ನವರಾತ್ರಿ ವಿಶೇಷ: ಕಾಳಿ ಮತ್ತು ಕಾಲರಾತ್ರಿ ಒಂದೇ ದೇವಿಯೇ ಅಥವಾ ಭಿನ್ನವೇ? ಇಲ್ಲಿದೆ ಸಂಪೂರ್ಣ ವಿವರ!

ನವರಾತ್ರಿಯ ಏಳನೇ ದಿನ ಕಾಲರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಕಾಲರಾತ್ರಿ ಮತ್ತು ಕಾಳಿ ಇಬ್ಬರೂ ದುರ್ಗಾ ದೇವಿಯ ಪ್ರಬಲ ಸ್ವರೂಪಗಳು. ಆದರೂ ಧರ್ಮಗ್ರಂಥಗಳ ಪ್ರಕಾರ ಇವರ ಸ್ವರೂಪ, ಪೂಜಾ ವಿಧಾನ ಹಾಗೂ ಮಹತ್ವದಲ್ಲಿ ಭಿನ್ನತೆಗಳಿವೆ. ಕಾಲರಾತ್ರಿ ನವದುರ್ಗೆಯಾದರೆ, ಕಾಳಿ ದಶಮಹಾವಿದ್ಯೆ. ಇಲ್ಲಿ ಇಬ್ಬರ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ತಿಳಿಸಲಾಗಿದೆ.

ನವರಾತ್ರಿ ವಿಶೇಷ: ಕಾಳಿ ಮತ್ತು ಕಾಲರಾತ್ರಿ ಒಂದೇ ದೇವಿಯೇ ಅಥವಾ ಭಿನ್ನವೇ? ಇಲ್ಲಿದೆ ಸಂಪೂರ್ಣ ವಿವರ!
ಕಾಳಿ ಮತ್ತು ಕಾಲರಾತ್ರಿ

Updated on: Oct 17, 2026 | 11:35 AM

ಪವಿತ್ರವಾದ ಶರನ್ನವರಾತ್ರಿ ಮಹೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲ್ಪಡುತ್ತಿದೆ. ಈ ಒಂಬತ್ತು ದಿನಗಳಲ್ಲಿ ಜಗನ್ಮಾತೆ ದುರ್ಗಾದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು ವಿಧಿ-ವತ್ತಾಗಿ ಪೂಜಿಸಲಾಗುತ್ತದೆ. ನವರಾತ್ರಿಯ ಏಳನೇ ದಿನವು ದುರ್ಗಾ ಮಾತೆಯ ಅತ್ಯಂತ ಪ್ರಭಾವಶಾಲಿ ಹಾಗೂ ಉಗ್ರ ಸ್ವರೂಪವಾದ ಕಾಲರಾತ್ರಿಗೆ ಸಮರ್ಪಿತವಾಗಿದೆ. ಕಾಲರಾತ್ರಿಯ ರೂಪವು ಭಯಾನಕವಾಗಿದ್ದರೂ, ಇವರನ್ನು ಅಂಧಕಾರ, ಭಯ ಮತ್ತು ನಕಾರಾತ್ಮಕ ಶಕ್ತಿಗಳನ್ನು ನಾಶಮಾಡುವ ದೇವತೆ ಎಂದು ಪೂಜಿಸಲಾಗುತ್ತದೆ. ಆದಾಗ್ಯೂ, ಅನೇಕ ಬಾರಿ ಜನರು ಕಾಲರಾತ್ರಿ ಮತ್ತು ಕಾಳಿಯನ್ನು ಒಂದೇ ದೇವತೆ ಎಂದು ಗೊಂದಲಕ್ಕೊಳಗಾಗುತ್ತಾರೆ. ಆದರೆ ಧರ್ಮಗ್ರಂಥಗಳ ಪ್ರಕಾರ ಇಬ್ಬರ ಸ್ವರೂಪ ಮತ್ತು ಪೂಜಾ ವಿಧಾನದಲ್ಲಿ ಭಿನ್ನತೆಗಳಿವೆ. ಕಾಳಿ ಮತ್ತು ಕಾಲರಾತ್ರಿ ಬೇರೆ ಬೇರೆ ದೇವತೆಗಳೇ ಅಥವಾ ಒಂದೇ ಶಕ್ತಿಯ ಎರಡು ರೂಪಗಳೇ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕಾಳಿಯ ದಿವ್ಯ ಸ್ವರೂಪ:

