ಬರ್ಮಿಂಗ್ಹ್ಯಾಮ್ನಲ್ಲಿ ಆರಂಭವಾಗಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ. ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಪಡೆ ಸೋತರೂ ಇತರೆ ಕ್ರೀಡೆಗಳಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ. ಮೊದಲ ದಿನ ನಡೆದ ಈಜು ಸರ್ಧೆಯಲ್ಲಿ ಭಾರತದ ಶ್ರೀಹರಿ ನಟರಾಜನ್ (Sri Hari Natarajan) ಅವರು 100 ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು. 54.68 ಸೆಕೆಂಡ್‌ಗಳಲ್ಲಿ ದೂರವನ್ನು ಕ್ರಮಿಸಿದ ಶ್ರೀಹರಿ ಹೀಟ್‌ನಲ್ಲಿ 3ನೇ ಹಾಗೂ ಒಟ್ಟಾರೆ 5ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಇತ್ತ ಭಾರತ ಬ್ಯಾಡ್ಮಿಂಟನ್ ತಂಡವು ಕಾಮನ್‌ವೆಲ್ತ್ ಕೂಟದಲ್ಲಿ ಶುಭಾರಂಭ ಮಾಡಿದೆ.
ಭಾರತ ತಂಡವು 3-0ಯಿಂದ ಪಾಕಿಸ್ತಾನ ವಿರುದ್ಧ ಸುಲಭವಾಗಿ ಜಯಿಸಿತು. ಮಿಶ್ರ ಡಬಲ್ಸ್‌ನಲ್ಲಿ ಬಿ. ಸುಮಿತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು 21-9, 21-12ರಿಂದ ಪಾಕ್ ತಂಡದ ಮೊಹಮ್ಮದ್ ಇರ್ಫಾನ್ ಸಯೀದ್ ಭಟ್ಟಿ ಮತ್ತು ಘಜಾಲಾ ಸಿದ್ಧಿಕಿ ವಿರುದ್ಧ ಜಯಿಸಿತು. ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ ತಮ್ಮ ಪಾರಮ್ಯ ಮೆರೆದರು. 21-7, 21-12ರಿಂದ ಮುರಾದ್ ಅಲಿ ವಿರುದ್ಧ ಗೆದ್ದರು.
ಭಾರತ ಮಹಿಳಾ ಹಾಕಿ ತಂಡ ಕೂಡ ಭರ್ಜರಿ ಶುಭಾರಂಭ ಮಾಡಿದೆ. ಗುರ್ಜಿತ್ ಕೌರ್ ಗಳಿಸಿದ ಸೊಗಸಾದ ಎರಡು ಗೋಲುಗಳ ಬಲದಿಂದ ಸವಿತಾ ಪೂನಿಯಾ ನಾಯಕತ್ವದ ಭಾರತ 5-0ಯಿಂದ ತನಗಿಂತ ಕೆಳ ರ‍್ಯಾಂಕಿನ ಘಾನಾ ವಿರುದ್ಧ ಜಯಭೇರಿ ಮೊಳಗಿಸಿತು. ಗುರ್ಜಿತ್ ಕೌರ್ ಮೂರು ಮತ್ತು 39ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ನೇಹಾ ಗೋಯಲ್ (28ನೇ ನಿಮಿಷ), ಸಂಗೀತಾ ಕುಮಾರಿ (36ನೇ ನಿ.) ಮತ್ತು ಸಲೀಮಾ ಟೆಟೆ (56ನೇ ನಿ.) ತಂಡದ ಗೆಲುವಿನಲ್ಲಿ ಮಿಂಚಿದರು.
ಭಾರತ ಆರಂಭದಿಂದಲೇ ವೇಗದ ಆಟಕ್ಕೆ ಒತ್ತುನೀಡಿತು. ಮೂರನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗುರ್ಜಿತ್ ಕೌರ್ ತಪ್ಪು ಮಾಡಲಿಲ್ಲ. ಬಲ ಕಾರ್ನರ್‌ನಲ್ಲಿ ಡ್ರ್ಯಾಗ್‌ಫ್ಲಿಕ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಘಾನಾ ತಂಡಕ್ಕೂ ಎರಡು ಪೆನಾಲ್ಟಿ ಕಾರ್ನರ್ ಲಭಿಸಿದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಭಾರತ ತಂಡದ ಮುನ್ನಡೆಯನ್ನು ನೇಹಾ ಎರಡಕ್ಕೇರಿಸಿದರು. ಬಳಿಕ ಸಂಗೀತಾ ಕುಮಾರಿ ಮತ್ತು ಸಲೀಮಾ ಟೆಟೆ ಮೂಲಕ ಗೋಲುಗಳು ಬಂದವು.
