ಡಿಸೆಂಬರ್ 1 ರಂದು ಕಾಲ ಭೈರವ ಅಷ್ಟಮಿ: ಶಿವನ ಉಗ್ರ ಅವತಾರದ ಕಥೆ ಮತ್ತು ವಿಶೇಷ ಪೂಜಾ ನಿಯಮ ಇಲ್ಲಿದೆ

ಕಾಲ ಭೈರವ ಜಯಂತಿ (ಕಾಲ ಭೈರವ ಅಷ್ಟಮಿ) ಶಿವನ ಉಗ್ರ ರೂಪವಾದ ಕಾಲ ಭೈರವನ ಅವತಾರದ ದಿನ. ಭಯ, ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುವ ಇವನನ್ನು ಕಾಶಿಯ ರಕ್ಷಕ 'ಕಾಶಿ ಕೊತ್ವಾಲ್' ಎಂದೂ ಪೂಜಿಸಲಾಗುತ್ತದೆ. ಬ್ರಹ್ಮನ ಅಹಂಕಾರವನ್ನು ನಿಗ್ರಹಿಸಿ ಕಾಶಿ ರಕ್ಷಕನಾದ ಪೌರಾಣಿಕ ಕಥೆ, ಪೂಜಾ ವಿಧಿ, ಮಂತ್ರ ಜಪ ಮತ್ತು ಶ್ವಾನ ಸೇವೆ ಮೂಲಕ ಭಕ್ತರು ಧೈರ್ಯ, ನೆಮ್ಮದಿ ಪಡೆಯಬಹುದು.

ಡಿಸೆಂಬರ್ 1 ರಂದು ಕಾಲ ಭೈರವ ಅಷ್ಟಮಿ: ಶಿವನ ಉಗ್ರ ಅವತಾರದ ಕಥೆ ಮತ್ತು ವಿಶೇಷ ಪೂಜಾ ನಿಯಮ ಇಲ್ಲಿದೆ
ಕಾಲ ಭೈರವ ಅಷ್ಟಮಿ

Updated on: Nov 29, 2026 | 10:45 AM

ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿರುವ ‘ಕಾಲ ಭೈರವ ಜಯಂತಿ’ ಈ ವರ್ಷ ಡಿಸೆಂಬರ್ 1, ಮಂಗಳವಾರದಂದು ಬಂದಿದೆ. ಕಾಲ ಭೈರವ ಅಷ್ಟಮಿ ಎಂದೂ ಕರೆಯಲ್ಪಡುವ ಈ ಶುಭ ದಿನವು ಶಿವನ ಉಗ್ರ ಮತ್ತು ನ್ಯಾಯದ ಸ್ವರೂಪವಾದ ಕಾಲ ಭೈರವನ ಅವತಾರದ ಸಂಕೇತವಾಗಿದೆ. ಕಾಲದ ಅಧಿಪತಿಯಾದ ಇವನು ತನ್ನ ಭಕ್ತರನ್ನು ಸಕಲ ಭಯ, ನಕಾರಾತ್ಮಕ ಶಕ್ತಿಗಳು ಹಾಗೂ ಜೀವನದ ಕಷ್ಟಗಳಿಂದ ಸದಾ ರಕ್ಷಿಸುತ್ತಾನೆ ಎಂಬ ಬಲವಾದ ನಂಬಿಕೆಯಿದೆ. ಕಾಶಿ ನಗರದ ರಕ್ಷಕನಾಗಿರುವುದರಿಂದ ‘ಕಾಶಿ ಕೊತ್ವಾಲ್’ ಎಂದು ಪೂಜಿಸಲ್ಪಡುವ ಕಾಲ ಭೈರವನು ಬ್ರಹ್ಮನ ಐದನೇ ತಲೆಯನ್ನು ಏಕೆ ಕತ್ತರಿಸಿದನು ಎಂಬುದರ ಹಿಂದೆ ಒಂದು ಕುತೂಹಲಕಾರಿ ಪೌರಾಣಿಕ ಕಥೆಯಿದೆ.

