ಗೌತಮ ಬುದ್ಧ ಧ್ಯಾನಕ್ಕೆ ಹೋಗುವ ಮೊದಲು ಕುಡಿದಿದ್ದು ಪಾಯಸ, ಅದನ್ನು ಕೊಟ್ಟಿದ್ದು ಒಬ್ಬ ಹೆಣ್ಣು ಮಗಳು! ಏನು ಅದರ ವೃತ್ತಾಂತ?

ಅಷ್ಟಾಂಗ ಮಾರ್ಗದಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರಿದರೆ, ಸಮ್ಯಕ್ ಜ್ಞಾನ ಸಿಗುತ್ತದೆ. ಅಂದರೆ ಸಮಾಧಿ ಸ್ಥಿತಿಗೆ ತಲುಪುತ್ತಾರೆ. ಇಂಥವರಿಗೆ ದೇವತೆಗಳೇ ಮಳೆಗರೆಯುತ್ತಾರೆ. ಇವರಿಗೆ ಏಳೆಂಟು ಜನ್ಮದ ಪೂರ್ವ ಸ್ಮರಣೆಗಳನ್ನು ನೆನಪಾಗುತ್ತದೆ. ಜೀವನದಲ್ಲಿ ಶಾಂತಿ, ದೃಢ ವಿಶ್ವಾಸ ಕಂಡುಕೊಳ್ಳಲು ಪ್ರತಿಯೊಂದು ಬೀಗಕ್ಕೂ ಅದರದೆ ಆದ ಕೀ ಇರುವಂತೆ, ಮನುಷ್ಯನ ಪ್ರತಿ ಸಮಸ್ಯೆಗೂ ಬುದ್ಧನ ತತ್ವಗಳಿಂದ ಪರಿಹಾರ ಸಿಗುತ್ತದೆ.

ಗೌತಮ ಬುದ್ಧ ಧ್ಯಾನಕ್ಕೆ ಹೋಗುವ ಮೊದಲು ಕುಡಿದಿದ್ದು ಪಾಯಸ, ಅದನ್ನು ಕೊಟ್ಟಿದ್ದು ಒಬ್ಬ ಹೆಣ್ಣು ಮಗಳು! ಏನು ಅದರ ವೃತ್ತಾಂತ?
ಗೌತಮ ಬುದ್ಧ ಧ್ಯಾನಕ್ಕೆ ಹೋಗುವ ಮೊದಲು ಕುಡಿದಿದ್ದು ಪಾಯಸ, ಅದನ್ನು ಕೊಟ್ಟಿದ್ದು ಒಬ್ಬ ಹೆಣ್ಣು ಮಗಳು! ಏನು ಅದರ ವೃತ್ತಾಂತ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 13, 2022 | 6:06 AM

ಇದು ಗೌತಮ ಬುದ್ಧ (Gautam Buddha) ಧ್ಯಾನಕ್ಕೆ ಹೋಗುವ ಮೊದಲಿನ ಕತೆ. ಜೀವನದ ಸಮಸ್ಯೆಗಳನ್ನು ಶಾಂತಿ ಮತ್ತು ದೃಢವಾದ ಮನಸ್ಸಿನಿಂದ ಇರಲು, ದುಃಖ ನಿರ್ಮೂಲನೆ ಮಾಡುವ, ಶುದ್ಧ ಹಾಗೂ ಸದೃಢವಾದ ಮನಸ್ಸನ್ನು ಇಟ್ಟುಕೊಳ್ಳಲು, ಎಲ್ಲಕ್ಕೂ ಕೇಂದ್ರಬಿಂದುವಾದ ಮನಸ್ಸೇ ಕಾರಣ. ದೇಹದಿಂದ ಏನೂ ಸಾಧ್ಯವಿಲ್ಲ. ಕಠಿಣ ಪರಿಶ್ರಮ ಮತ್ತು ತಪಸ್ಸಿನ ಸಾಧನೆಯಿಂದ ಜ್ಞಾನವನ್ನು ಪಡೆಯಬೇಕು. ಹೀಗೆ ಯೋಚಿಸಿ ಸ್ನಾನ ಮಾಡಿ ಬಂದು ಒಂದು ಬೋಧಿವೃಕ್ಷದ ಕೆಳಗೆ ಕುಳಿತು, ಈ ಕ್ಷಣದಿಂದ ಜ್ಞಾನ ನನಗೆ ಸಿಗುವವರೆಗೂ ಇಲ್ಲಿಂದ ಏಳುವುದಿಲ್ಲ (Gautam Buddha Enlightment). ನನ್ನ ದೇಹ ಎಲುಬಿನ ಗೂಡಾಗಿ ಬಿದ್ದರೂ ಪರವಾಗಿಲ್ಲ ಎಂದು ನಿರ್ಧರಿಸಿಕೊಂಡು ಧ್ಯಾನಕ್ಕೆ ಇನ್ನೇನು ಕುಳಿತಕೊಳ್ಳಬೇಕು ಎನ್ನುವಾಗ, ಒಬ್ಬ ಹೆಣ್ಣು ಮಗಳು ಅಲ್ಲಿಗೆ ಬಂದಳು. ಅವಳ ಹೆಸರು ಸುಜಾತ.

ಆಕೆ ತನ್ನ ಮದುವೆಯಾದರೆ ‘ಬೋಧಿ ವೃಕ್ಷಕ್ಕೆ’ ಪಾಯಸವನ್ನು ಅರ್ಪಿಸುತ್ತೇನೆ ಎಂದು ಹರಕೆ ಹೊತ್ತಿದ್ದಳು. ಅದರಂತೆ ಅವಳ ಮದುವೆಯಾಯಿತು. ಹರಕೆ ಹೇಳಿಕೊಂಡಂತೆ, ಬೋಧಿವೃಕ್ಷಕ್ಕೆ ಅರ್ಪಿಸಲು ದೊಡ್ಡ ಬಟ್ಟಲಿನಲ್ಲಿ ಪಾಯಸ ತಂದಿದ್ದಳು. ಆಕೆ ಬಂದಾಗ ಬುದ್ದನು ಧ್ಯಾನಕ್ಕೆ ಕೂರಲು ತಯಾರಾಗಿದ್ದ. ಅವನ ಮುಖ ಪ್ರಕಾಶಮಾನವಾಗಿ ಸೂರ್ಯನಂತೆ ಬೆಳಗುತ್ತಿತ್ತು. ಇದನ್ನು ನೋಡಿದ ಸುಜಾತ ನಾನು ವೃಕ್ಷ ದೇವತೆ ಮರದ ರೂಪದಲ್ಲಿರುತ್ತದೆ ಎಂದುಕೊಂಡಿದ್ದೆ. ಆದರೆ ಮನುಷ್ಯನ ರೂಪದಿಂದ ಬಂದಿದೆ ಎಂದುಕೊಂಡಳು. ಹತ್ತಿರ ಬಂದು ಬುದ್ಧನನ್ನು ನೀನು ವೃಕ್ಷ ದೇವತೆಯೇ ಎಂದು ಕೇಳಿದಳು. ಬುದ್ಧನು ಸುಮ್ಮನಿದ್ದ. ಆಕೆಯೇ, ನಿನಗೆ ಹರಕೆ ಹೊತ್ತಿದ್ದೆ, ನನಗೆ ಮದುವೆಯಾಗಿದೆ, ಅದಕ್ಕಾಗಿ ಪಾಯಸ ತಂದಿದ್ದೇನೆ ತೆಗೆದುಕೋ ಎಂದು ಕೊಟ್ಟಳು. ಕಣ್ಣು ತೆರೆದ ಬುದ್ಧ ನನಗೆ ಪಾಯಸ ಕೊಡುತ್ತೀಯಾ ಕೊಡು, ಇದು ನನಗೆ ಇವತ್ತಿನ ಭಿಕ್ಷೆ ಎಂದ. ಆಕೆ ಇದು ಭಿಕ್ಷೆಯಲ್ಲ; ನೈವೇದ್ಯ ಎಂದಳು. ‘ನಿನ್ನ ನೈವೇದ್ಯ, ನನಗೆ ಭಿಕ್ಷೆ’ಎಂದು ತೆಗೆದುಕೊಂಡು ಪಾಯಸವನ್ನು ಕುಡಿದ.

