ಮಧ್ಯಮ ವೇಗಿ… ಖಡಕ್ ರಿಪ್ಲೈ ನೀಡಿದ ಜಸ್ಪ್ರೀತ್ ಬುಮ್ರಾ
Border - Gavaskar Trophy 2024: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಈ ಸರಣಿ ಮೊದಲ ಪಂದ್ಯ ಪರ್ತ್ನಲ್ಲಿ ನಡೆದರೆ, ಡಿಸೆಂಬರ್ 6 ರಿಂದ ಶುರುವಾಗಲಿರುವ 2ನೇ ಪಂದ್ಯ ಅಡಿಲೇಡ್ ನಲ್ಲಿ ನಡೆಯಲಿದೆ. ಹಾಗೆಯೇ 3ನೇ ಪಂದ್ಯ ಡಿಸೆಂಬರ್ 14 ರಿಂದ ಬ್ರಿಸ್ಬೇನ್ ನಲ್ಲಿ ಜರುಗಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು ಶುಕ್ರವಾರದಿಂದ (ನ.22) ಶುರುವಾಗಲಿದೆ. ಈ ಸರಣಿ ನಿಮಿತ್ತ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಬುಮ್ರಾ ಅವರನ್ನು ಮಧ್ಯಮ ವೇಗಿ ಎಂದು ಸಂಭೋಧಿಸಿದ ಘಟನೆಯೊಂದು ನಡೆದಿದೆ.
ಸುದ್ದಿಗೋಷ್ಠಿಯ ಪ್ರಶ್ನೋತ್ತರಗಳ ನಡುವೆ ಮಧ್ಯಮ ವೇಗದ ಆಲ್ರೌಂಡರ್ ಆಗಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿರುವುದು ಹೇಗೆನಿಸುತ್ತಿದೆ ಎಂದು ಪ್ರಶ್ನಿಸಿದ್ದರು.
ಈ ಪ್ರಶ್ನೆಯಿಂದ ಅಚ್ಚರಿಗೊಂಡ ಜಸ್ಪ್ರೀತ್ ಬುಮ್ರಾ, ನಾನು ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲೆ. ಕನಿಷ್ಠ ವೇಗದ ಬೌಲರ್ ನಾಯಕ ಎಂದು ಹೇಳುವಂತೆ ಎಂದು ಕೇಳಿಕೊಂಡರು.
ಈ ಮೂಲಕ ಜಸ್ಪ್ರೀತ್ ಬುಮ್ರಾ ತಮ್ಮನ್ನು ವೇಗದ ಬೌಲರ್ ನಾಯಕನೆಂದು ಸಂಭೋಧಿಸುವಂತೆ ಪತ್ರಕರ್ತನಲ್ಲಿ ಮನವಿ ಮಾಡಿದರು. ಕೂಡಲೇ ಪ್ರಶ್ನೆ ಕೇಳಿದ ಜರ್ನಲಿಸ್ಟ್ ತಮ್ಮ ತಪ್ಪನ್ನು ತಿದ್ದಿಕೊಂಡರು.
ಇನ್ನು ಪರ್ತ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಉಪನಾಯಕ ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ವೈಯುಕ್ತಿಕ ಕಾರಣಗಳಿಂದಾಗಿ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದು, ಹೀಗಾಗಿ ಪ್ರಥಮ ಪಂದ್ಯದಲ್ಲಿ ಬುಮ್ರಾ ಟೀಮ್ ಇಂಡಿಯಾ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.