Shivaratri: ಈಶ್ವರನ ಹತ್ತೊಂಬತ್ತು ಅವತಾರಗಳು -ಇದು ಲೋಕ ಕಲ್ಯಾಣಕ್ಕಾಗಿ ಪರಮೇಶ್ವರನ ಅವತಾರಗಳು, ಅವು ಯಾವುವು?

Shivaratri: ಈಶ್ವರನ ಹತ್ತೊಂಬತ್ತು ಅವತಾರಗಳು -ಇದು ಲೋಕ ಕಲ್ಯಾಣಕ್ಕಾಗಿ ಪರಮೇಶ್ವರನ ಅವತಾರಗಳು, ಅವು ಯಾವುವು?
ಈಶ್ವರನ ಹತ್ತೊಂಬತ್ತು ಅವತಾರಗಳು -ಇದು ಲೋಕ ಕಲ್ಯಾಣಕ್ಕಾಗಿ ಪರಮೇಶ್ವರನ ಅವತಾರಗಳು, ಅವು ಯಾವುವು?

Brahmachari avatar: ಶಿವನು ತನಗೆ ಪತಿಯಾಗಿ ದೊರೆಯಲಿ ಎಂದು ಪಾರ್ವತಿ ದೇವಿಯು ತಪಸ್ಸಾನ್ನಾಚರಿಸುತ್ತಿದ್ದ ಸಂದರ್ಭದಲ್ಲಿ ಪಾರ್ವತಿ ದೇವಿಯನ್ನು ಪರೀಕ್ಷಿಸಲು ಶಿವನು ಈ ಅವತಾರವನ್ನು ತಾಳುತ್ತಾರೆ.

TV9kannada Web Team

| Edited By: sadhu srinath

Mar 01, 2022 | 5:23 PM

ಕೈಲಾಸ ಪತಿ ಈಶ್ವರ ಲೋಕ ಕಲ್ಯಾಣಕ್ಕಾಗಿ 19 ಅವತಾರಗಳನ್ನು (nineteen avatars of lord shiva) ಎತ್ತಿದ್ದಾರೆ. ಈ ಅವತಾರಗಳು ಮನುಕುಲದ ಉದ್ಧಾರಕ್ಕಾಗಿ ಎತ್ತಿರುವಂಥವು ಎಂಬುದು ಮನನೀಯ. ದೇವರು ಸದಾ ಕಾಲ ನಮ್ಮೊಡನಿರುವನು ಎಂಬುದರ ಸೂಚಕವಾಗಿದೆ ಈ ಹತ್ತೊಂಬತ್ತೂ ಅವತಾರಗಳು. ಭೂಮಿಯಲ್ಲಿ ತಾಂಡವವಾಡುವ ಕೆಟ್ಟದ್ದನ್ನು ದುಷ್ಟತನವನ್ನು ದೂರೀಕರಿಸಿ ದೇವರ ಸಾಕ್ಷಾತ್ಕಾರವನ್ನು ಭಕ್ತಿಯ ಸುಧೆಯನ್ನು ಜಗತ್ತಿನಲ್ಲಿ ಹರಿಸಲು ಈ ಅವತಾರಗಳನ್ನು ದೇವರು ಎತ್ತುತ್ತಾನೆ. ಈ ಹತ್ತೊಂಬತ್ತು ಅವತಾರಗಳು ಅದರದ್ದೇ ಆದ ವಿಶಿಷ್ಟತೆಗಳನ್ನು ಹೊಂದಿವೆ. ಪ್ರತಿಯೊಂದು ಅವತಾರವೂ ಮಹತ್ವ ಪಡೆದಿವೆ. ಮಾನವ ಕುಲದ ಉದ್ಧಾರಕ್ಕಾಗಿ ಎತ್ತಿರುವಂತಹ ಈ ಅವತಾರಗಳು ಪರಶಿವನ ಸಾಕ್ಷಾತ್ಕಾರವನ್ನು ನಮ್ಮಲ್ಲಿ ಒಡಮೂಡಿಸುತ್ತವೆ.

