Hakka Bukka brothers: ಹಕ್ಕ-ಬುಕ್ಕ ಸಹೋದರರು ಅಂಬಾರಿಯ ಬಚ್ಚಿಟ್ಟು, ದೆಹಲಿ ಸುಲ್ತಾನರ ದಾಳಿಯಿಂದ ಅದನ್ನು ರಕ್ಷಿಸಿದ್ದು ಹೇಗೆ?

| Updated By: ಸಾಧು ಶ್ರೀನಾಥ್​

Updated on: Sep 27, 2022 | 6:06 AM

Mysuru Dasara Golden Howdah: ಅಂಬಾರಿ ವಿವಿಧ ಅರಸರ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಕಡೆಗೆ ಮೈಸೂರಲ್ಲಿ ನೆಲೆಗೊಂಡಿದೆ. ಇಂದಿಗೂ ಮೈಸೂರು ದಸರಾ ಸಂದರ್ಭದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಪುನೀತವಾಗಿದೆ.

Hakka Bukka brothers: ಹಕ್ಕ-ಬುಕ್ಕ ಸಹೋದರರು ಅಂಬಾರಿಯ ಬಚ್ಚಿಟ್ಟು, ದೆಹಲಿ ಸುಲ್ತಾನರ ದಾಳಿಯಿಂದ ಅದನ್ನು ರಕ್ಷಿಸಿದ್ದು ಹೇಗೆ?
ಅಂಬಾರಿ ಅರಮನೆಗೆ ಬಂದ ರೋಚಕ ಕಥೆ ಇಲ್ಲಿದೆ!
Follow us on

ಮೈಸೂರು ದಸರಾ (Mysuru Dasara) ಎಂದರೆ ಅದು ಕನ್ನಡನಾಡಿಗೆ ನಾಡಹಬ್ಬವಾದರೆ, ಈ ಸಾಂಸ್ಕೃತಿಕ ಹಬ್ಬದ ಕೀರ್ತಿ ಮಾತ್ರ ವಿಶ್ವಪ್ರಸಿದ್ಧ! ಶತಮಾನಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಈ ಆಚರಣೆಯಲ್ಲಿ ಬಹುಮುಖ್ಯವಾದ ಆಕರ್ಷಣೆ ಎಂದರೆ ಅದು ಚಿನ್ನದ ಅಂಬಾರಿ‌. ಜಂಬೂಸವಾರಿಯಲ್ಲಿ ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತರುವ, ಈ ಅಂಬಾರಿಯಲ್ಲಿ ವಿರಾಜಮಾನಳಾಗಿ ಬರುವ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲು ಜನರು ದೇಶ ವಿದೇಶಗಳಿಂದ ಬರುತ್ತಾರೆ. ಇಂತಹ ಅಂಬಾರಿಯ ಬಗ್ಗೆ (Mysuru Dasara Golden Howdah) ನಾವು ತಿಳಿಯಲೇ ಬೇಕಾದ ಇತಿಹಾಸವಿದೆ. ಅದು ಹೀಗಿದೆ.

ಅಂಬಾರಿಯ ಇತಿಹಾಸ ಬಲು ರೋಚಕವಾಗಿದೆ. ಮೂಲತಃ ಈ ರತ್ನಖಚಿತ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಲ್ಲಿ ಇತ್ತು. ಕಾಲಾಂತರದಲ್ಲಿ ದೇವಗಿರಿ ಅವನತಿ ಹೊಂದಿದಾಗ, ಅಂಬಾರಿಯನ್ನು ದೇವಗಿರಿಯ ರಾಜ ಮುಮ್ಮಡಿಸಿಂಗ ನಾಯಕನಿಗೆ ಹಸ್ತಾಂತರಿಸಿ, ಆತನಿಗೆ ಅದನ್ನು ಸುರಕ್ಷಿತವಾಗಿಡುವಂತೆ ಮನವಿ ಮಾಡಿಕೊಂಡರು. ಆಗ ಮುಮ್ಮಡಿ ಸಿಂಗ ನಾಯಕನು ಇದನ್ನು ಬಳ್ಳಾರಿ ಹತ್ತಿರವಿದ್ದ ರಾಮದುರ್ಗ ಕೋಟೆಯಲ್ಲಿ ಅಡಗಿಸಿ ಇಟ್ಟನು. ನಂತರ ಈತನ ಮಗ ಕಂಪಿಲರಾಯ ತನ್ನ ರಾಜ್ಯ ವಿಸ್ತರಣೆ ಮಾಡಿ, ಕಮ್ಮಟ ದುರ್ಗವನ್ನು ತನ್ನ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಆಗ ಅಲ್ಲಿ ಶ್ರೀದುರ್ಗಾದೇವಿಯನ್ನು ಸ್ಥಾಪಿಸಿ ಆರಾಧನೆ ಮಾಡುತ್ತಾನೆ.

ಚಿನ್ನದ ಅಂಬಾರಿ ಮೈಸೂರು ಅರಮನೆಗೆ ಬಂದಿದ್ದು ಹೇಗೆ? ಅಂಬಾರಿ ಅರಮನೆಗೆ ಬಂದ ರೋಚಕ ಕಥೆ ಇಲ್ಲಿದೆ!

ಆದರೆ ಮುಂದೆ ದೆಹಲಿ ಸುಲ್ತಾನರು ಕಂಪಿಲರಾಜ್ಯದ ಮೇಲೆ ದಾಳಿ ಮಾಡಿದಾಗ, ಅಲ್ಲಿ ಭಂಡಾರ ಸಂರಕ್ಷಕರಾದ ಹಕ್ಕ-ಬುಕ್ಕರೆಂಬ ಸಹೋದರರು (Hakka Bukka brothers) ಈ ಅಂಬಾರಿಯನ್ನು ಬಚ್ಚಿಡುತ್ತಾರೆ. ಮುಂದೆ ದೆಹಲಿ ಸುಲ್ತಾನದ ಅವನತಿಯ ನಂತರ ಈ ಸಹೋದರರು ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಅನಂತರ ಹಂಪೆ ಅವರ ಸಾಮ್ರಾಜ್ಯದ ಎರಡನೇ ರಾಜಧಾನಿಯಾದಾಗ ಅಂಬಾರಿ ಹಂಪಿಗೆ ಬಂದು ಸೇರುತ್ತದೆ. ವಿಜಯನಗರ ಸಾಮ್ರಾಜ್ಯ ಅವನತಿಯ ಕಾಲದಲ್ಲಿ ಅಂಬಾರಿಯನ್ನುರಕ್ಷಿಸಲು ಅದನ್ನು ಪೆನುಗೊಂಡಕ್ಕೆ ಸ್ಥಳಾಂತರ ಮಾಡುತ್ತಾರೆ. ಮುಂದೆ ಅದು ಅಲ್ಲಿಂದ ಶ್ರೀರಂಗಪಟ್ಟಣ್ಣವನ್ನು ಸೇರಿ ಕಡೆಗೆ ಒಡೆಯರ ಅಧೀನದಲ್ಲಿ ಮೈಸೂರನ್ನು ಸೇರುತ್ತದೆ.

ಹೀಗೆ ಅಂಬಾರಿ ವಿವಿಧ ಅರಸರ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಕಡೆಗೆ ಮೈಸೂರಲ್ಲಿ ನೆಲೆಗೊಂಡಿದೆ. ಇಂದಿಗೂ ಮೈಸೂರು ದಸರಾ ಸಂದರ್ಭದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಪುನೀತವಾಗಿದೆ.