
2026 ರ ಫೆಬ್ರವರಿ 13 ರಂದು, ಸಂಜೆ 4 ಗಂಟೆ 14 ನಿಮಿಷಕ್ಕೆ ಸೂರ್ಯ ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಇದನ್ನು ಕುಂಭ ಸಂಕ್ರಮಣ ಎಂದು ಕರೆಯಲಾಗುತ್ತದೆ. ಈ ಸಂಚಾರವು ಮುಂದಿನ ತಿಂಗಳ ಮಾರ್ಚ್ 15 ರವರೆಗೆ ಮುಂದುವರೆಯಲಿದೆ. ಈ ಅವಧಿಯಲ್ಲಿ ದ್ವಾದಶ ರಾಶಿಗಳ ಮೇಲೆ ಸೂರ್ಯನ ಈ ಸಂಚಾರ ಯಾವ ರೀತಿ ಪ್ರಬಾವ ಬೀರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮೇಷ ರಾಶಿಯವರಿಗೆ ಸೂರ್ಯನ ಈ ಸಂಚಾರವು 11ನೇ ಮನೆಯಲ್ಲಿ ನಡೆಯುವುದರಿಂದ ಆರ್ಥಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಬಹಳಷ್ಟು ಶುಭ ಫಲಗಳು ಲಭಿಸುತ್ತವೆ.
ವೃಷಭ ರಾಶಿಯವರಿಗೆ ಸೂರ್ಯನ 10ನೇ ಮನೆ, ಅಂದರೆ ಕರ್ಮಸ್ಥಾನದಲ್ಲಿ ಸಂಚಾರವು ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ಕೆಲಸಗಳಲ್ಲಿ ಶುಭವಾಗುತ್ತದೆ, ವ್ಯಾಪಾರದಲ್ಲಿ ಲಾಭ, ಹಳೆಯ ಬಾಕಿ ವಸೂಲಿ ಮತ್ತು ಸಾಲ ಮಂಜೂರಿಯಾಗುತ್ತದೆ. ವೃತ್ತಿಯಲ್ಲಿ ಪ್ರಗತಿ ಕಾಣುತ್ತಾರೆ. ಆರೋಗ್ಯದ ವಿಷಯದಲ್ಲಿ ಉದಾಸೀನತೆ ಬೇಡ.
ಮಿಥುನ ರಾಶಿಯವರಿಗೆ ಕುಂಭ ಸಂಕ್ರಮಣವು ಭಾಗ್ಯಸ್ಥಾನದಲ್ಲಿ ನಡೆಯುತ್ತದೆ. ಪ್ರವಾಸ ಯೋಗ ಕೂಡಿ ಬರುತ್ತದೆ. ತಂದೆ-ತಾಯಿಗಳ ಪರಿಪೂರ್ಣ ಆಶೀರ್ವಾದ ಸಿಗುತ್ತದೆ. ರೈತಾಪಿ ವರ್ಗದವರಿಗೆ ಒಳಿತಾಗುತ್ತದೆ. ಅದೃಷ್ಟವೂ ಜೊತೆಗೂಡಲಿದೆ.
ಕರ್ಕಾಟಕ ರಾಶಿಯವರಿಗೆ ಅಷ್ಟಮ ಸ್ಥಾನದಲ್ಲಿ ಸೂರ್ಯನ ಸಂಚಾರವಿರುತ್ತದೆ. ಎಂಟನೇ ಮನೆಯಲ್ಲಿ ಸೂರ್ಯನ ಸಂಚಾರವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ತರಬಹುದಾದ್ದರಿಂದ ಜಾಗರೂಕರಾಗಿರಬೇಕು.
ಸಿಂಹ ರಾಶಿಯವರಿಗೆ ಸಪ್ತಮ ಸ್ಥಾನದಲ್ಲಿ ಸೂರ್ಯ ಸಂಚಾರವು ಪ್ರಾರಂಭವಾಗುತ್ತದೆ. ಇದು ಶನಿಯ ಮನೆಯಾಗಿರುವುದರಿಂದ ಗಂಡ-ಹೆಂಡತಿಯರ ಜಗಳ, ಪಾಲುದಾರಿಕೆಯಲ್ಲಿ ಮತ್ತು ವ್ಯವಹಾರಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ.
ಕನ್ಯಾ ರಾಶಿಯವರಿಗೆ ಸೂರ್ಯನ ಸಂಚಾರವು ಆರನೇ ಮನೆಯಲ್ಲಿ ನಡೆಯುವುದರಿಂದ ತುಂಬಾನೇ ಅದೃಷ್ಟ ತರಲಿದೆ. ಸಾಕಷ್ಟು ಶುಭಫಲಗಳು ಸಿಗುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ. ಔಷಧಿ ವ್ಯಾಪಾರಿಗಳಿಗೆ ಮತ್ತು ಆರೋಗ್ಯ ಇಲಾಖೆಯಲ್ಲಿರುವವರಿಗೆ ಬಹಳ ಉತ್ತಮವಾಗಿರುತ್ತದೆ.
