Garuda Purana: ಕೊನೆ ಉಸಿರಿರುವ ತನಕವೂ ಮರೆಯಲೇಬಾರದ 4 ಸಂಗತಿಗಳು

ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುವ ಮತ್ತು ನಮ್ಮನ್ನು ವೈಫಲ್ಯಕ್ಕೆ ನೂಕುವ ಕೆಲಸಗಳನ್ನು ಎಂದಿಗೂ ಮಾಡಬಾರದು. ಮಹಾನ್​ ಪುರಾಣ ಗ್ರಂಥವೆನಿಸಿಕೊಂಡ ಗರುಡಪುರಾಣದಲ್ಲೂ ಇದನ್ನೇ ಹೇಳಲಾಗಿದ್ದು, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮ್ಮ ಗೌರವಕ್ಕೆ ಕುಂದು ತರುವ ಕೆಲವೊಂದಷ್ಟು ಕಾರ್ಯಗಳಿಂದ ದೂರ ಉಳಿಯಲು ಸೂಚಿಸಲಾಗಿದೆ.

Garuda Purana: ಕೊನೆ ಉಸಿರಿರುವ ತನಕವೂ ಮರೆಯಲೇಬಾರದ 4 ಸಂಗತಿಗಳು
ಗರುಡ ಪುರಾಣ

ಮನುಷ್ಯನಿಗೆ ಬದುಕಿನಲ್ಲಿ ಆಸ್ತಿ, ಅಂತಸ್ತು, ಆರೋಗ್ಯ, ನೆಮ್ಮದಿ ಎಷ್ಟು ಅಗತ್ಯವೋ ಅದೇ ರೀತಿಯಲ್ಲಿ ಗೌರವ ಕೂಡಾ ಅವಶ್ಯಕ ವಿಚಾರ. ಗೌರವ ಇಲ್ಲದೇ ಇದ್ದರೆ ಅಂತಹ ಜೀವನ ನಿಕೃಷ್ಟವಾಗಿದ್ದು ಎಂದು ಹಿರಿಯರು ಹೇಳುತ್ತಾರೆ. ದುರಾಸೆಗಾಗಿ ಅಥವಾ ಕ್ಷಣಿಕ ಸುಖದ ಕಾರಣಕ್ಕಾಗಿ ಎಂದೋ ಮಾಡುವ ತಪ್ಪು ಕೂಡಾ ನಮ್ಮಿಂದ ಗೌರವವನ್ನು ಕಸಿದುಕೊಳ್ಳುವ ಸಾಧ್ಯತೆ ಇದ್ದು, ಅವು ಜೀವನಪರ್ಯಂತ ಲೋಕದ ಕಣ್ಣಲ್ಲಿ ಕಪಟರನ್ನಾಗಿಸಿಬಿಡುತ್ತವೆ. ಹೀಗಾಗಿ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುವ ಮತ್ತು ನಮ್ಮನ್ನು ವೈಫಲ್ಯಕ್ಕೆ ನೂಕುವ ಕೆಲಸಗಳನ್ನು ಎಂದಿಗೂ ಮಾಡಬಾರದು. ಮಹಾನ್​ ಪುರಾಣ ಗ್ರಂಥವೆನಿಸಿಕೊಂಡ ಗರುಡ ಪುರಾಣದಲ್ಲೂ ಇದನ್ನೇ ಹೇಳಲಾಗಿದ್ದು, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮ್ಮ ಗೌರವಕ್ಕೆ ಕುಂದು ತರುವ ಕೆಲವೊಂದಷ್ಟು ಕಾರ್ಯಗಳಿಂದ ದೂರ ಉಳಿಯಲು ಸೂಚಿಸಲಾಗಿದೆ.

ನಮ್ಮನ್ನು ವೈಫಲ್ಯಕ್ಕೆ ನೂಕುವ ಹಾಗೂ ಅಗೌರವಕ್ಕೆ ಈಡುಮಾಡುವ ವಿಚಾರಗಳು ಯಾವುವು ಎನ್ನುವುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

1. ನಿಮ್ಮ ಬಳಿ ಸಾಕಷ್ಟು ಹಣವಿದ್ದ ಮಾತ್ರಕ್ಕೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಭಾವಿಸಿದರೆ ಅದು ತಪ್ಪು. ಎಷ್ಟೇ ಹಣ ಇದ್ದು ದಾನ, ಸಹಾಯ ಮಾಡದೇ ಇದ್ದರೆ ಅಂತಹ ವ್ಯಕ್ತಿಗೆ ಸಮಾಜ ಗೌರವ ಕೊಡುವುದಿಲ್ಲ. ಗೌರವ ಸಿಗಬೇಕೆಂದರೆ ಸ್ವಾರ್ಥ ಬಿಟ್ಟು ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಆದ್ದರಿಂದ ಅನುಕೂಲ ಇದೆ ಎಂದಾಗ ಸಮಾಜಕ್ಕೆ ಪೂರಕವಾಗುವ ಕೆಲಸ, ಕಾರ್ಯಗಳನ್ನು ಮಾಡಬೇಕು. ಅದನ್ನು ಬಿಟ್ಟು ಕೇವಲ ವೈಯಕ್ತಿಕ ಒಳಿತನ್ನು ಮಾತ್ರ ನೋಡಿಕೊಂಡರೆ ಅದು ಒಬ್ಬ ವ್ಯಕ್ತಿ ಸಮಾಜದ ದೃಷ್ಟಿಯಲ್ಲಿ ವಿಫಲವಾದಂತೆಯೇ ಅರ್ಥ.

