
ಮನೆಯಲ್ಲಿ ಮಕ್ಕಳ ಕೋಣೆಯನ್ನು (Kids Bedroom) ವಿನ್ಯಾಸಗೊಳಿಸುವಾಗ, ಅದು ಹೆಚ್ಚು ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ವಿಶೇಷ ಗಮನ ಹರಿಸಲಾಗುತ್ತದೆ. ಆದರೆ, ಮಕ್ಕಳ ಕೋಣೆಯನ್ನು ಸಿದ್ಧಪಡಿಸುವ ಮುನ್ನ ವಾಸ್ತು ನಿಯಮಗಳನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಮಕ್ಕಳ ಕೋಣೆಯಲ್ಲಿ ಇಡುವ ಕೆಲವು ವಸ್ತುಗಳು ಅವರ ಆರೋಗ್ಯ, ಮಾನಸಿಕ ವಿಕಾಸ ಮತ್ತು ಭವಿಷ್ಯದ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹಾಗಾದರೆ, ಮಕ್ಕಳ ರೂಮಿನಲ್ಲಿ ಯಾವ ವಸ್ತುಗಳನ್ನುಇಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮಕ್ಕಳಿಗೆ ಆಟಿಕೆಗಳೆಂದರೆ ಪಂಚಪ್ರಾಣ. ಆಟವಾಡುವಾಗ ಮಕ್ಕಳು ಆಟಿಕೆಗಳನ್ನು ಮುರಿಯುವುದು ಸಾಮಾನ್ಯ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳ ಕೋಣೆಯಲ್ಲಿ ಮುರಿದ ಅಥವಾ ಹಾನಿಗೊಳಗಾದ ಆಟಿಕೆಗಳನ್ನು ಎಂದಿಗೂ ಇಡಬಾರದು. ಇಂತಹ ವಸ್ತುಗಳು ಕೋಣೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಹೆಚ್ಚಿಸುತ್ತವೆ. ಇದು ಮಕ್ಕಳಲ್ಲಿ ಆಲಸ್ಯವನ್ನು ಉಂಟುಮಾಡುವುದಲ್ಲದೆ, ಅವರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಆಟಿಕೆ ಮುರಿದ ತಕ್ಷಣ ಅದನ್ನು ಕೋಣೆಯಿಂದ ಹೊರಹಾಕಿ.
ಮಕ್ಕಳ ಕೋಣೆಯ ಅಂದ ಹೆಚ್ಚಿಸಲು ಯಾವುದೇ ಕಾರಣಕ್ಕೂ ಮುಳ್ಳಿನಿಂದ ಕೂಡಿದ ಗಿಡಗಳನ್ನು ಇಡಬೇಡಿ. ಇವು ಕೋಣೆಯಲ್ಲಿ ಋಣಾತ್ಮಕ ಶಕ್ತಿಯ ಹರಿವನ್ನು ಉಂಟುಮಾಡುತ್ತವೆ ಮತ್ತು ಮಕ್ಕಳಿಗೆ ಗಾಯವಾಗುವ ಅಪಾಯವೂ ಇರುತ್ತದೆ. ಇದರೊಂದಿಗೆ, ಮುಳ್ಳುಗಳು ಅಥವಾ ಹರಿತವಾದ ಎಲೆಗಳನ್ನು ಹೊಂದಿರುವ ಚಿತ್ರಗಳು ಮತ್ತು ಪೇಂಟಿಂಗ್‌ಗಳನ್ನು ಸಹ ಗೋಡೆಗೆ ಹಾಕಬೇಡಿ.
ವಾಸ್ತು ಪ್ರಕಾರ, ಮಕ್ಕಳ ಕೋಣೆಯಲ್ಲಿ ಅತಿ ದೊಡ್ಡದಾದ ಅಥವಾ ಭಾರವಾದ ಪೀಠೋಪಕರಣಗಳನ್ನು (ಫರ್ನಿಚರ್) ಇಡಬಾರದು. ಭಾರವಾದ ವಸ್ತುಗಳು ಕೋಣೆಯ ಜಾಗವನ್ನು ಕುಂಠಿತಗೊಳಿಸುವುದಲ್ಲದೆ, ಮಕ್ಕಳು ಮುಕ್ತವಾಗಿ ಆಟವಾಡಲು ತೊಂದರೆ ಉಂಟುಮಾಡುತ್ತವೆ. ಅಲ್ಲದೆ, ಇವುಗಳಿಂದ ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಮಕ್ಕಳ ರೂಮಿಗೆ ಯಾವಾಗಲೂ ಹಗುರವಾದ ಮತ್ತು ಕಡಿಮೆ ಜಾಗವನ್ನು ಆಕ್ರಮಿಸುವ ಪೀಠೋಪಕರಣಗಳನ್ನು ಆಯ್ಕೆ ಮಾಡಿ.
ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!
ಕೋಣೆ ಯಾವಾಗಲೂ ಅಸ್ತವ್ಯಸ್ತವಾಗಿ, ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿದ್ದರೆ ಅದು ಕೇವಲ ದೊಡ್ಡವರಿಗಷ್ಟೇ ಅಲ್ಲ, ಮಕ್ಕಳಿಗೂ ಒಳ್ಳೆಯದಲ್ಲ. ರೂಮಿನಲ್ಲಿರುವ ಗಲಿಬಿಲಿ ವಾತಾವರಣವು ಮಕ್ಕಳ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ವಾಸ್ತು ಪ್ರಕಾರ ಅಸ್ತವ್ಯಸ್ತವಾಗಿರುವ ಕೋಣೆಯು ಮಕ್ಕಳ ಭವಿಷ್ಯದ ಪ್ರಗತಿಗೆ ಅಶುಭ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅವರ ಪುಸ್ತಕ, ಬಟ್ಟೆ ಮತ್ತು ಆಟಿಕೆಗಳನ್ನು ನಿಗದಿತ ಜಾಗದಲ್ಲಿ ವ್ಯವಸ್ಥಿತವಾಗಿ ಜೋಡಿಸಿಡುವ ಅಭ್ಯಾಸ ಮಾಡಿಸಿ.
ಮಕ್ಕಳ ಕೋಣೆಯನ್ನು ಅಲಂಕರಿಸುವಾಗ ಗೋಡೆಯ ಮೇಲಿನ ಚಿತ್ರಗಳ ಬಗ್ಗೆ ಎಚ್ಚರವಿರಲಿ. ಯಾವುದೇ ಕ್ರೂರ ಪ್ರಾಣಿಗಳ, ಯುದ್ಧದ ಅಥವಾ ವಿನಾಶಕ್ಕೆ ಸಂಬಂಧಿಸಿದ ಭಯಾನಕ ಪೇಂಟಿಂಗ್‌ಗಳನ್ನು ಮಕ್ಕಳ ರೂಮಿನಲ್ಲಿ ಹಾಕಬೇಡಿ. ಇವು ಮಕ್ಕಳ ಮನಸ್ಸು ಮತ್ತು ಮಿದುಳಿನ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತವೆ ಹಾಗೂ ಅವರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತವೆ. ಇದರ ಬದಲಾಗಿ, ಮಕ್ಕಳಿಗೆ ಪ್ರೇರಣೆ ನೀಡುವ, ಪ್ರಕೃತಿಯ ಅಥವಾ ಅವರನ್ನು ಸದಾ ಸಂತೋಷವಾಗಿಡುವಂತಹ ಸಕಾರಾತ್ಮಕ ಚಿತ್ರಗಳನ್ನು ಹಾಕಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