ವೃಷಭದಲ್ಲಿ ಫೆ.22ರಿಂದ ಏ.14ರ ತನಕ ಕುಜ-ರಾಹು ಸಂಯೋಗ; ದ್ವಾದಶ ರಾಶಿಗೆ ಏನೇನು ಫಲ?
ಕುಜ - ರಾಹು ಗ್ರಹಗಳು ಫೆಬ್ರವರಿ 22, 2021ರಿಂದ ವೃಷಭ ರಾಶಿಯಲ್ಲಿ ಸಂಯೋಗ ಆಗಿವೆ. ಇದರಿಂದ ದ್ವಾದಶ ರಾಶಿಗಳ ಮೇಲೆ ಹಾಗೂ ದೇಶದಲ್ಲಿ ಆಗುವ ಪರಿಣಾಮ ಮತ್ತು ಬದಲಾವಣೆಗಳೇನು, ಪರಿಹಾರಗಳೇನು ಎಂದು ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ತಿಳಿಸಿದ್ದಾರೆ.
ಫೆಬ್ರವರಿ 22, 2021ರಂದು ವೃಷಭ ರಾಶಿಯಲ್ಲಿ ಕುಜ ಗ್ರಹ ಪ್ರವೇಶ ಆಗಿದೆ. ಏಪ್ರಿಲ್ 14, 2021ರ ತನಕ ಕುಜ ಹಾಗೂ ರಾಹು ಒಟ್ಟಿಗೆ ಇರುತ್ತದೆ. ಈ ಸಂದರ್ಭದಲ್ಲಿ ದ್ವಾದಶ ರಾಶಿಗಳು ಹಾಗೂ ದೇಶದ ಮೇಲೆ ಏನು ಪ್ರಭಾವ ಆಗಲಿದೆ ಎಂದು ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ತಿಳಿಸಿದ್ದಾರೆ. ಇದರ ಜತೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಹಾಗೂ ಯಾವ ಸ್ತೋತ್ರ ಪಠಣ ಮಾಡಬೇಕು ಹಾಗೂ ಯಾವ ಧಾನ್ಯ ದಾನ ಮಾಡಬೇಕು ಎಂಬುದನ್ನು ಸಹ ಅವರು ತಿಳಿಸಿಕೊಟ್ಟಿದ್ದಾರೆ.
ಮೇಷ ನಿಮ್ಮ ರಾಶಿಯಿಂದ ಎರಡನೇ ಮನೆಯಾದ ಕುಟುಂಬ- ಧನ ಸ್ಥಾನದಲ್ಲಿ ಕುಜ- ರಾಹು ಸಂಯೋಗ ಆಗಿರುವುದರಿಂದ ಕುಟುಂಬ ಕಲಹಗಳು ಹೆಚ್ಚಾಗಲಿದೆ. ಸಂಗಾತಿ ಜತೆಗೆ ಸಣ್ಣ- ಪುಟ್ಟ ಸಂಗತಿಗಳಿಗೂ ವಾಗ್ವಾದ ಆಗಬಹುದು. ಈಗಾಗಲೇ ಕಲಹ ನಡೆಯುತ್ತಿದ್ದಲ್ಲಿ ಅದಿನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ವೃಷಭ ನಿಮ್ಮದೇ ರಾಶಿಯಲ್ಲಿ ಉಚ್ಚ ರಾಹುವಿನ ಜತೆಗೆ ಆ ಗ್ರಹದ ಶತ್ರುವಾದ ಕುಜ ಕೂಡ ಇರುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ವಾತ, ಪಿತ್ಥ ಸಮಸ್ಯೆಗಳು ಎದುರಾಗಬಹುದು. ಇನ್ನು ರಕ್ತದೊತ್ತಡ ಕೂಡ ಹೆಚ್ಚಾಗುವ ಸಾಧ್ಯತೆಗಳಿವೆ. ರಕ್ತಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅಥವಾ ಉಲ್ಬಣಿಸಬಹುದು.