ಇನ್ನು ಭಾರತದ ಬಾಕ್ಸರ್ ಶಿವ ಥಾಪಾ ಅವರು ಪದಕದೆಡೆಗಿನ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದ್ದು, ಪುರುಷರ 63.5 ಕೆ.ಜಿ. ವಿಭಾಗದಲ್ಲಿ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನಲ್ಲಿ ಅವರು 5-0 ರಲ್ಲಿ ಪಾಕಿಸ್ತಾನದ ಸುಲೆಮಾನ್ ಬಲೋಚ್ ವಿರುದ್ಧ ಗೆದ್ದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಐದು ಬಾರಿ ಚಿನ್ನ ಗೆದ್ದಿರುವ ಶಿವ, ಮೇಲಿಂದ ಮೇಲೆ ಬಲವಾದ ಪಂಚ್‌ಗಳನ್ನು ನೀಡಿ ಎದುರಾಳಿಯನ್ನು ಕಂಗೆಡಿಸಿದರು.
ಇನ್ನು ಸೋಲಿನ ವಿಚಾರಕ್ಕೆ ಬರುವುದಾದರೆ ಪುರುಷರ 400 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಭಾರತದ ಕುಶಾಗ್ರ ರಾವತ್ ಫೈನಲ್ ಪ್ರವೇಶಿಸಲು ವಿಫಲರಾದರು. ಹೀಟ್-3ರಲ್ಲಿದ್ದ ಅವರು 3:57.45 ಸೆಕೆಂಡ್‌ಗಳೊಂದಿಗೆ 8ನೇ ಸ್ಥಾನ ಪಡೆದರೆ, ಒಟ್ಟಾರೆ 21 ಸ್ಪರ್ಧಿಗಳಲ್ಲಿ 14ನೇ ಸ್ಥಾನಿಯಾದರು. ಸಾಜನ್ ಪ್ರಕಾಶ್ 50 ಮೀ. ಬಟರ್‌ಫ್ಲೈ ಹೀಟ್‌ನಲ್ಲಿ 8ನೇ ಸ್ಥಾನಕ್ಕೆ ಕುಸಿದು ಸೆಮಿಫೈನಲ್ ಅವಕಾಶವನ್ನು ತಪ್ಪಿಸಿಕೊಂಡರು. ಪುರುಷರ 4,000 ಮೀ. ಸೈಕ್ಲಿಂಗ್‌ನಲ್ಲಿ ಭಾರತ ಕೊನೆಯ ಸ್ಥಾನಕ್ಕೆ ಕುಸಿದು ನಿರಾಸೆ ಮೂಡಿಸಿತು.
ಭಾರತ ಮಹಿಳಾ ಕ್ರಿಕೆಟ್ ತಂಡದ ಕೂಡ ಆಸ್ಟ್ರೇಲಿಯಾ ವಿರುದ್ಧ ಸಾಧಿಸಿದ್ದ ಬಹುದಿದ್ದ ಸುಲಭ ಜಯದಲ್ಲಿ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 154 ರನ್ ಗಳಿಸಿ ಈ ಸ್ಕೋರ್ ಉಳಿಸಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಆಸ್ಟ್ರೇಲಿಯಾ 49 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು, ಆದರೆ ಇದರ ಹೊರತಾಗಿಯೂ ಆಶ್ಲೇ ಗಾರ್ಡ್ನರ್ ಅವರ ಅಜೇಯ ಅರ್ಧಶತಕ ಮತ್ತು ಗ್ರೇಸ್ ಹ್ಯಾರಿಸ್ ಅವರ 37 ರನ್‌ಗಳ ಇನ್ನಿಂಗ್ಸ್ ಭಾರತ ತಂಡದ ಶ್ರಮವನ್ನು ಹಾಳುಮಾಡಿತು.
ಮೊದಲ ಚಿನ್ನ ಗೆದ್ದ ಅಲೆಕ್ಸ್ ಯೀ:
ಆತಿಥೇಯ ಇಂಗ್ಲೆಂಡ್‌ನ ಟ್ರಯತ್ಲೀಟ್ ಅಲೆಕ್ಸ್ ಯೀ ಮೊದಲ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಅವರು ಪುರುಷರ ಟ್ರಯಥ್ಲಾನ್ ಸ್ಪರ್ಧೆಯಲ್ಲಿ ಈ ಸಾಧನೆಗೈದರು. ಮೂರು ಕಠಿನ ಸ್ಪರ್ಧೆಗಳನ್ನು ಅಲೆಕ್ಸ್ ಯೀ 50 ನಿಮಿಷ, 34 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿದರು. ನ್ಯೂಜಿಲ್ಯಾಂಡಿನ ಹೇಡನ್ ವೈಲ್ಡ್ ಬೆಳ್ಳಿ (50 ನಿಮಿಷ, 47 ಸೆಕೆಂಡ್), ಆಸ್ಟ್ರೇಲಿಯದ ಮ್ಯಾಥ್ಯೂ ಹೌಸರ್ ಬೆಳ್ಳಿ ಗೆದ್ದರು (50 ನಿಮಿಷ, 43 ಸೆಕೆಂಡ್).
Published On - 7:35 am, Sat, 30 July 22