
ಸನಾತನ ಧರ್ಮದಲ್ಲಿ ಪಿತೃ ಪಕ್ಷಕ್ಕೆ (ಶ್ರಾದ್ಧ ಪಕ್ಷ) ಅತ್ಯಂತ ಮಹತ್ವದ ಸ್ಥಾನವಿದೆ. ಈ ಪವಿತ್ರ ಹದಿನೈದು ದಿನಗಳಲ್ಲಿ ಭಕ್ತರು ತಮ್ಮ ಪೂರ್ವಜರಿಗೆ ಪಿಂಡದಾನ, ಶ್ರಾದ್ಧ ಹಾಗೂ ತರ್ಪಣಗಳನ್ನು ಅರ್ಪಿಸಿ ಕೃತಜ್ಞತೆ ಸಲ್ಲಿಸುತ್ತಾರೆ. ಭಾದ್ರಪದ ಮಾಸದ ಹುಣ್ಣಿಮೆಯ ನಂತರ ಕೃಷ್ಣ ಪಕ್ಷದ ಪ್ರತಿಪದದಿಂದ ಪ್ರಾರಂಭವಾಗಿ ಅಶ್ವಿಜ ಮಾಸದ ಅಮಾವಾಸ್ಯೆಯವರೆಗೆ (ಮಹಾಲಯ ಅಮಾವಾಸ್ಯೆ) ನಡೆಯುವ ಈ ಆಚರಣೆಯು ಪೂರ್ವಜರ ಆಶೀರ್ವಾದ ಪಡೆಯುವ ಅತ್ಯುತ್ತಮ ಅವಕಾಶವಾಗಿದೆ.
ಪಿತೃ ಪಕ್ಷದ ದಿನಾಂಕಗಳ ಕುರಿತು ಅನೇಕರಲ್ಲಿ ಗೊಂದಲಗಳಿರುತ್ತವೆ. ಈ ವರ್ಷ ಸ್ನಾನ ಮತ್ತು ದಾನದ ಪೂರ್ಣಿಮೆಯು ಸೆಪ್ಟೆಂಬರ್ 26, 2026 ರ ಶನಿವಾರದಂದು ಬಂದಿದ್ದು, ಪಿತೃ ಪಕ್ಷದ ಶ್ರಾದ್ಧ ಕಾರ್ಯಗಳು ಸೆಪ್ಟೆಂಬರ್ 27, 2026 ರ ಭಾನುವಾರದಿಂದ (ಪ್ರತಿಪದ ತಿಥಿ) ಪ್ರಾರಂಭವಾಗುತ್ತವೆ. ಈ ಪವಿತ್ರ ಅವಧಿಯು ಅಕ್ಟೋಬರ್ 10, 2026 ರ ಶನಿವಾರ ನಡೆಯುವ ಮಹಾಲಯ ಅಮಾವಾಸ್ಯೆಯಂದು (ಪಿತೃ ವಿಸರ್ಜನೆ) ಮುಕ್ತಾಯಗೊಳ್ಳುತ್ತದೆ. ಈ ಬಾರಿ ಪಿತೃ ಪಕ್ಷವು ಒಟ್ಟು 14 ದಿನಗಳ ಅವಧಿಯನ್ನು ಹೊಂದಿದ್ದು, ಇದು ಮುಗಿದ ಮರುದಿನ ಅಂದರೆ ಅಕ್ಟೋಬರ್ 11 ರಂದು ಶಾರದೀಯ ನವರಾತ್ರಿ ಆರಂಭವಾಗುತ್ತದೆ.
ಮೊದಲ ಬಾರಿಗೆ ತಮ್ಮ ಪೂರ್ವಜರಿಗೆ ಶ್ರಾದ್ಧ ಮಾಡುತ್ತಿರುವವರು ಅವರ ಮರಣ ತಿಥಿಯನ್ನು ನೆನಪಿನಲ್ಲಿಟ್ಟುಕೊಂಡು ಅದೇ ದಿನದಂದು ಶ್ರಾದ್ಧ ಕಾರ್ಯ ನೆರವೇರಿಸಬೇಕು. ಒಂದು ವೇಳೆ ಮರಣ ಹೊಂದಿದ ತಿಥಿ ತಿಳಿದಿಲ್ಲದಿದ್ದರೆ, ಸರ್ವ ಪಿತೃ ಅಮಾವಾಸ್ಯೆಯಂದು ಶ್ರಾದ್ಧ ಮಾಡುವುದು ಶಾಸ್ತ್ರಸಮ್ಮತವಾಗಿದೆ. ಇನ್ನು ಪೂರ್ವಜರು ಅಪಘಾತ, ಹಿಂಸೆ ಅಥವಾ ಅಸಾಮಾನ್ಯ ಸಂದರ್ಭಗಳಲ್ಲಿ ಮೃತಪಟ್ಟಿದ್ದರೆ, ಅವರ ಶ್ರಾದ್ಧವನ್ನು ಚತುರ್ದಶಿ ತಿಥಿಯಂದು ನೆರವೇರಿಸುವುದು ಶುಭ ಎಂದು ಪರಿಗಣಿಸಲಾಗುತ್ತದೆ.