ಶಿವನ ಹತ್ತೊಂಬತ್ತು ಅವತಾರಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳೋಣ 

 1. ಪಿಪ್ಲಾದ ಅವತಾರ (Piplaad Avatar): ಮಹಾದೇವ ಶಿವ ದದೀಚಿ ಮುನಿಯ ಆಶ್ರಮದಲ್ಲಿ ಪಿಪ್ಲಾದನಾಗಿ ಜನಿಸುತ್ತಾನೆ. ಆದರೆ ಮುನಿಯು ಪಿಪ್ಲಾದನ ಜನನ ಸಮಯದಲ್ಲಿ ಆಶ್ರಮವನ್ನು ತೊರೆಯುತ್ತಾರೆ. ಪಿಪ್ಲಾದ ದೊಡ್ಡವನಾದಂತೆ ಆತನಿಗೆ ತನ್ನ ತಂದೆ ಆಶ್ರಮ ತೊರೆದು ಹೋದದ್ದಕ್ಕೆ ಮುಖ್ಯ ಕಾರಣ ಶನಿಯ ಕೆಟ್ಟ ಗ್ರಹ ಸ್ಥಾನವಾಗಿದೆ ಎಂದು ತಿಳಿದು ಬರುತ್ತದೆ. ಶನಿ ದೇವರನ್ನು ಶಪಿಸಿದ ಪಿಪ್ಲಾದನು ತನ್ನ ನಿವಾಸ ಸ್ಥಾನದಿಂದ ಗ್ರಹ ಬೀಳುವುದಕ್ಕೆ ಕಾರಣವಾಗುತ್ತಾನೆ. 16 ವರ್ಷಕ್ಕಿಂತ ಮುಂಚೆ ಗ್ರಹವು ಯಾರಿಗೂ ತೊಂದರೆಯನ್ನುಂಟು ಮಾಡಬಾರದೆಂಬ ಷರತ್ತಿನ ಮೇಲೆ ಶನಿಯನ್ನು ಪಿಪ್ಲಾದ ಕ್ಷಮಿಸುತ್ತಾನೆ. ಆದ್ದರಿಂದ ಶಿವ ದೇವರ ಪಿಪ್ಲಾದ ಅವತಾರವನ್ನು ಪೂಜಿಸುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ.
 2. ನಂದಿ ಅವತಾರ (Nandi Avatar): ನಂದಿಯು ಶಿವ ದೇವರ ವಾಹನವಾಗಿದೆ. ಭಾರತದ ಕೆಲವೆಡೆಗಳಲ್ಲಿ ನಂದಿ ರೂಪದ ಶಿವನನ್ನು ಆರಾಧಿಸುತ್ತಾರೆ. ಶಿವನ ನಂದಿ ಅವತಾರವು ಗೋಮಾಳಗಳ ರಕ್ಷಕನಾಗಿ ಕಾಣಿಸುತ್ತದೆ. ನಾಲ್ಕು ಭುಜಗಳು ಮತ್ತು ನಂದಿಯ ಮುಖವಾಗಿ ಈ ಅವತಾರದಲ್ಲಿ ಶಿವ ದೇವ ಕಾಣಿಸಿಕೊಳ್ಳುತ್ತಾನೆ. ಎರಡು ಕೈಗಳು ಕೊಡಲಿ ಮತ್ತು ಜಿಂಕೆಯ ಆಯುಧವನ್ನು ಹಿಡಿದುಕೊಂಡಿದ್ದು ಇನ್ನೆರಡು ಕೈಗಳು ಜೋಡಣೆಯಾಗಿವೆ.
 3. ವೀರಭದ್ರ ಅವತಾರ (Veerabhadra Avatar): ಶಿವನ ಪತ್ನಿ ದಾಕ್ಷಾಯಿಣಿಯು ದಕ್ಷ ಯಜ್ಞದಲ್ಲಿ ಅಗ್ನಿಗೆ ಹಾರಿ ದಹಿಸಿದ ನಂತರ ಶಿವನು ಕೋಪದಿಂದ ಪ್ರಜ್ವಲಿತಗೊಳ್ಳುತ್ತಾನೆ. ತನ್ನ ಜಡೆಯಿಂದ ಒಂದು ಕೂದಲನ್ನು ಕಿತ್ತು ಭೂಮಿಗೆ ಹಾಕುವ ಶಿವನು ಅದರಿಂದ ವೀರಭದ್ರ ಮತ್ತು ರುದ್ರಕಾಳಿ ಪ್ರತ್ಯಕ್ಷಗೊಳ್ಳುವಂತೆ ಮಾಡುತ್ತಾನೆ. ಇವೆರಡೂ ಶಿವ ದೇವರ ಉಗ್ರ ಅವತಾರಗಳಾಗಿವೆ. ಗಾಢ ಬಣ್ಣದಲ್ಲಿ ಪ್ರಜ್ವಲಿಸುತ್ತಿರುವ ತ್ರಿನೇತ್ರ, ತಲೆಬುರುಡೆಗಳ ಹಾರವನ್ನು ಕೊರಳಿಗೆ ಹಾಕಿಕೊಂಡು ಮತ್ತು ಕೈಗಳಲ್ಲಿ ಭಯಪಡಿಸುವ ಆಯುಧಗಳನ್ನು ಹಿಡಿದುಕೊಂಡು ವೀರಭದ್ರ ಪ್ರತ್ಯಕ್ಷನಾಗುತ್ತಾನೆ. ಶಿವನ ಈ ಅವತಾರವು ದಕ್ಷ ಯಜ್ಞದಲ್ಲಿ ದಕ್ಷನ ರುಂಡವನ್ನು ತುಂಡರಿಸುತ್ತದೆ
 4. ಭೈರವ ಅವತಾರ (Bhairava Avatar): ತಮ್ಮಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆಯು ವಿಷ್ಣು ಮತ್ತು ಬ್ರಹ್ಮ ದೇವರ ಮಧ್ಯೆ ನಡೆದಾಗ ಶಿವನು ಭೈರವ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾನೆ. ಬ್ರಹ್ಮನು ತನ್ನ ಹಿರಿಮೆಯನ್ನು ಕುರಿತು ಗರ್ವದ ಮಾತುಗಳನ್ನಾಡುತ್ತಿದ್ದ ಸಂದರ್ಭದಲ್ಲಿ ಶಿವನು ಭೈರವ ಅವತಾರವನ್ನು ತಾಳಿ ಬ್ರಹ್ಮನ ಐದನೇ ತಲೆಯನ್ನು ತುಂಡರಿಸುತ್ತಾನೆ. ಇದರಿಂದ ಶಿವನು ಬ್ರಹ್ಮ ಹತ್ಯಾ ದೋಶಕ್ಕೆ ಒಳಗಾಗುತ್ತಾನೆ. ಮತ್ತು ಬ್ರಹ್ಮನ ಶಿರವು ಕಪಾಲವಾಗಿ ಶಿವನ ಕರವನ್ನು ಕಚ್ಚಿ ಹಿಡಿದು ಬಿಡುತ್ತದೆ. 12 ವರ್ಷ ಈ ಕಪಾಲವನ್ನು ಹಿಡಿದುಕೊಂಡು ಭಿಕ್ಷಾಟನೆ ಮಾಡುವ ಶಾಪಕ್ಕೆ ಶಿವನು ಒಳಗಾಗುತ್ತಾನೆ. ಎಲ್ಲಾ ಶಕ್ತಿಪೀಠಗಳನ್ನು ರಕ್ಷಿಸುವ ರಕ್ಷಕನಾಗಿ ಶಿವನು ಈ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾನೆ.
 5. ಅಶ್ವತ್ಥಾಮ ಅವತಾರ (Ashwatthama Avatar ): ಕ್ಷೀರ ಸಾಗರವನ್ನು ಮಂಥನ ಮಾಡುತ್ತಿದ್ದ ಸಂದರ್ಭದಲ್ಲಿ ಸಾಗರದಿಂದ ಬಂದ ವಿಷವನ್ನು ಶಿವನು ಸೇವಿಸುತ್ತಾನೆ. ಶಿವನ ಗಂಟಲನ್ನು ಉರಿಸುತ್ತಾ ವಿಷವು ಅಲ್ಲಿಯೇ ನಿಲ್ಲುತ್ತದೆ. ವಿಷ ಪುರುಷನು ಶಿವನನ್ನು ಪ್ರಾರ್ಥಿಸಲಾಗಿ ದೇವರು ಆತನಿಗೆ ವರವನ್ನು ನೀಡುತ್ತಾನೆ. ವಿಷ ಪುರುಷನು ದ್ರೋಣರ ಮಗನಾಗಿ ಭೂಮಿಯಲ್ಲಿ ಬೇಗನೇ ಜನಿಸುತ್ತಾನೆ ಮತ್ತು ಎದುರಾಳಿ ಕ್ಷತ್ರಿಯರನ್ನು ಕೊಲ್ಲುತ್ತಾನೆ ಎಂದಾಗಿದೆ. ಹೀಗೆ ವಿಷ ಪುರುಷನು ಅಶ್ವತ್ಥಾಮನಾಗಿ ಜನಿಸುತ್ತಾನೆ.
