ACT 2024 Final: ದಾಖಲೆಯ 5ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಕಿರೀಟ ತೊಟ್ಟ ಭಾರತ

Asian Champions Trophy 2024 Final: ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ ಪಂದ್ಯದಲ್ಲಿ ಆತಿಥೇಯ ಚೀನಾ ತಂಡವನ್ನು 1-0 ಗೋಲುಗಳಿಂದ ಮಣಿಸಿದ ಹರ್ಮನ್​ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ ದಾಖಲೆಯ 5ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ACT 2024 Final: ದಾಖಲೆಯ 5ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಕಿರೀಟ ತೊಟ್ಟ ಭಾರತ
ಭಾರತ ಹಾಕಿ ತಂಡ
Follow us
|

Updated on:Sep 17, 2024 | 5:54 PM

ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ ಪಂದ್ಯದಲ್ಲಿ ಆತಿಥೇಯ ಚೀನಾ ತಂಡವನ್ನು 1-0 ಗೋಲುಗಳಿಂದ ಮಣಿಸಿದ ಹರ್ಮನ್​ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ ದಾಖಲೆಯ 5ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ತೀವ್ರ ರೋಚಕತೆಯಿಂದ ಕೂಡಿದ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡುಬಂತು. ಹೀಗಾಗಿಯೇ ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಯಾವ ತಂಡಕ್ಕೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ ನಾಲ್ಕನೇ ಕ್ವಾರ್ಟರ್​ನಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದ ಭಾರತ ತನ್ನ ಚಾಂಪಿಯನ್ ಪಟ್ಟವನ್ನು ಹಾಗೆಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಟೂರ್ನಿಯ ಮೊದಲ ಪಂದ್ಯದಲ್ಲಿ ಇದೇ ಚೀನಾವನ್ನು 3-0 ಗೋಲುಗಳಿಂದ ಸೋಲಿಸಿದ್ದ ಭಾರತ ತಂಡ, ಫೈನಲ್ ಸೇರಿದಂತೆ ಸತತ 7 ಪಂದ್ಯಗಳನ್ನು ಗೆದ್ದು ಪ್ರಶಸ್ತಿಯನ್ನು ವಶಪಡಿಸಿಕೊಂಡಿದೆ. ಅಂದರೆ ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಅಥವಾ ಡ್ರಾ ಮಾಡಿಕೊಂಡಿಲ್ಲ. ಆದರೆ, ಇಂದು ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ತೀವ್ರ ಹೋರಾಟ ನಡೆಸಬೇಕಾಯಿತು. ಇಡೀ ಟೂರ್ನಿಯಲ್ಲಿ ಮೊದಲ ಬಾರಿಗೆ ಭಾರತ ತಂಡ ಆರಂಭದಲ್ಲಿ ಗೋಲು ಗಳಿಸಲು ವಿಫಲವಾಯಿತು. ಅಲ್ಲದೆ ಎದುರಾಳಿ ತಂಡದ ಗೋಲ್‌ಪೋಸ್ಟ್ ಅನ್ನು ಭೇದಿಸಲು ಕೊನೆಯ 10 ನಿಮಿಷಗಳವರೆಗೆ ಕಾಯಬೇಕಾಯಿತು.

ತೀವ್ರ ಪೈಪೋಟಿ ನೀಡಿದ ಚೀನಾ

ವಾಸ್ತವವಾಗಿ ಟೀಂ ಇಂಡಿಯಾವನ್ನು ಮೊದಲಿನಿಂದಲೂ ಪ್ರಶಸ್ತಿಗಾಗಿ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಇದಕ್ಕೆ ಪೂರಕವಾಗಿ ಲೀಗ್ ಹಂತ ಮತ್ತು ಸೆಮಿಫೈನಲ್‌ನಲ್ಲಿ ತಂಡವು ತೋರಿದ ಪ್ರದರ್ಶನವನ್ನು ಪರಿಗಣಿಸಿದರೆ, ಫೈನಲ್‌ನಲ್ಲೂ ಸುಲಭ ಜಯವನ್ನು ನಿರೀಕ್ಷಿಸಲಾಗಿತ್ತು. ಆದರೆ, ಇದಕ್ಕೆ ಅವಕಾಶ ನೀಡದ ಚೀನಾ ಈ ಟೂರ್ನಿಯ ಪಂದ್ಯಗಳಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಿತು. ಸೆಮಿಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 2-0 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿದ್ದ ಚೀನಾ, ಫೈನಲ್‌ನಲ್ಲಿಯೂ ಟೀಂ ಇಂಡಿಯಾಕ್ಕೆ ಕಠಿಣ ಹೋರಾಟ ನೀಡಿತು. ಹೀಗಾಗಿಯೇ ಪಂದ್ಯದ 50 ನಿಮಿಷಗಳ ಕಾಲ ಭಾರತಕ್ಕೆ ಯಾವುದೇ ಗೋಲು ಗಳಿಸಲು ಅವಕಾಶ ನೀಡಲಿಲ್ಲ.

ಈ ಪಂದ್ಯವೂ ಪೆನಾಲ್ಟಿ ಶೂಟೌಟ್‌ನತ್ತ ಸಾಗುತ್ತಿರುವಂತೆ ತೋರಿತು. ಆದರೆ 51 ನೇ ನಿಮಿಷದಲ್ಲಿ ‘ವಾಲ್ ಆಫ್ ಚೀನಾ’ ಅಂತಿಮವಾಗಿ ಕುಸಿಯಿತು. ಅಭಿಷೇಕ್ ನೀಡಿದ ಅತ್ಯುತ್ತಮ ಪಾಸ್ ಅನ್ನು ಜುಗ್ರಾಜ್‌ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಪಂದ್ಯದ ಕೊನೆಯ 10 ನಿಮಿಷಗಳಲ್ಲಿ 1-0 ಮುನ್ನಡೆ ಸಾಧಿಸಿದ ಭಾರತ, ಕೊನೆಯವರೆಗೂ ಎದುರಾಳಿ ತಂಡಕ್ಕೆ ಗೋಲು ಬಾರಿಸುವ ಅವಕಾಶ ನೀಡಲಿಲ್ಲ. ಅಂತಿಮವಾಗಿ ಭಾರತ ಐದನೇ ಬಾರಿ ಈ ಪ್ರಶಸ್ತಿಯನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಐದನೇ ಬಾರಿಗೆ ಚಾಂಪಿಯನ್

ಇದು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಸಿಕ್ಕಿರುವ ಐದನೇ ಪ್ರಶಸ್ತಿಯಾಗಿದೆ. 2011 ರಲ್ಲಿ ಆರಂಭವಾದ ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಯಿತು. ಇದಾದ ಬಳಿಕ 2016ರಲ್ಲಿಯೂ ಭಾರತ ಪ್ರಶಸ್ತಿಯನ್ನು ವಶಪಡಿಸಿಕೊಂಡಿತ್ತು. 2018 ರಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. ನಂತರ 2023 ರಲ್ಲಿ, ಟೀಂ ಇಂಡಿಯಾ ನಾಲ್ಕನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗ ಟೀಂ ಇಂಡಿಯಾ ಸತತ ಎರಡನೇ ಮತ್ತು ಒಟ್ಟು ಐದನೇ ಬಾರಿ ಏಷ್ಯನ್ ಚಾಂಪಿಯನ್ ಆಗಿದೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಟೀಂ ಇಂಡಿಯಾ ತನ್ನ ಯಶಸ್ಸನ್ನು ಮುಂದುವರಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Tue, 17 September 24