ಕಾಳಿಯನ್ನು ಹತ್ತು ಮಹಾವಿದ್ಯೆಗಳಲ್ಲಿ (ದಶ ಮಹಾವಿದ್ಯಾ) ಒಬ್ಬ ಪ್ರಮುಖ ದೇವಿ ಎಂದು ಪರಿಗಣಿಸಲಾಗಿದೆ. ಇವರನ್ನು ‘ಮಹಾಕಾಳಿ’ ಎಂದೂ ಕರೆಯಲಾಗುತ್ತದೆ. ಇವರ ಸ್ವರೂಪವು ಶಕ್ತಿ, ಸಂಹಾರ ಹಾಗೂ ದುಷ್ಟರ ವಿನಾಶದ ಸಂಕೇತವಾಗಿದೆ. ಕಾಳಿಯ ಕೊರಳಿನಲ್ಲಿ ತಲೆಬುರುಡೆಗಳ ಮಾಲೆ ಇರುತ್ತದೆ ಮತ್ತು ಕೈಗಳಲ್ಲಿ ಕತ್ತಿ ಗೋಚರಿಸುತ್ತವೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾಳಿಯು ಅಧರ್ಮ ಹಾಗೂ ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡುವ ದೇವಿಯಾಗಿದ್ದಾರೆ. ತಂತ್ರ ಸಾಧನೆಯಲ್ಲೂ ಇವರಿಗೆ ವಿಶೇಷವಾದ ಮಹತ್ವವಿದೆ. ಇವರ ರೌದ್ರ ರೂಪವು ನಕಾರಾತ್ಮಕತೆಯ ಮೇಲಿನ ವಿಜಯದ ಸಂದೇಶವನ್ನು ಸಾರುತ್ತದೆ.

ಕಾಲರಾತ್ರಿಯ ದಿವ್ಯ ಸ್ವರೂಪ:

ಕಾಲರಾತ್ರಿಯು ನವದುರ್ಗೆಯರ ಒಂಬತ್ತು ರೂಪಗಳಲ್ಲಿ ಏಳನೇ ಸ್ವರೂಪವಾಗಿದ್ದಾರೆ. ನವರಾತ್ರಿಯ ಏಳನೇ ದಿನ ಈ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ಹೆಸರಿನಲ್ಲಿ ಬರುವ ‘ಕಾಲ್’ ಎಂದರೆ ಕಾಲ, ಮೃತ್ಯು ಅಥವಾ ಅಂಧಕಾರ ಎಂದರ್ಥ ಹಾಗೂ ‘ರಾತ್ರಿ’ ಎಂದರೆ ರಾತ್ರಿ ಎಂದರ್ಥ. ಮಾ ಕಾಲರಾತ್ರಿಯ ಮೈಬಣ್ಣ ಕಪ್ಪು , ಕೂದಲು ಮುಕ್ತವಾಗಿ ಬಿಡಲ್ಪಟ್ಟಿರುತ್ತದೆ ಮತ್ತು ಕೊರಳಲ್ಲಿ ವಿದ್ಯುತ್ ಹೊಳಪಿನಂತಹ ಕಾಂತಿಯುತ ಮಾಲೆಯು ಶೋಭಿಸುತ್ತಿರುತ್ತದೆ. ದೇವಿಯ ವಾಹನವು ಕತ್ತೆ (ಗರ್ಧಭ). ದೇವಿಯ ಸ್ವರೂಪವು ಅತ್ಯಂತ ಉಗ್ರವಾಗಿದ್ದರೂ, ತನ್ನ ಭಕ್ತರಿಗೆ ಶುಭಫಲಗಳನ್ನು ಕರುಣಿಸುವ ದೇವಿಯಾಗಿದ್ದಾರೆ. ಈ ಕಾರಣದಿಂದ ಕಾಲರಾತ್ರಿಯನ್ನು ‘ಶುಭಂಕರಿ’ ಎಂದೂ ಕರೆಯುತ್ತಾರೆ. ಈ ದೇವಿಯನ್ನು ಆರಾಧಿಸುವುದರಿಂದ ಭಯ ದೂರವಾಗಿ, ಭಕ್ತರಿಗೆ ಧೈರ್ಯ ಮತ್ತು ರಕ್ಷಣೆಯ ವರದಾನ ಸಿಗುತ್ತದೆ.

