Mysore Dasara 2024: ಮೈಸೂರು ದಸರಾ 2024 ಯಾವಾಗ? ಈ ಬಾರಿಯ ವಿಶೇಷತೆ ಏನು? ಇತಿಹಾಸ ವೈಶಿಷ್ಟ್ಯ & ಕುತೂಹಲಕಾರಿ ಮಾಹಿತಿ ಇಲ್ಲಿದೆ

ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜಂಬೂ ಸವಾರಿಗೆ ತಾಲೀಮು ಸಹ ನಡೆಯುತ್ತಿದೆ. ಈ ಬಾರಿಯ ನಾಡಹಬ್ಬ ಯಾವಾಗ ಆರಂಭವಾಗಿ ಯಾವಾಗ ಕೊನೆಗೊಳ್ಳಲಿದೆ? ಈ ಬಾರಿಯ ವಿಶೇಷತೆ ಏನು? ನವರಾತ್ರಿ ಸಂದರ್ಭ ನಡೆಯುವ ದಸರಾದ ಇತಿಹಾಸ, ವೈಶಿಷ್ಟ್ಯ ಸೇರಿದಂತೆ ಈ ಬಾರಿಯ ಕಾರ್ಯಕ್ರಮಗಳ ಸಮಗ್ರ ಮಾಹಿತಿ ಇಲ್ಲಿದೆ.

Mysore Dasara 2024: ಮೈಸೂರು ದಸರಾ 2024 ಯಾವಾಗ? ಈ ಬಾರಿಯ ವಿಶೇಷತೆ ಏನು? ಇತಿಹಾಸ ವೈಶಿಷ್ಟ್ಯ & ಕುತೂಹಲಕಾರಿ ಮಾಹಿತಿ ಇಲ್ಲಿದೆ
ಮೈಸೂರು ದಸರಾ ಜಂಬೂ ಸವಾರಿ (ಸಂಗ್ರಹ ಚಿತ್ರ)
Follow us
Ganapathi Sharma
|

Updated on:Sep 09, 2024 | 12:50 PM

ಬೆಂಗಳೂರು, ಸೆಪ್ಟೆಂಬರ್ 9: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ನಾಡಹಬ್ಬಕ್ಕೆ ಮೈಸೂರಿನಲ್ಲಿ ಭರದಿಂದ ಸಿದ್ಧತೆ ನಡೆಸಲಾಗುತ್ತಿದ್ದು, ಗಜಪಡೆಗಳ ತಾಲೀಮು ಸಹ ಮುಂದುವರಿದಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಎರಡು ಬಾರಿ ಪೂರ್ವಸಿದ್ಧತಾ ಸಭೆ ನಡೆಸಿದ್ದರೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​​ಸಿ ಮಹದೇವಪ್ಪ ಕೂಡ ಕಳೆದ ವಾರ ದಸರಾ ಸಿದ್ಧತಾ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಈ ಬಾರಿ ದಸರಾ ಮಹೋತ್ಸವವನ್ನು ಯಾರು ಉದ್ಘಾಟನೆ ಮಾಡಲಿದ್ದಾರೆ ಎಂಬುದನ್ನು ಸರ್ಕಾರ ಇನ್ನಷ್ಟೇ ಘೋಷಣೆ ಮಾಡಬೇಕಿದೆ. ದಸರಾ ಮಹೋತ್ಸವದ ಅಧಿಕೃತ ದಿನಾಂಕ ಈಗಾಗಲೇ ಪ್ರಕಟವಾಗಿದ್ದು, ವಿಸ್ತೃತ ವೇಳಾಪಟ್ಟಿ ಶೀಘ್ರ ದೊರೆಯಲಿದೆ.

ಮೈಸೂರು ದಸರಾ ಮಹೋತ್ಸವ ಯಾವಾಗ?

