
2026 ರ ಟಿ20 ವಿಶ್ವಕಪ್‌ನ ( 2026 T20 World Cup) 19ನೇ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ (Zimbabwe vs Australia) ನಡುವೆ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಗೆಲುವು ಖಚಿತ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದ ಜಿಂಬಾಬ್ವೆ ಆಟಗಾರರು ಕೆಚ್ಚೆದೆಯ ಹೋರಾಟ ನೀಡಿ ಕಾಂಗರೂಗಳಿಗೆ ಮಣ್ಣು ಮುಕ್ಕಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಜಿಂಬಾಬ್ವೆ ಬೌಲರ್ಗಳ ಯೋಜಿತ ದಾಳಿಗೆ ತತ್ತರಿಸಿ 146 ರನ್ಗಳಿಸಲಷ್ಟೇ ಶಕ್ತವಾಗಿ 23 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಇದು ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆಯ ಎರಡನೇ ಗೆಲುವಾಗಿದ್ದು, ಇದಕ್ಕೂ ಮೊದಲು 2007 ರಲ್ಲಿ ಜಿಂಬಾಬ್ವೆ, ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಹಾಗೆಯೇ ಈ ಗೆಲುವಿನೊಂದಿಗೆ ಜಿಂಬಾಬ್ವೆ ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದರೆ, ಆಸ್ಟ್ರೇಲಿಯಾ 3ನೇ ಸ್ಥಾನಕ್ಕೆ ಕುಸಿದಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ 7 ಬೌಂಡರಿಗಳೊಂದಿಗೆ 64 ರನ್ ಗಳಿಸಿ ಅಜೇಯರಾಗುಳಿದರೆ, ತಡಿವಾನಾಶೆ ಮರುಮಾನಿ 21 ಎಸೆತಗಳಲ್ಲಿ 35 ರನ್ ಬಾರಿಸಿದರು. ರಯಾನ್ ಬರ್ಲ್ 30 ಎಸೆತಗಳಲ್ಲಿ 35 ರನ್ ಮತ್ತು ನಾಯಕ ಸಿಕಂದರ್ ರಜಾ 13 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿ ತಂಡವನ್ನು ಈ ಸ್ಕೋರ್ಗೆ ಕೊಂಡೊಯ್ದರು.
IND vs NAM: ಸ್ಟಂಪ್ ಔಟ್ ಆದ ಸೂರ್ಯ; ಭಾರತ ಫೈನಲ್ಗೇರಲಿದೆ ಎಂದ ಇತಿಹಾಸ
170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕಳಪೆ ಆರಂಭ ಪಡೆಯಿತು. ಪವರ್‌ಪ್ಲೇನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 38 ರನ್ ಕಲೆಹಾಕಿತು. ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್ ಮತ್ತು ಟ್ರಾವಿಸ್ ಹೆಡ್ ಬೇಗನೆ ಔಟಾದರು, ಇದು ಆಸ್ಟ್ರೇಲಿಯಾದ ಸೋಲಿಗೆ ಪ್ರಮುಖ ಕಾರಣವಾಯಿತು. ಆದಾಗ್ಯೂ ಮ್ಯಾಟ್ ರೆನ್‌ಶಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 77 ರನ್‌ಗಳ ಜೊತೆಯಾಟವನ್ನಾಡಿದರಾದರೂ, ಇತ್ತ ಡೆತ್ ಓವರ್‌ಗಳಲ್ಲಿ ಮಾರಕ ದಾಳಿ ನಡೆಸಿದ ಜಿಂಬಾಬ್ವೆ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಅಂತಿಮವಾಗಿ ಆಸ್ಟ್ರೇಲಿಯಾ 19.3 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಗಿ 23 ರನ್‌ಗಳಿಂದ ಪಂದ್ಯವನ್ನು ಸೋತಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Fri, 13 February 26