ಸೂರ್ಯಾಸ್ತವಾಗುವ ಸಮಯ ಆಕಾಶವೆಲ್ಲಾ ಕೆಂಪಾಗಿತ್ತು ವಾತಾವರಣ ತಿಳಿಯಾಗಿತ್ತು. ಸುಜಾತಾ ಕೊಟ್ಟ ಪಾಯಸ ಕುಡಿದನು. ಧ್ಯಾನಕ್ಕೆ ಹೋಗುವ ಮೊದಲು ಕುಡಿದ ಕಟ್ಟಕಡೆಯ ಪಾಯಸ ಅದು. ಆಕೆ ಹೊರಟಳು. ಬುದ್ಧನು ಧ್ಯಾನಕ್ಕೆ ಕುಳಿತ. ಅವನು ಮನಸ್ಸಿನಲ್ಲಿರುವ ಎಲ್ಲವನ್ನು ಖಾಲಿ ಮಾಡಿ ಧ್ಯಾನದ ಕಡೆಗೆ ಮಾತ್ರ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಧ್ಯಾನದಲ್ಲಿ ತಲ್ಲೀನನಾಗಿದ್ದ ಆಳಕ್ಕೆ ಹೋದ… ಅದೆಷ್ಟು ಎಂದರೇ ಹಿಂತಿರುಗಿ ಬರಲಾರದಷ್ಟು ಆಳಕ್ಕೆ ಇಳಿದ. ಬುದ್ಧನಿಗೆ ಜ್ಞಾನದ ವಿಚಾರ ತಿಳಿಯುತ್ತಿತ್ತು. ದುಃಖಕ್ಕೆ ಕಾರಣ ಹುಡುಕುತ್ತಿದ್ದ. ಯಾವುದೋ ಒಂದು ಕ್ಷಣ. ಅವನಿಗೆ ಎಲ್ಲವೂ ಸಿಕ್ಕಿತು. ಅವನ ಮನಸ್ಸು ನಿರಾಳವಾಯಿತು. ಅವನು ಪೂರ್ತಿ ಖಾಲಿಯಾದ.

ಅವನು ತಾನು ಒಬ್ಬ ಮನುಷ್ಯ ಎಂಬುದು ಮಾತ್ರ ಅವನಲ್ಲಿ ಉಳಿಯಿತು. ತಂದೆ-ತಾಯಿ ಬಂಧು-ಬಳಗ ಸಂಬಂಧಗಳು ಗೆಳೆಯರು ಯಾವುದೂ ಇರಲಿಲ್ಲ. ವೈಶಾಖ ಪೂರ್ಣಿಮೆ ದಿನವೇ ಬುದ್ಧ ಹುಟ್ಟಿದ್ದು, ಇದೇ ವೈಶಾಖ ಪೂರ್ಣಿಮೆ ದಿನ ಅವನಿಗೆ ಜ್ಞಾನ ಸಿಕ್ಕಿ ಬುದ್ಧನಾದನು.

