ತನ್ನನ್ನು ವಿವಾಹವಾಗು ಎಂದು ಅಖಂಡ ಬ್ರಹ್ಮಚಾರಿ ಗಣೇಶನಿಗೆ ದುಂಬಾಲುಬಿದ್ದ ತುಳಸಿ, ಗಣಪನಿಂದ ಪಡೆದ ಶಾಪ ಎಂತಹುದು ಗೊತ್ತಾ!?
Love story of Tulsi and Lord Ganesha: ಗಣೇಶನ ಮಾತು ಕೇಳಿ ಕೋಪಗೊಂಡ ತುಳಸಿ, ನನ್ನ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿ, ಪ್ರಕೃತಿ ವಿರುದ್ಧ ಅಧರ್ಮ ಮಾಡಿರುವೆ. ಸಂಸಾರಕ್ಕೆ ಹೆದರಿ ನೀನು ಹೇಡಿಯಾದೆ. ನಿನಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ನಿನ್ನ ಮದುವೆ ಆಗೇ ಆಗುತ್ತದೆ ಎಂದು ಶಾಪ ಕೊಟ್ಟಳು.
ಒಮ್ಮೆ ಕೈಲಾಸದಲ್ಲಿ ಪಾರ್ವತಿ ಪರಮೇಶ್ವರರು, ವಯಸ್ಸಿಗೆ ಬಂದ ತಮ್ಮ ಮಕ್ಕಳಿಗೆ ವಿವಾಹದ ಕುರಿತು ಯೋಚಿಸಿ, ಗಣೇಶನನ್ನು ಕರೆಸಿ ಮದುವೆ ವಿಚಾರ ಪ್ರಸ್ತಾಪಿಸಿದರು. ಗಣೇಶನು ನಾನು ಸಂಸಾರ ಬಂಧನದಲ್ಲಿ ಸಿಲುಕಲಾರೆ ಎಂದನು. ಇದರಿಂದ ತಾಯಿ ಪಾರ್ವತಿ ಚಿಂತೆಗೊಳಗಾದಳು. ಚಿಂತೆ ಮಾಡಬೇಡ ಅವನು ಮದುವೆಯಾಗುತ್ತಾನೆ ಎಂದು ಪರಮೇಶ್ವರನು ಪಾರ್ವತಿಗೆ ಹೇಳಿದನು! ಒಂದು ದಿನ ಗಣೇಶ ಗಂಗಾನದಿಯ ದಡದಲ್ಲಿ ಧ್ಯಾನ ಮಾಡುತ್ತಾ ಕುಳಿತಿದ್ದನು. ಒಂದು ಹುಡುಗಿ ತನಗಾಗಿ ವರಾನ್ವೇಷಣೆ ಮಾಡುತ್ತಾ ಅಲ್ಲಿಗೆ ಬಂದಳು. ಗಣೇಶನನ್ನು (Lord Ganesha) ನೋಡಿ, ತಾನು ಮದುವೆಯಾಗುವುದಾದರೆ ಇವನನ್ನೇ ಎಂದುಕೊಂಡಳು. ಗಣೇಶನ ಧ್ಯಾನಕ್ಕೆ ಭಂಗ ಮಾಡಿದಳು. ಎಚ್ಚೆತ್ತ ಗಣೇಶನು, ದೇವಿ ನೀನು ಯಾರು? ನನ್ನ ಧ್ಯಾನಕ್ಕೆ ಭಂಗವನ್ನೇಕೆ ಉಂಟು ಮಾಡಿದೆ? ಎಂದು ಕೇಳಿದನು. ನನ್ನ ಹೆಸರು ತುಳಸಿ (Tulsi -the holy Basil), ನನ್ನ ತಂದೆ ಧರ್ಮಧ್ವಜ, ತಾಯಿ ಮಾಧವಿ. ನಾನು ಮದುವೆಯಾಗುವ ಸಲುವಾಗಿ (marriage) ವರನನ್ನು ಹುಡುಕುತ್ತಿದ್ದೆ, ನಿಮ್ಮನ್ನು