ಕಾಲು ತೊಳೆಯುವಾಗ ಹೇಗೆ ತೊಳೆಯ ಬೇಕು? ಈ ಪ್ರಕಾರವಾಗಿ ಪಾದ ತೊಳೆದರೆ ಶನಿಕಾಟ ನಿಶ್ಚಿತ!

ಮನುಷ್ಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾದ ಜೀವಿ. ಪ್ರಾಣಿಗಳಿಗೆ ಮಾನವನಿಗಿದ್ದಷ್ಟು ಮಡಿ, ನಿಯಮಗಳಿಲ್ಲ. ಧರ್ಮದ ದೃಷ್ಟಿಯಿಂದ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಸ್ವಚ್ಛತೆಯೆಂಬುದು ಮಾನವನ ಆದ್ಯ ಕರ್ತವ್ಯವೇ ಆಗಿದೆ.

ಕಾಲು ತೊಳೆಯುವಾಗ ಹೇಗೆ ತೊಳೆಯ ಬೇಕು? ಈ ಪ್ರಕಾರವಾಗಿ ಪಾದ ತೊಳೆದರೆ ಶನಿಕಾಟ ನಿಶ್ಚಿತ!
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Feb 16, 2023 | 3:46 PM

ಮನುಷ್ಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾದ ಜೀವಿ. ಪ್ರಾಣಿಗಳಿಗೆ ಮಾನವನಿಗಿದ್ದಷ್ಟು ಮಡಿ, ನಿಯಮಗಳಿಲ್ಲ. ಧರ್ಮದ ದೃಷ್ಟಿಯಿಂದ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಸ್ವಚ್ಛತೆಯೆಂಬುದು ಮಾನವನ ಆದ್ಯ ಕರ್ತವ್ಯವೇ ಆಗಿದೆ. ಇಂತಹ ಸ್ವಚ್ಛತೆಗೂ ಕೆಲವು ನಿಯಮಗಳಿವೆ. ಕಾಲು ಹೇಗೆ ತೊಳೆಯಬೇಕು? ಎಂಬುದರ ಕುರಿತಾಗಿ ಚಿಂತನೆ ಮಾಡೋಣ. ಹೊರಗಡೆ ಹೋಗಿ ಬಂದಾಗ ಕಾಲನ್ನು ತೊಳೆಯುವುದು ಪದ್ಧತಿ. ಸ್ವಾಭಾವಿಕವಾಗಿ ನಾವು ಚಪ್ಪಲಿಯನ್ನು ಹಾಕಿಕೊಂಡೇ ಕಾಲು ತೊಳೆಯುತ್ತೇವೆ. ಆದರೆ ಈ ರೀತಿ ಮಾಡುವುದು ಒಳ್ಳೆಯ ಕ್ರಮವಲ್ಲ. ಎರಡನೇಯ ಕ್ರಮವೆಂದರೆ ನಾವು ಕಾಲು ತೊಳೆಯುವಾಗ ಒಂದು ಕಾಲಿನಿಂದ ಇನ್ನೊಂದು ಕಾಲನ್ನು ಉಜ್ಜಿಕೊಳ್ಳುತ್ತೇವೆ. ಈ ರೀತಿ ಮಾಡಲೇಬಾರದು. ಇದರಿಂದ ದಾರಿದ್ರ್ಯ ಸಂಭವಿಸುತ್ತದೆ. ಅಲ್ಲದೇ ಕಾಲು ತೊಳೆಯುವಾಗ ಅಥವಾ ತೊಳೆಸುವಾಗ ಹಿಮ್ಮಡಿಯು ಸಂಪೂರ್ಣ ಒದ್ದೆ ಆಗಲೇಬೇಕು. ಇಲ್ಲದೇ ಇದ್ದಲ್ಲಿ ಶನಿಯ ಕಾಟವೆಂಬುದು ನಿಶ್ಚಿತ. ನಳ ಮಹಾರಾಜನು ತನ್ನ ಸ್ಥಾನ ಕಳೆದುಕೊಳ್ಳಲು ಇದೇ ಕಾರಣ.