2024ರ ದಸರಾ ಮಹೋತ್ಸವ ಅಕ್ಟೋಬರ್ 3ರಂದು ಆರಂಭಗೊಂಡು ಅದೇ ತಿಂಗಳ 12ರಂದು ಸಮಾರೋಪಗೊಳ್ಳಲಿದೆ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ.

ಮೈಸೂರು ದಸರಾ: ಯಾವ ದಿನ ಏನು ಕಾರ್ಯಕ್ರಮ?

ಅಕ್ಟೋಬರ್ 3ರಂದು ಚಾಮುಂಡೇಶ್ವರಿ ದೇವಿಗೆ ನವರಾತ್ರಿಯ ಪ್ರಥಮ ಪೂಜೆ ನೆರವೇರಲಿದ್ದು, ನಂತರ 9 ದಿನಗಳ ಕಾಲ ದೇವಿಯ ಆರಾಧನೆ ನಡೆಯಲಿದೆ. ಅಕ್ಟೋಬರ್ 12ರಂದು ನವಮಿಯ ದಿನ ದುರ್ಗಾಷ್ಟಮಿ, ಮಹಾನವಮಿ, ಆಯುಧ, ಆನೆ ಮತ್ತು ಕುದುರೆ ಪೂಜೆ ನೆರವೇರಲಿದೆ.

ಮೈಸೂರಿನಲ್ಲಿ ಜಂಬೂ ಸವಾರಿ ಯಾವಾಗ?

ದಸರಾ ಮಹೋತ್ಸವದ ಕೊನೆಯ ದಿನವಾದ ಅಕ್ಟೋಬರ್ 13ರಂದು ವಿಜಯ ದಶಮಿ ಪೂಜೆ ನೆರವೇರಲಿದೆ. ಸಂಜೆ 4.30ರ ನಂತರ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ 7.30ರ ನಂತರ ಪಂಜಿನ ಕವಾಯತು ನಡೆಯಲಿದೆ.

ಮೈಸೂರು ದಸರಾ: ಈ ಬಾರಿಯ ವಿಶೇಷತೆ ಏನು?

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕಾರಣ ಕಳೆದ ವರ್ಷ ಸರಳವಾಗಿ, ಸಾಂಪ್ರದಾಯಿಕ ದಸರಾ ಹಬ್ಬವನ್ನು ಆಚರಿಸಲಾಗಿತ್ತು. ಆದರೆ, ಈ ವರ್ಷ ಉತ್ತಮ ಮುಂಗಾರು ಮಳೆ ಆಗಿರುವುದರಿಂದ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದಾರೆ. ದಸರಾ ಸಂಬಂಧ ಕಾರ್ಯಕ್ರಮಗಳ ಪಟ್ಟಿ ಮತ್ತು ಉದ್ಘಾಟಕರು ಯಾರೆಂಬುದನ್ನು ಸರ್ಕಾರ ಇನ್ನಷ್ಟೇ ಪ್ರಕಟಿಸಬೇಕಿದೆ.

Mysore Dasara 2024: When will Mysuru Dasara Begins, What is the history, Significance and interesting information in Kannada

ಗಜಪಡೆ ತಾಲೀಮು

ಈ ಮಧ್ಯೆ, ಕಳೆದ ಬಾರಿ ಆಗಿರುವ ನ್ಯೂನತೆಗಳನ್ನು ಈ ಬಾರಿ ಸರಿಪಡಿಸಿಕೊಂಡು ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಲಾಗುವುದು. ಅರಮನೆ ಆವರಣದಲ್ಲಿ ಸಂಜೆ 4 ಗಂಟೆಯಿಂದಲೇ ಸಂಗೀತ ಕಾರ್ಯಕ್ರಮ ಆಯೋಜಿಸಲು ಸೂಚಿಸಲಾಗಿದೆ. ದಸರಾ ಉದ್ಘಾಟಕರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ, ಅದರ ಬಗ್ಗೆ ತೀರ್ಮಾನ ಮಾಡುವುದು ಸಿಎಂ ಸಿದ್ದರಾಮಯ್ಯ ವಿವೇಚನೆಗೆ ಬಿಟ್ಟಿದ್ದೇವೆ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.