 6. ಶರಭ ಅವತಾರ (Sharabha Avatar): ಅರ್ಧ ಸಿಂಹ ಮತ್ತು ಅರ್ಧ ಪಕ್ಷಿಯ ರೂಪದಲ್ಲಿ ಶಿವ ಕಂಡುಬರುತ್ತಾನೆ. ಈಶ್ವರ ಈ ಅವತಾರವನ್ನು ವಿಷ್ಣು ದೇವರ ನರಸಿಂಹ ಅವತಾರವನ್ನು ಶಾಂತಗೊಳಿಸಲು ತಾಳಿದರೆಂನೆಂದು ಶಿವ ಪುರಾಣ ಹೇಳುತ್ತದೆ.
 7. ಗೃಹಪತಿ ಅವತಾರ (Grihapati avatar): ಶಿವನು ಒಬ್ಬ ಬ್ರಾಹ್ಮಣ ವಿಶ್ವಾನರನ ಮನೆಯಲ್ಲಿ ಆತನ ಮಗನಾಗಿ ಜನಿಸುತ್ತಾನೆ. ವಿಶ್ವಾನರ ಆತನಿಗೆ ಗೃಹಪತಿ ಎಂಬ ಹೆಸರನ್ನಿಡುತ್ತಾನೆ. ಗೃಹಪತಿಯು ಒಂಭತ್ತನೆ ವಯಸ್ಸಿಗೆ ಕಾಲಿಡುತ್ತಿದ್ದಂತೆ ಆತ ಸಾಯುತ್ತಾನೆ ಎಂದು ನಾರದ ಮಹರ್ಷಿಗಳು ಬ್ರಾಹ್ಮಣ ದಂಪತಿಗೆ ಹೇಳುತ್ತಾರೆ. ಗೃಹಪತಿಯು ಸಾವನ್ನು ಜಯಿಸಲು ಕಾಶಿಗೆ ಹೋಗುತ್ತಾನೆ. ಗೃಹಪತಿಯು ಶಿವ ದೇವರ ಕೃಪೆಗೆ ಪಾತ್ರನಾಗುತ್ತಾನೆ ಮತ್ತು ಸಾವನ್ನು ಜಯಿಸುತ್ತಾನೆ.
 8. ದುರ್ವಾಸ ಅವತಾರ (Durvasa avatar): ಜಗತ್ತಿನಲ್ಲಿ ಶಿಸ್ತನ್ನು ನಿರ್ವಹಿಸಲು ಶಿವ ಈ ಅವತಾರವ ತಾಳುತ್ತಾನೆ. ದುರ್ವಾಸರು ಮಹಾನ್ ಮುನಿಯಾಗಿದ್ದು ತಮ್ಮ ಕೋಪಕ್ಕೆ ಹೆಸರಾಗಿದ್ದರು.
 9. ಹನುಮಾನ್ ಅವತಾರ (Hanuman Avatar): ಹನುಮಂತ ದೇವರು ಕೂಡ ಶಿವನ ಅವತಾರವಾಗಿದ್ದಾರೆ. ರಾಮನ ಅವತಾರದಲ್ಲಿದ್ದ ಶ್ರೀ ವಿಷ್ಣುವಿನ ಸೇವೆ ಮಾಡುವುದಕ್ಕಾಗಿ ಶಿವ ದೇವರು ಹನುಮಂತ ಅವತಾರವನ್ನು ತಾಳಿದರೆಂದು ಹೇಳುತ್ತಾರೆ.
 10. ವೃಷಭ ಅವತಾರ (Rishabha Avatar): ಸಮುದ್ರ ಮಂಥನದ ನಂತರ ವಿಷ್ಣು ದೇವರು ಒಮ್ಮೆ ಪಾತಾಳಕ್ಕೆ ಹೋಗುತ್ತಾರೆ. ಅಲ್ಲಿ ಒಂದು ಸುಂದರ ಕನ್ಯೆಯಿಂದ ಆಕರ್ಷಿತರಾದ ವಿಷ್ಣು ದೇವರು ಅಲ್ಲಿಯೇ ಉಳಿದು ಪುತ್ರರನ್ನು ಪಡೆಯುತ್ತಾರೆ. ಆದರೆ ಅವರೆಲ್ಲರ ಪುತ್ರರು ದುಷ್ಟರು ಮತ್ತು ಕ್ರೂರಿಗಳಾಗುತ್ತಾರೆ. ಅವರು ದೇವತೆಗಳು ಮತ್ತು ಮನುಷ್ಯರನ್ನು ಹಿಂಸಿಸಲು ಪ್ರಾರಂಭಿಸುತ್ತಾರೆ. ಆಗ ಶಿವ ದೇವರು ವೃಷಭ ಅವತಾರವನ್ನು ತಾಳಿ ವಿಷ್ಣು ದೇವರ ದುಷ್ಟ ಮಕ್ಕಳನ್ನು ಕೊಲ್ಲುತ್ತಾರೆ.
