Shankar Jayanti 2023: ಶಂಕರರು ಬಾರದಿದ್ದರೇ ಭಾರತವು ಭಾರತವಾಗಿ ಇರುತ್ತಿರಲಿಲ್ಲ..!

|

Updated on: Apr 25, 2023 | 5:44 AM

ಶ್ರೀಮಾನುಜರು, ಶ್ರೀಮದ್ವಾಚಾರ್ಯರು, ಶ್ರೀಶಂಕರಾಚಾರ್ಯರು ಮುಂತಾದ ಮಹಾತ್ಮರು ಲೋಕಕ್ಕೆ ಬಂದು ನಮ್ಮೊಡನಿದ್ದು ನಮ್ಮ ಬದುಕಿಗೆ ಎಂದೂ ಆರದ ಆನಂದದೀಪವಾಗಿ, ದಾರಿದೀಪವಾಗಿ ಬೆಳಗಿದ ಮಹಾತ್ಮರ ಪುಣ್ಯಸ್ಮರಣೆಯನ್ನು ಜನ್ಮದಿನದಂದು ನಾವು ನಾನಾ ರೀತಿಯಲ್ಲಿ ಆಚರಿಸುತ್ತೇವೆ.

Shankar Jayanti 2023: ಶಂಕರರು ಬಾರದಿದ್ದರೇ ಭಾರತವು ಭಾರತವಾಗಿ ಇರುತ್ತಿರಲಿಲ್ಲ..!
ಸಾಂದರ್ಭಿಕ ಚಿತ್ರ
Follow us on

ದೇವತಾ ವಿಶೇಷಗಳ ಕುರಿತು ಹಬ್ಬ, ಹರಿದಿನಗಳನ್ನು ನಾವು ಎಂದಿಗೂ ಆಚರಿಸುವುದುಂಟು. ಹಾಗೆಯೇ ನಮ್ಮನ್ನು ಧರ್ಮಮಾರ್ಗದಲ್ಲಿ ನಡೆಸಿದ ವ್ಯಕ್ತಿಗಳ, ಗುರುಗಳ, ಹಿರಿಯರ ಕುರಿತು ಹಬ್ಬಗಳನ್ನು ಭಕ್ತಿಯಿಂದ, ಶ್ರದ್ಧೆಯಿಂದ, ಪ್ರೀತಿಯಿಂದ, ಗೌರವದಿಂದ ಆಚರಿಸುವ ರೂಢಿಯೂ ನಮ್ಮ ದೇಶದಲ್ಲಿದೆ. ಅವರೆಲ್ಲರೂ ದೇವಸಮಾನರು. ಹಾಗಾಗಿ ಅವರೆಲ್ಲರೂ ಪೂಜ್ಯರು, ಮಾತ್ರವಲ್ಲ ಪರಮಪೂಜ್ಯರೂ ಹೌದು. ಶ್ರೀಮಾನುಜರು, ಶ್ರೀಮದ್ವಾಚಾರ್ಯರು, ಶ್ರೀಶಂಕರಾಚಾರ್ಯರು ಮುಂತಾದ ಮಹಾತ್ಮರು ಲೋಕಕ್ಕೆ ಬಂದು ನಮ್ಮೊಡನಿದ್ದು ನಮ್ಮ ಬದುಕಿಗೆ ಎಂದೂ ಆರದ ಆನಂದದೀಪವಾಗಿ, ದಾರಿದೀಪವಾಗಿ ಬೆಳಗಿದ ಮಹಾತ್ಮರ ಪುಣ್ಯಸ್ಮರಣೆಯನ್ನು ಜನ್ಮದಿನದಂದು ನಾವು ನಾನಾ ರೀತಿಯಲ್ಲಿ ಆಚರಿಸುತ್ತೇವೆ . ಅವರ ಧ್ಯಾನ, ಪೂಜೆ, ಪಾರಾಯಣ, ಅವರ ಕುರಿತ ಮಾತುಕತೆ, ಮಹಾತ್ಮರ ಜೀವನಾಧಾರಿತ ನೃತ್ಯವನ್ನೋ‌ ನಾಟಕವನ್ನೋ ರೂಪಕವನ್ನೋ, ಚಿತ್ರಪ್ರದರ್ಶನವನ್ನೋ ಸಾಕ್ಷ್ಯಚಿತ್ರ ಪ್ರದರ್ಶನವನ್ನೋ ಮತ್ತು ಭಜನೆಯನ್ನೋ ಮಾಡಿ ಸಂಭ್ರಮದಿಂದ ಆಚರಿಸುತ್ತೇವೆ.