ತನ್ನ ಸಂತೋಷವನ್ನು ಹಂಚಿಕೊಳ್ಳಲು ಅವನ ಐದು ಜನ ಗೆಳೆಯರನ್ನು ಹುಡುಕಿಕೊಂಡು ಸಾರನಾಥ ಕ್ಕೆ ಬಂದನು. ದೂರದಿಂದಲೇ ನೋಡಿದ ಒಬ್ಬ ಗೆಳೆಯ, ಇವನೆಂಥ ಸನ್ಯಾಸಿ, ನಾವು ಇನ್ನು ಮುಂದೆ ಇವನ ಜೊತೆ ಇದ್ದು ಸೇವೆ ಮಾಡುವುದು ಬೇಡ ಎಂದ. ಅಷ್ಟುಹೊತ್ತಿಗೆ ಬುದ್ಧನು ಅವರ ಹತ್ತಿರ ಬಂದಿದ್ದ. ಹತ್ತಿರದಿಂದ ನೋಡಿದ ಗೆಳೆಯರು, ‘ ಏ ಇವನು ಹಳೆಯ ಬುದ್ಧ ಅಲ್ಲ, ಇವನೇ ಬೇರೆ ರೀತಿ ಇದ್ದಾನೆ, ಅವನು ಇವನಾದರೂ ಈಗ ಅವನಾಗಿಲ್ಲ, ಈಗ ಇವನು ನಿಜವಾಗಿಯೂ ಬುದ್ಧ ನಾಗಿದ್ದಾನೆ. ಇವನಿಗೆ ಜ್ಞಾನೋದಯವಾಗಿದೆ ಎಂದು ಐದು ಶಿಷ್ಯರಿಗೂ ಅನ್ನಿಸಿತು. ಬುದ್ಧ ಹತ್ತಿರ ಬಂದು ಗೆಳೆಯರನ್ನು ಮಾತನಾಡಿಸಿ ತನಗೆ ದೊರೆತ ಜ್ಞಾನವನ್ನು ಐದು ಜನ ಶಿಷ್ಯರಿಗೆ ಉಪದೇಶ ಮಾಡಿದನು. ಅದನ್ನು ಐದು ಜನ ಶಿಷ್ಯರು ಎಷ್ಟು ಏಕಾಗ್ರತೆಯಿಂದ ಕುಳಿತು ಕೇಳಿದರೆಂದರ ಅವರನ್ನೇ ಅವರು ಮರೆತು ಹೋಗಿದ್ದರು.

ಒಬ್ಬ ಗೆಳೆಯ ಬುದ್ಧನಿಗೆ ಹೇಳಿದ. ನೀನು ಭಿಕ್ಷೆ ಬೇಡಲು ಹೋಗಿದ್ದರಿಂದ ನಿನ್ನ ಮೇಲೆ ನಂಬಿಕೆ ಹೊರಟು ಹೋಗಿತ್ತು. ಆದ್ದರಿಂದ ನಿನ್ನನ್ನು ಬಿಟ್ಟು ಬಂದೆವು. ಯಾಕೆ ಹಾಗೆ ಮಾಡಿದೆ? ಎಂದು ಕೇಳಿದರು. ಅದಕ್ಕೆ ಬುದ್ಧ ಹೇಳಿದ ನಿಸರ್ಗದ ವಿರುದ್ಧ ಅಂದರೆ ಸಹಜವಾದ ಮನುಷ್ಯನ ಬಯಕೆಗಳನ್ನು ತ್ಯಜಿಸಿ ಹೋದರೆ, ದೇಹಕ್ಕೆ ತೊಂದರೆಯಾಗುತ್ತದೆ. ದೇಹದ ತೊಂದರೆ ಮನಸ್ಸಿಗೆ ಹಿಂಸೆಯಾಗುತ್ತದೆ.

