Happy Ramadan Eid 2021: ರಂಜಾನ್ ಹಬ್ಬದ ಮಹತ್ವ, ಆಚರಣೆಯ ವಿಧಾನ ಹೀಗಿದೆ
Eid Mubarak 2021: ಈದ್ ಮುಬಾರಕ್ ಶುಭಾಶಯಗಳೊಂದಿಗೆ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಸ್ವಾಗತಿಸುತ್ತಾರೆ. ಈದ್-ಉಲ್-ಫಿತರ್ನ ಈ ದಿನ ಉಡುಗೊರೆಗಳು, ಆಹಾರ, ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಮಕ್ಕಳಿಗೆ ಹಿರಿಯರಿಂದ ಈಡಿ ಎಂದು ಕರೆಯಲ್ಪಡುವ ಹಣ ಮತ್ತು ಉಡುಗೊರೆಗಳನ್ನು ನೀಡಲಾಗುತ್ತದೆ.
ಮುಸ್ಲಿಮರ ಪವಿತ್ರ ಹಬ್ಬವೆಂದೆ ಖ್ಯಾತಿ ಹೊಂದಿರುವ ರಂಜಾನ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇಸ್ಲಾಮಿಕ್ ಕ್ಯಾಲೆಂಡರ್ನಲ್ಲಿ 9ನೇ ತಿಂಗಳನ್ನು ರಂಜಾನ್ ತಿಂಗಳಾಗಿ ಪರಿಗಣಿಸಲಾಗುತ್ತದೆ ಮತ್ತು ಈ ತಿಂಗಳ 30 ದಿನ ಮುಸ್ಲಿಮರು ಬೆಳಿಗ್ಗೆಯಿಂದ ಸಂಜೆವರೆಗೆ ಉಪವಾಸವಿದ್ದು, ತಮ್ಮ ಹಿಂದಿನ ಪಾಪವನ್ನು ದೂರ ಮಾಡಿಕೊಳ್ಳಲು ಅಲ್ಲಹನನ್ನು ಕ್ಷಮೆ ಕೋರುತ್ತಾರೆ. ರಂಜಾನ್ ತಿಂಗಳು ಮುಗಿದು ಶವ್ವಾಲ್ ತಿಂಗಳ ಆರಂಭದ ಮೊದಲ ದಿನವೇ ಈದ್-ಉಲ್-ಫಿತರ್ ಅನ್ನು ವಿಶ್ವದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ.
ಇಸ್ಲಾಮಿಕ್ ಕ್ಯಾಲೆಂಡರ್ನ ಪ್ರಕಾರ ಶವ್ವಾಲ್ ಅಮಾವಾಸ್ಯೆಯನ್ನು ನೋಡುವುದರೊಂದಿಗೆ ಒಂದು ತಿಂಗಳ ಕಾಲ ಮಾಡಿದ ಉಪವಾಸದ ಅವಧಿಯು ಕೊನೆಗೊಳ್ಳುತ್ತದೆ ಮತ್ತು ರಂಜಾನ್ನ ಕೊನೆಯ ದಿನದಂದು ಅರ್ಧ ಚಂದ್ರಾಕಾರವನ್ನು ನೋಡಿದ ನಂತರ ಈದ್-ಉಲ್-ಫಿತರ್ ಆಚರಣೆ ಮಾಡಲಾಗುತ್ತದೆ. ಈದ್-ಉಲ್-ಫಿತರ್ ಅನ್ನು ಉಪವಾಸ ಮುರಿಯುವ ಹಬ್ಬ ಎಂದು ಕೂಡ ಕರೆಯಲಾಗುತ್ತದೆ.
ರಂಜಾನ್ ಹಬ್ಬವನ್ನು ಸೌದಿ ಅರೇಬಿಯಾ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಚಂದ್ರನನ್ನು ಯಾವಾಗಲೂ ಮೊದಲು ನೋಡಲಾಗುತ್ತದೆ. ಈ ವರ್ಷ, ಈದ್ ಮೇ 13 ರ ಸಂಜೆ ಪ್ರಾರಂಭವಾಗಿ ಮೇ 14 ರ ವರೆಗೆ ಆಚರಣೆಯಲ್ಲಿ ಇರುತ್ತದೆ. ಅದರಂತೆ ಇಂದು ಮುಸ್ಲಿಮ್ರು ಈದ್ ಆಚರಣೆ ಮಾಡುತ್ತಾರೆ.