ಬ್ರಹ್ಮ ಮತ್ತು ವಿಷ್ಣುವಿನ ನಡುವಿನ ಶ್ರೇಷ್ಠತೆಯ ಪೈಪೋಟಿ:

ಪುರಾಣ ಕಥೆಯ ಪ್ರಕಾರ, ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ವಿಚಾರವಾಗಿ ವಾದ ಏರ್ಪಟ್ಟಿತು. ಇಬ್ಬರೂ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾಗ, ಪರಮೇಶ್ವರನು ಅನಂತವಾದ ಜ್ಯೋತಿರ್ಲಿಂಗದ ರೂಪದಲ್ಲಿ ಅವರ ಮುಂದೆ ಪ್ರತ್ಯಕ್ಷನಾದನು. ಆ ಜ್ಯೋತಿರ್ಲಿಂಗದ ಆದಿ ಮತ್ತು ಅಂತ್ಯವನ್ನು ಕಂಡುಹಿಡಿಯುವಂತೆ ಶಿವನು ಅವರಿಬ್ಬರಿಗೂ ಸವಾಲು ಹಾಕಿದನು. ಅದರಂತೆ ವಿಷ್ಣುವು ವರಾಹ (ಹಂದಿ) ರೂಪ ತಾಳಿ ಜ್ಯೋತಿರ್ಲಿಂಗದ ಕೆಳಭಾಗವನ್ನು ಹುಡುಕುತ್ತಾ ಹೋದರೆ, ಬ್ರಹ್ಮನು ಹಂಸದ ರೂಪದಲ್ಲಿ ಮೇಲ್ಭಾಗವನ್ನು ಅರಸುತ್ತಾ ಹಾರಿದನು. ಆದರೆ ಎಷ್ಟೇ ಪ್ರಯತ್ನಿಸಿದರೂ ಅವರಿಬ್ಬರಿಗೂ ಆ ಅನಂತ ಜ್ಯೋತಿರ್ಲಿಂಗದ ಆರಂಭವಾಗಲಿ ಅಥವಾ ಅಂತ್ಯವಾಗಲಿ ಪತ್ತೆಯಾಗಲಿಲ್ಲ.

Loading...

ಬ್ರಹ್ಮನ ಅಹಂಕಾರವನ್ನು ನಿಗ್ರಹಿಸಿದ ಕಾಲಭೈರವ:

ಜ್ಯೋತಿರ್ಲಿಂಗದ ಮೂಲ ಮತ್ತು ಅಂತ್ಯವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಎಂದು ವಿಷ್ಣುವು ಪ್ರಾಮಾಣಿಕವಾಗಿ ಒಪ್ಪಿಕೊಂಡನು. ಆದರೆ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸುವ ದುರಹಂಕಾರದಿಂದ ಬ್ರಹ್ಮನು ತಾನು ಜ್ಯೋತಿರ್ಲಿಂಗದ ತುದಿಯನ್ನು ನೋಡಿದ್ದೇನೆ ಎಂದು ಸುಳ್ಳು ಹೇಳಿದನಲ್ಲದೆ, ಶಿವನನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದನು. ಇದರಿಂದ ತೀವ್ರ ಕ್ರೋಧಗೊಂಡ ಶಿವನ ಉಗ್ರ ರೂಪದಿಂದ ಸಾಕ್ಷಾತ್ ಕಾಲಭೈರವನು ಹೊರಹೊಮ್ಮಿದನು. ಶಿವನ ಆಜ್ಞೆಯಂತೆ ಬ್ರಹ್ಮನ ದುರಹಂಕಾರವನ್ನು ಅಡಗಿಸಲು ಕಾಲಭೈರವನು ತನ್ನ ಎಡಗೈಯ ಉಗುರಿನಿಂದ ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದನು. ಈ ರೀತಿಯಾಗಿ ಬ್ರಹ್ಮನಲ್ಲಿದ್ದ ಅಹಂಕಾರವನ್ನು ಕಾಲಭೈರವನು ನಾಶಪಡಿಸಿದನು.

ಇದನ್ನೂ ಓದಿ: ಶನಿ ಸಾಡೇ ಸಾತಿ ಮುಗಿದ ತಕ್ಷಣ ಜೀವನದಲ್ಲಿ ನಡೆಯುವ 5 ಪ್ರಮುಖ ಬದಲಾವಣೆಗಳಿವು!

