
ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಮತ್ತು ಪೂಜನೀಯ ಸ್ಥಾನವಿದೆ. ಹಿಂದೂ ಸಂಪ್ರದಾಯದ ಪ್ರಕಾರ, ಪ್ರತಿಯೊಂದು ಮನೆಯ ಅಂಗಳದಲ್ಲೂ ತುಳಸಿ ಗಿಡವನ್ನು ನೆಟ್ಟು, ನಿತ್ಯವೂ ಅದಕ್ಕೆ ನೀರು ಹಾಕಿ ಪೂಜಿಸುವುದು ಅತ್ಯಂತ ಶುಭ ಹಾಗೂ ಸಮೃದ್ಧಿದಾಯಕ ಎಂದು ನಂಬಲಾಗಿದೆ. ಧಾರ್ಮಿಕ ದೃಷ್ಟಿಕೋನ ಮಾತ್ರವಲ್ಲದೆ, ಆಯುರ್ವೇದದಲ್ಲೂ ತುಳಸಿಗೆ ಅಪಾರವಾದ ಔಷಧೀಯ ಗುಣಗಳಿರುವುದರಿಂದ ಅದಕ್ಕೆ ವಿಶೇಷ ಮಹತ್ವವಿದೆ.
ಆದರೆ, ಶಾಸ್ತ್ರಗಳ ಪ್ರಕಾರ ವಾರದ ಎಲ್ಲಾ ದಿನಗಳಲ್ಲಿ ತುಳಸಿ ಗಿಡವನ್ನು ಸ್ಪರ್ಶಿಸುವುದು ಅಥವಾ ನೀರು ಹಾಕುವುದು ನಿಷೇಧಿಸಲಾಗಿದೆ. ವಿಶೇಷವಾಗಿ ಭಾನುವಾರದಂದು ತುಳಸಿ ಗಿಡಕ್ಕೆ ನೀರು ಹಾಕಬಾರದು ಮತ್ತು ಅದರ ಎಲೆಗಳನ್ನು ಕೀಳಬಾರದು ಎಂಬ ನಿಯಮವಿದೆ. ಇದರ ಹಿಂದಿರುವ ಧಾರ್ಮಿಕ ನಂಬಿಕೆಗಳು ಮತ್ತು ಕಾರಣಗಳು ಇಲ್ಲಿವೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ದೇವಿಯು ಭಗವಾನ್ ವಿಷ್ಣುವಿನ ಪರಮ ಭಕ್ತೆ ಹಾಗೂ ಪ್ರಿಯ ಪತ್ನಿ (ಲಕ್ಷ್ಮಿ ಸ್ವರೂಪಿಣಿ). ಭಾನುವಾರದಂದು ತುಳಸಿ ದೇವಿಯು ಭಗವಾನ್ ವಿಷ್ಣುವಿಗಾಗಿ ಅತ್ಯಂತ ಕಠಿಣವಾದ ನಿರ್ಜಲ ಉಪವಾಸವನ್ನು (ನೀರು ಕುಡಿಯದೆ ಮಾಡುವ ವ್ರತ) ಆಚರಿಸುತ್ತಾಳೆ ಎನ್ನಲಾಗುತ್ತದೆ. ಈ ದಿನ ನಾವು ಗಿಡಕ್ಕೆ ನೀರು ಹಾಕುವುದರಿಂದ ತುಳಸಿ ದೇವಿಯ ವ್ರತಕ್ಕೆ ಭಂಗ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದಾಗಿ ದೇವಿಗೆ ಕೋಪ ಬಂದು, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಬಹುದು ಎಂದು ನಂಬಲಾಗಿದೆ.
ಭಾನುವಾರವನ್ನು ಭಗವಾನ್ ವಿಷ್ಣುವಿನ ಆರಾಧನೆಗೆ ಪ್ರಶಸ್ತವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ತುಳಸಿ ದೇವಿಯು ಯೋಗ ನಿದ್ರೆಯಲ್ಲಿ ಅಥವಾ ವಿಷ್ಣುವಿನ ಧ್ಯಾನದಲ್ಲಿ ಮುಳುಗಿರುತ್ತಾಳೆ. ಆದ್ದರಿಂದ, ಭಾನುವಾರ ಗಿಡಕ್ಕೆ ನೀರು ಹಾಕುವುದು ಅಥವಾ ಅದರ ಎಲೆಗಳನ್ನು ಕೀಳುವುದರಿಂದ ದೇವಿಯ ಧಾನ್ಯಕ್ಕೆ ಅಡ್ಡಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಭಾನುವಾರದಂತೆಯೇ ಪ್ರತಿಯೊಂದು ಏಕಾದಶಿಯ ದಿನದಂದೂ ತುಳಸಿ ಗಿಡಕ್ಕೆ ನೀರು ಹಾಕುವುದನ್ನು ಮತ್ತು ಎಲೆಗಳನ್ನು ಕೀಳುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಏಕಾದಶಿಯಂದು ತುಳಸಿ ದೇವಿಯು ಶ್ರೀಹರಿ (ವಿಷ್ಣು) ಗಾಗಿ ನಿರ್ಜಲ ಏಕಾದಶಿ ವ್ರತವನ್ನು ಕೈಗೊಳ್ಳುತ್ತಾಳೆ.
ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!
ಭಾನುವಾರ ಅಥವಾ ಏಕಾದಶಿಯ ದಿನ ತುಳಸಿ ಎಲೆಗಳನ್ನು ಕೀಳುವುದರಿಂದ ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆ ಮತ್ತು ಆರ್ಥಿಕ ನಷ್ಟ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಕೃಪೆ ದೂರವಾಗಿ, ಕುಟುಂಬದಲ್ಲಿ ಕಲಹಗಳು ಸೃಷ್ಟಿಯಾಗಬಹುದು ಎನ್ನಲಾಗುತ್ತದೆ.
ಒಂದು ವೇಳೆ ಧಾರ್ಮಿಕ ಪೂಜೆ ಅಥವಾ ಪ್ರಸಾದಕ್ಕಾಗಿ ಭಾನುವಾರದಂದು ತುಳಸಿ ಎಲೆಗಳು ಅತ್ಯಗತ್ಯವಾಗಿದ್ದರೆ, ಶನಿವಾರದಂದೇ ಎಲೆಗಳನ್ನು ಕಿತ್ತು ಎತ್ತಿಟ್ಟುಕೊಳ್ಳಬೇಕು. ತುಳಸಿ ಎಲೆಗಳು ಒಣಗಿದರೂ ಅವುಗಳ ಪವಿತ್ರತೆ ಕಳೆದುಕೊಳ್ಳುವುದಿಲ್ಲವಾದ್ದರಿಂದ ಮುಂಚಿತವಾಗಿ ಕಿತ್ತಿಟ್ಟುಕೊಂಡ ಎಲೆಗಳನ್ನು ಭಾನುವಾರ ಬಳಸಬಹುದು. ಅಲ್ಲದೆ, ಭಾನುವಾರದಂದು ನೀರು ಹಾಕದಿದ್ದರೂ ಸಂಜೆ ವೇಳೆ ತುಳಸಿ ಕಟ್ಟೆಯ ಬಳಿ ತುಪ್ಪದ ದೀಪವನ್ನು ಹಚ್ಚುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