ಕಾಳಿ ಮತ್ತು ಕಾಲರಾತ್ರಿ ನಡುವಿನ ಪ್ರಮುಖ ವ್ಯತ್ಯಾಸಗಳು:

ಕಾಳಿ ಮತ್ತು ಕಾಲರಾತ್ರಿ ಇಬ್ಬರನ್ನೂ ಆದಿಶಕ್ತಿಯ ಉಗ್ರ ಹಾಗೂ ಶಕ್ತಿಶಾಲಿ ಸ್ವರೂಪಗಳೆಂದೇ ಪೂಜಿಸಲಾಗುತ್ತದೆ. ಇಬ್ಬರ ಸಂಬಂಧವೂ ದುಷ್ಟ ಶಕ್ತಿಗಳ ವಿನಾಶದೊಂದಿಗಿದೆ. ಆದರೂ ಧಾರ್ಮಿಕ ಪರಂಪರೆಗಳಲ್ಲಿ ಇವರ ಸ್ವರೂಪ, ಸ್ಥಾನ ಮತ್ತು ಪೂಜಾ ವಿಧಾನಗಳಲ್ಲಿ ಕೆಲವು ಪ್ರಮುಖ ವ್ಯತ್ಯಾಸಗಳನ್ನು ತಿಳಿಸಲಾಗಿದೆ. ಕಾಲರಾತ್ರಿಯ ಪೂಜೆಯನ್ನು ನವರಾತ್ರಿಯ ಸಪ್ತಮಿಯಂದು ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಸಾಮಾನ್ಯ ವಿಧಿ-ವಿಧಾನಗಳಂತೆ ಮಾಡಲಾಗುತ್ತದೆ. ಭಕ್ತರು ಭಯದಿಂದ ಮುಕ್ತಿ ಮತ್ತು ಧೈರ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಆದರೆ ಕಾಳಿಯ ಆರಾಧನೆಯು ತಂತ್ರ ಸಾಧನೆ ಸೇರಿದಂತೆ ಕೆಲವು ವಿಶೇಷ ಪರಂಪರೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಆದರೂ ಸಾಮಾನ್ಯ ಭಕ್ತಿ ಪದ್ಧತಿಯಿಂದಲೂ ಅನೇಕರು ಇವರನ್ನು ಆರಾಧಿಸುತ್ತಾರೆ.

ಇದನ್ನೂ ಓದಿ: ದುರ್ಗಾ ದೇವಿಯ ಕೈಯಲ್ಲಿರುವ ಆಯುಧಗಳ ರಹಸ್ಯವೇನು? ತ್ರಿಶೂಲದಿಂದ ಚಕ್ರದವರೆಗೆ ಎಲ್ಲದರ ಮಹತ್ವ ಇಲ್ಲಿದೆ!

ಪೌರಾಣಿಕ ನಂಬಿಕೆಗಳು:

ಕಾಲರಾತ್ರಿಯನ್ನು ಅಂಧಕಾರ, ಭಯ ಮತ್ತು ನಕಾರಾತ್ಮಕತೆಯನ್ನು ಹೊಡೆದೋಡಿಸುವ ದೇವಿಯೆಂದು ನಂಬಲಾಗಿದೆ. ಕಾಳಿಯನ್ನು ರಕ್ತಬೀಜಾಸುರನ ವಧೆ, ಅಧರ್ಮದ ನಾಶ ಮತ್ತು ದುಷ್ಟ ಶಕ್ತಿಗಳ ಮೇಲೆ ವಿಜಯ ಸಾಧಿಸಿದ ಕಥೆಗಳೊಂದಿಗೆ ಪ್ರಮುಖವಾಗಿ ಸ್ಮರಿಸಲಾಗುತ್ತದೆ.

ಕಾಳಿ ಮತ್ತು ಕಾಲರಾತ್ರಿ ಒಂದೇ ದೇವಿಯೇ?

ಧಾರ್ಮಿಕ ನಂಬಿಕೆಗಳಲ್ಲಿ ಕಾಳಿ ಮತ್ತು ಕಾಲರಾತ್ರಿ ಇಬ್ಬರ ಸ್ವರೂಪಗಳಲ್ಲಿ ಕೆಲವೊಂದು ಸಾಮ್ಯತೆಗಳು ಕಂಡುಬಂದರೂ, ಪೂಜಾ ಪರಂಪರೆಯಲ್ಲಿ ಇವರ ಗುರುತು ಭಿನ್ನವಾಗಿದೆ. ಕಾಲರಾತ್ರಿಯು ನವದುರ್ಗೆಯರ ಏಳನೇ ಸ್ವರೂಪವಾಗಿದ್ದರೆ, ಕಾಳಿಯು ದಶಮಹಾವಿದ್ಯೆಗಳಲ್ಲಿ ಒಬ್ಬರಾಗಿದ್ದಾರೆ. ಒಟ್ಟಾರೆಯಾಗಿ, ಈ ಇಬ್ಬರೂ ದೇವತೆಗಳನ್ನು ಸಾಕ್ಷಾತ್ ಆದಿಶಕ್ತಿಯ ಅತ್ಯಂತ ಶಕ್ತಿಶಾಲಿ ಹಾಗೂ ರಕ್ಷಣಾತ್ಮಕ ರೂಪಗಳೆಂದೇ ಭಕ್ತರು ಭಕ್ತಿಯಿಂದ ಆರಾಧಿಸುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us