ವೈಶಾಖ ಶುದ್ಧ ಪಂಚಮಿ ಒಬ್ಬ ಮಹಾತ್ಮರ ಜನ್ಮದಿನ. ದೇಶವು ಸಾವಿರಾರು ವರ್ಷಗಳ ಹಿಂದೆ ಧರ್ಮದಿಂದ, ಸಂಸ್ಕೃತಿಯಿಂದ ದೂರಸರಿಯುತ್ತಿದ್ದಾಗ ಅದನ್ನು ಪುನಃ ಉದ್ಧಾರಮಾಡಿದ, ಜನಮಾನಸದಲ್ಲಿ ಧರ್ಮ, ಸಂಸ್ಕೃತಿಯನ್ನು ಬಿತ್ತಿದ ಮಹಾಪುರುಷರಾದ ಶಂಕರಭಗವತ್ಪಾದರ ಅವತಾರದ ದಿನ. ಶಂಕರಜಯಂತಿ ಎನ್ನುವ ಸಾಮನ್ಯ ಹೆಸರಿನಿಂದ ಕರೆಯದೇ ಅದನ್ನಿ ಶಂಕರಪಂಚಮೀ ಎನ್ನುವ ವಿಶೇಷ ಹೆಸರಿನಿಂದ ಅದನ್ನು ಕರೆಯಲಾಗುತ್ತದೆ.

ಇತಿಹಾಸ ತಿಳಿಸುವಂತೆ ಶಂಕರಾಚಾರ್ಯರು ಶಿವಗುರು ಮತ್ತು ಆರ್ಯಾಂಬಾ ದಂಪತಿಗಳ ಮಗನಾಗಿ ಕೇರಳದ ಕಾಲಟಿಯಲ್ಲಿ ಹುಟ್ಟಿದ್ದು ಕ್ರಿ.ಶ. 788 ರಲ್ಲಿ, ದೇಹಾವಸಾನವಾದದ್ದು ಕ್ರಿ.ಶ 820 ರಲ್ಲಿ. ಬದುಕಿದ್ದು ಕೇವಲ ವರ್ಷಗಳು ಮಾತ್ರ. ಮಾಡಿದ ಮಹತ್ಕಾರ್ಯಗಳು ಸಾವಿರಾರು ವರ್ಷಗಳು ಉಳಿಯುವಂತಹದ್ದು.

ಕಾಲ್ನಡಿಗೆಯಲ್ಲಿ ಇಡೀ ಭಾರತವನ್ನು ಮೂರು ಬಾರಿ ಸುತ್ತಿ ಧರ್ಮಾಂಧತೆಯನ್ನು ದೂರಮಾಡಿದ ಚರಸಂತ.
ಉಪನಿಷತ್ತು ಹಾಗೂ ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ಬರೆದು ಅದ್ವೈತ ವೇದಾಂತವನ್ನು ಸುಸ್ಪಷ್ಟವಾಗಿ ಜಗತ್ತಿಗೆ ಪಸರಿಸಿ ಧರ್ಮಾಚಾರ್ಯ. ಭಕ್ತಿಸಾಹಿತ್ಯದ ಮೂಲಕ ಜನರಲ್ಲಿ ದೇವರ ಮೇಲೆ ಭಕ್ತಿಯು ಉಂಟಾಗುವಂತೆ ಮಾಡಿದ ಮಹಾಸಂತ.

