ಭಾರತದಲ್ಲಿ ಕಣಕ್ಕಿಳಿಯಲಿದೆ ‘ಬ್ರೆಝಿಲ್’

ಫಿಫಾ ವಿಶ್ವಕಪ್​ನ ಅತ್ಯಂತ ಯಶಸ್ವಿ ತಂಡ, ಐದು ಬಾರಿಯ ಜಾಗತಿಕ ಚಾಂಪಿಯನ್ ಬ್ರೆಝಿಲ್ ತಂಡವು ಭಾರತಕ್ಕೆ ಆಗಮಿಸಲಿದೆ. ಅದು ಸಹ ಭಾರತದ ಫುಟ್‌ಬಾಲ್ ಕಾಶಿಯಲ್ಲಿ ಪಂದ್ಯವಾಡಲು. ಮುಂಬರುವ ಅಕ್ಟೋಬರ್‌ನಲ್ಲಿ ಹೈ-ಪ್ರೊಫೈಲ್ ಸ್ನೇಹಪರ ಪಂದ್ಯವನ್ನು ಆಯೋಜಿಸಲು ಬ್ರೆಝಿಲ್ ಫುಟ್‌ಬಾಲ್ ಕಾನ್ಫೆಡರೇಶನ್ (CBF) ಆಸಕ್ತಿ ತೋರಿದೆ.

ಭಾರತದಲ್ಲಿ ಕಣಕ್ಕಿಳಿಯಲಿದೆ ಬ್ರೆಝಿಲ್
Brazil
Image Credit source: Brazil FC

Updated on: Jul 25, 2026 | 11:17 AM

ವಿಶ್ವ ಫುಟ್‌ಬಾಲ್ ಜಗತ್ತಿನ ದೈತ್ಯ ತಂಡವಾದ ಬ್ರೆಝಿಲ್, ಮುಂಬರುವ ಅಕ್ಟೋಬರ್‌ನಲ್ಲಿ ಭಾರತದ ಫುಟ್‌ಬಾಲ್ ಕಾಶಿ ಖ್ಯಾತಿಯ ಕೋಲ್ಕತಾದಲ್ಲಿ ಐತಿಹಾಸಿಕ ಸೌಹಾರ್ದ ಪಂದ್ಯವನ್ನು ಆಡಲಿದೆ. ಈ ಸ್ನೇಹಪರ ಪಂದ್ಯಕ್ಕಾಗಿ ಬ್ರೆಝಿಲ್ ಫುಟ್‌ಬಾಲ್ ಕಾನ್ಫೆಡರೇಶನ್ (CBF) ಭಾರತದ ಸಂಘಟಕರೊಂದಿಗೆ ಅಂತಿಮ ಹಂತದ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ವರದಿಯಾಗಿದೆ.

ಐತಿಹಾಸಿಕ ಕ್ರೀಡಾಂಗಣ:

ಈ ಮಹತ್ವದ ಪಂದ್ಯವು ಕೋಲ್ಕತಾದ ಪ್ರಸಿದ್ಧ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ (ಯುವ ಭಾರತಿ ಕ್ರೀಡಾಂಗಣ) ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ.

ಪ್ರಸ್ತುತ ಮಾಹಿತಿ ಪ್ರಕಾರ, ಸೆಪ್ಟೆಂಬರ್ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳನ್ನು ಆಡಿದ ನಂತರ, ಬ್ರೆಝಿಲ್ ತಂಡವು ಅಕ್ಟೋಬರ್ ಆರಂಭದಲ್ಲಿ ಭಾರತಕ್ಕೆ ಪ್ರವಾಸ ಬೆಳೆಸಲಿದೆ.

ಸ್ಟಾರ್ ಆಟಗಾರರ ಆಗಮನ:

ಈ ಒಪ್ಪಂದವು ಅಧಿಕೃತಗೊಂಡರೆ, ವಿಶ್ವದ ಅತ್ಯಂತ ದುಬಾರಿ ಮತ್ತು ಜನಪ್ರಿಯ ಆಟಗಾರರಾದ ವಿನೀಶಿಯಸ್ ಜೂನಿಯರ್ ಸೇರಿದಂತೆ ಬ್ರೆಝಿಲ್​ನ ಹಲವು ಪ್ರಮುಖ ತಾರೆಗಳು ಕೋಲ್ಕತಾ ಮೈದಾನದಲ್ಲಿ ಕಣಕ್ಕಿಳಿಯಲಿದ್ದಾರೆ.

ಪ್ರತಿಸ್ಪರ್ಧಿ ಯಾರು?

