
ಹಿಂದೂ ಧರ್ಮದಲ್ಲಿ ವಿಜಯದಶಮಿಯ ಹಬ್ಬಕ್ಕೆ ಅತ್ಯಂತ ಮಂಗಳಕರ ಹಾಗೂ ವಿಶೇಷವಾದ ಸ್ಥಾನವಿದೆ. ಈ ಹಬ್ಬವನ್ನು ‘ದಸರಾ’ ಎಂದೂ ಸಹ ಕರೆಯಲಾಗುತ್ತದೆ. ಈ ದಿನವು ಪ್ರಮುಖವಾಗಿ ಭಗವಾನ್ ಶ್ರೀರಾಮನು ರಾವಣನ ಮೇಲೆ ಸಾಧಿಸಿದ ವಿಜಯ ಹಾಗೂ ಜಗನ್ಮಾತೆ ದುರ್ಗಾದೇವಿಯು ಮಹಿಷಾಸುರನ ಮೇಲೆ ಗೆಲುವು ಸಾಧಿಸಿದ ಸಂಕೇತವಾಗಿದೆ. ಭಕ್ತರಿಗೆ ವಿಜಯದಶಮಿಯು ಕೇವಲ ಒಂದು ಹಬ್ಬ ಮಾತ್ರವಲ್ಲ, ಬದಲಿಗೆ ಇದು ಧರ್ಮ, ಧೈರ್ಯ, ಭಕ್ತಿ ಹಾಗೂ ನಕಾರಾತ್ಮಕತೆಯ ಮೇಲೆ ಸಕಾರಾತ್ಮಕ ಮೌಲ್ಯಗಳ ಗೆಲುವನ್ನು ಆಚರಿಸುವ ಅಮೂಲ್ಯವಾದ ಸಂದರ್ಭವಾಗಿದೆ. ಈ ದಿನದಂದು ಮುಖ್ಯವಾಗಿ ರಾವಣನ ಪ್ರತಿಕೃತಿ ದಹನದ ಮೂಲಕ ಕೆಡುಕುಗಳ ವಿನಾಶವನ್ನು ಸಂಕೇತಿಸಲಾಗುತ್ತದೆ. ಇದರ ಜೊತೆಗೆ, ಈ ದಿನ ಹಲವು ವಿಶಿಷ್ಟ ಪರಂಪರೆಗಳನ್ನು ಆಚರಿಸಲಾಗುತ್ತದೆ, ಅದರಲ್ಲಿ ಅತ್ಯಂತ ಪ್ರಮುಖವಾದುದು ‘ಶಸ್ತ್ರ ಪೂಜೆ’. ಅಲ್ಲದೆ, ಹೊಸ ವಾಹನ ಖರೀದಿ ಹಾಗೂ ನೂತನ ವ್ಯವಹಾರಗಳನ್ನು ಆರಂಭಿಸಲು ಈ ದಿನವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯ ಹಾಗೂ ಧರ್ಮಗ್ರಂಥಗಳ ಪ್ರಕಾರ, ದಸರಾ ದಿನದಂದು ಶಸ್ತ್ರಗಳು ಮತ್ತು ಅಸ್ತ್ರಗಳನ್ನು ಪೂಜಿಸುವುದು ಅತ್ಯಂತ ಶುಭವಾಗಿದ್ದು, ಈ ಪ್ರಾಚೀನ ಸಂಪ್ರದಾಯವು ಶತಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಇದರ ಹಿಂದೆ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯಿದ್ದು, ಇದರ ಮೂಲವು ಮಹಾಭಾರತ ಕಾಲದಲ್ಲಿದೆ. ಅಜ್ಞಾತವಾಸಕ್ಕೆ ತೆರಳುವ ಮುನ್ನ ಪಾಂಡವರು ತಮ್ಮ ದಿವ್ಯ ಶಸ್ತ್ರಾಸ್ತ್ರಗಳನ್ನು ಶಮಿ ಮರದಲ್ಲಿ ಸುರಕ್ಷಿತವಾಗಿ ಬಚ್ಚಿಟ್ಟಿದ್ದರು. ಒಂದು ವರ್ಷದ ಅಜ್ಞಾತವಾಸ ಪೂರ್ಣಗೊಂಡ ಬಳಿಕ, ವಿಜಯದಶಮಿಯಂದೇ ಅವರು ಆ ಮರದಿಂದ ತಮ್ಮ ಶಸ್ತ್ರಗಳನ್ನು ಮರಳಿ ಪಡೆದು, ಅವುಗಳಿಗೆ ವಿಧಿ-ವಿಧಾನದಿಂದ ಪೂಜೆ ಸಲ್ಲಿಸಿ ಕುರುಕ್ಷೇತ್ರ ಯುದ್ಧಕ್ಕೆ ಹೊರಟಿದ್ದರು ಎಂಬುದು ಪುರಾಣ ಕಥೆ.