ದ್ವಾದಶಿ ಚಿಂತೆ ಇಟ್ಟುಕೊಂಡು ಏಕಾದಶಿ ಮಾಡಿದರೆ ಅರ್ಥವಿಲ್ಲವಾಗುತ್ತದೆ. ಆದರೆ ಊಟ ಬಿಡುವುದು ಎಂದರೆ ಭಗವಂತನ ಸಮೀಪವೇ ಕುಳಿತು ಹಸಿವು ಬಾಯಾರಿಕೆಗಳನ್ನು ಮರೆಯುವಷ್ಟು ಧ್ಯಾನದಲ್ಲಿ ಮುಳುಗಿದರೆ ಅದು ಏಕಾದಶಿ ಉಪವಾಸ ಆಗುತ್ತದೆ. ಸಾಧ್ಯವಿಲ್ಲವೆಂದರೆ ಮಧ್ಯಮ ಮಾರ್ಗ ಆಯ್ದುಕೊಳ್ಳಬೇಕು. ಅಂದರೆ ಈ ಪ್ರಪಂಚದ ಆಕರ್ಷಣೆಗಳು ನಮ್ಮನ್ನು ಎಳೆಯುತ್ತದೆ. ವಾಸನೆಗಳು ಸೆಳೆಯುತ್ತದೆ, ಮನಸ್ಸು ಬಯಸುತ್ತದೆ. ಸಿಗದಿದ್ದರೆ ಬಿಡುವುದಿಲ್ಲ. ಸಹಜವಾದ ಆಸೆಗಳನ್ನು ಕೊಲ್ಲುವ ಹಠಯೋಗಕ್ಕಿಂತ, ‘ರಾಜಯೋಗ’ ಒಳ್ಳೆಯದು ಅಗತ್ಯವಿರುವಷ್ಟು ಆಹಾರ ಕೊಟ್ಟು, ಮನಸ್ಸನ್ನ ಸ್ಥಿಮಿತದಲ್ಲಿಡುವಂತ ಮಧ್ಯಮ ಮಾರ್ಗ ಒಳ್ಳೆಯದು.

ಜ್ಞಾನ ಪಡೆದ ಮೇಲೆ ಗೌತಮನು, ಬುದ್ಧನಾದನು. ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಅವುಗಳನ್ನು ಪಾಲಿ ಭಾಷೆಯಲ್ಲಿ ತಿಳಿಸಿದನು. ಕಣ್ಣು ಮನಸ್ಸು ಯಾವಾಗಲೂ ಒಳ್ಳೆಯದನ್ನೇ ಗಮನಿಸಬೇಕು. ಆರ್ಯ ಸತ್ಯಗಳು, ಪಂಚಾಂಗ ಶೀಲ, ಮತ್ತು ಅಷ್ಟಾಂಗ ಮಾರ್ಗ ಇವು ಮೂರೂ ಬುದ್ಧನ ತತ್ವಗಳು. ಅಷ್ಟಾಂಗ ಮಾರ್ಗದಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರಿದರೆ, ಸಮ್ಯಕ್ ಜ್ಞಾನ ಸಿಗುತ್ತದೆ. ಅಂದರೆ ಸಮಾಧಿ ಸ್ಥಿತಿಗೆ ತಲುಪುತ್ತಾರೆ. ಇಂಥವರಿಗೆ ದೇವತೆಗಳೇ ಮಳೆಗರೆಯುತ್ತಾರೆ. ಇವರಿಗೆ ಏಳೆಂಟು ಜನ್ಮದ ಪೂರ್ವ ಸ್ಮರಣೆಗಳನ್ನು ನೆನಪಾಗುತ್ತದೆ. ಜೀವನದಲ್ಲಿ ಶಾಂತಿ, ದೃಢ ವಿಶ್ವಾಸ ಕಂಡುಕೊಳ್ಳಲು ಪ್ರತಿಯೊಂದು ಬೀಗಕ್ಕೂ ಅದರದೆ ಆದ ಕೀ ಇರುವಂತೆ, ಮನುಷ್ಯನ ಪ್ರತಿ ಸಮಸ್ಯೆಗೂ ಬುದ್ಧನ ತತ್ವಗಳಿಂದ ಪರಿಹಾರ ಸಿಗುತ್ತದೆ. (ವಾಟ್ಸಪ್​ ಬರಹ – ಆಶಾ ನಾಗಭೂಷಣ)

ಬುದ್ದಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ.