
ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ರಾಧಾ ಅಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣ ಜನ್ಮಾಷ್ಟಮಿ ಮುಗಿದ ಸರಿಯಾಗಿ 15 ದಿನಗಳ ನಂತರ ಶ್ರೀ ರಾಧಾರಾಣಿಯ ಜನ್ಮದಿನವಾದ ರಾಧಾಷ್ಟಮಿ ಬರುತ್ತದೆ. ಈ ಶುಭ ದಿನದಂದು ರಾಧಾ-ಕೃಷ್ಣರನ್ನು ಪೂಜಿಸಿ, ಉಪವಾಸ ವ್ರತ ಆಚರಿಸುವುದರಿಂದ ದಾಂಪತ್ಯದಲ್ಲಿ ಪ್ರೀತಿ-ಸೌಹಾರ್ದತೆ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿದೆ.
2026 ರಲ್ಲಿ ಸೆಪ್ಟೆಂಬರ್ 19 ರ ಶನಿವಾರದಂದು ರಾಧಾ ಅಷ್ಟಮಿ ಆಚರಿಸಲ್ಪಡುತ್ತದೆ. ಸೂರ್ಯೋದಯದ ಸಮಯದಲ್ಲಿ ಅಷ್ಟಮಿ ತಿಥಿ ಇರುವ ದಿನವೇ ವ್ರತ ಆಚರಿಸುವುದು ಶಾಸ್ತ್ರೋಕ್ತವಾಗಿದೆ.
ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದರೆ, ಶ್ರೀ ರಾಧಾರಾಣಿಯು ಮಧ್ಯಾಹ್ನದ ಅವಧಿಯಲ್ಲಿ ಜನ್ಮತಾಳಿದಳು ಎಂಬ ಐತಿಹ್ಯವಿದೆ. ಹಾಗಾಗಿ ರಾಧಾಷ್ಟಮಿಯಂದು ಮಧ್ಯಾಹ್ನ ರಾಧಾರಾಣಿಗೆ ಶ್ರೀಗಂಧ, ಹೂವು, ಹಣ್ಣು, ಬೆಣ್ಣೆ, ಖೀರ್ ಮುಂತಾದ ನೈವೇದ್ಯಗಳನ್ನು ಅರ್ಪಿಸಿ ಪೂಜಿಸುವುದು ವಿಶೇಷ.
ಇದನ್ನೂ ಓದಿ: ಜಪಾನ್‌ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!
ರಾಧಾಷ್ಟಮಿಯ ಸಂದರ್ಭದಲ್ಲಿ ಭಕ್ತರು ರಾಧಾರಾಣಿಯ ಭೂಲೋಕದ ಅವತಾರಕ್ಕೆ ಕಾರಣವಾದ ಒಂದು ಪೌರಾಣಿಕ ಕಥೆಯನ್ನು ಸ್ಮರಿಸುತ್ತಾರೆ. ಗೋಲೋಕದಲ್ಲಿ ಶ್ರೀಕೃಷ್ಣನ ಆಪ್ತ ಮಿತ್ರನಾದ ಶ್ರೀಧಾಮ (ಶ್ರೀದಾಂ) ಮತ್ತು ರಾಧಾರಾಣಿಯ ನಡುವೆ ಉಂಟಾದ ವಾದದಿಂದ ಈ ಶಾಪದ ಘಟನೆ ನಡೆಯಿತು. ಒಮ್ಮೆ ಶ್ರೀಕೃಷ್ಣನು ಗೋಲೋಕದಲ್ಲಿ ವಿರಾಜಾ ಎಂಬಾಕೆಯೊಂದಿಗೆ ಇದ್ದಾಗ, ಬಾಗಿಲಲ್ಲಿ ಯ ಯಾರನ್ನೂ ಬಿಡದಂತೆ ಶ್ರೀಧಾಮನಿಗೆ ಕಾವಲಿಟ್ಟಿದ್ದನು. ಅಲ್ಲಿಗೆ ಬಂದ ರಾಧಾರಾಣಿಯನ್ನು ಶ್ರೀಧಾಮ ತಡೆದಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು. ಕೋಪಗೊಂಡ ರಾಧಾರಾಣಿಯು ಶ್ರೀಧಾಮನಿಗೆ ‘ಭೂಮಿಯಲ್ಲಿ ರಾಕ್ಷಸ ಕುಲದಲ್ಲಿ ಜನ್ಮತಾಳು’ ಎಂದು ಶಾಪ ನೀಡಿದಳು. ಇದರಿಂದ ಅತೃಪ್ತನಾದ ಶ್ರೀಧಾಮನು ಪ್ರತಿಯಾಗಿ, “ನೀನು ಭೂಮಿಯ ಮೇಲೆ ಮಾನವಿಯಾಗಿ ಜನ್ಮತಾಳಿ, 100 ವರ್ಷಗಳ ಕಾಲ ಶ್ರೀಕೃಷ್ಣನಿಂದ ವಿರಹ ಯಾತನೆ ಅನುಭವಿಸು” ಎಂದು ಶಾಪ ನೀಡಿದನು.
ಈ ದೈವಿಕ ಶಾಪದ ಹಿನ್ನೆಲೆಯಲ್ಲೇ ರಾಧಾರಾಣಿ ಭೂಮಿಯಲ್ಲಿ ಅವತರಿಸಿ, ಶ್ರೀಕೃಷ್ಣನ ದೈವಿಕ ಪ್ರೀತಿ ಮತ್ತು ವಿರಹದ ಲೀಲೆಯನ್ನು ಜಗತ್ತಿಗೆ ತೋರಿಸಿಕೊಟ್ಟಳು ಎಂಬುದು ಪೌರಾಣಿಕ ಸಂಪ್ರದಾಯ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