ಧರ್ಮಿಷ್ಠನಾದ ನಳನು ತನ್ನ ರಾಜ್ಯವನ್ನು ಅತ್ಯಂತ ಸುಭಿಕ್ಷೆಯಿಂದ ಧರ್ಮ ಸಮ್ಮತವಾಗಿ ಆಳುತ್ತಿದ್ದ. ಒಂದು ದಿನ ಅವನ ಆಸ್ಥಾನಕ್ಕೆ ಒಬ್ಬ ಉತ್ತಮ ಜ್ಞಾನವುಳ್ಳ ಬಡವ ಬರುತ್ತಾನೆ. ಅವನ ಜ್ಞಾನದ ವ್ಯಾಪ್ತಿ ಕಂಡು ಸಂತೋಷವಾಗುತ್ತದೆ ನಳನಿಗೆ. ಆದರೆ ಅವನ ದಾರಿದ್ರ್ಯವನ್ನು ಕಂಡು ಅತ್ಯಂತ ಬೇಸರವಾಗುತ್ತದೆ ಮಹಾರಾಜನಿಗೆ. ಅವನಿಗೆ ಬೇಕಾದಷ್ಟು ಸಂಪತ್ತನ್ನು ನಳನು ಕೊಡುತ್ತಾನೆ. ಆದರೆ ಆ ಸಂಪತ್ತು ಜ್ಞಾನಿ ಮನೆಗೊಯ್ಯುತ್ತಿರಲು ಕಳ್ಳರ ಪಾಲಾಗುತ್ತದೆ. ಇದನ್ನು ನಳನಿಗೆ ತಿಳಿಯಪಡಿಸಿದಾಗ ನಳನು ಪುನಃ ಅಷ್ಟೇ ಸಂಪತ್ತನ್ನು ತನ್ನ ಸೈನಿಕರಲ್ಲಿ ಕೊಟ್ಟುಬರಲು ಹೇಳುತ್ತಾನೆ. ಆ ಸಂಪತ್ತು ಅವನ ಮನೆಯಲ್ಲಿ ಇಡುತ್ತಿದ್ದಂತೆ ಭೂಮಿಯೊಳಗೆ ಮಾಯವಾಗುತ್ತದೆ.

ಈ ಕುರಿತಾಗಿ ರಾಜನು ವಿಮರ್ಶಿಸಿದಾಗ ಇದು ಶನಿಯ ಕಾಟ ಎಂದು ಹೇಳುತ್ತಾರೆ ರಾಜ ಪುರೋಹಿತರು. ತನ್ನ ರಾಜ್ಯದಲ್ಲಿ ಸಾತ್ವಿಕರಿಗೆ ಈ ರೀತಿಯಾಗಲು ಹೇಗೆ ಸಾಧ್ಯ? ಶನಿಕಾಟ ಇತ್ಯಾದಿ ಸುಳ್ಳು ಎಂದು ಹೇಳುತ್ತಾನೆ ರಾಜ. ಹೀಗೆ ಕಾಲ ಸಾಗುತ್ತಿರುವಾಗ ಒಂದು ದಿನ ನಳನು ವಾಯುವಿಹಾರದಿಂದ ಬರುವಾಗ ದಮಯಂತಿಯು ಅವನ ಪಾದ ತೊಳೆಯುವಾಗ ಹಿಮ್ಮಡಿ ಒದ್ದೆಯಾಗುವುದಿಲ್ಲ. ಇದೇ ಸಮಯದಲ್ಲಿ ಶನಿಯು ನಳನ ಜೀವನದಲ್ಲಿ ಪ್ರವೇಶಿಸುತ್ತಾನೆ. ನಂತರ ಕ್ರಮೇಣ ನಳನು ರಾಜ್ಯ ಭ್ರಷ್ಟನಾಗುತ್ತಾನೆ. ಹೀಗೆ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಾ ಹಲವು ಅಪವಾದಕ್ಕೆ ಗುರಿಯಾಗುತ್ತಾನೆ.