ಅಹಂ ಬ್ರಹ್ಮಾಸ್ಮಿ, ತತ್ತ್ವಮಸಿ, ಪ್ರಜ್ಞಾನಂ ಬ್ರಹ್ಮ, ಸರ್ವಂ ಖಲ್ವಿದಂ ಬ್ರಹ್ಮ ಎನ್ನುವ ಘೋಷವಾಕ್ಯವನ್ನು ಭಾರತದ ನಾಲ್ಕೂ ದಿಕ್ಕಿಗೆ ಪ್ರಮುಖ ಮಠವೊಂದನ್ನು ಸ್ಥಾಪಿಸಿ, ಧರ್ಮಾಚಾರ್ಯದೀಕ್ಷೆಯನ್ನು ಕೊಡಿಸಿ, ಉಪದೇಶಿಸಿದರು.ಹೀಗೆ ಭಾರತವು ತನ್ನ ಸಂಸ್ಕೃತಿ, ಧರ್ಮ, ಆಚರಣೆ, ಸಂಪ್ರದಾಯಗಳಿಂದ ವಿಮುಖರಾದಾಗ ಅದನ್ನು ಸರಿದಾರಿಗೆ ತರಲು ಒಬ್ಬ ವ್ಯಕ್ತಿ, ಶಕ್ತಿಯಾಗಿ ಮಾರ್ಪಾಡಾಗಿ ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆ ಗುರುವಾಗಿ ಜಗದ್ಗುರು ಶಂಕರಾಚಾರ್ಯರಾದರು.

ಇದನ್ನೂ ಓದಿ;Important Days in April 2023: 2023ರ ಏಪ್ರಿಲ್ ತಿಂಗಳಿನ ವಿಶೇಷ ದಿನಗಳ ಮಾಹಿತಿ ಇಲ್ಲಿದೆ

ಇಂತಹ ಮಹಾತ್ಮರ ಸ್ಮರಣೆಯನ್ನು ಪ್ರತಿನಿತ್ಯ ಮಾಡಬೇಕು.‌ ಅವರು ಪ್ರಾತಃಸ್ಮರಣೀಯರು. ಆದರೆ ಅದು ಅಸಾಧ್ಯವಾದೀತು. ಬದಲಿಗೆ ಅವರ ಜನ್ಮದಿನವನ್ನು ಸಂತೋಷದಿಂದ, ಗೌರವದಿಂದ, ಭಕ್ತಿಯಿಂದ ಆಚರಿಸುವ ಪದ್ಧತಿಯನ್ನು ನಾವು ರೂಢಿಸಿಕೊಳ್ಳಬೇಕು. ಅವರ ದಿನವನ್ನು ಆಚರಿಸಲು ಇಂತದ್ದೇ ನಿಯಮವೆಂದಿಲ್ಲ. ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದು, ಅವರ ಗ್ರಂಥಗಳ ಪಠಣ‌ ಮಾಡುವುದು, ಅವರ ಸ್ರೋತ್ರಗಳನ್ನು ಸ್ಪರ್ಧೆಗಳ ಮೂಲಕ ಪರಿಚಯಿಸುವುದು, ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸುವುದು, ನಾಟಕಗಳನ್ನು ಮಾಡುವುದು, ರೂಪಕವನ್ನು ತೋರಿಸವುದು, ಅವರ ಮಾತುಗಳ ಬಗ್ಗೆ ಅರಿವು ಮೂಡಿಸುವುದು, ಪ್ರವಚನದ ಮೂಲಕ ಪರಿಚಯಿಸುವುದು. ಹೀಗೇ ಶಂಕರಾಚಾರ್ಯರ ಬದಕನ್ನು ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುವ ಕೆಲಸವನ್ನು ಇಂದಿನ ಪೀಳಿಗೆ ಮಾಡಬೇಕಿದೆ. ಇದೇ ನಾವು ಶಂಕರಾಚಾರ್ಯರಿಗೆ ಕೊಡುವ ಗೌರವ, ನಮ್ಮ ಪೂರ್ವಜರು ನಮ್ಮ ಒಳಿತಿಗೆ ಸತ್ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಕ್ಕೆ ಅವರಿಗೆ ಕೃತಜ್ಞತೆಗಳು.

ಅಂದು ಶಂಕರು ಬಾರದಿದ್ದರೆ, ನಾವಿಂದು ನಾವಾಗಿರಲು ಸಾಧ್ಯವಿರುತ್ತಿರಲಿಲ್ಲ. ಶಂಕರರು ಬಂದು ನಮ್ಮನ್ನೂ ಭಾರತವನ್ನೂ ಯಥಾಸ್ಥಿತಿಯಲ್ಲಿ ಉಳಿಸಿದರು. ಅದಕ್ಕಾಗಿ ಅವರ ಜನ್ಮದಿನವನ್ನು ಆಚರಿಸಬೇಕು ಪ್ರತಿಯೊಬ್ಬ ಭಾರತೀಯನೂ.

-ಲೋಹಿತಶರ್ಮಾ

ಮತ್ತಷ್ಟು ಆಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.