2. ಯಾರ ಮನೆಯಲ್ಲಿ ತಂದೆಯ ಮಾತಿಗೆ ಬೆಲೆ ಸಿಗುವುದಿಲ್ಲವೋ, ಮಕ್ಕಳೇ ಅದನ್ನು ಧಿಕ್ಕರಿಸುತ್ತಾರೋ ಅಂತಹ ವ್ಯಕ್ತಿಗೆ ಸಮಾಜ ಕೂಡಾ ಬೆಲೆ ಕೊಡುವುದಿಲ್ಲ. ಅವರು ಸಮಾಜದಲ್ಲಿ ಮತ್ತೆ ಮತ್ತೆ ಅವಮಾನವನ್ನು ಅನುಭವಿಸಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಹಾಭಾರತ ಕಾಲದಲ್ಲಿ ದುರ್ಯೋಧನನಿಂದಾಗಿ, ಧೃತರಾಷ್ಟ್ರನ ಕುಟುಂಬ ಹಾಗೂ ಗೌರವ ನಾಶವಾಯಿತು ಎಂಬುದು ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆ.

3. ಒಬ್ಬ ವ್ಯಕ್ತಿ ಎಷ್ಟೇ ಒಳ್ಳೆಯವನು, ಸಭ್ಯಸ್ತ ಆಗಿದ್ದರೂ ಆತ ಒಡನಾಟ ಹೊಂದಿರುವುದು ದುರ್ಜನರೊಂದಿಗೆ ಎಂದಾದರೆ ಆತನಿಗೆ ಸಮಾಜ ಗೌರವ ಕೊಡುವುದಿಲ್ಲ. ಎಷ್ಟೇ ಒಳ್ಳೆಯ ಗುಣಗಳನ್ನು ಹೊಂದಿದ್ದರೂ ಜನ ಅವರನ್ನು ಕೆಟ್ಟವರೆಂದೇ ಪರಿಗಣಿಸುತ್ತಾರೆ. ಅಂತಹವರು ಸಮಾಜದಲ್ಲಿ ಅವಮಾನಕ್ಕೆ ಒಳಗಾಗುತ್ತಾರೆ.

4. ಬದುಕಿನುದ್ದಕ್ಕೂ ಬೇರೆಯವರಿಗೆ ಹಾನಿ ಮಾಡಡುವ ಉದ್ದೇಶ ಹೊಂದಿದವ ಮರಣಾ ನಂತರವೂ ಸಮಾಜ ಅದನ್ನು ಮರೆಯುವುದಿಲ್ಲ. ನಾಲ್ಕು ಮಂದಿಗೆ ಕೆಡಕು ಉಂಟುಮಾಡುವವರು ಸತ್ತರೆ ಸಾವಿನ ಬಳಿಕ ಜಗತ್ತು ಆ ವ್ಯಕ್ತಿ ಮಾಡಿದ ಕೇಡನ್ನು ನೆನೆಸಿಕೊಳ್ಳುತ್ತಲೇ ಇರುತ್ತದೆ. ಅದು ಮೃತ ವ್ಯಕ್ತಿಯ ಇಡೀ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಜತೆಗೆ ತಲೆಮಾರುಗಳು ಕಳೆದರೂ ಆ ಕಳಂಕ ಅಳಿಸಿ ಹೋಗುವುದಿಲ್ಲ. ಹೀಗಾಗಿ ಅಗೌರವಕ್ಕೆ ಪಾತ್ರವಾಗುವಂತಹ ಕೆಲಸಗಳನ್ನು ಯಾವತ್ತೂ ಮಾಡಬಾರದು.

ಇದನ್ನೂ ಓದಿ:
Garuda Purana: ಗರುಡ ಪುರಾಣದಲ್ಲಿ ಹೇಳಿರುವ ಈ 5 ಸಂಗತಿಗಳನ್ನು ಅಳವಡಿಸಿಕೊಂಡರೆ ಬದುಕು ಬದಲಿಸಬಹುದು 

Garuda Purana: ಹುಟ್ಟಿಗೂ ಮೊದಲು ನಾವು, ನೀವು ಅನುಭವಿಸಿದ ಕಷ್ಟ ಎಂಥದ್ದು? ಗರುಡ ಪುರಾಣ ಹೇಳುವುದೇನು?

(Garuda Purana the lessons one need not to forget in life)

Click on your DTH Provider to Add TV9 Kannada