ನೋಡಿದೆ. ನನ್ನ ಮನಸ್ಸಿಗೆ ನೀವು ಒಪ್ಪಿಗೆಯಾದಿರಿ. ನನ್ನನ್ನು ಮದುವೆಯಾಗಿ ಎಂದಳು. ಇದು ಸಾಧ್ಯವಿಲ್ಲ ಎಂದ ಗಣೇಶ ನಾನು ವಿವಾಹವಾಗಬಾರದೆಂದು ನಿರ್ಧರಿಸಿದ್ದೇನೆ. ಮದುವೆಯಲ್ಲಿರುವ ಸುಖ, ಸಂಸಾರದಲ್ಲಿ ಇರುವುದಿಲ್ಲ. ನಾನು ನನ್ನ ಜೀವನವನ್ನು, ತಂದೆ ತಾಯಿ ಸೇವೆ ಮಾಡುತ್ತಾ ನನ್ನ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದೇನೆ. ದೇವಿ ನೀವು ಇಲ್ಲಿಂದ ಹೊರಟು ಹೋಗಿ ಬೇರೆ ಕಡೆ ನಿಮಗೆ ಅನುರೂಪನಾದ ವರನನ್ನು ಹುಡುಕಿಕೊಳ್ಳಿ ಎಂದನು.
ಗಣೇಶನ ಮಾತು ಕೇಳಿ ಕೋಪಗೊಂಡ ತುಳಸಿ, ನನ್ನ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿ, ಪ್ರಕೃತಿ ವಿರುದ್ಧ ಅಧರ್ಮ ಮಾಡಿರುವೆ. ಸಂಸಾರಕ್ಕೆ ಹೆದರಿ ನೀನು ಹೇಡಿಯಾದೆ. ನಿನಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ನಿನ್ನ ಮದುವೆ ಆಗೇ ಆಗುತ್ತದೆ ಎಂದು ಶಾಪ ಕೊಟ್ಟಳು. ತುಳಸಿ ಕೊಟ್ಟ ಶಾಪದಿಂದ ಕೋಪಗೊಂಡ ಗಣೇಶನು, ನೀನು ಹೆಣ್ಣಿನಂತೆ ವರ್ತಿಸದೆ ಮರ್ಯಾದೆಯನ್ನು ಉಲ್ಲಂಘನೆ ಮಾಡಿದ್ದೀ, ನನ್ನ ತಪ್ಪು ಇಲ್ಲದಿದ್ದರೂ ನನಗಿಷ್ಟವಿಲ್ಲದ ಶಾಪ ಕೊಟ್ಟಿರುವೆ ಇದರಿಂದ ನೀನು ತಪ್ಪು ಎಸಗಿರುವೆ.
“ನೀನು ಮುಂದಿನ ಜನ್ಮದಲ್ಲಿ ರಾಕ್ಷಸನ ಮಗಳಾಗಿ ಹುಟ್ಟಿ ರಾಕ್ಷಸನನ್ನು ಮದುವೆಯಾಗಿ, ಬೇರೊಬ್ಬರಿಂದ ಪಾತಿವ್ರತ್ಯ ಕೆಡಿಸಿಕೊಳ್ಳುತ್ತಿ” ಎಂದು ಶಾಪ ಕೊಟ್ಟನು. ಆಗ ತುಳಸಿಗೆ ತಪ್ಪಿನ ಅರಿವಾಗಿ ಗಣೇಶನನ್ನು ಬೇಡಿಕೊಂಡು ಕ್ಷಮೆಯಾಚಿಸುತ್ತಾಳೆ. ಆಗ ಗಣಪತಿಯು, ನಿನ್ನ ಪಶ್ಚಾತ್ತಾಪಕ್ಕೆ ಮಣಿದಿರುವೆ. ನಾನು ಕೊಟ್ಟ ಶಾಪ ನಿನಗೆ ವರವಾಗುವುದು. ನೀನು ಮಹಾವಿಷ್ಣುವಿಗೆ ಪ್ರೀತಿಪಾತ್ರಳಾಗಿರುವೆ. ಸಸ್ಯಗಳ ಜಾತಿಯಲ್ಲಿ ನೀನು ಸರ್ವಶ್ರೇಷ್ಠ ಸಸ್ಯವಾಗಿ ಪೂಜೆಗೊಳ್ಳುವೆ. ಭೂಲೋಕದಲ್ಲಿ ಪವಿತ್ರಳೆನಿಸುವೆ ಯಾರು ನಿನ್ನನ್ನು ಶ್ರದ್ಧಾ, ಭಕ್ತಿಯಿಂದ, ಶುದ್ಧವಾಗಿ ಪೂಜಿಸುತ್ತಾರೋ, ಅವರ ಅಭೀಷ್ಟಗಳನ್ನೆಲ್ಲ ಪೂರೈಸುವೆ ಎಂದು ಗಣಪತಿ ವರ ಕೊಡುತ್ತಾನೆ, ಹಾಗೆಯೇ ನೀನು ನನಗೆ ಅಪರಾಧ ಎಸಗಿರುವ ಕಾರಣ, ನನ್ನಿಂದ ನೀನು ದೂರ ಇರುವೆ. ಎಂಬುದನ್ನು ತುಳಸಿಗೆ ತಿಳಿಸುತ್ತಾನೆ. ನಂತರದ ಜನ್ಮದಲ್ಲಿ ಅದೇ ತುಳಸಿ, ‘ಕಾಲನೇಮಿ’ ಎಂಬ ರಾಕ್ಷಸನಿಗೆ ‘ವೃಂದಾ’ ಎಂಬ ಮಗಳಾಗಿ ಜನಿಸುತ್ತಾಳೆ ಮತ್ತು ಜಲಂಧರನನ್ನು ವರಿಸುತ್ತಾಳೆ.
ವಿಷ್ಣುವಿಗೆ ವೃಂದಳ ಶಾಪ: ಒಮ್ಮೆ ಇಂದ್ರ ಹಾಗೂ ಈಶ್ವರನಿಗೆ ನಡೆದ ಕಾದಾಟದಲ್ಲಿ ಸಿಟ್ಟಿನಿಂದ ಶಿವನು ತನ್ನ ಮೂರನೇ ಕಣ್ಣನ್ನು ತೆಗೆದು ಇಂದ್ರನನ್ನು ಕೊಲ್ಲಲು ಹೊರಟಿದ್ದ. ಇಂದ್ರನು ಹೆದರಿ ಶಿವನಿಗೆ ಶರಣಾಗತನಾಗುತ್ತಾನೆ. ಆಗ ಶಿವನು ತೆರೆದ ಮೂರನೇ ಕಣ್ಣಿನ ದೃಷ್ಟಿಯನ್ನು ಸಮುದ್ರದ ಕಡೆ ಹರಿಸುತ್ತಾನೆ. ಆಗ ಕಣ್ಣಿನಿಂದ ಎರಡು ಹನಿ ನೀರು ಕೆಳಗೆ ಬೀಳುತ್ತದೆ. ಅದರಿಂದ ಮಹಾಶಕ್ತಿಶಾಲಿಯಾದ ಜಲಂಧರನೆಂಬ ಅಸುರ ಜನ್ಮ ತಾಳುತ್ತಾನೆ.
ಕಾಲನೇಮಿ ಮಗಳಾದ ‘ವೃಂದ’ ಅಪಾರ ಸುಂದರಿ ಹಾಗೂ ವಿಷ್ಣುವಿನ ಪರಮಭಕ್ತಳೂ ಆಗಿರುತ್ತಾಳೆ. ಅವಳ ಸೌಂದರ್ಯ, ಹಾಗೂ ಭಕ್ತಿಯ ಶಕ್ತಿಗೆ ಮನಸೋತ ಜಲಂಧರ ಅವಳನ್ನು ವಿವಾಹವಾಗುತ್ತಾನೆ. ಅಪಾರ ಶಕ್ತಿಯ ಜೊತೆ ವೃಂದಾಳ ಪಾತಿವ್ರತ್ಯದ ಫಲವು ಸೇರಿ ಜಲಂಧರನ ಬಲ ಮತ್ತಷ್ಟು ಹೆಚ್ಚಾಗುತ್ತದೆ. ಭಾಗವತ ಪುರಾಣ ದಂತೆ ಜಲಂಧರನನ್ನು ಸಂಹರಿಸಲು, ವಿಷ್ಣು, ಜಲಂಧರ ನಂತೆ ಬಂದು, ವೃಂದಾಳ ಸತಿ ಧರ್ಮವನ್ನು ಹಾಳು ಮಾಡಿದನೆಂದು ವೃಂದ ಕೋಪಗೊಂಡು ವಿಷ್ಣುವಿಗೆ ಕಲ್ಲಾಗು ಎಂದು ಶಾಪ ಕೊಟ್ಟಳು.
