ಮೈಸೂರು: ವಿಶ್ವವೇ ಬೆರಗುಗಣ್ಣಿನಿಂದ ನೋಡುವಂಥ ಗತವೈಭವ ಸಾರುವ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಮಹಾಮಾರಿ ಕೊರೊನಾದಿಂದಾಗಿ ಕಳೆಗುಂದಿದ್ದ ಮೈಸೂರು ದಸರಾಗೆ(Mysore Dasara 2022) ಇಂದು (ಸೆಂ.26) ಚಾಲನೆ ಸಿಗಲಿದೆ. ಇದೇ ಮೊದಲ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು(Draupadi Murmu) ಅವರು ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲಿದ್ದಾರೆ. ಈ ಐತಿಹಾಸಿಕ ಗಳಿಗೆಗೆ ಕೆಲವೇ ಗಂಟೆಗಳು ಬಾಕಿ ಇವೆ.
ಕೊರೊನಾ ಕಾರಣದಿಂದ ಕಳೆದೆರಡು ವರ್ಷ ಕಳೆಗುಂದಿದ್ದದ್ದ ಮೈಸೂರು ದಸರಾ ಈ ಸಲ ವೈಭವೋಪೇತವಾಗಿ ನಡೆಯಲಿದೆ. ನಾಡಹಬ್ಬಕ್ಕೆ ಇಂದು ಚಾಲನೆ ಸಿಗಲಿದ್ದು, ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಸಲ ದಸರಾ ಉದ್ಘಾಟನೆ ಮಾಡಲಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಬೆಳಿಗ್ಗೆ 9 ಗಂಟೆ 45 ನಿಮಿಷದಿಂದ 10 ಗಂಟೆ 5 ನಿಮಿಷದೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲು ರಾಷ್ಟ್ರಪತಿಗಳು ಶಕ್ತಿದೇವತೆ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸುತ್ತಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಹಾಜರಿರಲಿದ್ದಾರೆ. ದಸರಾ ಆರಂಭದ ಮೊದಲ ದಿನವಾದ ಇಂದು ದೇವಿಗೆ ಬ್ರಾಹ್ಮಿ ಅಲಂಕಾರ ಮಾಡಿ ವಜ್ರಾಭರಣಗಳಿಂದ ಸಿಂಗರಿಸಲಾಗುತ್ತದೆ. ಇದನ್ನೂ ಓದಿ: Door Cleaning Tips: ನಿಮ್ಮ ಮನೆಯ ಬಾಗಿಲನ್ನು ಹೊಳೆಯುವಂತೆ ಮಾಡಲು ಇಲ್ಲಿವೆ ಸರಳ ಟಿಪ್ಸ್!
ಬುಡಕಟ್ಟು ಜನರೊಂದಿಗೆ ರಾಷ್ಟ್ರಪತಿ ಫೋಟೊ ಸೆಷನ್
ದಸರಾ ಉದ್ಘಾಟನೆಗೆ ರಾಷ್ಟ್ರಪತಿಗಳು ಆಗಮಿಸ್ತಿರೋದ್ರಿಂದ ಸಿಎಂ ಬೊಮ್ಮಾಯಿ ಈಗಾಗಲೇ ಮೈಸೂರಿಗೆ ಆಗಮಿಸಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಮಂಡಕಹಳ್ಳಿ ವಿಮಾನ ನಿಲ್ದಾಣದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಕೋರಲಿದ್ದಾರೆ. ಅಲ್ಲಿಂದ ರಾಷ್ಟ್ರಪತಿ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ.
ಇದೆಲ್ಲಾ ಆದ ಬಳಿಕ ಬುಡಕಟ್ಟು ಜನರೊಂದಿಗೆ ರಾಷ್ಟ್ರಪತಿಗಳಿಂದ ಫೋಟೊ ಸೆಷನ್ ನಡೆಯಲಿದೆ. ಹುಣಸೂರು ಹಾಗೂ ಎಚ್.ಡಿ ಕೋಟೆಯ ಆಯ್ದ 14 ಜನರೊಂದಿಗೆ ಫೋಟೊ ಸೆಷನ್ ನಡೆಯಲಿದೆ. ಇದಕ್ಕಾಗಿಯೇ ಚಾಮುಂಡಿ ಬೆಟ್ಟದ ಆವರಣಲ್ಲಿ ಫೋಟೊ ಸೆಷನ್ ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು 10 ನಿಮಿಷಗಳ ಕಾಲ ಫೋಟೊ ಸೆಷನ್ ಗೆ ಅವಕಾಶ ನೀಡಲಾಗಿದೆ.
ನಾಡಹಬ್ಬದ ಹಿನ್ನೆಲೆ ಇಂದಿನಿಂದ ಮೈಸೂರಲ್ಲಿ ಹಲವು ಕಾರ್ಯಕ್ರಮಗಳು ಶುರುವಾಗಲಿವೆ. ರೈತ ದಸರಾ, ದಸರಾ ಚಲನ ಚಿತ್ರೋತ್ಸವ, ದಸರಾ ಮ್ಯಾರಥಾನ್, ಯುವ ದಸರಾ, ದಸರಾ ಕ್ರೀಡಾಕೂಡ, ದಸರಾ ಕುಸ್ತಿ, ದಸರಾ ಆಹಾರ ಮೇಳ ಉದ್ಘಾಟನೆಗೊಳ್ಳಲಿದೆ. ಈ ಬಾರಿ ದಸರಾದಲ್ಲಿ ಅಪ್ಪು ನೆನಪು ಇರಲಿದೆ. ಮರ ಹಾಗೂ ಮರಳಿನಲ್ಲಿ ಪುನೀತ್ ರಾಜ್ಕುಮಾರ್ ನಗು ಮೂಡಿದೆ. ಇದನ್ನೂ ಓದಿ: Mysore Dasara: ದಸರಾ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಹೊಸ ಕಳೆ, ಗಾಜಿನ ಮನೆಯಲ್ಲಿ ಗಮನ ಸೆಳೆಯುತ್ತಿದೆ ರಾಷ್ಟ್ರಪತಿ ಭವನದ ಪ್ರತಿಕೃತಿ
ಇಂದು ರಾಜವಂಶಸ್ಥ ಯದುವೀರ್ ಖಾಸಗಿ ದರ್ಬಾರ್
ಇನ್ನು ಮೈಸೂರು ಅರಮನೆಯಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿವೆ. ಇಂದು ರಾಜವಂಶಸ್ಥ ಯದುವೀರ್ ಖಾಸಗಿ ದರ್ಬಾರ್ ಹಾಲ್ನಲ್ಲಿ ಬೆಳಿಗ್ಗೆ 11 ಗಂಟೆಗೆ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಬೆಳಗ್ಗೆ 6.15ಕ್ಕೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತೆ. ಬೆಳಗ್ಗೆ 9.45ಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆ. 10.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸುತ್ತೆ. 11.15ಕ್ಕೆ ಸಿಂಹಾರೋಹಣ ಪೂಜಾ ಕೈಂಕರ್ಯ. ಕಳಸ ಪೂಜೆ ಜೊತೆಗೆ ವಿವಿಧ ಪೂಜೆಗಳು ನೆರವೇರುತ್ತವೆ.
ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ನಿರ್ಬಂಧ
ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆಯಿಂದ 11.30ರವರೆಗೆ ಸಾರ್ವಜನಿಕರಿಗೆ ಚಾಮುಂಡೇಶ್ವರಿ ದೇವಸ್ಧಾನದಲ್ಲಿ ದೇವರ ದರ್ಶನ ಸಿಗುವುದಿಲ್ಲ. ಕಾರ್ಯಕ್ರಮ ಮುಗಿದ ನಂತರ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ಇನ್ನು ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾಗೆ ರಾಷ್ಟ್ರಪತಿಗಳಿಂದ ಚಾಲನೆ ಹಿನ್ನೆಲೆ ಚಾಮುಂಡಿ ಬೆಟ್ಟ ಮತ್ತು ಬೆಟ್ಟದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 600ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ಇರಲಿದೆ. ಆಯ್ದ ಗಣ್ಯರಿಗಷ್ಟೇ ಕಾರ್ಯಕ್ರಮಕ್ಕೆ ಅವಕಾಶ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:15 am, Mon, 26 September 22