ಬ್ರೆಝಿಲ್ ತಂಡವು ಯಾರ ವಿರುದ್ಧ ಕಣಕ್ಕಿಳಿಯಲಿದೆ ಎಂಬುದು ಇನ್ನೂ ಅಧಿಕೃತವಾಗಿ ನಿರ್ಧಾರವಾಗಿಲ್ಲ. ಆದರೆ ಅತ್ತ ಏಷ್ಯಾದ ಪ್ರವಾಸದ ಭಾಗವಾಗಿ ಬ್ರೆಝಿಲ್ ತಂಡವು ಅಕ್ಟೋಬರ್‌ನಲ್ಲಿ ಏಷ್ಯಾದ ಪ್ರಮುಖ ತಂಡಗಳ ವಿರುದ್ಧ ಆಡಲು ಯೋಜಿಸುತ್ತಿದೆ. ಮೂಲಗಳ ಪ್ರಕಾರ, ಆಸ್ಟ್ರೇಲಿಯಾ ಸರಣಿಯ ನಂತರ ಕೋಲ್ಕತಾದಲ್ಲಿ ಜಪಾನ್ ತಂಡದ ವಿರುದ್ಧ ಬ್ರೆಝಿಲ್ ಸೆಣಸಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಕೆಲವು ವರದಿಗಳು ಸೂಚಿಸಿವೆ.

ಕೋಲ್ಕತಾ ಆಯ್ಕೆಯಾಗಲು ಕಾರಣವೇನು?

ಇತ್ತೀಚೆಗೆ ಮುಕ್ತಾಯಗೊಂಡ 2026ರ ಫಿಫಾ ವಿಶ್ವಕಪ್ ವೇಳೆ ಕೋಲ್ಕತಾದಲ್ಲಿ ಬ್ರೆಝಿಲ್ ತಂಡಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ಮತ್ತು ಅಲ್ಲಿನ ಅಭಿಮಾನಿಗಳ ಕ್ರೇಝ್ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಬಾಂಗ್ಲಾದೇಶ್ ಮತ್ತು ಸಿಂಗಾಪುರ ದೇಶಗಳು ಸಹ ಈ ಪಂದ್ಯವನ್ನು ಆಯೋಜಿಸಲು ಆಸಕ್ತಿ ತೋರಿಸಿದ್ದವು. ಆದರೆ ಅಂತಿಮವಾಗಿ ಭಾರತದ ಸಂಘಟಕರೊಂದಿಗೆ ಮಾತುಕತೆಗಳು ಯಶಸ್ವಿ ಹಂತವನ್ನು ತಲುಪಿವೆ ಎಂದು ವರದಿಯಾಗಿದೆ. ಹೀಗಾಗಿ ಅಕ್ಟೋಬರ್​ನಲ್ಲಿ ಬ್ರೆಝಿಲ್ ಪಡೆ ಕೊಲ್ಕತ್ತಾದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.

ಅರ್ಜೆಂಟೀನಾ ಕಣಕ್ಕಿಳಿದಿತ್ತು!

2011ರಲ್ಲಿ ವಿಶ್ವದ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ರಾಷ್ಟ್ರೀಯ ತಂಡ ಕೋಲ್ಕತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ವೆನೆಜುವೆಲಾ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಆಡಿತ್ತು. ಈ ವೇಳೆ ಮೆಸ್ಸಿ ಅವರ ಅದ್ಭುತ ಆಟವನ್ನು ಕಣ್ಣುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು.

ಇದನ್ನೂ ಓದಿ: ಒಂದೇ ಒಂದು ಪಂದ್ಯ ಆಡದಿದ್ದರೂ ಭಾರತಕ್ಕೆ ಕಂಚಿನ ಪದಕ ಖಚಿತವಾಗಿದ್ದು ಹೇಗೆ?

ಹಾಗೆಯೇ ಜರ್ಮನಿಯ ದೈತ್ಯ ಕ್ಲಬ್ ಬಾಯರ್ನ್ ಮ್ಯೂನಿಚ್ ಭಾರತದಲ್ಲಿ ಎರಡು ಬಾರಿ ಪಂದ್ಯಗಳನ್ನು ಆಡಿದೆ. 2008ರಲ್ಲಿ ಜರ್ಮನಿಯ ಪೌರಾಣಿಕ ಗೋಲ್‌ಕೀಪರ್ ಒಲಿವರ್ ಕಾನ್ ಅವರ ವಿದಾಯದ ಪಂದ್ಯವನ್ನು ಕೋಲ್ಕತಾದಲ್ಲಿ ಮೋಹನ್ ಬಾಗನ್ ತಂಡದ ವಿರುದ್ಧ ಆಯೋಜಿಸಲಾಗಿತ್ತು.

2012ರಲ್ಲಿ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾರತ ರಾಷ್ಟ್ರೀಯ ತಂಡದ ವಿರುದ್ಧ ಬಾಯರ್ನ್ ಮ್ಯೂನಿಚ್ ಪ್ರದರ್ಶನ ಪಂದ್ಯವನ್ನು ಆಡಿತ್ತು. ಇದೀಗ ಬ್ರೆಝಿಲ್ ತಂಡಕ್ಕೆ ವೇದಿಕೆ ಒದಗಿಸಲು ಸಂಘಟಕರು ಮುಂದಾಗಿದ್ದಾರೆ.

Follow Us