AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

God Tattoos: ಮೈ ಮೇಲೆ ದೇವರ ಟ್ಯಾಟೂ ಹಾಕಿಸಿದ್ದೀರಾ? ಶಾಸ್ತ್ರಗಳು ಹೇಳುವುದೇನು?

ದೇವರ ಟ್ಯಾಟೂಗಳು ಭಕ್ತಿಯ ಸಂಕೇತವಾದರೂ, ಅವುಗಳನ್ನು ದೇಹದ ಮೇಲೆ ಹಾಕಿಸಿಕೊಳ್ಳುವಾಗ ಶುದ್ಧ ಮನಸ್ಸು ಮತ್ತು ಉತ್ತಮ ನಡತೆ ಅವಶ್ಯಕ. ಇದನ್ನು ದೀಕ್ಷೆಯಾಗಿ ಸ್ವೀಕರಿಸಬೇಕು. ಕೇವಲ ಪ್ರದರ್ಶನಕ್ಕಾಗಿ ಟ್ಯಾಟೂ ಹಾಕಿಸಿಕೊಂಡರೆ ಅದರ ಶುಭ ಫಲಗಳು ಕಡಿಮೆಯಾಗಬಹುದು ಎಂದು ಡಾ. ಬಸವರಾಜ್ ಗುರೂಜಿ ಎಚ್ಚರಿಸಿದ್ದಾರೆ.

God Tattoos: ಮೈ ಮೇಲೆ ದೇವರ ಟ್ಯಾಟೂ ಹಾಕಿಸಿದ್ದೀರಾ? ಶಾಸ್ತ್ರಗಳು ಹೇಳುವುದೇನು?
ದೇವರ ಟ್ಯಾಟೂ
ಅಕ್ಷತಾ ವರ್ಕಾಡಿ
|

Updated on: Dec 26, 2025 | 8:34 AM

Share

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ದೇವರ ಟ್ಯಾಟೂಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ. ದೇಹದ ಮೇಲೆ ಹೆಸರುಗಳು, ಚಿತ್ರಗಳು, ಹಾಗೂ ಮುಖ್ಯವಾಗಿ ದೇವತಾ ವಿಗ್ರಹಗಳು, ಚಿಹ್ನೆಗಳನ್ನು ಟ್ಯಾಟೂ ರೂಪದಲ್ಲಿ ಹಾಕಿಸಿಕೊಳ್ಳುವ ಪ್ರವೃತ್ತಿ ಬೆಳೆದಿದೆ. ಆದರೆ ಇಂತಹ ದೈವಿಕ ಟ್ಯಾಟೂಗಳು ಶುಭವೇ ಅಥವಾ ಅಶುಭವೇ, ಅವುಗಳನ್ನು ಹಾಕಿಸಿಕೊಂಡರೆ ಏನು ಪ್ರಯೋಜನ ಅಥವಾ ಪರಿಣಾಮಗಳು ಎಂಬ ಪ್ರಶ್ನೆಗಳು ಮೂಡುತ್ತವೆ.

ದೇವರ ಟ್ಯಾಟೂ ಹಾಕಿಸಿಕೊಳ್ಳುವುದು ನವ ವಿಧ ಭಕ್ತಿಗಳಲ್ಲಿ ಒಂದಾದ ಭಕ್ತಿಯ ಸಂಕೇತವೆಂದು ಪರಿಗಣಿಸಬಹುದು. ದೇಹದಲ್ಲಿ ಭಗವಂತನ ಚಿಹ್ನೆಗಳನ್ನು ಅಂಟಿಸಿಕೊಳ್ಳುವುದು, ಮನಸ್ಸಿಗೆ ಆ ಭಗವಂತನ ಸಾನಿಧ್ಯವನ್ನು ತಲುಪಿಸುವ ಒಂದು ಮಾರ್ಗವಾಗಿದೆ. ವಿನಾಯಕ, ಸುಬ್ರಹ್ಮಣ್ಯ, ದೇವಿ, ಅಯ್ಯಪ್ಪ ಸ್ವಾಮಿ, ವೆಂಕಟೇಶ್ವರ, ಸ್ವಸ್ತಿಕ್, ಚಕ್ರ, ಓಂಕಾರ ಮುಂತಾದ ಹಲವು ದೇವತಾ ಚಿಹ್ನೆಗಳನ್ನು ಜನರು ತಮ್ಮ ದೇಹದ ಮೇಲೆ ಹಾಕಿಸಿಕೊಳ್ಳುತ್ತಾರೆ. ಇಂತಹ ಟ್ಯಾಟೂಗಳನ್ನು ಹಾಕಿಸಿಕೊಳ್ಳುವಲ್ಲಿ ಯಾವುದೇ ಆಕ್ಷೇಪಣೆ ಇಲ್ಲ. ಯದ್ಭಾವಂ ತದ್ಭವತಿ ಎಂಬಂತೆ, ನಮ್ಮ ಭಾವನೆಗಳೇ ಫಲವನ್ನು ನಿರ್ಧರಿಸುತ್ತವೆ ಎಂದು ಗುರೂಜಿ ವಿವರಿಸಿದ್ದಾರೆ.

