
ಪ್ರತಿಯೊಬ್ಬರಿಗೂ ಸ್ವಂತ ಮನೆಯ ಕನಸು ಇರುತ್ತದೆ. ಈ ಕನಸನ್ನು ನನಸು ಮಾಡುವಾಗ, ಗೃಹಾರಂಭಕ್ಕೆ ಸರಿಯಾದ ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ. ಹಿಂದೂ ಸನಾತನ ಸಂಸ್ಕೃತಿ ಮತ್ತು ಪರಂಪರೆಗಳಲ್ಲಿ, ಕೆಲವು ನಿರ್ದಿಷ್ಟ ಮಾಸಗಳಲ್ಲಿ ಶಂಕುಸ್ಥಾಪನೆ ಅಥವಾ ಪಾಯ ಪೂಜೆ ಮಾಡುವುದು ನಿರ್ವಿಘ್ನವಾಗಿ ಕಾರ್ಯ ನೆರವೇರಲು ಸಹಾಯಕವಾಗುತ್ತದೆ. ಈ ಬಗ್ಗೆಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಮನೆ ನಿರ್ಮಾಣದ ಸಮಯದಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದಲ್ಲಿರುವ ಮನೆ ಯೋಗವನ್ನು ಪರಿಶೀಲಿಸಲಾಗುತ್ತದೆ. ನಾಲ್ಕನೇ ಮನೆ, ಅದರ ಅಧಿಪತಿ ಮತ್ತು ಅದರ ಮೇಲಿನ ದೃಷ್ಟಿಯ ಬಲ, ಹಾಗೆಯೇ ಒಂಬತ್ತನೇ ಮತ್ತು ಹನ್ನೊಂದನೇ ಮನೆಯ ಯೋಗಾಯೋಗಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದರ ಜೊತೆಗೆ, ಪಂಚಾಂಗದ ಆಧಾರದ ಮೇಲೆ ಶುಭ ಮುಹೂರ್ತಗಳನ್ನು ಸಹ ಪರಿಗಣಿಸುವುದು ವಾಡಿಕೆ. ವಾಸ್ತು ಪುರುಷನು ಈಶಾನ್ಯದ ಕಡೆ ತಲೆ ಇಟ್ಟುಕೊಂಡು, ನೈರುತ್ಯದ ಕಡೆ ಕಾಲು ಇಟ್ಟು ಮಲಗಿರುತ್ತಾನೆ ಎಂಬುದು ವಾಸ್ತುಶಾಸ್ತ್ರದ ಪ್ರಮುಖ ಅಂಶ.
ಗೃಹಾರಂಭಕ್ಕೆ ಸೂಕ್ತ ಮಾಸಗಳ ಕುರಿತು ಬಾದರಾಯಣರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ವೈಶಾಖ ಮಾಸ, ಫಾಲ್ಗುಣ ಮಾಸ, ಶ್ರಾವಣ ಮಾಸ ಮತ್ತು ಮಾಘ ಮಾಸಗಳಲ್ಲಿ ಗೃಹಾರಂಭ ಮಾಡಿದರೆ ಅದು ನಿರ್ವಿಘ್ನವಾಗಿ ಪರಿಪೂರ್ಣಗೊಳ್ಳುತ್ತದೆ. ನಾರದ ಮಹರ್ಷಿಗಳು ಪುಷ್ಯ ಮಾಸವನ್ನೂ ಗೃಹಾರಂಭಕ್ಕೆ ಶುಭ ಎಂದು ಸೇರಿಸಿದ್ದಾರೆ. ಧನ, ಕನಕ, ಆರೋಗ್ಯ ಮತ್ತು ಆಯುಷ್ಯ ಉತ್ತಮವಾಗಿರಲು ಶುಭ-ಅಶುಭ ಮಾಸಗಳನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುವುದು ಅವಶ್ಯಕ. ಯಾವಾಗಲೂ ಸ್ಥಿರ ಮಾಸ ಮತ್ತು ಸ್ಥಿರ ರಾಶಿಗಳಲ್ಲಿ ಶಂಕುಸ್ಥಾಪನೆ ಮಾಡುವುದು ಅತ್ಯಂತ ಉತ್ತಮವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 am, Sat, 4 April 26