ದೇವತೆಗಳಿಗೂ ಅಸುರರಿಗೆ ನಡೆವ ಯುದ್ಧಗಳಲ್ಲಿ, ಜಲಂಧರನ ಪತ್ನಿಯ ಪಾತಿವ್ರತ್ಯದ ಪುಣ್ಯದ ಫಲವಾಗಿ ಜಲಂಧರನೆ ಗೆಲ್ಲುತ್ತಿದ್ದನು. ಮೇಲಾಗಿ ವೃಂದಾಳ ಪಾತಿವ್ರತ್ಯ ಇರುವ ತನಕ ಜಲಂಧರನಿಗೆ ಏನು ಆಗುವುದಿಲ್ಲವೆಂದು ಬ್ರಹ್ಮದೇವರ ವರವು ಇತ್ತು. ಆಗ ವಿಧಿಯಿಲ್ಲದೆ ವಿಷ್ಣು ಜಲಂಧರನ ವೇಷದಲ್ಲಿ ಬಂದು ಅವಳ ಪಾತಿವ್ರತ್ಯವನ್ನು ಭಂಗ ಮಾಡುತ್ತಾನೆ. ಆಗ ಜಲಂಧರನ ಶಕ್ತಿ ಕ್ರಮೇಣ ಸತ್ವಹೀನ ವಾಗುತ್ತದೆ. ಈ ಸಮಯಕ್ಕಾಗಿ ಕಾಯುತ್ತಿದ್ದ ಶಿವನು ಅವನನ್ನು ಸಂಹರಿಸುತ್ತಾನೆ. ಜಲಂಧರನ ವೇಷದಲ್ಲಿ ಬಂದ ವಿಷ್ಣುವಿನ ಸ್ಪರ್ಶವಾಗುತ್ತಿದ್ದಂತೆ ವೃಂದಾಳಿಗೆ ತನ್ನ ಪತಿಯಲ್ಲವೆಂದು ತಿಳಿಯುತ್ತದೆ.
ನಿನ್ನ ಭಕ್ತಳಾದ ನನಗೆ ನೀನು ಮೋಸ ಮಾಡಿದ ಕಾರಣ ಮನಸ್ಸಾಕ್ಷಿಯಿಲ್ಲದ ನೀನು ‘ಕಲ್ಲಾಗು’ ಎಂದು ಶಾಪ ಕೊಡುತ್ತಾಳೆ. ವಿಷ್ಣು ಅವಳ ಶಾಪವನ್ನು ಸ್ವೀಕರಿಸಿ ಸಾಲಿಗ್ರಾಮ ಶಿಲೆಯ ರೂಪದಲ್ಲಿ ಪರಿವರ್ತನಾಗುತ್ತಾನೆ. ಈ ಸಾಲಿಗ್ರಾಮವು ನೇಪಾಳದ ಗಂಡಕಿ ನದಿಯಲ್ಲಿ ಕಂಡುಬರುತ್ತದೆ. ಹಾಗೇ ವೃಂದಾಳಿಗೆ ತಾನು ಲೋಕೋದ್ಧಾರಕ್ಕಾಗಿ ಈ ರೀತಿ ನಡೆದುಕೊಂಡೆ ಎಂದು ತಿಳಿಸುತ್ತಾನೆ. ಆಗ ತಪ್ಪಿನ ಅರಿವಾಗಿ ವಿಷ್ಣುವಿನಲ್ಲಿ ಕ್ಷಮೆಯಾಚಿಸುತ್ತಾಳೆ. ಅನಿವಾರ್ಯವಾಗಿ ಆದ ತಪ್ಪಿಗಾಗಿ ” ಮುಂದಿನ ಜನ್ಮದಲ್ಲಿ ಭೂಲೋಕದ ಸಸ್ಯಗಳಲ್ಲಿಯೇ ಪರಮಪೂಜ್ಯ ತುಳಸಿ ಸಸ್ಯವಾಗಿ ಜನಿಸು. ಕಾರ್ತಿಕ ಮಾಸದ ದ್ವಾದಶಿ ದಿನ ನಾನು ವಿವಾಹವಾಗುತ್ತೇನೆ” ಎಂದು ತುಳಸಿಗೆ ವರ ಕೊಡುತ್ತಾನೆ. ವೃಂದಾ ತನ್ನ ದೇಹ ಮೈಲಿಗೆಯಾದ ಕಾರಣ ಅಗ್ನಿಗೆ ಆಹುತಿಯಾಗುತ್ತಾಳೆ.
