ ನೋಡಿಕೊಳ್ಳುವವನೂ ಗಣಪತಿಯೇ. ಹಾಗಾಗಿ ಅವನಿಗೆ ಅಗ್ರ ಪೂಜೆ.

ಗಣಪತಿಯ ಬಣ್ಣ ಯಾವುದು?

ಸುಂದರವಾಗಿ ಕಾಣಲು ಗಣಪತಿಗೆ ತರತರದ ಬಣ್ಣಗಳನ್ನು ಲೇಪಿಸುವುದಿದೆ. ಆದೆ ವಾಸ್ತವವಾಗಿ ಗಣಪತಿಯ ಬಣ್ಣ ಕೆಂಪು.

ರಕ್ತಂ ಲಂಬೋದರಂ ಶೂರ್ಪ-
ಕರ್ಣಕಂ ರಕ್ತವಾಸಸಮ್ |
ರಕ್ತಗಂಧಾನುಲಿಪ್ತಾಂಗಂ
ರಕ್ತಪುಷ್ಪೈಃ ಸುಪೂಜಿತಮ್ ||

ಎಂಬುದಾಗಿ ಗಣೇಶನನ್ನು ಸ್ತುತಿಸುವುದಿದೆ. ಕೆಂಪು ಬಣ್ಣದವನು. ದೊಡ್ಡ ಹೊಟ್ಟೆ, ಮೊರದಂತಹ ಕಿವಿ, ಕೆಂಪು ಬಟ್ಟೆ, ಕೆಂಪು ಗಂಧ ಅಂದರೆ ರಕ್ತಚಂದನ, ಕೆಂಪು ಹೂವುಗಳಿಂದ ಪೂಜಿಸಲ್ಪಡುವವನು ಎಂದರ್ಥ. ಆದ್ದರಿಂದ ಕೆಂಪು ಬಣ್ಣವೇ ಶ್ರೇಷ್ಠ.

ಮೂರ್ತಿಯನ್ನು ಯಾವುದೋ ವಸ್ತುಗಳಿಂದ ಮಾಡುವುದಲ್ಲ. ಮಣ್ಣಿನಿಂದ ಮಾಡಬೇಕು. ಯಾವುದೇ ರಾಸಾಯನಿಕ ವಸ್ತುಗಳನ್ನು ಮಣ್ಣಿಗೆ ಸೇರಿಸಬಾರದು. ಜೇಡೀ ಮಣ್ಣಿನ ವಿಗ್ರಹವನ್ನು ಮಾಡಿ ಪುನಃ ನೀರಿಗೆ ಬಿಡಬೇಕು. ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಗಣೇಶನು ಪೃಥ್ವೀ ತತ್ತ್ವವನ್ನು ಪ್ರತಿನಿಧಿಸುವವನು. ಹಾಗಾಗಿ ಅವನಿಗೆ ಮಣ್ಣಿನ ಮೂರ್ತಿ. ಆ ಮೂರ್ತಿಯನ್ನು ಜಲತತ್ತ್ವದಲ್ಲಿ‌ ಲೀನ ಮಾಡಬೇಕು. ಅನಂತರ ಅದು ಅಗ್ನಿ ತತ್ತ್ವವಾಗಿಯೂ ವಾಯುತತ್ತ್ವಾಗಿಯೂ ಬದಲಾಗಿ ಕೊನೆ ಆಕಾಶತತ್ತ್ವದಲ್ಲಿ ನಿಲ್ಲುತ್ತದೆ.

ಗಣಪತಿಗೆ ನೈವೇದ್ಯ :

ಗಣಪತಿಗೆ ನೈವೇದ್ಯವನ್ನು ನಮಗೆ ಪ್ರಿಯವಾದುದನ್ನು‌ ಮಾಡುವುದಲ್ಲ. ಶುದ್ಧವಾದ ಪದಾರ್ಥಗಳಿಂದ ಇಪ್ಪತ್ತೊಂದು ಭಕ್ಷಗಳನ್ನು ಮಾಡು ಪ್ರತೀತಿ. 21 ಪ್ರಿಯವಾದ ಸಂಖ್ಯೆಯೂ ಆದ ಕಾರಣ ಅಷ್ಟನ್ನೇ ಮಾಡುತ್ತಾರೆ.

ದೂರ್ವೆ ಹಾಗು ಕೆಂಪು ಹೂವುಗಳಿಂದ ಗಣಪತಿಯ ಆರಾಧನೆ ಶ್ರೇಷ್ಠ. ಉಳಿದವುಗಳನ್ನು ಬಳಸಬಹುದು.‌ ಹೀಗೆ ಮಾಡಿದರೆ ಗಣಪತಿಯ ಆರಾಧನೆಯ ಶ್ರೇಯಸ್ಕರವಾಗಲಿದೆ.

– ಲೋಹಿತ ಹೆಬ್ಬಾರ್ – 8762924271