ಇದನ್ನೂ ಓದಿ:ಪತ್ನಿ ಕಲಹ ನಿವಾರಣೆಗೆ ಯಾವ ವ್ರತ ಮಾಡಬೇಕು? ಇಲ್ಲಿದೆ ನೋಡಿ

ಎಷ್ಟೆಂದರೆ ರಾಜನಾದ ನಳನು ಎಲ್ಲಿದ್ದಾನೆಂಬುದೇ ತಿಳಿಯದ ಪರಿಸ್ಥಿತಿ ಉಂಟಾಗುತ್ತದೆ. ದೈವಜ್ಞರು ಜ್ಞಾನಿಗಳು ಈ ಕುರಿತಾಗಿ ಚಿಂತನೆ ನಡೆಸಿದಾಗ ಇದು ಶನಿಕಾಟವೆಂದು ತಿಳಿಯುತ್ತದೆ. ಹೇಗೆ ಎಂಬುದಾಗಿ ನಡೆದ ಘಟನೆಗಳನ್ನು ವಿಮರ್ಶಿಸಿದಾಗ ಪಾದ ತೊಳೆಯುವಲ್ಲಾದ ಅಚಾತುರ್ಯ ಕಂಡುಬರುತ್ತದೆ. ಆಗ ಶಾಸ್ತ್ರವನ್ನು ಪರಾಮರ್ಶಿಸಿದಾಗ ತಿಳಿಯುತ್ತದೆ ಶನಿಯ ಪ್ರವೇಶವೆಂಬುದು ಮಂಡಿಯ ಕೆಳಭಾಗದಲ್ಲಾಗುತ್ತದೆ. ಅಲ್ಲಿಂದ ಅವನ ಪ್ರಭಾವ ಆರಂಭವಾಗುತ್ತದೆ ಎಂದು. ಆದಕಾರಣ ಪಾದತೊಳೆಯುವಾಗ ಹಿಮ್ಮಡಿ ಒದ್ದೆಯಾಗಬೇಕು ಮತ್ತು ಒಂದು ಕಾಲಿಂದ ಇನ್ನೊಂದು ಕಾಲನ್ನು ಉಜ್ಜಬಾರದು.

ಕೆಲವು ಶನಿ ಪ್ರವೇಶವಾಗುವ ಸಮಯಗಳು ಮತ್ತು ಸಂದರ್ಭಗಳನ್ನು ಶಾಸ್ತ್ರೀಯವಾಗಿ ಹೇಳುವುದಾದರೆ – ಮುಸ್ಸಂಜೆಯಲ್ಲಿ ಮಲಗುವುದು, ಮುಸ್ಸಂಜೆಯಲ್ಲಿ ಆಹಾರ ಸೇವಿಸುವುದು, ಕಾಲು ತೊಳೆಯುವುವಾಗ ಹಿಮ್ಮಡಿ ಒದ್ದೆಯಾಗದಿರುವುದು, ಕಾಲಿಂದ ಕಾಲನ್ನು ತಿಕ್ಕುವುದು, ಕತ್ತರಿಯಲ್ಲಿ (ಎರಡು ಬೆರಳುಗಳಿಂದ) ಹಣ ನೀಡುವುದು, ರಾತ್ರಿ ಕಸಗುಡಿಸುವುದು, ಉಣ್ಣುವ ಬಟ್ಟಲನ್ನು ಕಾಲಿಂದ ಮೆಟ್ಟುವುದು, ಮಂಗಳವಾರ ಕ್ಷೌರ ಮಾಡಿಸುವುದು ಇತ್ಯಾದಿ ಕೆಲವು ಸಂದರ್ಭಗಳು ನಮ್ಮ ಅವನತಿಗೆ ಕಾರಣವಾಗುತ್ತದೆ. ಶನಿ ಕಾಟವೆಂದರೆ ಅಥವಾ ಶನಿಪ್ರವೇಶವೆಂದರೆ ನಾವು ಮಾಡಿದ ತಪ್ಪಿಗೆ ಶಿಕ್ಷೆಯಷ್ಟೆ. ಆದ ಕಾರಣ ಇಂತಹ ಕೆಲವು ಸಂದರ್ಭಗಳನ್ನು ನಾಜೂಕಾಗಿ ಮಾಡಬೇಕು.

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು