Raksha Bandhan 2026: ರಕ್ಷಾ ಬಂಧನದಂದು ‘ಭದ್ರ ಕಾಲ’ದಲ್ಲಿ ಏಕೆ ರಾಖಿ ಕಟ್ಟಬಾರದು? ಇಲ್ಲಿದೆ ಪುರಾಣ ಕಥೆ

ರಕ್ಷಾ ಬಂಧನದಲ್ಲಿ 'ಭದ್ರ ಕಾಲ'ಕ್ಕೆ ವಿಶೇಷ ಗಮನ ನೀಡಬೇಕು. ಸನಾತನ ಧರ್ಮದಲ್ಲಿ ಅಶುಭವೆಂದು ಪರಿಗಣಿಸಲಾಗುವ ಭದ್ರ ಕಾಲದಲ್ಲಿ ರಾಖಿ ಕಟ್ಟುವುದನ್ನು ತಪ್ಪಿಸಬೇಕು. ಶೂರ್ಪನಖಿ ರಾವಣನಿಗೆ ಭದ್ರ ಕಾಲದಲ್ಲಿ ರಾಖಿ ಕಟ್ಟಿದ ಕಥೆ, ಭದ್ರನ ಪುರಾಣ ಹಿನ್ನೆಲೆ ಮತ್ತು ಶುಭ ಮುಹೂರ್ತದ ವಿವರ ಇಲ್ಲಿದೆ. ಈ ವರ್ಷ, ರಕ್ಷಾ ಬಂಧನದ ಯಾವಾಗ ಎಂಬುದನ್ನೂ ಕೂಡ ಇಲ್ಲಿ ತಿಳಿದುಕೊಳ್ಳಿ.

Raksha Bandhan 2026: ರಕ್ಷಾ ಬಂಧನದಂದು ಭದ್ರ ಕಾಲದಲ್ಲಿ ಏಕೆ ರಾಖಿ ಕಟ್ಟಬಾರದು? ಇಲ್ಲಿದೆ ಪುರಾಣ ಕಥೆ
ರಕ್ಷಾ ಬಂಧನ
Image Credit source: Getty Images

Updated on: Jul 15, 2026 | 10:25 AM

ಮುಖ್ಯಾಂಶಗಳು

  • ರಕ್ಷಾ ಬಂಧನದಲ್ಲಿ 'ಭದ್ರ ಕಾಲ'ಕ್ಕೆ ವಿಶೇಷ ಗಮನ ನೀಡಬೇಕು.
  • ಅಶುಭವೆಂದು ಪರಿಗಣಿಸಲಾಗುವ ಭದ್ರ ಕಾಲದಲ್ಲಿ ರಾಖಿ ಕಟ್ಟುವುದನ್ನು ತಪ್ಪಿಸಬೇಕು.
  • ಭದ್ರನ ಪುರಾಣ ಹಿನ್ನೆಲೆ ಮತ್ತು ಶುಭ ಮುಹೂರ್ತದ ವಿವರ ಇಲ್ಲಿದೆ.

ಭಾರತೀಯ ಸಂಸ್ಕೃತಿಯಲ್ಲಿ ಸಹೋದರ-ಸಹೋದರಿಯರ ಪವಿತ್ರ ಪ್ರೀತಿಯ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಪ್ರತಿ ವರ್ಷ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಅಣ್ಣ-ತಮ್ಮಂದಿರಿಗೆ ತಿಲಕವಿಟ್ಟು, ಆರತಿ ಬೆಳಗಿ, ಕೈಗೆ ರಕ್ಷಾಸೂತ್ರವನ್ನು (ರಾಖಿ) ಕಟ್ಟುತ್ತಾರೆ. ಆದರೆ, ರಾಖಿ ಕಟ್ಟುವಾಗ ‘ಭದ್ರ ಕಾಲ’ಕ್ಕೆ ವಿಶೇಷ ಗಮನ ನೀಡಬೇಕಾದುದು ಅತ್ಯಗತ್ಯ. ಸನಾತನ ಧರ್ಮದಲ್ಲಿ ಭದ್ರ ಕಾಲವನ್ನು ಅಶುಭವೆಂದು ಪರಿಗಣಿಸಲಾಗಿದ್ದು, ಈ ಅವಧಿಯಲ್ಲಿ ಯಾವುದೇ ಮಂಗಳ ಕಾರ್ಯಗಳನ್ನು ಮಾಡುವುದಿಲ್ಲ. ಅಷ್ಟಕ್ಕೂ ಭದ್ರ ಕಾಲದಲ್ಲಿ ರಾಖಿ ಕಟ್ಟಬಾರದು ಏಕೆ? ಇದರ ಹಿಂದಿರುವ ಪುರಾಣ ಹಿನ್ನೆಲೆ ಮತ್ತು ಈ ವರ್ಷದ ಶುಭ ಮುಹೂರ್ತದ ಸಂಪೂರ್ಣ ವಿವರ ಇಲ್ಲಿದೆ.

ಶೂರ್ಪನಖಿ ಮತ್ತು ರಾವಣನ ಪುರಾಣ ಕಥೆ:

ಧಾರ್ಮಿಕ ನಂಬಿಕೆಗಳ ಪ್ರಕಾರ, ತ್ರೇತಾಯುಗದಲ್ಲಿ ಲಂಕಾಧಿಪತಿ ರಾವಣನ ಸಹೋದರಿ ಶೂರ್ಪನಖಿ ತನಗಿದ್ದ ಅಜ್ಞಾನದಿಂದಾಗಿ ‘ಭದ್ರ ಕಾಲ’ದಲ್ಲಿ ರಾವಣನಿಗೆ ರಾಖಿ ಕಟ್ಟಿದ್ದಳು. ಈ ಅಶುಭ ಕಾಲದ ಪ್ರಭಾವದಿಂದಾಗಿ ಲಂಕಾಧಿಪತಿಯ ಬುದ್ಧಿ ಭ್ರಮಣೆಯಾಗಿ, ಕೆಲವೇ ದಿನಗಳಲ್ಲಿ ಅವನ ಇಡೀ ಸಾಮ್ರಾಜ್ಯ ಹಾಗೂ ವಂಶವೇ ಸರ್ವನಾಶವಾಯಿತು. ಇದೇ ಕಾರಣಕ್ಕಾಗಿ ಅಂದಿನಿಂದ ಇಂದಿನವರೆಗೂ ಭದ್ರ ಕಾಲದಲ್ಲಿ ರಕ್ಷಾ ಬಂಧನ ಆಚರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಯಾರು ಈ ‘ಭದ್ರ’?

ಪುರಾಣಗಳ ಪ್ರಕಾರ, ಭದ್ರಳು ಸೂರ್ಯದೇವನ ಮಗಳು ಮತ್ತು ನ್ಯಾಯದ ದೇವನಾದ ಶನಿಮಹಾತ್ಮನ ಸಹೋದರಿ. ಈಕೆ ಅತ್ಯಂತ ಉಗ್ರ ಸ್ವಭಾವದವಳು ಎನ್ನಲಾಗುತ್ತದೆ. ರಾಕ್ಷಸರ ಸಂಹಾರಕ್ಕಾಗಿ ಮತ್ತು ಅವರ ವಿನಾಶಕ್ಕಾಗಿಯೇ ಭದ್ರಳ ಜನನವಾಯಿತು. ಭದ್ರಳ ದೃಷ್ಟಿ ಬಿದ್ದ ತಕ್ಷಣವೇ ಶುಭ ಕಾರ್ಯಗಳು ಭಂಗಗೊಳ್ಳುತ್ತವೆ ಎಂಬ ಬಲವಾದ ನಂಬಿಕೆ ಇರುವುದರಿಂದ, ಈ ಅವಧಿಯಲ್ಲಿ ಯಾವುದೇ ಶುಭ ಕೆಲಸಗಳಿಗೆ ಚಾಲನೆ ನೀಡುವುದಿಲ್ಲ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

2026 ರ ರಕ್ಷಾ ಬಂಧನ ಯಾವಾಗ?

ವೈದಿಕ ಪಂಚಾಂಗದ ಪ್ರಕಾರ, ಈ ವರ್ಷ ಶ್ರಾವಣ ಮಾಸದ ಪೂರ್ಣಿಮೆ ತಿಥಿಯು ಆಗಸ್ಟ್ 27 ರಂದು ಬೆಳಿಗ್ಗೆ 9:08 ಕ್ಕೆ ಪ್ರಾರಂಭವಾಗಿ, ಆಗಸ್ಟ್ 28 ರಂದು ಬೆಳಿಗ್ಗೆ 9:48 ಕ್ಕೆ ಮುಕ್ತಾಯಗೊಳ್ಳುತ್ತದೆ. ಉದಯ ತಿಥಿಯ ನಿಯಮವನ್ನು ಅನುಸರಿಸಿ, ಈ ವರ್ಷ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 28 ರ ಶುಕ್ರವಾರ ಆಚರಿಸಲಾಗುತ್ತದೆ.

ಈ ಬಾರಿ ರಕ್ಷಾ ಬಂಧನದ ಮೇಲೆ ಭದ್ರನ ನೆರಳಿದೆಯೇ?

ಈ ವರ್ಷ ಸಹೋದರಿಯರಿಗೆ ಒಂದು ಅತ್ಯಂತ ಸಂತಸದ ಸುಸುದ್ದಿ ಇದೆ. ಈ ಬಾರಿ ರಕ್ಷಾ ಬಂಧನದ ದಿನ ಯಾವುದೇ ‘ಭದ್ರ ಕಾಲ’ದ ನೆರಳು ಇರುವುದಿಲ್ಲ. ಇದು ಅತ್ಯಂತ ಅಪರೂಪದ ಹಾಗೂ ಶುಭ ಕಾಕತಾಳೀಯವಾಗಿದೆ. ರಾಖಿ ಕಟ್ಟಲು ಅತ್ಯಂತ ಶುಭ ಸಮಯ ಆಗಸ್ಟ್ 28 ರ ಬೆಳಿಗ್ಗೆ 5:57 ರಿಂದ ಬೆಳಿಗ್ಗೆ 9:48 ರವರೆಗೆ ಇರಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us