ಅಂದಿನಿಂದಲೂ ಪ್ರತಿವರ್ಷ ವಿಜಯದಶಮಿಯ ದಿನದಂದು ಶಸ್ತ್ರ-ಅಸ್ತ್ರಗಳ ಪೂಜೆಯನ್ನು ಸಾಂಪ್ರದಾಯಿಕವಾಗಿ ಮಾಡಿಕೊಂಡು ಬರಲಾಗುತ್ತಿದೆ. ಯಾವ ರೀತಿ ದಸರಾ ದಿನದಂದು ಶಸ್ತ್ರ ಪೂಜೆ ನೆರವೇರಿಸಿದ ಬಳಿಕ ಮಹಾಭಾರತ ಯುದ್ಧದಲ್ಲಿ ಅರ್ಜುನ ಹಾಗೂ ಪಾಂಡವರಿಗೆ ಜಯ ಸಿಕ್ಕಿತೋ, ಅದೇ ರೀತಿಯಾಗಿ ಇಂದಿಗೂ ಕೂಡ ಈ ದಿನದಂದು ಅಸ್ತ್ರ-ಶಸ್ತ್ರಗಳ ಪೂಜೆ ಮಾಡುವವರಿಗೆ ಜೀವನದ ಪ್ರತಿ ಕ್ಷೇತ್ರದಲ್ಲೂ ವಿಜಯ ಲಭಿಸುತ್ತದೆ ಎಂಬುದು ಜನರ ಬಲವಾದ ನಂಬಿಕೆಯಾಗಿದೆ.
ವಿಜಯದಶಮಿಯಂದು ಕೇವಲ ಯುದ್ಧದ ಶಸ್ತ್ರಾಸ್ತ್ರಗಳನ್ನು ಮಾತ್ರವಲ್ಲದೆ, ‘ಆಯುಧ ಪೂಜೆ’ಯನ್ನು ಆಚರಿಸಲಾಗುತ್ತದೆ. ಇದರರ್ಥ ನಮ್ಮ ದೈನಂದಿನ ಬದುಕಿಗೆ ಆಧಾರವಾಗಿರುವ ಪ್ರತಿಯೊಂದು ಸಾಧನಗಳನ್ನು ಪೂಜಿಸುವುದು. ಅದು ಬರೆಯಲು ಬಳಸುವ ಸಣ್ಣ ಪೆನ್ ಆಗಿರಬಹುದು ಅಥವಾ ವೃತ್ತಿಪರ ಉಪಕರಣಗಳಾಗಿರಬಹುದು. ಮನೆಗಳಲ್ಲಿ ಈ ದಿನ ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಸ್ವಚ್ಘಗೊಳಿಸಿ, ಅರಿಶಿಣ, ಕುಂಕುಮ ಹಾಗೂ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ.
ಇದನ್ನೂ ಓದಿ: ನವರಾತ್ರಿಯ 9 ದಿನಗಳ ಮಹತ್ವವೇನು? ನವದುರ್ಗೆಯ ಒಂಬತ್ತು ರೂಪಗಳ ವಿಶೇಷತೆ ತಿಳಿಯಿರಿ
ಕಾಲ ಬದಲಾದಂತೆ ಆಚರಣೆಯ ಸ್ವರೂಪದಲ್ಲೂ ಬದಲಾವಣೆಯಾಗಿದೆ. ಇಂದಿನ ದಿನಗಳಲ್ಲಿ ಕಾರ್ಖಾನೆಗಳಲ್ಲಿರುವ ಯಂತ್ರೋಪಕರಣಗಳು, ವಾಹನಗಳು, ಸಂಗೀತ ಉಪಕರಣಗಳು ಅಥವಾ ಅಡುಗೆ ಮನೆಯ ಪಾತ್ರೆ-ಪರಿಕರಗಳ ಜೊತೆಗೆ, ನಮ್ಮ ಕಚೇರಿಗಳಲ್ಲಿ ಬಳಕೆಯಾಗುವ ಲ್ಯಾಪ್ಟಾಪ್ ಹಾಗೂ ಕಂಪ್ಯೂಟರ್ಗಳಿಗೂ ಸಹ ದಸರಾ ದಿನದಂದು ಪೂಜೆ ಸಲ್ಲಿಸುವುದು ಅತ್ಯಂತ ಮಂಗಳಕರ ಹಾಗೂ ಶುಭವೆಂದು ಭಾವಿಸಲಾಗುತ್ತದೆ.
ವಿಜಯದಶಮಿಯ ದಿನದಂದು ಶಸ್ತ್ರ ಮತ್ತು ವಾಹನ ಪೂಜೆ ಮಾಡುವುದರಿಂದ ವ್ಯಕ್ತಿಗೆ ವಿಜಯದ ಆಶೀರ್ವಾದ ದೊರೆಯುವುದಲ್ಲದೆ, ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುವ ಯೋಗಗಳು ಗೋಚರಿಸುತ್ತವೆ. ಅಷ್ಟೇ ಅಲ್ಲದೆ, ಈ ಶಸ್ತ್ರ ಪೂಜೆಯು ವ್ಯಕ್ತಿಯಲ್ಲಿ ಹೊಸ ಶಕ್ತಿ ಮತ್ತು ಸಾಹಸದ ಸಂಚಾರವನ್ನು ಉಂಟುಮಾಡುತ್ತದೆ. ನೀವು ಕೂಡ ಈ ದಿನ ಶಸ್ತ್ರ ಪೂಜೆ ಅಥವಾ ಆಯುಧ ಪೂಜೆ ನೆರವೇರಿಸಿದರೆ, ಜೀವನದಲ್ಲಿ ಶುಭ ಫಲಗಳು ಪ್ರಾಪ್ತಿಯಾಗಿ ಯಶಸ್ಸಿನ ಹಾದಿ ಸುಗಮವಾಗುತ್ತದೆ ಎಂಬ ನಂಬಿಕೆಯಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Thu, 15 October 26