ದಸರಾ ಮಹೋತ್ಸವ ಸಂಬಂಧ ಅರಮನೆ ವತಿಯಿಂದ ನಡೆಯಲಿರುವ ಕಾರ್ಯಕ್ರಮಗಳ ವಿವರ ಹಾಗೂ ವೇಳಾಪಟ್ಟಿ ಇಂದು ಸಂಜೆ (ಸೆಪ್ಟೆಂಬರ್ 9) ಬಿಡುಗಡೆಯಾಗುವ ನಿರೀಕ್ಷೆ ಇದೆ.

ಮೈಸೂರು ದಸರಾ ಇತಿಹಾಸ

ದಸರಾ ಹಬ್ಬಕ್ಕೆ 400 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಸುಮಾರು 14ನೇ ಶತಮಾನದಲ್ಲಿ ಪ್ರಾರಂಭವಾದ ಈ ಉ್ಸತವ ಸಾಮಾನ್ಯವಾಗಿ ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್‌ನಲ್ಲಿ ಬರುತ್ತದೆ. ಇದು 10 ದಿನಗಳ ಹಬ್ಬವಾಗಿದೆ. ಮೈಸೂರು ದಸರಾ ‘ನಾಡಹಬ್ಬ’ ಎಂದೇ ಪ್ರಸಿದ್ಧವಾಗಿದೆ.

ಮೈಸೂರು ರಾಜಮನೆತನದವರು ಅರಮನೆಯಲ್ಲಿ ರಾಜ ದಸರಾವನ್ನು ಆಚರಿಸುತ್ತಾರೆ. ಅಕ್ಟೋಬರ್ 3 ರಂದು ಸಂಜೆ ಅರಮನೆಯೊಳಗೆ ಖಾಸಗಿ ದಸರಾ ಆಚರಣೆ ಆರಂಭವಾಗಲಿದೆ. ಮೈಸೂರು-ಕೊಡಗು ಸಂಸದರೂ ಆಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಆಚರಣೆಗಳು ದಶಮಿ (ಹತ್ತನೇ) ದಿನದಂದು ಮುಕ್ತಾಯಗೊಳ್ಳುತ್ತವೆ.

ಮೈಸೂರು ದಸರಾದಲ್ಲಿ ಆನೆಗಳ ಪಾತ್ರ, ಜಂಬೂ ಸವಾರಿ

ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಜಂಬೂ ಸವಾರಿ. ದಸರಾ ಆನೆಗಳನ್ನು ನೋಡಲು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಮೈಸೂರು ನಗರಕ್ಕೆ ಆಗಮಿಸುತ್ತಾರೆ. ಈ ವರ್ಷ ಕ್ಯಾಪ್ಟನ್ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದು, ತಾಲೀಮು ಜೋರಾಗಿಯೇ ನಡೆಯುತ್ತಿದೆ.

Mysore Dasara 2024: When will Mysuru Dasara Begins, What is the history, Significance and interesting information in Kannada

ಗಜ ಪಯಣದ ಚಿತ್ರ

ವರ್ಣರಂಜಿತ ಟ್ಯಾಬ್ಲೊಗಳು, ನೃತ್ಯ ತಂಡಗಳ ಪ್ರದರ್ಶನ, ಸಂಗೀತ ಬ್ಯಾಂಡ್‌ಗಳು, ಅಲಂಕರಿಸಿದ ಆನೆಗಳು, ಕುದುರೆಗಳು ಮತ್ತು ಒಂಟೆಗಳು ಜಂಬೂ ಸವಾರಿಯ ಪ್ರಮುಖ ಬಾಗಗಳಾಗಿವೆ. ಜಂಬೂ ಸವಾರಿಯ ನಂತರ, ಬನ್ನಿಮಂಟಪದ ಪರೇಡ್ ಮೈದಾನದಲ್ಲಿ ಸಂಜೆ ಪಂಜಿನ ಕವಾಯತು ನಡೆಯುತ್ತದೆ.