ಇತಿಹಾಸ ಇಸ್ಲಾಂ ಧರ್ಮದ ಪ್ರಕಾರ, ರಂಜಾನ್ ತಿಂಗಳಲ್ಲಿ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಅನ್ನು ಪ್ರವಾದಿ ಮುಹಮ್ಮದ್ ಬಹಿರಂಗಪಡಿಸಿದರು ಎಂದು ನಂಬಲಾಗಿದೆ. ಈದ್ ಇಸ್ಲಾಮಿಕ್ ಪ್ರಾರ್ಥನೆಯ ಮೂಲಕ ಆರಂಭವಾಗುತ್ತದೆ. ಈ ಪ್ರಾರ್ಥನೆಯ ನಂತರ ಧರ್ಮೋಪದೇಶ ನಡೆಯುತ್ತದೆ. ಬಳಿಕ ಮುಸ್ಲಿಮರು ಅಲ್ಲಾಹನನ್ನು ಕ್ಷಮೆ, ಕರುಣೆ, ಶಾಂತಿ ಕೋರುತ್ತಾರೆ ಮತ್ತು ಇದು ದೇವರ ಆರ್ಶೀವಾದ ಪಡೆಯಲು ಇರುವ ಮಾರ್ಗ ಎಂದು ನಂಬಲಾಗಿದೆ.
ಆಚರಣೆಗಳು ಈದ್-ಉಲ್-ಫಿತರ್ ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರ್ಥನೆ ಮತ್ತು ಧರ್ಮೋಪದೇಶಗಳಿಗೆ ಹಾಜರಾಗುತ್ತಾರೆ. ಈ ದಿನ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದು ತಿಂಗಳ ಉಪವಾಸದ ನಂತರ ತಾವು ಇಷ್ಟಪಟ್ಟಂತೆ ತಿನ್ನಲು ಮುಕ್ತರಾಗಿದ್ದಾರೆ. ಪ್ರತಿ ಮನೆಯಲ್ಲೂ ಪುಲಾವ್, ಸಲಾನ್, ಬಿರಿಯಾನಿ, ಹಲೀಮ್, ನಿಹಾರಿ, ಚಾಪ್ಲಿ ಕಬಾಬ್, ಕೋಫ್ಟೆ ಮತ್ತು ಇನ್ನು ಹೆಚ್ಚು ರುಚಿಕರವಾದ ಆಹಾರವನ್ನು ಸಿದ್ಧಪಡಿಸುತ್ತಾರೆ.
ಸಿಹಿ ತಿಂಡಿಗಳಾದ ಸೆವಿಯನ್, ಸಂಪೂರ್ಣ ಕೊರ್ಮಾ (ಹಾಲಿನಲ್ಲಿ ಬೇಯಿಸಿದ ಸಿಹಿಯಾದ ಪದಾರ್ಥ), ಶಾಹಿ ತುಕ್ಡಾ ಮತ್ತು ರೋಸ್ ಶರ್ಬತ್ ಕುಟುಂಬ ಸದಸ್ಯರು, ಅತಿಥಿಗಳು ಮತ್ತು ಬಾಂಧವರಿಗೆ ನೀಡಲಾಗುತ್ತದೆ. ಮುಸ್ಲಿಮರು ಈ ದಿನದಂದು ಹೊಸ ಬಟ್ಟೆ ಧರಿಸುತ್ತಾರೆ. ಈದ್ ಮುಬಾರಕ್ ಶುಭಾಶಯಗಳೊಂದಿಗೆ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಸ್ವಾಗತಿಸುತ್ತಾರೆ. ಈ ಸಂದರ್ಭದಲ್ಲಿ ಉಡುಗೊರೆಗಳು, ಆಹಾರ, ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಮಕ್ಕಳಿಗೆ ಹಿರಿಯರಿಂದ ಈಡಿ ಎಂದು ಕರೆಯಲ್ಪಡುವ ಹಣ ಮತ್ತು ಉಡುಗೊರೆಗಳನ್ನು ನೀಡಲಾಗುತ್ತದೆ.
ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಹಬ್ಬ ಸರಳವಾಗಿರಲಿದ್ದು, ಕೇವಲ ಕುಟುಂಬ ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ಆಚರಿಸಬೇಕಾಗಿದೆ.
ಇದನ್ನೂ ಓದಿ:
Eid 2021 Special ರಂಜಾನ್ ಹಬ್ಬದ ವಿಶೇಷ ಹೆಚ್ಚಿಸಲು ಇಲ್ಲಿವೆ ಐದು ಸುಲಭ ತಿನಿಸುಗಳು
Published On - 10:36 am, Fri, 14 May 21