ತುಲಾ ರಾಶಿಯವರಿಗೆ ಐದನೇ ಮನೆಯಲ್ಲಿ ಸೂರ್ಯನ ಸಂಚಾರವು ಮಿಶ್ರ ಫಲಗಳನ್ನು ಕೊಡುತ್ತದೆ. ಆದರೂ ಆರ್ಥಿಕವಾಗಿ, ಕೀರ್ತಿ ಮತ್ತು ಪ್ರತಿಷ್ಠೆಯ ವಿಷಯದಲ್ಲಿ ಉತ್ತಮ ಫಲಗಳು ಇರುತ್ತವೆ.
ವೃಶ್ಚಿಕ ರಾಶಿಯವರಿಗೆ ನಾಲ್ಕನೇ ಮನೆ, ಅಂದರೆ ಅರ್ಧಾಷ್ಟಮದಲ್ಲಿ ರವಿಯ ಸಂಚಾರವು ಮನೆ ಅಥವಾ ಸೈಟಿನ ವಿಚಾರದಲ್ಲಿ, ಸಣ್ಣಪುಟ್ಟ ಸಮಸ್ಯೆಗಳಲ್ಲಿ ಮತ್ತು ತಂದೆ-ತಾಯಿಗಳ ವಿಷಯದಲ್ಲಿ ಜಾಗರೂಕರಾಗಿರಲು ಹೇಳುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರು ಮತ್ತು ವಾಹನ ಚಾಲನೆಯಲ್ಲಿಯೂ ಜಾಗ್ರತೆ ವಹಿಸಬೇಕು.
ಧನುಸ್ಸು ರಾಶಿಯವರಿಗೆ ಮೂರನೇ ಮನೆಯಲ್ಲಿ ಸೂರ್ಯನ ಸಂಚಾರದಿಂದ ಬಹಳಷ್ಟು ಶುಭಫಲಗಳು ದೊರೆಯುವ ಸಾಧ್ಯತೆ ಇದೆ. ಅದೃಷ್ಟವೂ ಜೊತೆಗೂಡಲಿದೆ
ಇದನ್ನೂ ಓದಿ: ಜೀವನವನ್ನೇ ಬದಲಾಯಿಸುವ ಮಹಾನ್ ಶಕ್ತಿ ಮಹಾಲಕ್ಷ್ಮೀ ರಾಜಯೋಗದ ಬಗ್ಗೆ ಮಾಹಿತಿ ಇಲ್ಲಿದೆ
ಮಕರ ರಾಶಿಯವರಿಗೆ ದ್ವಿತೀಯ ಸ್ಥಾನದಲ್ಲಿ ಸೂರ್ಯ ಭಗವಾನ್‌ರ ಸಂಚಾರವು ಭಯದ ವಾತಾವರಣವನ್ನು ದೂರ ಮಾಡುತ್ತದೆ. ಕೆಲಸಕಾರ್ಯಗಳಲ್ಲಿ ಶುಭವಾಗುತ್ತದೆ, ರೈತಾಪಿ ವರ್ಗದವರಿಗೆ ಒಳ್ಳೆಯದಾಗುತ್ತದೆ. ವ್ಯಾಪಾರ ವ್ಯವಹಾರಗಳು ಉತ್ತಮವಾಗಿರುತ್ತವೆ ಮತ್ತು ಕುಟುಂಬ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ.
ಕುಂಭ ರಾಶಿಯವರಿಗೆ ಜನ್ಮರಾಶಿಯಲ್ಲಿಯೇ ರವಿಯ ಸಂಚಾರದ ಫಲಾಫಲಗಳನ್ನು ನೋಡಿದಾಗ, ವಿವಾಹ ವಿಷಯಗಳಲ್ಲಿ ಶುಭವಾಗುತ್ತದೆ ಮತ್ತು ಪ್ರಯತ್ನಗಳಿಗೆ ತಕ್ಕ ಫಲ ಸಿಗುತ್ತದೆ. ಆದರೆ ಆತ್ಮಸ್ಥೈರ್ಯ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಭಯದ ವಾತಾವರಣವೂ ಉಂಟಾಗಬಹುದು.
ಮೀನ ರಾಶಿಯವರಿಗೆ 12ನೇ ಮನೆ, ಅಂದರೆ ದುಸ್ಥಾನದಲ್ಲಿ ರವಿಯ ಸಂಚಾರವಿರುವುದರಿಂದ ಅನಗತ್ಯ ಟೆನ್ಷನ್‌ಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಆದಷ್ಟು ಆರಾಮಾಗಿ, ಸಂತೃಪ್ತಿಯಿಂದ ಇರಬೇಕು. ಅಪವಾದಗಳು ಮತ್ತು ಕೆಟ್ಟ ಜನರ ಸಹವಾಸದಿಂದ ದೂರವಿದ್ದರೆ ಉತ್ತಮವಾಗಿರುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