 11. ಯತಿನಾಥ ಅವತಾರ (Yatinath Avatar): ಅಹುಕ ಮತ್ತು ಆತನ ಪತ್ನಿ ಮಹಾನ್ ಶಿವ ಭಕ್ತರಾಗಿದ್ದರು. ಒಮ್ಮೆ ಶಿವ ದೇವರು ಯತಿನಾಥನ ಅವತಾರದಲ್ಲಿ ಅವರ ಮನೆಗೆ ಆಗಮಿಸುತ್ತಾರೆ. ಮನೆ ಪುಟ್ಟದಾದ್ದರಿಂದ ಅಹುಕನು ಅತಿಥಿಯನ್ನು ಮನೆಯೊಳಗೆ ವಿರಮಿಸಲು ಹೇಳಿ ತಾನು ಹೊರಗೆ ಮಲಗುತ್ತಾನೆ. ಆದರೆ ಅಹುಕನು ಹೊರಗೆ ಮಲಗಿದ್ದ ಸಂದರ್ಭದಲ್ಲಿ ಕ್ರೂರ ಪ್ರಾಣಿಗೆ ಬಲಿಯಾಗುತ್ತಾನೆ. ಮರುದಿನ ಅಹುಕನು ಮರಣ ಸ್ಥಿತಿಯಲ್ಲಿರುವುದನ್ನು ನೋಡಿ ಆತನ ಪತ್ನಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ನಿರ್ಧರಿಸುತ್ತಾಳೆ. ಆಗ ಶಿವನು ತನ್ನ ನಿಜ ರೂಪವನ್ನು ಪ್ರದರ್ಶಿಸಿ ಅವರನ್ನು ನಳ ದಮಯಂತಿಯರಾಗಿ ಮರು ಜನ್ಮವನಿತ್ತು ಒಂದುಗೂಡಿಸುತ್ತಾರೆ.
 12. ಕೃಷ್ಣ ದರ್ಶನ ಅವತಾರ (Krishna Darshan Avatar): ಮಾನವನ ಜೀವನದಲ್ಲಿ ಯಜ್ಞ ಮತ್ತು ಆಚರಣೆಗಳ ಮಹತ್ವವನ್ನು ತಿಳಿಸಿಕೊಡಲು ಶಿವ ಈ ಅವತಾರವನ್ನು ಎತ್ತುತ್ತಾನೆ.
 13. ಭಿಕ್ಷುವರ್ಯ ಅವತಾರ (Bhikshuvarya Avatar): ಮಾನವನ್ನು ಎಲ್ಲಾ ರೀತಿಯ ಅಪಾಯಗಳಿಂದ ಕಾಪಾಡಲು ಶಿವ ಈ ಅವತಾರವನ್ನು ಎತ್ತುತ್ತಾನೆ.
 14. ಸುರೇಶ್ವರ ಅವತಾರ (Sureshwar Avatar): ಶಿವ ದೇವರು ಒಮ್ಮೆ ಇಂದ್ರನ ರೂಪದಲ್ಲಿ ತಮ್ಮ ಭಕ್ತರನ್ನು ಪರೀಕ್ಷಿಸಲು ಹೊರಡುತ್ತಾರೆ. ಇದರಿಂದಾಗಿ ಅವರು ಸುರೇಶ್ವರ ಎಂಬ ನಾಮಾಂಕಿತರಾಗಿದ್ದಾರೆ.