ಪಿತೃಪಕ್ಷದ ದಿನಗಳಲ್ಲಿ ಸಂಪೂರ್ಣವಾಗಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕಿದ್ದು, ಮಾಂಸಾಹಾರ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ವರ್ಜಿಸಬೇಕು. ಈ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಬೇಳೆಕಾಳುಗಳಂತಹ ತಾಮಸಿಕ ಪದಾರ್ಥಗಳನ್ನು ಬಳಸಬಾರದು. ಇದರೊಂದಿಗೆ ಬ್ರಹ್ಮಚರ್ಯವನ್ನು ಪಾಲಿಸುವುದು, ಕೋಪ ಮತ್ತು ಜಗಳಗಳಿಂದ ದೂರವಿರುವುದು ಅತ್ಯಗತ್ಯ. ಅಲ್ಲದೆ, ಗೃಹಪ್ರವೇಶ, ವಿವಾಹ ಮತ್ತು ಮುಂಜಿ ಮುಂತಾದ ಯಾವುದೇ ಮಂಗಳಕರ ಅಥವಾ ಶುಭ ಕಾರ್ಯಕ್ರಮಗಳನ್ನು ಈ 16 ದಿನಗಳ ಕಾಲ ಮಾಡಬಾರದು.
ಇದನ್ನೂ ಓದಿ: ಮಂತ್ರ ಪಠಣ ಮಾಡುವಾಗ ಕಣ್ಣುಗಳನ್ನು ಏಕೆ ಮುಚ್ಚಬೇಕು? ಆಧ್ಯಾತ್ಮಿಕ ಕಾರಣ ಇಲ್ಲಿದೆ
ಶ್ರಾದ್ಧ ಮತ್ತು ಪಿಂಡದಾನದ ಸಮಯದಲ್ಲಿ ಶುದ್ಧವಾದ ಬಿಳಿ ಬಟ್ಟೆಗಳನ್ನು ಧರಿಸಿ, ಬಾರ್ಲಿ ಹಿಟ್ಟಿನಿಂದ ಪಿಂಡಗಳನ್ನು (ಉಂಡೆ) ತಯಾರಿಸಿಕೊಳ್ಳಬೇಕು. ಕುಶ ಆಸನದ ಮೇಲೆ ಅಕ್ಕಿ, ಹಸಿ ದಾರ, ಹೂವು, ಶ್ರೀಗಂಧ, ಧೂಪ, ಎಳ್ಳು ಮತ್ತು ಬಾರ್ಲಿಯನ್ನು ಇಟ್ಟು ಪಿಂಡವನ್ನು ಪೂಜಿಸಬೇಕು. ನಂತರ ಪಿಂಡವನ್ನು ಕೈಯಲ್ಲಿ ಹಿಡಿದು, “ಇದಮ್ ಪಿಂಡಮ್ (ಪೂರ್ವಜರ ಹೆಸರು ಮತ್ತು ಗೋತ್ರ) ತೇಭ್ಯಃ ಸ್ವಧಾ” ಎಂಬ ತರ್ಪಣ ಮಂತ್ರವನ್ನು ಪಠಿಸುತ್ತಾ, ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯಭಾಗದಿಂದ ಪಿಂಡವನ್ನು ಕೆಳಗೆ ಬಿಡಬೇಕು. ಪೂಜೆಯ ನಂತರ ಪಿಂಡಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು ಅಥವಾ ಅಶ್ವತ್ಥ ಮರದ ಬೇರಿನ ಬಳಿ ಇಡಬೇಕು.
ಶ್ರಾದ್ಧ ಕಾರ್ಯಗಳನ್ನು ಯಾವಾಗಲೂ ಮಧ್ಯಾಹ್ನದ ಅವಧಿಯಲ್ಲಿಯೇ ನೆರವೇರಿಸಬೇಕು. ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ಶ್ರಾದ್ಧ ಮಾಡುವುದನ್ನು ಶಾಸ್ತ್ರಗಳಲ್ಲಿ ನಿಷೇಧಿಸಲಾಗಿದೆ. ಶ್ರಾದ್ಧದ ಪ್ರದಕ್ಷಿಣೆಯನ್ನು ಎಡದಿಂದ ಬಲಕ್ಕೆ ಮಾಡಬೇಕು. ಮುಖ್ಯವಾಗಿ, ಶ್ರಾದ್ಧದ ಎಲ್ಲಾ ಆಚರಣೆಗಳನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ನೆರವೇರಿಸಬೇಕು, ಏಕೆಂದರೆ ದಕ್ಷಿಣ ದಿಕ್ಕನ್ನು ಯಮರಾಜನ ಮತ್ತು ಪಿತೃಗಳ ದಿಕ್ಕು ಎಂದು ಪರಿಗಣಿಸಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