ಮಿಥುನ ನಿಮ್ಮ ರಾಶಿಯಿಂದ ವ್ಯಯ ಸ್ಥಾನದಲ್ಲಿ ಕುಜ ಹಾಗೂ ರಾಹು ಗ್ರಹದ ಸಂಯೋಗ ಆಗಿದೆ. ಆದ್ದರಿಂದ ನೀವು ಈ ಅವಧಿಯಲ್ಲಿ ವಿದೇಶ ಪ್ರಯಾಣ ಮಾಡದಿರುವುದು ಉತ್ತಮ. ಇನ್ನು ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅದೇ ರೀತಿ ನಿಮ್ಮ ಬಳಿ ವಾಹನಗಳಿದ್ದಲ್ಲಿ ಅದನ್ನು ಸುಮ್ಮನೆ ನಿಲ್ಲಿಸಿದ್ದರೂ ಅಪಘಾತ ಆಗುವಂಥ ಸಾಧ್ಯತೆ ಇದೆ, ಎಚ್ಚರಿಕೆಯಿಂದ ಇರಿ.
ಕರ್ಕಾಟಕ ನಿಮ್ಮ ರಾಶಿಗೆ ಹನ್ನೊಂದನೇ ಮನೆಯಲ್ಲಿ ಕುಜ-ರಾಹು ಒಟ್ಟಾಗುತ್ತಿದ್ದು, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ವ್ಯಾಪಾರ-ವ್ಯವಹಾರದಲ್ಲಿ ನಿಮಗೆ ಸಿಗಬೇಕಾದ ಹಣ ದೊರೆಯದಿರಬಹುದು. ಉದ್ಯೋಗ ಸ್ಥಳದಲ್ಲಿ ನಿಮಗೆ ಸಿಗಬೇಕಾದ ಬಡ್ತಿ, ವರ್ಗಾವಣೆ ಅಥವಾ ಮಾನ್ಯತೆ ದೊರೆಯದಿರುವಂಥ ಅವಕಾಶಗಳು ಹೆಚ್ಚಾಗಿವೆ.
ಸಿಂಹ ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಈ ಸಂಯೋಗ ಆಗುತ್ತಿದೆ. ಮೇಲಧಿಕಾರಿಗಳ ಜತೆಗೆ ವಿನಾ ಕಾರಣದ ಕಿರಿಕಿರಿ, ವಾಗ್ವಾದಗಳು ಆಗುವ ಸಾಧ್ಯತೆಗಳಿವೆ. ನಾನು ಹೇಳಿದ್ದೇ ಆಗಬೇಕು ಎಂಬ ಹಠ ಬೇಡ. ಇನ್ನು ಯಾವುದೋ ಬೇಸರಕ್ಕಾಗಿ ಕೆಲಸ ಬಿಟ್ಟುಹೋಗುವ ಆಲೋಚನೆ ಇದ್ದಲ್ಲಿ ಕೈಬಿಡಿ. ನಿಮಗೆ ಇಷ್ಟವಿಲ್ಲದ ಸ್ಥಳಕ್ಕೆ ಅಥವಾ ಹುದ್ದೆಗೆ ವರ್ಗಾವಣೆ ಆಗುವ ಸಾಧ್ಯತೆಗಳಿದ್ದು, ಬೇಸರ ಪಟ್ಟುಕೊಳ್ಳಬೇಡಿ.
ಕನ್ಯಾ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಕುಜ- ರಾಹು ಸಂಯೋಗ ಆಗುತ್ತಿರುವುದರಿಂದ ತಂದೆ ಜತೆಗೆ ಭಿನ್ನಾಭಿಪ್ರಾಯ ಉದ್ಭವಿಸಬಹುದು. ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ. ಇನ್ನು ಪಿತ್ರಾರ್ಜಿತ ಆಸ್ತಿ ವಿಚಾರಕ್ಕಾಗಿಯೇ ತಂದೆಯೊಂದಿಗೆ ಅಸಮಾಧಾನ ಏರ್ಪಡಬಹುದು. ಅದಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಿ.
ತುಲಾ ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಈ ಎರಡು ಗ್ರಹಗಳು ಒಟ್ಟಾಗುತ್ತಿರುವುದರಿಂದ ಔಷಧೋಪಚಾರದಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಿ. ಮುಖ್ಯವಾದ ಚಿಕಿತ್ಸೆ ಪಡೆಯಬೇಕಿದ್ದಲ್ಲಿ ಸೆಕೆಂಡ್ ಒಪಿನಿಯನ್ ಪಡೆದುಕೊಂಡು ಮುಂದುವರಿಯಿರಿ. ಆರೋಗ್ಯದ ಬಗ್ಗೆ ಗಂಭೀರವಾಗಿರಬೇಕು. ಸ್ವಯಂ ವೈದ್ಯ ಸುತರಾಂ ಮಾಡಿಕೊಳ್ಳಬೇಡಿ.
ವೃಶ್ಚಿಕ ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಕುಜ- ರಾಹು ಸಂಯೋಗ ಇದೆ. ಸಂಸಾರದಲ್ಲಿ ಕಲಹ ಏರ್ಪಡುವ ಅವಕಾಶಗಳಿವೆ. ಈ ಸಂದರ್ಭದಲ್ಲಿ ದೂರಪ್ರಯಾಣ ಮಾಡದಿರಿ. ಇನ್ನು ಪಾರ್ಟನರ್ಷಿಪ್ ವ್ಯವಹಾರ ಮಾಡುತ್ತಿರುವವರಿಗೆ ಲೆಕ್ಕಪತ್ರ ಹಾಗೂ ಹಣಕಾಸು ವಿಚಾರದಲ್ಲಿ ಭಿನ್ನಾಭಿಪ್ರಾಯ ಏರ್ಪಡಬಹುದು. ಜಗಳಕ್ಕೂ ಕಾರಣ ಆಗಬಹುದು. ಯಾವುದೇ ಕಾರಣಕ್ಕೂ ಭೂಮಿ ವ್ಯವಹಾರ ಮಾಡದಿರಿ.
ಧನುಸ್ಸು ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ಎರಡು ಪಾಪ ಗ್ರಹಗಳು ಸಂಚರಿಸುವುದರಿಂದ ತೀರಾ ಗಾಬರಿ ಪಡುವಂತಹ ನಕಾರಾತ್ಮಕ ಪರಿಣಾಮಗಳು ನಿಮ್ಮ ರಾಶಿಯವರ ಮೇಲೆ ಆಗುವುದಿಲ್ಲ. ಆದರೆ ಒಂದು ವಿಷಯವನ್ನು ಕಡ್ಡಾಯವಾಗಿ ನೆನಪಿನಲ್ಲಿ ಇಟ್ಟುಕೊಳ್ಳಿ: ಮಕ್ಕಳ ಜತೆಗೆ ಜಗಳ ಮಾಡಿಕೊಳ್ಳಬೇಡಿ. ಇದರಿಂದ ನೆಮ್ಮದಿ ಹಾಳು ಮಾಡಿಕೊಳ್ಳುತ್ತೀರಿ.
ಮಕರ ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಕುಜ- ರಾಹು ಇರುತ್ತವೆ. ಆದ್ದರಿಂದ ಯಾವುದೇ ಹೊಸ ಸಾಹಸಕ್ಕೆ ಕೈ ಹಾಕಬೇಡಿ. ವ್ಯಾಪಾರ- ವ್ಯವಹಾರ ಬೇಡ, ಬಂಡವಾಳ ಹೂಡಬೇಡಿ. ಮಕರ ರಾಶಿಯ ಗರ್ಭಿಣಿಯರು ಬಹಳ ಎಚ್ಚರಿಕೆಯಿಂದ ಇರಬೇಕು. ಮಕ್ಕಳು ಎಲ್ಲಿ ಓಡಾಟ ನಡೆಸುತ್ತಿದ್ದಾರೆ, ಅವರಿಗೆ ಯಾರ ಜತೆ ಸ್ನೇಹ ಇದೆ ಎಂಬುದನ್ನೆಲ್ಲ ಗಮನದಲ್ಲಿಟ್ಟುಕೊಳ್ಳಿ.
ಕುಂಭ ನಿಮ್ಮ ರಾಶಿಗೆ ನಾಲ್ಕನೇ ಮನೆಯಲ್ಲಿ ಕುಜ- ರಾಹು ಸಂಚಾರ ಆಗುತ್ತಿದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿ. ಯಾರ ಜತೆಗೆ ಮಾತನಾಡುತ್ತಿದ್ದೀರಿ ಎಂಬ ಬಗ್ಗೆ ಲಕ್ಷ್ಯ ಇರಲಿ. ಮೈಮರೆವಿನಲ್ಲಿ ಆಡಿದ ಮಾತಿಗೆ ಭಾರೀ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಸ್ನೇಹ- ಸಂಬಂಧಗಳು ಹಾಳಾಗಬಹುದು, ಜಾಗ್ರತೆಯಿಂದ ಇರಿ.
ಮೀನ ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಕುಜ- ರಾಹು ಸಂಯೋಗ ಇದೆ. ಸಹೋದರರೊಂದಿಗೆ ಕಲಹ ಏರ್ಪಡುವ ಸಾಧ್ಯತೆ ಇದೆ. ಕೋರ್ಟ್- ಕಚೇರಿ ವಿಚಾರದಲ್ಲಿ ಹಿನ್ನಡೆ ಆಗಬಹುದು. ಹೊಸದಾಗಿ ಕೋರ್ಟ್ ಪ್ರಕರಣಗಳು ನಿಮ್ಮ ಮೇಲೆ ಬೀಳಬಹುದು. ಸರ್ಕಾರಿ ಅಧಿಕಾರಿಗಳಿಗೆ ನಾನಾ ಬಗೆಯ ಸಮಸ್ಯೆ ಕಾಡಬಹುದು.
ಎಚ್ಚರಿಕೆ- ಮುಂಜಾಗ್ರತೆ ಏಪ್ರಿಲ್ನಲ್ಲಿ ಕುಜ ವೃಷಭದಿಂದ ಮುಂದಕ್ಕೆ ಹೋಗುವ ತನಕ ಯಾವ ರಾಶಿಯವರೂ ಭೂಮಿ ಖರೀದಿ ಅಥವಾ ಮಾರಾಟ ಮಾಡಬೇಡಿ. ಹೊಸದಾಗಿ ಮನೆ ಕಟ್ಟಬೇಡಿ. ಈ ಸಂದರ್ಭದಲ್ಲಿ ದವಸ- ಧಾನ್ಯಗಳ ಬೆಲೆ ಮೇಲೆ ಏರುತ್ತದೆ. ಇನ್ನು ಮನೆಗಳಲ್ಲಿ ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ವಸ್ತುಗಳ ಕಡೆಗೆ ಹೆಚ್ಚಿನ ನಿಗಾ ಇರಿಸಬೇಕಾಗುತ್ತದೆ. ಇನ್ನು ದೇಶದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಇದಕ್ಕೆ ಪರಿಹಾರ ಏನೆಂದರೆ, ಸುಬ್ರಹ್ಮಣ್ಯ ಸ್ತೋತ್ರ ಪಠಿಸಬೇಕು, ತೊಗರಿಬೇಳೆ, ಉದ್ದಿನಬೇಳೆ ದಾನ ಮಾಡಬೇಕು.
ಜ್ಯೋತಿಷಿ ಪಂಡಿತ್ ವಿಠ್ಠಲ್ ಭಟ್ ಸಂಪರ್ಕ ಸಂಖ್ಯೆ 6361335497
ಇದನ್ನೂ ಓದಿ: Love Compatibility Astrology: ಈ ರಾಶಿಗಳವರು ಲವ್ ಮ್ಯಾರೇಜ್ ಆದರೆ ಡೇಂಜರಪ್ಪೋ ಡೇಂಜರ್
Published On - 6:45 pm, Mon, 1 March 21