ಆದರೆ, ಶಾಸ್ತ್ರಗಳು ಮತ್ತು ಪುರಾಣಗಳ ಪ್ರಕಾರ, ಈ ದೇಹವು ಮಲ-ಮೂತ್ರಗಳಿಂದ ಕೂಡಿದ ದೇಹ ಎಂದು ದಾಸವರೇಣ್ಯರು ಮತ್ತು ಕಾಲಜ್ಞಾನದ ಕರ್ತೃಗಳು ಹೇಳಿದ್ದಾರೆ. ಆದರೂ, ದೇಹದಲ್ಲಿ ಮನಸ್ಸು ನೆಲೆಸಿದೆ. ದೇಹದಿಂದ ಭಗವಂತನನ್ನು ಆವಾಹನೆ ಮಾಡಿಕೊಳ್ಳುವುದು ಈ ಟ್ಯಾಟೂ ಹಾಕಿಸಿಕೊಳ್ಳುವಿಕೆಯ ಸಂಕೇತವಾಗಿದೆ. ದೇಹಕ್ಕೆ ಭಗವಂತನನ್ನು ಅಂಟಿಸಿಕೊಂಡಾಗ, ಮನಸ್ಸಿಗೆ ಭಗವಂತ ಬರುವುದು ಕೂಡ ಭಕ್ತಿಯ ಸಂಕೇತವಾಗಿದೆ.

ದೇಹದ ಮೇಲೆ ದೇವರ ಚಿಹ್ನೆಗಳನ್ನು ಹಾಕಿಸಿಕೊಂಡಾಗ, ನಮ್ಮ ದೇಹವನ್ನು ಮತ್ತು ಮನಸ್ಸನ್ನು ಆ ದೈವಿಕ ಸ್ವರೂಪಕ್ಕೆ ತಕ್ಕಂತೆ ಪರಿವರ್ತನೆ ಮಾಡಿಕೊಳ್ಳಬೇಕು. ಇದನ್ನು ಶಾಸ್ತ್ರಗಳಲ್ಲಿ ದೀಕ್ಷೆ ಎಂದು ಕರೆಯಲಾಗುತ್ತದೆ. ರಾಮಕೃಷ್ಣ ಮಠ ಅಥವಾ ವೀರಶೈವ ಮಠಗಳಲ್ಲಿ ಮಂತ್ರ ದೀಕ್ಷೆ ನೀಡಿದಂತೆ, ದೈವಿಕ ಟ್ಯಾಟೂ ಕೂಡ ಒಂದು ರೀತಿಯ ದೀಕ್ಷೆಗೆ ಸಮಾನ. ಈ ದೀಕ್ಷೆಯನ್ನು ತೆಗೆದುಕೊಂಡ ಮೇಲೆ ಆ ಭಗವಂತನ ಸ್ವರೂಪಕ್ಕೆ ತಕ್ಕಂತೆ ನಾವು ನಡೆಯಬೇಕು. ಈ ನಡವಳಿಕೆಗೆ ಬದ್ಧರಾಗಿದ್ದರೆ ಯಾವುದೇ ಆತಂಕವಿಲ್ಲ. ಆದರೆ, ಟ್ಯಾಟೂ ಹಾಕಿಸಿಕೊಂಡು ಆ ನಿಯಮಗಳನ್ನು ಅನುಸರಿಸದೆ ಇದ್ದರೆ, ಅದು ಜನ್ಮಜನ್ಮಾಂತರಕ್ಕೂ ಕಷ್ಟವನ್ನು ತರಬಹುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ಇದಲ್ಲದೆ, ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಕೆಲವು ದುಶ್ಚಟಗಳು, ದುರ್ಬುದ್ಧಿಗಳನ್ನು, ಕೆಟ್ಟ ಹವ್ಯಾಸಗಳನ್ನು ತ್ಯಜಿಸುವ ಸಂಕಲ್ಪವನ್ನು ಇಟ್ಟುಕೊಳ್ಳುವುದು ಅತ್ಯಂತ ಶುಭಕರ. ಭಗವಂತ ಸರ್ವಾಂತರ್ಯಾಮಿ, ಸರ್ವವ್ಯಾಪಿ ಮತ್ತು ಸರ್ವಶಕ್ತ. ಈ ದೇಹ ಪಂಚಭೂತಗಳಲ್ಲಿ ಮೂರು ಭೂತಗಳಿಂದ ಕೂಡಿರುವ ಮತ್ತು ಮಲ-ಮೂತ್ರಗಳಿಂದ ಕೂಡಿದ ದೇಹವಾದರೂ, ಮನಸ್ಸು ಮತ್ತು ದೇಹವನ್ನು ಶುದ್ಧವಾಗಿಟ್ಟುಕೊಂಡರೆ, ಸ್ನಾನ ಮಾಡಿದಾಗ ಟ್ಯಾಟೂಗೂ ಅಭಿಷೇಕ ಮಾಡಿದಂತಾಗುತ್ತದೆ. ತೃಪ್ತ ಮನಸ್ಸಿನಿಂದ ಹಾಕಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ.

ಆದರೆ, ಕೇವಲ ತೋರ್ಪಡಿಕೆಗಾಗಿ ಟ್ಯಾಟೂ ಹಾಕಿಸಿಕೊಂಡಾಗ, ಯೌವನದಲ್ಲಿ ಅಥವಾ ದೇಹ ಚೆನ್ನಾಗಿದ್ದಾಗ ಅದು ಶುಭವೆಂದು ಕಾಣಿಸಬಹುದು. ಆದರೆ ವಯಸ್ಸಾದಂತೆ ದೇಹದಲ್ಲಿ ಬದಲಾವಣೆಗಳು ಬಂದಾಗ, ಅದರ ಪ್ರಭಾವ ಕಡಿಮೆಯಾಗಿ ಅಶುಭ ಸಂಕೇತಗಳು ಕಾಣಿಸಬಹುದು. ಆದ್ದರಿಂದ, ಯಾವುದೇ ಕ್ಷಣಿಕ ಖುಷಿಗೆ ಅಥವಾ ಪ್ರದರ್ಶನಕ್ಕಾಗಿ ದೇವರ ಟ್ಯಾಟೂಗಳನ್ನು ಹಾಕಿಸಿಕೊಳ್ಳುವುದು ಅಷ್ಟು ಶುಭಕರವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