
ಭಾರತೀಯ ಆರ್ಥಿಕತೆ ಮತ್ತು ಸಂಸ್ಕೃತಿಯಲ್ಲಿ ಹಳದಿ ಲೋಹಕ್ಕೆ (ಚಿನ್ನ) ಯಾವಾಗಲೂ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ಆದರೆ ಆಷಾಢ ಬಂತು ಅಂದ್ರೆ ಸಾಕು ಚಿನ್ನ, ಬೆಳ್ಳಿ ದರಗಳು ಸಾಮಾನ್ಯವಾಗಿ ಕಡಿಮೆ ಆಗುತ್ತದೆ. ಆಷಾಢ ಮಾಸ ಜುಲೈ 15 ರಿಂದ ಆರಂಭವಾಗುತ್ತಿದೆ. ಸಾಮಾನ್ಯವಾಗಿ ಈ ಮಾಸದಲ್ಲಿ ಯಾವುದೇ ರೀತಿಯ ಸಾಂಪ್ರದಾಯಿಕ ಶುಭ ಸಂದರ್ಭಗಳು ಬರುವುದಿಲ್ಲ. ಮದುವೆ, ಉಪನಯನ, ಗೃಹಪ್ರವೇಶದಂತಹ ಯಾವುದೇ ದೊಡ್ಡ ಹಬ್ಬ ಹರಿದಿನಗಳು ಅಥವಾ ಮಂಗಲ ಕಾರ್ಯಗಳು ಈ ತಿಂಗಳಲ್ಲಿ ನಡೆಯುವುದಿಲ್ಲ. ಪರಿಣಾಮವಾಗಿ, ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ದೈನಂದಿನ ಖರೀದಿ ತೀರಾ ಕಡಿಮೆಯಾಗುತ್ತದೆ.
ಅಷ್ಟೇ ಅಲ್ಲದೆ, ಸನಾತನ ಸಂಪ್ರದಾಯದಲ್ಲಿ ಆಷಾಢವನ್ನು ಕೆಲವರು ‘ಶೂನ್ಯ ಮಾಸ’ ಅಥವಾ ‘ಅಶುಭ ಮಾಸ’ ಎಂದು ಭಾವಿಸುವುದರಿಂದ, ಈ ಅವಧಿಯಲ್ಲಿ ಹೊಸ ಆಭರಣಗಳನ್ನು ಖರೀದಿಸಲು ಮಾನಸಿಕವಾಗಿ ಅಷ್ಟಾಗಿ ಮುಂದಾಗುವುದಿಲ್ಲ. ಗ್ರಾಹಕರಿಲ್ಲದೆ ಜ್ಯುವೆಲ್ಲರಿ ಶೋರೂಮ್‌ಗಳು ಖಾಲಿ ಇರುವುದರಿಂದ, ಸ್ಥಳೀಯವಾಗಿ ಹಳದಿ ಲೋಹದ ಬೇಡಿಕೆ ಕುಸಿದು ಬೆಲೆಯೂ ಇಳಿಕೆಯ ಹಾದಿ ಹಿಡಿಯುತ್ತದೆ,
ಈ ಆಷಾಡ ಮಾಸವನ್ನು ಆರ್ಥಿಕ ತಜ್ಞರು ಮತ್ತು ಆಧ್ಯಾತ್ಮಿಕ ಚಿಂತಕರು ಎರಡು ವಿಭಿನ್ನ ಹಾಗೂ ಸುಂದರ ದೃಷ್ಟಿಕೋನಗಳಿಂದ ನೋಡುತ್ತಾರೆ. ಬೆಲೆ ತೀರಾ ಕುಸಿದಾಗ ಒಂದೇ ಬಾರಿ ದೊಡ್ಡ ಮೊತ್ತದ ಹಣ ಹಾಕದೆ, ಹಂತ ಹಂತವಾಗಿ ಸ್ವಲ್ಪ ಸ್ವಲ್ಪವೇ ಚಿನ್ನ ಖರೀದಿಸುವುದು ಜಾಣತನ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಆಷಾಢವನ್ನು ಕೇವಲ “ಅಶುಭ” ಎಂದು ದೂರ ಇಡುವ ಮುನ್ನ ಒಂದು ಪ್ರಮುಖ ವಿಷಯವನ್ನು ಗ್ರಾಹಕರು ನೆನಪಿನಲ್ಲಿಡಬೇಕು. ಈ ಮಾಸದಲ್ಲಿ ಮದುವೆಗಳು ನಡೆಯದಿದ್ದರೂ, ದೇವಿಯ ಆರಾಧನೆಗೆ ಮತ್ತು ಶಕ್ತಿ ಪೂಜೆಗೆ ಇದು ಅತ್ಯಂತ ಪವಿತ್ರವಾದ ಸಮಯವಾಗಿದೆ. ಬಾಣವನ್ನು ಮುಂದಕ್ಕೆ ಬಿಡುವ ಮುನ್ನ ಬಿಲ್ಲನ್ನು ಹಿಂದಕ್ಕೆ ಎಳೆದಂತೆ ಪ್ರಸ್ತುತ ಮಾರುಕಟ್ಟೆಯ ಈ ಬೆಲೆ ಇಳಿಕೆಯಾಗಿದೆ.
ಮುಂದಿನ ದಿನಗಳಲ್ಲಿ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳ ಸರಣಿ ಶುರುವಾಗುತ್ತದೆ ಮತ್ತು ಆಗ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಮತ್ತೆ ಗಗನಕ್ಕೇರುವ ಸಾಧ್ಯತೆ ಇರುತ್ತದೆ. ವಿವೇಚನೆಯುಳ್ಳ ಗ್ರಾಹಕರು ಈ ಆಷಾಢದ ಶಾಂತ ಅವಧಿಯನ್ನು ಬಳಸಿಕೊಂಡು, ಕಡಿಮೆ ದರದಲ್ಲಿ ಲಕ್ಷ್ಮಿ ಸ್ವರೂಪದ ಚಿನ್ನವನ್ನು ಖರೀದಿಸಿ ಭವಿಷ್ಯದ ಐಶ್ವರ್ಯವನ್ನು ಭದ್ರಪಡಿಸಿಕೊಳ್ಳಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 am, Wed, 17 June 26