ಹಿಂದೆ ಗಣಪತಿ ಕೊಟ್ಟ ವರ ಹಾಗೂ ವಿಷ್ಣುವಿನ ವರದಂತೆ, ‘ವೃಂದಳು’ ಪವಿತ್ರ ತುಳಸಿಯಾಗಿ ಭೂಲೋಕದಲ್ಲಿ ಜನ್ಮ ತಾಳುತ್ತಾಳೆ. ತುಳಸಿ ಇಲ್ಲದ ವಿಷ್ಣುವಿನ ಪೂಜೆ ಇಲ್ಲ ಎಂಬಂತೆ ವಿಷ್ಣುವಿಗೆ ಪರಮಪಾವನೆಯಾಗಿ, ತುಳಸಿ ಗಿಡವಿಲ್ಲದೆ ಹಿಂದೂ ಸಂಪ್ರದಾಯದ ಯಾವುದೇ ವಿಧಿವಿಧಾನವು ಕೂಡ ಪರಿಪೂರ್ಣ ಆಗುವುದಿಲ್ಲ. ತುಳಸಿಯಲ್ಲಿ ಅತ್ಯಂತ ಮಹತ್ತರವಾದ ಔಷಧಿ ಗುಣಗಳಿವೆ. ಆಯುರ್ವೇದೀಯ ವೈದ್ಯೋಪಚಾರದಲ್ಲಿ ಇದೊಂದು ಅತಿಮುಖ್ಯವಾದ ಗಿಡಮೂಲಿಕೆಯಾಗಿದೆ. ಶೀತ ಕೆಮ್ಮು ತೊಂದರೆಗಳ ಹಾಗೂ ಚರ್ಮ ರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಹೀಗೆ ತುಳಸಿ ಹಿಂದೂ ವಿಧಿವಿಧಾನಗಳ ಬಂದು ಅವಿಭಾಜ್ಯ ಅಂಗವಾಗಿದ್ದಾಳೆ.
” ಯನ್ಮೂಲೇ ಸರ್ವ ತೀರ್ಥಾನಿ ಯನ್ಮ್ ಧ್ಯೆ ಸರ್ವದೇವತಾ ಯದಗ್ರೆ ಸರ್ವ ವೇದಾಶ್ಚ ತುಳಸಿ ತ್ವಾಂ ನಮಾಮ್ಯಹಮ್”
ಯಾವುದರ ಮೂಲ, ನಡು ಮತ್ತು ತುದಿಗಳಲ್ಲಿ ಕ್ರಮವಾಗಿ ಎಲ್ಲಾ ತೀರ್ಥಗಳೂ, ದೇವತೆಗಳು ಮತ್ತು ಸಕಲ ವೇದಗಳು ಇವೆಯೋ ಅಂತಹ ತುಳಸಿಯನ್ನು ನಮಸ್ಕರಿಸುತ್ತೇನೆ. (ಬರಹ- ಆಶಾ ನಾಗಭೂಷಣ)