ಕಾಶಿಯ ರಕ್ಷಕನಾಗಿ ಕಾಲಭೈರವನ ನೇಮಕ:

ಬ್ರಹ್ಮನ ತಲೆಯನ್ನು ಕತ್ತರಿಸಿದ ಕಾರಣದಿಂದ ಕಾಲಭೈರವನಿಗೆ ಬ್ರಹ್ಮಹತ್ಯಾ ದೋಷವು ತಗುಲಿತು ಮತ್ತು ಬ್ರಹ್ಮನ ಕಪಾಲವು (ತಲೆಬುರುಡೆ) ಅವನ ಕೈಗೆ ಅಂಟಿಕೊಂಡು ಬೇರ್ಪಡದಾಯಿತು. ಈ ಪಾಪದಿಂದ ಮುಕ್ತಿ ಪಡೆಯಲು ಕಾಲಭೈರವನು ಮೂರು ಲೋಕಗಳಲ್ಲಿ ಸಂಚರಿಸಿದನು. ಅಂತಿಮವಾಗಿ ಪವಿತ್ರ ಕಾಶಿ ಕ್ಷೇತ್ರದ ಕಪಾಲಮೋಚನ ತೀರ್ಥವನ್ನು ತಲುಪಿದಾಗ ಅವನ ಕೈಯಲ್ಲಿದ್ದ ಕಪಾಲವು ಕಳಚಿ ಬಿದ್ದು, ಅವನು ಬ್ರಹ್ಮಹತ್ಯಾ ದೋಷದಿಂದ ಮುಕ್ತನಾದನು. ತದನಂತರ, ಶಿವನು ಕಾಲಭೈರವನನ್ನು ಕಾಶಿ ನಗರದ ರಕ್ಷಕನನ್ನಾಗಿ ನೇಮಿಸಿದನು. ಅಂದಿನಿಂದ ಇವನನ್ನು ‘ಕಾಶಿ ಕೊತ್ವಾಲ್’ ಎಂದು ಕರೆಯಲಾಗುತ್ತದೆ. ಕೈಯಲ್ಲಿ ದಂಡವನ್ನು ಹಿಡಿದಿರುವುದರಿಂದ ಇವನನ್ನು ‘ದಂಡಪಾಣಿ’ ಎಂದೂ ಕರೆಯಲಾಗುತ್ತಿದ್ದು, ಶ್ವಾನವು (ನಾಯಿ) ಇವನ ವಾಹನವಾಗಿದೆ.

ಕಾಲ ಭೈರವ ಜಯಂತಿ ಪೂಜಾ ವಿಧಾನ:

ಕಾಲ ಭೈರವ ಜಯಂತಿಯ ದಿನದಂದು ಮುಂಜಾನೆ ಬೇಗನೆ ಎದ್ದು ಶುಚಿರ್ಭೂತರಾಗಿ ಶಿವ ಮತ್ತು ಕಾಲಭೈರವನನ್ನು ಭಕ್ತಿಯಿಂದ ಆರಾಧಿಸಬೇಕು. ಭಗವಂತನ ಸನ್ನಿಧಿಯಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ, ‘ಓಂ ಕಾಲಭೈರವಾಯ ನಮಃ’ ಎಂಬ ಮಂತ್ರವನ್ನು ಜಪಿಸುವುದು ಅತ್ಯಂತ ಶುಭಕರವಾಗಿದೆ. ಶಕ್ತಿ ಇರುವವರು ಕಾಲಭೈರವ ಅಷ್ಟಕವನ್ನು ಪಠಿಸುವುದರಿಂದ ವಿಶೇಷ ಫಲ ದೊರೆಯುತ್ತದೆ. ಇದರೊಂದಿಗೆ, ಕಾಲಭೈರವನ ವಾಹನವಾದ ಕಪ್ಪು ನಾಯಿಗೆ ಆಹಾರ ಅಥವಾ ರೊಟ್ಟಿಯನ್ನು ನೀಡುವುದು ಈ ದಿನದ ಪ್ರಮುಖ ಸಂಪ್ರದಾಯವಾಗಿದೆ. ಹೀಗೆ ಮಾಡುವುದರಿಂದ ಕಾಲಭೈರವನ ಕೃಪೆಗೆ ಪಾತ್ರರಾಗಿ ಜೀವನದಲ್ಲಿ ಧೈರ್ಯ, ನೆಮ್ಮದಿ ಮತ್ತು ಸಕಲ ಸಂಕಷ್ಟಗಳಿಂದ ರಕ್ಷಣೆ ಪಡೆಯಬಹುದು ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us