Mysore Dasara: ದಸರಾ ಉತ್ಸವ; ಮೈಸೂರಿಗೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಕೆಎಸ್ಆರ್ಟಿಸಿ ವಿಶೇಷ ಬಸ್
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 200 ಹೆಚ್ಚುವರಿ ಬಸ್ಗಳು ಹೊರಡಲಿವೆ.
ಬೆಂಗಳೂರು: ಮೈಸೂರು ದಸರಾ ಉತ್ಸವಕ್ಕೆ ಜನರು ಹೋಗಲು ಅನುಕೂಲವಾಗುವಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳು ಹಾಗೂ ಹೊರ ರಾಜ್ಯಗಳ ಪ್ರಮುಖ ಸ್ಥಳಗಳಿಂದ ಕೆಎಸ್ಆರ್ಟಿಸಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಸೆ 30ರಿಂದ ಅ 3ರವರೆಗೆ ಸುಮಾರು 2000 ವಿಶೇಷ ಬಸ್ಗಳು ಸಂಚರಿಸಲಿವೆ. ಬೆಂಗಳೂರಿನಿಂದಲೂ ವಿಶೇಷ ಬಸ್ಗಳು ಹೊರಡಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಮೈಸೂರಿಗೆ ಬಸ್ಗಳು ಹೊರಡುತ್ತವೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಸೇರಿದಂತೆ ಹಲವು ಪ್ರಮುಖ ನಗರಗಳಿಂದ ಮೈಸೂರಿಗೆ ಬಸ್ಗಳು ಹೊರಡಲಿವೆ. ಮೈಸೂರಿನಿಂದ ಪುನಃ ಈ ನಗರಗಳಿಗೆ ಬಸ್ ಸಂಪರ್ಕ ಇರುತ್ತದೆ.
ನೆರೆ ರಾಜ್ಯಗಳ ಪ್ರಮುಖ ನಗರಗಳಾದ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚನಾಪಳ್ಳಿ, ಪುದುಚೇರಿ, ಮಧುರೈ, ಪಣಜಿ, ಶಿರಡಿ, ಪೂನಾ, ಎರ್ನಾಕುಲಂ, ಪಾಲ್ಘಾಟ್ ಹಾಗೂ ಇತರ ಸ್ಥಳಗಳಿಗೆ ವಿಶೇಷ ಬಸ್ಗಳು ಸಂಚರಿಸಲಿವೆ.
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 200 ಹೆಚ್ಚುವರಿ ಬಸ್ಗಳು ಹೊರಡಲಿವೆ. ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆಆರ್ಎಸ್, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಸೇರಿದಂತೆ ಹಲವು ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು 250 ಬಸ್ಗಳನ್ನು ಬಿಡಲಾಗಿದೆ ಎಂದು ಕೆಎಸ್ಆರ್ಟಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.