President Droupadi Murmu Speech: ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಬಳಿಕ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡದಲ್ಲಿ ಭಾಷಣ ಆರಂಭಿಸಿದರು. ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

President Droupadi Murmu Speech: ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು
Follow us
TV9 Web
| Updated By: ಆಯೇಷಾ ಬಾನು

Updated on:Sep 26, 2022 | 11:07 AM

ಮೈಸೂರು: ಇಂದು ವಿಶ್ವವಿಖ್ಯಾತ ಮೈಸೂರು ದಸರಾ 2022ಗೆ(Mysore Dasara 2022) ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ನು ಇದೇ ಮೊದಲ ಬಾರಿಗೆ ದಸರಾ ಉದ್ಘಾಟನೆಯಲ್ಲಿ ಭಾಗಿಯಾದ ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು( Droupadi Murmu) ಅವರು ಕನ್ನಡದಲ್ಲಿ ಮಾತನಾಡುವ ಮೂಲಕ ರಾಜ್ಯದ ಜನರ ಮನಸ್ಸು ಗೆದ್ದಿದ್ದಾರೆ. ದೇವಿ ಚಾಮುಂಡೇಶ್ವರಿಗೆ ನನ್ನ ಮನಃಪೂರ್ವಕ ನಮಸ್ಕಾರಗಳು, ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಎಂದು ರಾಷ್ಟ್ರಪತಿ ಕನ್ನಡದಲ್ಲಿ ಎರಡು ವಾಕ್ಯ ಹೇಳಿದ ನಂತರ ಸಂಸ್ಕೃತದ ಚಾಮುಂಡೇಶ್ವರಿ ಶ್ಲೋಕ ಪಠಿಸಿದರು. ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ಇದು ಆದಿಶಕ್ತಿಯ ಸ್ಥಾನ

ಗಣೇಶನ ಹಬ್ಬದ ಸಂದರ್ಭದಲ್ಲಿ ನಾನು ಕರ್ನಾಟಕಕ್ಕೆ ಬಂದಿದ್ದೆ. ಈಗ ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದುಕೊಳ್ಳುತ್ತೇನೆ. ಇದು ಆದಿಶಕ್ತಿಯ ಸ್ಥಾನ. ಅಧ್ಯಾತ್ಮಿಕವಾಗಿ ಉನ್ನತ ಸ್ಥಾನ ಪಡೆದಿರುವ ದೇವಿಯ ಸ್ಥಳ ಇದು. ಹೀಗಾಗಿಯೇ ದೂರದೂರದಿಂದಲೂ ಜನರು ದೇವಿಯ ದರ್ಶನಕ್ಕಾಗಿ ಬರುತ್ತಾರೆ ಎಂದು ರಾಷ್ಟ್ರಪತಿ ಹೇಳಿದರು.

ಕರ್ನಾಟಕದ ಅಧ್ಯಾತ್ಮಿಕ ಪರಂಪರೆ ನೆನೆದ ರಾಷ್ಟ್ರಪತಿ

ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಗೌರವ ಹೆಚ್ಚಿಸಿದೆ. ಕರ್ನಾಟಕದಲ್ಲಿ ಜೈನ ಮತ್ತು ಬೌದ್ಧ ಪರಂಪರೆಗಳು ಬೆಸೆದುಕೊಂಡಿವೆ. ಆದಿಶಂಕರಾಚಾರ್ಯರು ಪೀಠ ಸ್ಥಾಪಿಸಿ ನಾಡಿನ ಘನತೆ ಹೆಚ್ಚಿಸಿದ್ದಾರೆ. ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆ ಮತ್ತು ಪ್ರಜಾಪ್ರಭುತ್ವದ ಆಶಯ ಸಾರಿ ಹೇಳಿದರು. ಅನುಭವ ಮಂಟಪದ ಮೂಲಕ ಅಧ್ಯಾತ್ಮಿಕ ಮತ್ತು ಸಾಮಾಜಿಕ ಚರ್ಚೆಗಳು ನಡೆಯುತ್ತಿದ್ದವು ಎಂದು ರಾಷ್ಟ್ರಪತಿ ಹೇಳಿದರು. ಇದನ್ನೂ ಓದಿ: ಇವತ್ತು ಮಹಿಶಾಸುರ ಇಲ್ಲ. ಆದರೆ ನಮ್ಮೊಳಗಿರುವ ದುರ್ಗುಣಗಳನ್ನು ದೂರ ಇಡಬೇಕು -ಸಿಎಂ ಬೊಮ್ಮಾಯಿ

ಮಹಿಳೆಯರಿಗೆ ಬಲ ತುಂಬೋಣ: ದ್ರೌಪದಿ ಮುರ್ಮು

ಕರ್ನಾಟಕವು ಮಹಿಳಾ ಸಮಾನತೆಗೂ ಹೆಸರುವಾಸಿ. ಮಹಿಶಾಸುರ ಸೇರಿದಂತೆ ಹಲವು ರಾಕ್ಷಸರನ್ನು ದೇವಿ ಸಂಹಾರ ಮಾಡಿ ಜನರನ್ನು ರಕ್ಷಿಸಿದ್ದಾಳೆ. ದೇವಿಯು ಶಕ್ತಿಸ್ವರೂಪಳೂ ಹೌದು, ತಾಯಿಯಾಗಿ ಭಕ್ತರನ್ನು ಕಾಪಾಡುವ ತಾಯಿ ಸ್ವರೂಪಳೂ ಹೌದು. ದಸರಾ ಎನ್ನುವುದು ಸ್ತ್ರೀಶಕ್ತಿಯ ಆರಾಧನೆ ಮಾಡುವ ಹಬ್ಬ. ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮಾ, ಓಬವ್ವರಂಥ ಮಹಾನ್ ಹೋರಾಟಗಾರ್ತಿಯರು ಇದ್ದ ನಾಡು. ಮಹಿಳೆಯರು ಹಲವು ಆಯಾಮಗಳಲ್ಲಿ ಈಗ ಪ್ರಗತಿ ತೋರುತ್ತಿದ್ದಾರೆ. ಅವರಿಗೆ ನಾವು ಇನ್ನಷ್ಟು ಬಲ ತುಂಬಬೇಕಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪರಂಪರೆಯೊಂದಿಗೆ ಜೋಡಣೆಯಾಗಲು ನನಗೆ ಅವಕಾಶಕೊಟ್ಟರು. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅತಿವೃಷ್ಟಿಯಿಂದ ರಾಜ್ಯದಲ್ಲಿ ಅನಾಹುತಗಳು ಸಂಭವಿಸಿದವು. ರಾಜ್ಯ ಸರ್ಕಾರವು ಅದನ್ನು ನಿರ್ವಹಿಸಲು ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ.

ಕರ್ನಾಟಕದಲ್ಲಿ ದೇಶದ ಸಾಫ್ಟ್​ವೇರ್ ಮತ್ತು ಹಾರ್ಡ್​ವೇರ್​ ಉದ್ಯಮಗಳು ನೆಲೆ ನಿಂತಿವೆ. ಬೆಂಗಳೂರು ದೇಶದ ಸ್ಟಾರ್ಟ್​ಅಪ್​ ಹಬ್ ಎನಿಸಿಕೊಂಡಿದೆ. ಆವಿಷ್ಕಾರಗಳು ಹಾಗೂ ನವೋದ್ಯಮಗಳಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳು ಕರ್ನಾಟಕದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಇದು ಇನ್ನಷ್ಟು ಮುನ್ನಡೆ ಸಾಧಿಸಬೇಕು. ಜೈ ಕರ್ನಾಟಕ ಎಂದು ಘೋಷಿಸುವ ಮೂಲಕ ರಾಷ್ಟ್ರಪತಿ ಭಾಷಣ ಮುಗಿಸಿದರು.

ದಸರಾ ಹಬ್ಬದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:04 am, Mon, 26 September 22