 15. ಕೀರತ್ ಅವತಾರ (Keerat Avatar): ಅರ್ಜುನನು ಅರಣ್ಯವಾಸವನ್ನು ಅನುಭವಿಸುತ್ತಿರುವಾಗ ಶಿವನು ಅರ್ಜುನನ್ನು ಪರೀಕ್ಷಿಸಲು ಬೇಟೆಗಾರನ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. ದುರ್ಯೋಧನನು ಅರ್ಜುನನನ್ನು ಕೊಲ್ಲಲು ಮೂಕ ಹೆಸರಿನ ರಾಕ್ಷಸನನ್ನು ಕಳುಹಿಸುತ್ತಾನೆ. ಮೂಕನು ಹಂದಿಯಂತೆ ವೇಷ ಧರಿಸುತ್ತಾನೆ. ಅರ್ಜುನನ್ನು ಧ್ಯಾನ ಸ್ಥಿತಿಯಲ್ಲಿದ್ದಾಗ ಭಯಂಕರ ಶಬ್ಧವಾಗಿ ಧ್ಯಾನದಿಂದ ಎಚ್ಚರಗೊಳ್ಳುತ್ತಾನೆ. ಬೇಟೆಗಾರನ ರೂಪದಲ್ಲಿದ್ದ ಶಿವ ಮತ್ತು ಅರ್ಜುನ ಒಂದೇ ಬಾರಿಗೆ ಹಂದಿಯನ್ನು ಹೊಡೆಯಲು ಧನುಸ್ಸನ್ನು ಎತ್ತುತ್ತಾರೆ. ಅವರ ನಡುವೆ ಹಂದಿಯನ್ನು ಮೊದಲು ಹಿಡಿದದ್ದು ಯಾರು ಎಂಬ ಚರ್ಚೆ ಪ್ರಾರಂಭವಾಗುತ್ತದೆ. ಅರ್ಜುನನ ಪರಾಕ್ರಮ ಪೌರುಷಕ್ಕೆ ಮನಸೋತ ಶಿವ ದೇವರು ತಮ್ಮಲ್ಲಿದ್ದ ಪಾಶುಪತಾಸ್ತ್ರವನ್ನು ಅರ್ಜುನನಿಗೆ ವರವಾಗಿ ನೀಡುತ್ತಾರೆ.
 16. ಸುಂತಾತರ್ಕ ಅವತಾರ (Sunatnartak avatar ): ಹಿಮಾಲಯನ ಮಗಳಾದ ಪಾರ್ವತಿಯನ್ನು ವಿವಾಹವಾಗುವ ಸಂದರ್ಭದಲ್ಲಿ ಪಾರ್ವತಿಯನ್ನು ತನಗೆ ವಿವಾಹ ಮಾಡಿಕೊಡಬೇಕೆಂದು ಕೇಳುವ ಸಂದರ್ಭದಲ್ಲಿ ಶಿವನು ಈ ಅವತಾರವನ್ನ ಎತ್ತುತ್ತಾರೆ.
 17. ಬ್ರಹ್ಮಚಾರಿ ಅವತಾರ (Brahmachari avatar): ಶಿವನು ತನಗೆ ಪತಿಯಾಗಿ ದೊರೆಯಲಿ ಎಂದು ಪಾರ್ವತಿ ದೇವಿಯು ತಪಸ್ಸಾನ್ನಾಚರಿಸುತ್ತಿದ್ದ ಸಂದರ್ಭದಲ್ಲಿ ಪಾರ್ವತಿ ದೇವಿಯನ್ನು ಪರೀಕ್ಷಿಸಲು ಶಿವನು ಈ ಅವತಾರವನ್ನು ತಾಳುತ್ತಾರೆ.
 18. ಯಕ್ಷೇಶ್ವರ ಅವತಾರ (Yaksheshwar Avatar ): ದೇವತೆಗಳ ಮನದಲ್ಲಿರುವ ಮಿಥ್ಯ ಅಹಂಕಾರವನ್ನು ತೊಡೆದು ಹಾಕಲು ಶಿವ ಈ ಅವತಾರವನ್ನು ಎತ್ತುತ್ತಾನೆ.
 19. ಅವಧೂತ್ ಅವತಾರ (Avadhut Avatar): ಇಂದ್ರನ ಅಹಂಕಾರವನ್ನು ತೊಡೆದು ಹಾಕಲು ಶಿವ ಈ ಅವತಾರವನ್ನು ಎತ್ತುತ್ತಾನೆ. (ಸಂಗ್ರಹ -ಸತ್ಸಂಗ)

Follow us on

Most Read Stories

Click on your DTH Provider to Add TV9 Kannada