ಮೈಸೂರಿನಲ್ಲಿ ಜಂಬೂ ಸವಾರಿ ಆರಂಭ, ಕೊನೆಯಾಗುವ ಸ್ಥಳ ಎಲ್ಲಿ?

ವಿಜಯದಶಮಿಯಂದು ಮೈಸೂರು ನಗರದ ಬೀದಿಗಳಲ್ಲಿ ಜಂಬೂ ಸವಾರಿ ನಡೆಯುತ್ತದೆ. ಇದು ಮೈಸೂರು ಅರಮನೆಯಿಂದ ಪ್ರಾರಂಭವಾಗುತ್ತದೆ ಮತ್ತು ಬನ್ನಿಮಂಟಪದಲ್ಲಿ ಕೊನೆಗೊಳ್ಳುತ್ತದೆ. ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯೆಂದರೆ ಚಾಮುಂಡೇಶ್ವರಿ ದೇವಿಯ ವಿಗ್ರಹ, ಇದು ಆನೆಯ ಮೇಲ್ಭಾಗದಲ್ಲಿ ಚಿನ್ನದ ಅಂಬಾರಿಯಲ್ಲಿ ಇರಿಸಲ್ಪಟ್ಟಿರುತ್ತದೆ. ಜಂಬೂ ಸವಾರಿಗೆ ಮುನ್ನ ರಾಜ ದಂಪತಿ ಮತ್ತು ಇತರ ಅತಿಥಿಗಳು ಈ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸುತ್ತಾರೆ.

ಮೈಸೂರು ದಸರಾ ಗೋಲ್ಡ್ ಕಾರ್ಡ್ ಪ್ರಯೋಜನವೇನು?

ಮೈಸೂರು ದಸರಾ 2024 ಗೋಲ್ಡ್ ಕಾರ್ಡ್ ಮೈಸೂರಿನ ವಿವಿಧ ಪ್ರವಾಸಿ ತಾಣಗಳಿಗೆ ತಡೆರಹಿತ ಪ್ರವೇಶ ಮತ್ತು ನಿರ್ಗಮನವನ್ನು ಖಚಿತಪಡಿಸುತ್ತದೆ. ಇದು ಜಂಬೂ ಸವಾರಿ ಮೆರವಣಿಗೆಗೆ ಆಸನ ವ್ಯವಸ್ಥೆಯೊಂದಿಗೆ ಅರಮನೆ ಆವರಣಕ್ಕೆ ಪ್ರವೇಶಾವಲಾಶವನ್ನು ಸಹ ಒಳಗೊಂಡಿದೆ. ಮೈಸೂರು ಜಿಲ್ಲಾಡಳಿತದಿಂದ ಆನ್‌ಲೈನ್‌ನಲ್ಲಿ ಗೋಲ್ಡ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಗೋಲ್ಡ್ ಕಾರ್ಡ್ ವಿತರಣೆ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ.

ಇದನ್ನೂ ಓದಿ: ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ

ಮೈಸೂರು ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತಿದ್ದರೆ, ಕರ್ನಾಟಕದ ಇತರ ಕೆಲವು ಕಡೆಗಳಲ್ಲಿ ಸಹ ಅದ್ದೂರಿಯಾಗಿ ದಸರಾ ಮಹೋತ್ಸವ ಆಚರಿಸಲಾಗುತ್ತದೆ ಮತ್ತು ಪ್ರಸಿದ್ಧಿಪಡೆದಿವೆ. ಅವುಗಳಲ್ಲಿ ಮಡಿಕೇರಿ ದಸರಾ, ಮಂಗಳೂರು ದಸರಾ, ಶ್ರೀರಂಗಪಟ್ಟಣ ದಸರಾ, ಚಾಮರಾಜನಗರ ದಸರಾ ಪ್ರಮುಖವಾದದ್ದಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:41 pm, Mon, 9 September 24